ಸದನದ ಒಳಗೆ ಹಾಗೂ ಹೊರಗೆ ಚಮತ್ಕಾರಭರಿತವಾಗಿ, ಸ್ವಾರಸ್ಯಕರ ಒನ್ ಲೈನರ್ ಗಳನ್ನು ಭಾಷಣದಲ್ಲಿ ಮೂಡಿಸುತ್ತಿದ್ದ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ತಮ್ಮ ಅವಧಿ ಪೂರ್ಣಗೊಳಿಸಿ ಆ.10 ರಂದು ನಿವೃತ್ತರಾಗುತ್ತಿದ್ದಾರೆ. ಈ ಹಿನ್ನೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ಸದನ ಆತ್ಮೀಯ ಬೀಳ್ಕೊಡುಗೆ ನೀಡಿತು. ಅದರಲ್ಲೂ ಮುಖ್ಯವಾಗಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕನ್ನಡದಲ್ಲಿ ಮಾತನಾಡಿ ಗಮನಸೆಳೆದರು.
ನವದೆಹಲಿ, (ಆಗಸ್ಟ್08): ರಾಜ್ಯಸಭೆಯಲ್ಲಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರಿಗೆ ಇಂದು ಭಾವುಕ ದಿನ, ಭಾವನಾತ್ಮಕ ಕ್ಷಣ. ನೂತನ ಉಪರಾಷ್ಟ್ರಪತಿಯಾಗಿ ಜಗದೀಪ್ ಧನಕರ್ ಅವರು ಆಯ್ಕೆ ಆದ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರು ಇಂದು(ಸೋಮವಾರ) ರಾಜ್ಯಸಭೆಯಲ್ಲಿ ಸಭಾಪತಿಯಾಗಿ ಕೊನೆಯ ದಿನದ ಕಲಾಪ ನಡೆಸಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವರು ಹಾಗೂ ರಾಜ್ಯಸಭೆಯ ಹಲವು ಸದಸ್ಯರು ವೆಂಕಯ್ಯ ನಾಯ್ಡು ಅವರ ಕಾರ್ಯವೈಖರಿ ಶ್ಲಾಘಿಸಿದರು. ವಿಶೇಷವಾಗಿ ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ ಅವರು ಕನ್ನಡದಲ್ಲಿಯೇ ಭಾಷಣ ಮಾಡಿ ಗಮನ ಸೆಳೆದರು.
ವೆಂಕಯ್ಯ ನಾಯ್ಡು, ಕರ್ನಾಟಕ ಮತ್ತು ಜನಾರ್ಧನ ಹೋಟೆಲ್: ಸಂಬಂಧ ಬಿಚ್ಚಿಟ್ಟ ಪ್ರಲ್ಹಾದ್ ಜೋಶಿ!
ಉಪ ರಾಷ್ಟ್ರಪತಿ ಹಾಗೂ ರಾಜ್ಯಸಭೆ ಸಭಾಪತಿ ವೆಂಕಯ್ಯ ನಾಯ್ಡು ಅವರಿಗೆ ಕನ್ನಡದಲ್ಲೇ ಭಾಷಣ ಮಾಡುವ ಮೂಲಕ ಬೀಳ್ಕೊಡುಗೆ ನೀಡಿದ ಪ್ರಲ್ಹಾದ ಜೋಶಿಯವರು, ಕರ್ನಾಟಕದ ಜತೆಗಿನ ವೆಂಕಯ್ಯ ನಾಯ್ಡು ಅವರ ಬಾಂಧವ್ಯ, ಮಾತೃ ಭಾಷೆ ಬಗ್ಗೆ ಅವರಿಗಿದ್ದ ಅಭಿಮಾನ, ಪ್ರಾಸಬದ್ಧ ಭಾಷಣ, ವಿಶೇಷವಾಗಿ ದಕ್ಷಿಣ ಭಾರತದ ಡ್ರೆಸ್ ಕೋಡ್ ಪಾಲನೆಯಲ್ಲಿ ವೆಂಕಯ್ಯ ನಾಯ್ಡು ಅವರ ಶಿಸ್ತಿನ ಬಗ್ಗೆ ಜೋಶಿ ಸ್ಮರಿಸಿದರು.
ವೆಂಕಯ್ಯ ನಾಯ್ಡು ಅವರು ರಾಜ್ಯಸಭೆ ಸಭಾಪತಿಯಾಗಿ ಸದನದಲ್ಲಿ ಭಾರತದ ಪ್ರಾದೇಶಿಕ ಭಾಷೆಗಳಿಗೆ ಹೆಚ್ಚಿನ ಪ್ರಾಧಾನ್ಯತೆ ನೀಡಿದ್ದರು. ರಾಜ್ಯಸಭೆಯಲ್ಲಿ ಸದಸ್ಯರು ತಮ್ಮ ಮಾತೃಭಾಷೆಯಲ್ಲಿ ಮಾತನಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಸುಮಾರು 22 ಪ್ರಾದೇಶಿಕ ಭಾಷೆಗಳಲ್ಲಿ ಮಾತನಾಡಲು ರಾಜ್ಯಸಭೆಯಲ್ಲಿ ಅನುಮತಿ ನೀಡಿದ್ದರು. ಈ ಹಿನ್ನೆಲೆಯಲ್ಲಿ ವೆಂಕಯ್ಯ ನಾಯ್ಡು ಅವರಿಗೆ ವಂದನಾ ಭಾಷಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಮ್ಮ ಮಾತೃ ಭಾಷೆ ಕನ್ನಡದಲ್ಲಿಯೇ ಮಾತನಾಡುವ ಮೂಲಕ ನಾಯ್ಡು ಅವರು ಹಾಕಿದ್ದ ಮೇಲ್ಪಂಕ್ತಿಗೆ ಪ್ರಶಂಸೆ ವ್ಯಕ್ತಪಡಿಸಿದರು.
ವೆಂಕಯ್ಯ ನಾಯ್ಡು ಸರಳ ಸ್ವಭಾವ, ಬೆಂಗಳೂರಿಗೆ ಬಂದ್ರೆ ಸಣ್ಣ ಜನಾರ್ದನ ಹೋಟೆಲ್‌ಗೋ ಹೋಗೋ ಅವರ ಸರಳತೆ, ಯಾವ ಹುದ್ದೆಯಲ್ಲಿದ್ರೂ ಜನಕ್ಕೆ ಮುಕ್ತವಾಗಿ ಸಿಗೋ ಅವರ ಸರಳತೆಯನ್ನೂ ಪ್ರಶಂಸಿದ್ರು. ದಣಿವರಿಯದ ನಾಯಕರಾದ ನಿಮ್ಮ ಮಾರ್ಗದರ್ಶನವಿರಲಿ ಅಂತ ವೆಂಕಯ್ಯ ನಾಯ್ಡುಗೆ ಜೋಶಿಯವರು ಇದೇ ವೇಳೆ ತುಂಬು ಹೃದಯದ ಶುಭಾಶಯ ಕೋರಿದ್ದು ವಿಶೇಷ