ದೇಶ ಮನಮೋಹನ್‌ ಸಿಂಗ್‌ಗೆ ಋಣಿಯಾಗಿರಬೇಕು ಎಂದಿದ್ದೇಕೆ ನಿತಿನ್‌ ಗಡ್ಕರಿ?

By Santosh NaikFirst Published Nov 9, 2022, 4:20 PM IST
Highlights

ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ನಿತಿನ್ ಗಡ್ಕರಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಹೇಳಿದ್ದಾರೆ.
 

ನವದೆಹಲಿ (ನ.9): ದೇಶದಲ್ಲಿ ತಂದ ಆರ್ಥಿಕ ಸುಧಾರಣೆಗಾಗಿ ಭಾರತವು ಮಾಜಿ ಪ್ರಧಾನಮಂತ್ರಿ ಮನಮೋಹನ್‌ ಸಿಂಗ್‌ ಅವರಿಗೆ ಋಣಿಯಾಗಿರಬೇಕು ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಬಡ ಜನರಿಗೆ ಅದರ ಪ್ರಯೋಜನಗಳನ್ನು ಒದಗಿಸುವ ಉದ್ದೇಶದಿಂದ ಭಾರತಕ್ಕೆ ಉದಾರ ಆರ್ಥಿಕ ನೀತಿಯ ಅಗತ್ಯವಿದೆ ಎಂದು ಮಂಗಳವಾರ ನಡೆದ ಟಿಐಒಎಲ್ ಅವಾರ್ಡ್ಸ್ 2022 ಈವೆಂಟ್‌ನಲ್ಲಿ ನಿತಿನ್‌ ಗಡ್ಕರಿ ಹೇಳಿದ್ದಾರೆ. 1991 ರಲ್ಲಿ ವಿತ್ತ ಸಚಿವರಾಗಿ ಮನಮೋಹನ್‌ ಸಿಂಗ್ ಅವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳು ಭಾರತಕ್ಕೆ ಹೊಸ ದಿಕ್ಕನ್ನು ನೀಡಿತು, ಅದು ಉದಾರ ಆರ್ಥಿಕತೆಗೆ ನಾಂದಿ ಹಾಡಿತು ಎಂದು ಅವರು ಹೇಳಿದರು. ಹೊಸ ದಿಕ್ಕನ್ನು ನೀಡಿದ ಉದಾರೀಕರಣಕ್ಕಾಗಿ ದೇಶವು ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿದೆ" ಎಂದು ಗಡ್ಕರಿ ಹೇಳಿದರು.

1990 ರ ದಶಕದ ಮಧ್ಯಭಾಗದಲ್ಲಿ ಅವರು ಮಹಾರಾಷ್ಟ್ರದಲ್ಲಿ ಸಚಿವರಾಗಿದ್ದಾಗ ಮಾಜಿ ಪ್ರಧಾನಿಯವರು ಪ್ರಾರಂಭಿಸಿದ ಆರ್ಥಿಕ ಸುಧಾರಣೆಗಳಿಂದಾಗಿ ಮಹಾರಾಷ್ಟ್ರದಲ್ಲಿ ರಸ್ತೆಗಳನ್ನು ನಿರ್ಮಿಸಲು ಹಣವನ್ನು ಸಂಗ್ರಹಿಸಲು ಸಾಧ್ಯವಾಯಿತು ಎನ್ನುವುದನ್ನು ಅವರು ಈ ವೇಳೆ ನೆನಪಿಸಿಕೊಂಡಿದ್ದಾರೆ. ಉದಾರ ಆರ್ಥಿಕ ನೀತಿಯು ರೈತರು ಮತ್ತು ಬಡವರಿಗಾಗಿ ಮಾಡಲಾಗಿತ್ತು ಗಡ್ಕರಿ ಪ್ರತಿಪಾದಿಸಿದ್ದಾರೆ. ಈ ಪ್ರಶಸ್ತಿ ಸಮಾರಂಭವನ್ನು 'ಟ್ಯಾಕ್ಸ್‌ಇಂಡಿಯಾ ಆನ್‌ಲೈನ್' ಪೋರ್ಟಲ್ ಆಯೋಜನೆ ಮಾಡಿತ್ತು.

ಯಾವುದೇ ದೇಶದ ಅಭಿವೃದ್ಧಿಗೆ ಉದಾರ ಆರ್ಥಿಕ ನೀತಿ ಹೇಗೆ ಸಹಾಯ ಮಾಡುತ್ತದೆ ಎಂಬುದಕ್ಕೆ ಚೀನಾ ಉತ್ತಮ ಉದಾಹರಣೆಯಾಗಿದೆ ಎಂದು ಅವರು ಹೇಳಿದರು. ಆರ್ಥಿಕ ಬೆಳವಣಿಗೆಯನ್ನು ವೇಗಗೊಳಿಸಲು, ಭಾರತಕ್ಕೆ ಹೆಚ್ಚಿನ ಕ್ಯಾಪೆಕ್ಸ್ ಹೂಡಿಕೆಯ ಅಗತ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹೆದ್ದಾರಿಗಳ ನಿರ್ಮಾಣಕ್ಕಾಗಿ ಎನ್‌ಎಚ್‌ಎಐ ಜನಸಾಮಾನ್ಯರಿಂದ ಹಣ ಸಂಗ್ರಹಿಸುತ್ತಿದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವರು ಈ ವೇಳೆ ಹೇಳಿದ್ದಾರೆ.

ತಮ್ಮ ಸಚಿವಾಲಯವು 26 ಗ್ರೀನ್‌ ಎಕ್ಸ್‌ಪ್ರೆಸ್‌ವೇಗಳನ್ನು ನಿರ್ಮಿಸುತ್ತಿದೆ ಮತ್ತು ಇದು ಹಣದ ಕೊರತೆಯನ್ನು ಎದುರಿಸುತ್ತಿಲ್ಲ ಎಂದು ನಿತಿನ್‌ ಗಡ್ಕರಿ ಈ ವೇಳೆ ಹೇಳಿದ್ದಾರೆ. ಅವರ ಪ್ರಕಾರ, ಎನ್‌ಎಚ್‌ಐಎನ ಟೋಲ್ ಆದಾಯವು ಪ್ರಸ್ತುತ ವಾರ್ಷಿಕ ₹ 40,000 ಕೋಟಿಗಳಿಂದ 2024 ರ ಅಂತ್ಯದ ವೇಳೆಗೆ ₹ 1.40 ಲಕ್ಷ ಕೋಟಿಗೆ ಏರಲಿದೆ ಎಂದು ಅಂದಾಜಿಸಿದ್ದಾರೆ.

ಮರ್ಸಿಡಿಸ್‌ ಬೆಂಜ್ ಕಾರನ್ನು ನಾನು ಸಹ ತೆಗೆದುಕೊಳ್ಳಲು ಆಗಲ್ಲ: Nitin Gadkari

8 ವರ್ಷಗಳಲ್ಲಿ ದೊಡ್ಡ ಮಟ್ಟದಲ್ಲಿ ರಸ್ತೆ ಅಭಿವೃದ್ಧಿ: ಕಳೆದ ಎಂಟು ವರ್ಷಗಳಲ್ಲಿ ನಡೆದಿರುವಂಥ ರಸ್ತೆ ಅಭಿವೃದ್ಧಿ ಕಾಮಗಾರಿ ಕಳೆದ 65 ವರ್ಷಗಳಲ್ಲಿ ನಡೆದಿರಲಿಲ್ಲ.  2024 ರ ಅಂತ್ಯದ ಮೊದಲು ಭಾರತದ ರಸ್ತೆ ಮೂಲಸೌಕರ್ಯವು ಅಮೆರಿಕದ ರಸ್ತೆ ಮೂಲಸೌಕರ್ಯಕ್ಕೆ ಸಮನಾಗಿರುತ್ತದೆ ಎಂದು ನಾನು ಭಾವಿಸುತ್ತೇನೆ. ಅದರಲ್ಲಿ ಯಶಸ್ವಿಯಾಗುತ್ತೇವೆ ಎಂದು ಗಡ್ಕರಿ ಹೇಳಿದ್ದಾರೆ. ಗಾಳಿ, ನೀರು ಮತ್ತು ಧ್ವನಿ ಮಾಲಿನ್ಯವನ್ನು ಪರಿಹರಿಸುವುದು ನಮ್ಮ ಆದ್ಯತೆಯಾಗಿದೆ. ನಾವು ದೆಹಲಿಯ ಸುತ್ತಲೂ 60,000 ಕೋಟಿ ರೂಪಾಯಿಗಳ ರಸ್ತೆಗಳನ್ನು ನಿರ್ಮಿಸುತ್ತಿದ್ದೇವೆ, ಇದು ಪ್ರದೇಶವನ್ನು ಟ್ರಾಫಿಕ್ ಜಾಮ್‌ನಿಂದ ಮುಕ್ತಗೊಳಿಸುತ್ತದೆ. ನಾವು ಎಲೆಕ್ಟ್ರಿಕ್ ವಾಹನಗಳು ಮತ್ತು ಗ್ರೀನ್‌ ಹೈಡ್ರೋಜನ್ ವಾಹನಗಳನ್ನು ತಂದಿದ್ದೇವೆ ಎಂದು ಹೇಳಿದ್ದಾರೆ.

Chamarajanagar: ರಾಷ್ಟ್ರೀಯ ಹೆದ್ದಾರಿ ಪೂರ್ಣಕ್ಕೆ ಸಚಿವ ನಿತಿನ್‌ ಗಡ್ಕರಿಗೆ ಮನವಿ

ನಮ್ಮಲ್ಲಿ 5 ಲಕ್ಷ ರಸ್ತೆ ಅಪಘಾತಗಳಿವೆ, ಹೆಚ್ಚಾಗಿ 18-34 ವಯಸ್ಸಿನ ಜನರು ಬಲಿಯಾಗುತ್ತಾರೆ. ಅಪಘಾತಗಳನ್ನು ಕಡಿಮೆ ಮಾಡಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತಿದ್ದೇವೆ ಇನ್ನೂ ನನಗೆ ತೃಪ್ತಿ ಇಲ್ಲ. ಜನರು ವಿದ್ಯಾವಂತರಾಗಿರಬೇಕು ಮತ್ತು ನಾವು ರಸ್ತೆ ಎಂಜಿನಿಯರಿಂಗ್ ಮತ್ತು ತುರ್ತು ಸೇವೆಗಳತ್ತ ಗಮನಹರಿಸುತ್ತಿದ್ದೇವೆ ಎಂದೂ ಅವರು ಎಎನ್‌ಐಗೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

click me!