Unnao murder : ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಗೆ ಸಂತ್ರಸ್ಥೆಯ ತಾಯಿ ಆಗ್ರಹ!

By Suvarna NewsFirst Published Feb 11, 2022, 6:11 PM IST
Highlights

ಉನ್ನಾವೋದಲ್ಲಿ ಸಮಾಜವಾದಿ ನಾಯಕನ ಜಮೀನಿನಲ್ಲಿ ದಲಿತ ಮಹಿಳೆಯ ಕೊಲೆ
ಅತ್ಯಾಚಾರವಾಗಿರುವ ಶಂಕೆ ವ್ಯಕ್ತಪಡಿಸಿದ ಕೊಲೆಯಾಗಿರುವ ಮಹಿಳೆಯ ತಾಯಿ
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭೇಟಿಗೆ ಆಗ್ರಹ

ಉನ್ನಾವೋ (ಫೆ.11): ಸಮಾಜವಾದಿ ಪಕ್ಷದ (Samajwadi Party) ನಾಯಕನ ಪುತ್ರನ ಜಮೀನಿನಲ್ಲಿ ಗುರುವಾರ ಕೊಳೆತ ಸ್ಥಿತಿಯಲ್ಲಿ ದಲಿತ ಮಹಿಳೆಯ (Dalit girl) ಶವ ಪತ್ತೆಯಾಗಿದ್ದು, ಚುನಾವಣೆಯ ಮಧ್ಯದಲ್ಲಿರುವ ಉತ್ತರಪ್ರದೇಶದಲ್ಲಿ (Uttar Pradesh) ಹಾಟ್ ಟಾಪಿಕ್ ಆಗಿದೆ. ಕೊಲೆಯಾದ ಮಹಿಳೆಯ ತಾಯಿ, "ಪುತ್ರಿಯ ಮೇಲೆ ಅತ್ಯಾಚಾರವಾಗಿರುವ ಸಂಶಯವಿದ್ದು, ಪೊಲೀಸ್ ತನಿಖೆಯಲ್ಲಿ ತಮಗೆ ಒಂಚೂರು ನಂಬಿಕೆಯಿಲ್ಲ' ಎಂದು ಹೇಳಿದ್ದಾರೆ. ಪ್ರಕರಣದ ಕುರಿತಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮಧ್ಯಪ್ರವೇಶಿಸಬೇಕು ಅವರ ಜೊತೆ ಭೇಟಿ ಮಾಡಿ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಈ ವಿಷಯದಲ್ಲಿ ಪೊಲೀಸ್ ತನಿಖೆಯಿಂದ ತನಗೆ ತೃಪ್ತಿ ಇಲ್ಲ ಎಂದು ಹೇಳಿರುವ ಅವರು, ಕೊಲ್ಲುವ ಮೊದಲು ತನ್ನ ಮಗಳ ಮೇಲೆ ಅತ್ಯಾಚಾರವೆಸಗಿರುವ ಸಂಶಯವಿದೆ ಎಂದು ಹೇಳಿದ್ದಾರೆ. ಉನ್ನಾವೊದ (Unnao) ಸದರ್ ಕೊತ್ವಾಲಿ ಪ್ರದೇಶದ ನಿವಾಸಿಯಾಗಿರುವ ಸಂತ್ರಸ್ಥೆಯ ತಾಯಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕ್ಕಾಗಿ ಒತ್ತಾಯಿಸಲು ಮುಖ್ಯಮಂತ್ರಿಯನ್ನು ಭೇಟಿಯಾಗಲು ಬಯಸಿರುವುದಾಗಿ ಹೇಳಿದರು.

ನಾಪತ್ತೆಯಾಗಿದ್ದ ದಲಿತ ಬಾಲಕಿ ಎರಡು ತಿಂಗಳ ಬಳಿಕ ಶವವಾಗಿ ಪತ್ತೆ: ಸಮಾಜವಾದಿ ಪಕ್ಷದ ನಾಯಕ ಫತೇಹ್ ಬಹದ್ದೂರ್ ಸಿಂಗ್ (Fateh Bahadur Singh) ಅವರ ಪುತ್ರ ರಾಜೋಲ್ ಸಿಂಗ್ ಒಡೆತನದ ಜಮೀನಿನಲ್ಲಿ ಸಮಾಧಿ ಮಾಡಿದ ಸ್ಥಿತಿಯಲ್ಲಿ 22 ವರ್ಷದ ಮಹಿಳೆಯ ಶವ ಪತ್ತೆಯಾಗಿದೆ. ಎರಡು ತಿಂಗಳ ಹಿಂದೆಯೇ ಈಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ದೂರು ದಾಖಲಾಗಿತ್ತು. ಆಕೆಯ ತಾಯಿ ಡಿಸೆಂಬರ್ 8 ರಂದು ಕಾಣೆಯಾದ ಕುರಿತಾಗಿ ದೂರು ನೀಡಿದ್ದರು. ಫತೇಹ್ ಬಹದ್ದೂರ್ ಸಿಂಗ್ ಅವರು ಅಖಿಲೇಶ್ ಯಾದವ್ (Akhilesh Yadav) ಸರ್ಕಾರದಲ್ಲಿ ಸಚಿವರಾಗಿದ್ದರು.

ತನ್ನ ಮಗಳು ಕಾಣೆಯಾಗಿರುವುದಕ್ಕೆ ರಾಜೋಲ್ ಸಿಂಗ್ ಅವರೇ ಕಾರಣ ಎಂದು ಮಹಿಳೆಯ ತಾಯಿ ಹೇಳಿದ್ದರೂ, ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಜನವರಿ 24 ರಂದು ಲಕ್ನೋದಲ್ಲಿ ಅಖಿಲೇಶ್ ಯಾದವ್ ಅವರ ಕಾರಿನ ಮುಂದೆ ಈಕೆ ಪ್ರತಿಭಟನೆ ಮಾಡಿದ್ದರು. ಬಳಿಕ ಪ್ರಕರಣ ಗಂಭೀರ ಸ್ವರೂಪ ಪಡೆದುಕೊಂಡಿದ್ದರಿಂದ ಪೊಲೀಸರು ರಾಜೋಲ್ ಸಿಂಗ್ ರನ್ನು ಜೈಲಿಗೆ ಕಳಿಸಿದ್ದರು. ರಾಜೋಲ್ ಸಿಂಗ್ ಅವರ ವಿಚಾರಣೆ ಮಾಡಲಾಗಿತ್ತಾದರೂ, ಕಾಣೆಯಾದ ಮಹಿಳೆಯ ಪತ್ತೆ ಸಾಧ್ಯವಾಗಿರಲಿಲ್ಲ. ಆದರೆ, ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೊಲೀಸರು ಗುರುವಾರ ರಾಜೋಲ್ ಸಿಂಗ್ ಅವರ ಜಮೀನಿನಲ್ಲಿ ಶವವನ್ನು ಪತ್ತೆ ಮಾಡಿದ್ದಾರೆ.

Lakhimpur Kheri Violence: 124 ದಿನಗಳ ಬಳಿಕ ಆಶಿಶ್ ಮಿಶ್ರಾ ಜೈಲಿನಿಂದ ಹೊರಕ್ಕೆ!
ಸದರ್ ಕೊತ್ವಾಲಿ ಪೊಲೀಸ್ ಸ್ವಾಟ್ ತಂಡವು ಸ್ಥಳಕ್ಕೆ ಆಗಮಿಸಿ ಶವವನ್ನು ಹೊರತೆಗೆದಿದೆ. ನಾಲ್ಕು ಅಡಿಯ ಆಳದಲ್ಲಿ ಶವವನ್ನು ಸಮಾಧಿ ಮಾಡಲಾಗಿತ್ತು. ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಕಂಬಳಿಯಲ್ಲಿ ಸುತ್ತಿ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆದ ರೀತಿಯಲ್ಲಿ ಪತ್ತೆಯಾಗಿದೆ.  ಶವಪರೀಕ್ಷೆಯಲ್ಲಿ ಆಕೆ ಕತ್ತು ಹಿಸುಕಿ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಮರಣೋತ್ತರ ಪರೀಕ್ಷೆಯ ವರದಿಯಲ್ಲೂ ಆಕೆಯ ಕತ್ತು ಮುರಿದಿರುವುದು ಕಂಡುಬಂದಿದೆ. ಇದಕ್ಕೂ ಮುನ್ನ, ಜಿಲ್ಲಾ ನ್ಯಾಯಾಧೀಶ ಹಾಗೂ ಉನ್ನಾವೋದ ಎಸ್ಎಸ್ ಪಿ ಸಂತ್ರಸ್ತ ಕುಟುಂಬವನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು.

Hijab Row: ವಿವಾದದ ಸಮಯದಲ್ಲಿ ಮಹತ್ವ ಪಡೆದಿದೆ ಯುಪಿಯಲ್ಲಿ ಮೋದಿ ಕೊಟ್ಟ ಹೇಳಿಕೆ!
ಜಂಗಲ್ ರಾಜ್ ಗೆ ಇದು ಸಾಕ್ಷಿ: ತಮ್ಮ ಪಕ್ಷದ ಹಿರಿಯ ನಾಯಕನ ಪುತ್ರನ ಮೇಲೆ ಆರೋಪ ಬಂದಿದ್ದರೂ ಹೆಚ್ಚಿನ ಪ್ರತಿಕ್ರಿಯೆ ನೀಡದ ಅಖಿಲೇಶ್ ಯಾದವ್, ಇದು ಉತ್ತರ ಪ್ರದೇಶದಲ್ಲಿ ಜಂಗಲ್ ರಾಜ್ ಇದೆ ಎನ್ನುವುದನ್ನು ಸೂಚಿಸುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಕಿಲ್ಲ ಎಂದು ಹೇಳಿದ್ದಾರೆ. ಇನ್ನು ಅರೋಪಿಗೂ ಸಮಾಜವಾದಿ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಸರ್ಕಾರವೇ ಈ ನಿಟ್ಟಿನಲ್ಲಿ ತನಿಖೆ ನಡೆಸಲಿ ಎಂದು ಹೇಳಿದ್ದಾರೆ. ಇದರ ನಡುವೆ ಭಾರತೀಯ ಜನತಾ ಪಾರ್ಟಿ ಹಾಗೂ ಬಹುಜನ ಸಮಾಜ ಪಕ್ಷ ಈ ವಿಚಾರದಲ್ಲಿ ಸಮಾಜವಾದಿ ಪಕ್ಷವನ್ನು ಟೀಕೆ ಮಾಡಿದೆ.

click me!