
ನವದೆಹಲಿ(ಅ.18): ದೇಶದಲ್ಲಿ ಒಂದೂವರೆ ತಿಂಗಳಿನಲ್ಲಿ ಮೊದಲ ಬಾರಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕೆಳಗಿಳಿದಿದೆ. ಜೊತೆಗೆ, ಈಗ ಇರುವ ಸಕ್ರಿಯ ಪ್ರಕರಣಗಳು ಇಲ್ಲಿಯವರೆಗೆ ದೇಶದಲ್ಲಿ ಪತ್ತೆಯಾದ ಒಟ್ಟು ಪ್ರಕರಣಗಳ ಶೇ.10.7 ಮಾತ್ರ ಆಗಿದ್ದು, ಕೊರೋನಾ ಹೋರಾಟದಲ್ಲಿ ದೇಶವು ಉತ್ತಮ ಸ್ಥಿತಿಗೆ ತೆರಳುತ್ತಿರುವುದರ ಸೂಚಕವಾಗಿದೆ. ಶನಿವಾರದ ವೇಳೆಗೆ ದೇಶದಲ್ಲಿ 7.95 ಲಕ್ಷ ಸಕ್ರಿಯ ಕೊರೋನಾ ಪ್ರಕರಣಗಳಿದ್ದವು.
"
ಕಳೆದ ಸೆ.1ರ ವರೆಗೆ ದೇಶದಲ್ಲಿ ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 8 ಲಕ್ಷಕ್ಕಿಂತ ಕೆಳಗೆ (7.85 ಲಕ್ಷ) ಇತ್ತು. ನಂತರ ಮೇಲೇರಿ ನಿರಂತರವಾಗಿ 8 ಲಕ್ಷಕ್ಕಿಂತ ಮೇಲಿತ್ತು. ಈಗ ಒಂದೂವರೆ ತಿಂಗಳಲ್ಲಿ ಮತ್ತೆ ಮೊದಲ ಬಾರಿ 8 ಲಕ್ಷಕ್ಕಿಂತ ಕಡಿಮೆಯಾಗಿದೆ. ಪ್ರತಿದಿನ ಹೊಸ ಸೋಂಕಿತರಿಗಿಂತ ಹೆಚ್ಚು ಮಂದಿ ಗುಣಮುಖರಾಗುತ್ತಿರುವುದರಿಂದ ಸಕ್ರಿಯ ಪ್ರಕರಣಗಳು ಇಳಿಯುತ್ತಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ.
ದೇಶದಲ್ಲಿ ಇಲ್ಲಿಯವರೆಗೆ 65 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ರಾಷ್ಟ್ರೀಯ ಗುಣಮುಖ ದರ ಶೇ.87.78ಕ್ಕೆ ಏರಿಕೆಯಾಗಿದೆ. ಜೊತೆಗೆ, ಸೋಂಕಿತರ ಪೈಕಿ ಸಾವನ್ನಪ್ಪುವವರ ಸರಾಸರಿ ಸಂಖ್ಯೆ ಶೇ.1.52ಕ್ಕೆ ಇಳಿದಿದ್ದು, ಇದು ಜಗತ್ತಿನಲ್ಲೇ ಅತ್ಯಂತ ಕಡಿಮೆ ಸಾವಿನ ದರದ ಪೈಕಿ ಒಂದಾಗಿದೆ. ದೇಶಾದ್ಯಂತ ಕೊರೋನಾ ಪರೀಕ್ಷೆಯ ಪ್ರಮಾಣ ಹೆಚ್ಚಿರುವುದು ಮತ್ತು ಚಿಕಿತ್ಸೆಯ ಗುಣಮಟ್ಟಸುಧಾರಿಸಿರುವುದರಿಂದ ಸಾವಿನ ದರ ಇಳಿಕೆಯಾಗಿದೆ ಮತ್ತು ಸೋಂಕಿತರ ಸಂಖ್ಯೆಯೂ ಇಳಿಕೆಯಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅತಿಹೆಚ್ಚು ಕೊರೋನಾ ಸೋಂಕಿತರು ಗುಣಮುಖರಾಗಿರುವ ಹಾಗೂ ಅತಿ ಕಡಿಮೆ ಸಾವಿನ ದರ ಇರುವ ಏಕೈಕ ದೇಶ ಭಾರತ. ನಿತ್ಯ ಗುಣಮುಖರಾಗುತ್ತಿರುವವರ ಪೈಕಿ ಶೇ.78 ಜನರು ಮಹಾರಾಷ್ಟ್ರ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ದೆಹಲಿ, ಪಶ್ಚಿಮ ಬಂಗಾಳ, ಛತ್ತೀಸ್‌ಗಢ ಮತ್ತು ಒಡಿಶಾದವರಾಗಿದ್ದಾರೆ. ಮಹಾರಾಷ್ಟ್ರದಲ್ಲಿ ನಿತ್ಯ ಸುಮಾರು 13 ಸಾವಿರ ಜನರು ಹಾಗೂ ಕರ್ನಾಟಕದಲ್ಲಿ ನಿತ್ಯ ಸುಮಾರು 8 ಸಾವಿರ ಜನರು ಗುಣಮುಖರಾಗುತ್ತಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ