
ನವದೆಹಲಿ (ಫೆ.09): ದಕ್ಷಿಣ ಭಾರತದ ಸಂಸದರು ಕೇಂದ್ರದಲ್ಲಿ ಸಚಿವರಾದರೆ ಉತ್ತರ ಭಾರತದಲ್ಲಿ ಸಂವಹನ ನಡೆಸುವುದು ಬಹುದೊಡ್ಡ ಸವಾಲು. ಕಾರಣ- ದಕ್ಷಿಣ ಭಾರತದ ರಾಜ್ಯಗಳನ್ನು ಹೊರತುಪಡಿಸಿ ಬಹುತೇಕ ಕಡೆ ಹಿಂದಿ ಸಾಮಾನ್ಯ ಭಾಷೆಯಾಗಿದೆ. ಇದರ ಜೊತೆಗೆ ಕೇಂದ್ರ ಸಚಿವ ಸಚಿವರು, ಕೇಂದ್ರ ಸಚಿವಾಲಯದ ಬಹುತೇಕ ಅಧಿಕಾರಿಗಳೂ ಹಿಂದಿಯಲ್ಲೇ ಸಂವಹನ ನಡೆಸುತ್ತಾರೆ. ಇದರ ಬಿಸಿ ಇದೀಗ ಕೇಂದ್ರದಲ್ಲಿ ಸಚಿವರಾಗಿರುವ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರಿಗೂ ತಟ್ಟಿದೆ. ಹೀಗಾಗಿ ಅವರೀಗ ಅನಿವಾರ್ಯವಾಗಿ ಹಿಂದಿ ಭಾಷೆ ಕಲಿಯಲು ಮುಂದಾಗಿದ್ದಾರೆ.
ಹೌದು. ದೆಹಲಿಯಲ್ಲಿ ಇರುವ ವೇಳೆ ವಾರದ ದಿನಗಳಲ್ಲಿ ನಿತ್ಯವೂ 90 ನಿಮಿಷಗಳನ್ನು ಹಿಂದಿ ಕಲಿಕೆಗೆ ಎಚ್‌ಡಿಕೆ ಮೀಸಲಿಟ್ಟಿದ್ದಾರೆ. ಆನ್‌ಲೈನ್ ಮೂಲಕ ನಡೆಯುವ ತರಗತಿಯಲ್ಲಿ ಭಾಗಿಯಾಗುತ್ತಿರುವ ಅವರು, ಹಿಂದಿ ಓದುವುದು, ಬರೆಯುವುದು ಮತ್ತು ಸಂವಹನ ಮಾಡುವುದು ಹೇಗೆ ಎಂಬುದನ್ನು ಕಲಿಯುತ್ತಿದ್ದಾರೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ‘ಉತ್ತರ ಭಾರತದಲ್ಲಿ ಬಹುತೇಕರು ಹಿಂದಿಯಲ್ಲೇ ಮಾತಾಡುತ್ತಾರೆ. ಸಂಸದರು, ಅಧಿಕಾರಿಗಳೂ ಹಿಂದಿಯಲ್ಲೇ ಮಾತಾಡುವ ಕಾರಣ ನನಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ಬೇರೆ ದಾರಿಯಿಲ್ಲದೆ ಕಲಿಯುತ್ತಿದ್ದೇನೆ’ ಎಂದಿದ್ದಾರೆ.
ಪ್ರಧಾನಿ ಮೋದಿ ಎದುರು ಕುಮಾರಸ್ವಾಮಿ ಬೇಳೆಕಾಳು ಬೇಯಲ್ಲ: ಬಾಲಕೃಷ್ಣ
ಕುಮಾರಸ್ವಾಮಿ ಈಗಾಗಲೇ 2 ಬಾರಿ ಸಂಸದರಾಗಿದ್ದರೂ, ಕೇಂದ್ರ ಸಚಿವರಾಗಿರುವುದು ಇದೇ ಮೊದಲು. ಎಚ್‌ಡಿಕೆಗೆ ಆಂಗ್ಲ ಭಾಷೆ ಬರುತ್ತದೆಯಾದರೂ, ಎಲ್ಲರೊಂದಿಗಿನ ಸಂಭಾಷಣೆಯಲ್ಲಿ ಇದು ಸಹಕಾರಿಯಲ್ಲ ಎಂದು ಅರಿತಿದ್ದಾರೆ. ಹೀಗಾಗಿ ಕುಮಾರಸ್ವಾಮಿ ಹಿಂದಿ ಕಲಿಕೆಯನ್ನು ಶುರುವಿಟ್ಟುಕೊಂಡಿದ್ದಾರೆ. ಕಳೆದ ವರ್ಷ ಆಗಸ್ಟ್‌ನಲ್ಲಿ ಕೇಂದ್ರ ಸಚಿವ ವಿ. ಸೋಮಣ್ಣ ಕೂಡ 6 ತಿಂಗಳಲ್ಲಿ ಹಿಂದಿ ಕಲಿಯುವ ನಿರ್ಧಾರ ತೆಗೆದುಕೊಂಡಿದ್ದರು.
ಸರ್ಕಾರದ ವಿರುದ್ಧ ಆಕ್ರೋಶ: ರಾಜ್ಯದ ಅಭಿವೃದ್ಧಿ ವಿಚಾರವಾಗಿ ಚರ್ಚಿಸುವ ಸೌಜನ್ಯ ಮುಖ್ಯಮಂತ್ರಿಗಳು ಸೇರಿದಂತೆ ಮಂತ್ರಿಮಂಡಲದ ಯಾವೊಬ್ಬ ಸದಸ್ಯರಿಗೂ ಇಲ್ಲ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ತಾಲೂಕಿನ ಕನಗನಮರಡಿ ಗ್ರಾಮದ ಶ್ರೀಅಂಕನಾಥದೇವಸ್ಥಾನ ದೇವಸ್ಥಾನದ ಲೋಕಾರ್ಪಣೆ ನೆರವೇರಿಸಿದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಆಂಧ್ರಪ್ರದೇಶ, ಚತ್ತಿಸಗಡ್, ಜಾರ್ಖಾಂಡ್ ರಾಜ್ಯ ಸೇರಿದಂತೆ ಅನೇಕ ರಾಜ್ಯಗಳು ಮುಖ್ಯಮಂತ್ರಿಗಳು ಆಯಾ ರಾಜ್ಯಗಳ ಅಭಿವೃದ್ಧಿ ವಿಚಾರವಾಗಿ ಚರ್ಚಿಸುತ್ತಿದ್ದಾರೆ ಎಂದರು.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಟೋಲ್ ತಪ್ಪಿಸುತ್ತಿದ್ದವರಿಗೆ ಬಿಗ್‌ಶಾಕ್!
ನಾನು ಕೇಂದ್ರದ ಸಚಿವನಾಗಿ ಏಳು ತಿಂಗಳು ಕಳೆಯುತ್ತಿವೆ. ಈವರೆಗೂ ನಮ್ಮ ರಾಜ್ಯದ ಸಿಎಂ ಸೇರಿದಂತೆ ಯಾವೊಬ್ಬ ಮಂತ್ರಿಯೂ ರಾಜ್ಯದ ಅಭಿವೃದ್ಧಿ ವಿಚಾರದಲ್ಲಿ ನನ್ನೊಂದಿಗೆ ಚರ್ಚಿಸುವ ಪ್ರಯತ್ನವನ್ನು ಮಾಡದೆ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು. ನನ್ನನ್ನು ಟಾರ್ಗೆಟ್ ಮಾಡಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಚರ್ಚಿಸಲು ಧೈರ್ಯವಿಲ್ಲ ಎಂದು ಟೀಕಿಸುತ್ತಾರೆ. ನನಗೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಎಲ್ಲರೊಂದಿಗೂ ಚರ್ಚಿಸುವ ಶಕ್ತಿಯನ್ನು ಮಂಡ್ಯ ಜಿಲ್ಲೆಯ ಜನತೆ ನೀವು ನೀಡಿದ್ದೀರಾ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ