ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿಗೆ ಶನಿವಾರ ಜೀವ ಬೆದರಿಕೆ ಕರೆ ಬಂದಿದೆ. ಇದರ ಬೆನ್ನಲ್ಲಿಯೆ ಅವರಿಗೆ ನೀಡಲಾಗುತ್ತಿದ್ದ ಭದ್ರತೆಯಲ್ಲಿ ಹೆಚ್ಚಳ ಮಾಡಲಾಗಿದೆ. ಅವರ ಮನೆ ಹಾಗೂ ಕಚೇರಿಗೆ ನಾಗ್ಪುರ ಪೊಲೀಸರು ಹೆಚ್ಚಿನ ಭದ್ರತೆಯನ್ನು ನಿಯೋಜನೆ ಮಾಡಿದ್ದಾರೆ.
ನಾಗ್ಪುರ (ಜ.14): ಜೀವ ಬೆದರಿಕೆ ಹಿನ್ನೆಲೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರ ಕಚೇರಿ ಮತ್ತು ಮನೆಯ ಸುತ್ತ ಭದ್ರತೆಯನ್ನು ಬಿಗಿಗೊಳಿಸಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ನಗರದ ಗಡ್ಕರಿ ಅವರ ಖಾಸಗಿ ಕಚೇರಿಗೆ ಈ ಕುರಿತಾದ ಕನಿಷ್ಠ ಮೂರು ಕರೆಗಳು ಬಂದಿವೆ. ಬೆಳಿಗ್ಗೆ 11.30 ರಿಂದ ಮಧ್ಯಾಹ್ನ 12.30 ರ ಅವಧಿಯಲ್ಲಿ ಈ ಕರೆಗಳು ದಾಖಲಾಗಿವೆ. ಮತ್ತು ಕರೆ ಮಾಡಿದವರು ಪರಾರಿಯಾಗಿರುವ ಮಾಫಿಯಾ ಡಾನ್ ದಾವೂದ್ ಇಬ್ರಾಹಿಂ ಕಸ್ಕರ್ ಹೆಸರನ್ನು ಉಚ್ಚರಿಸಿದ್ದಾರೆ. ಪ್ರಸ್ತುತ ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ನಾಗ್ಪುರದಲ್ಲಿರುವ ಗಡ್ಕರಿ ಅವರನ್ನು ಗುರಿಯಾಗಿಸಿಕೊಂಡು ಅಪರಿಚಿತ ಕರೆ ಮಾಡಿದ ವ್ಯಕ್ತಿ ಹಣದ ಬೇಡಿಕೆಗಳನ್ನು ಮುಂದಿಟ್ಟು ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ವರದಿಯಾಗಿದೆ. ಸಚಿವರ ಕಚೇರಿ ಸಿಬ್ಬಂದಿ ಕೂಡಲೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಹಿರಿಯ ಅಧಿಕಾರಿಗಳು ತಮ್ಮ ತಂಡಗಳೊಂದಿಗೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಕರೆ ಮಾಡಿದವರ ಗುರುತು ಹಾಗೂ ಇತರ ಮಾಹಿತಿಗಳು ಇನ್ನಷ್ಟೇ ಸಿಗಬೇಕಿದೆ.
ಮೂಲಗಳ ಪ್ರಕಾರ, ಅಪರಿಚಿತ ವ್ಯಕ್ತಿಯೊಬ್ಬರು ಕೇಂದ್ರ ಸಚಿವರ ಕಚೇರಿಯ ಸ್ಥಿರ ದೂರವಾಣಿ ಸಂಖ್ಯೆಗೆ ಎರಡು ಬಾರಿ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ. ಆ ವ್ಯಕ್ತಿ ಫೋನ್‌ನಲ್ಲಿ ಕಚೇರಿಯನ್ನು ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಕೂಡಲೇ ಕಚೇರಿಯ ನೌಕರರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗಡ್ಕರಿ ಅವರ ಕಚೇರಿಗೆ ಬೆಳಿಗ್ಗೆ 11:30 ರಿಂದ 11:40 ರ ನಡುವೆ ಸತತ ಎರಡು ಕರೆಗಳು ಬಂದಿವೆ ಮತ್ತು ನಾಗ್ಪುರ ಚೌಕ್‌ನ ಖಮ್ಲಾದಲ್ಲಿರುವ ನಿತಿನ್ ಗಡ್ಕರಿ ಅವರ ಸಾರ್ವಜನಿಕ ಸಂಪರ್ಕ ಕಚೇರಿಯ ಪರವಾಗಿ ಹತ್ತಿರದ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
Auto Expo: 2024ರ ಅಂತ್ಯದೊಳಗೆ ಶೇ. 50ರಷ್ಟು ಅಪಘಾತ ಕಡಿಮೆ ಮಾಡುವುದು ನಮ್ಮ ಗುರಿ: ನಿತಿನ್ ಗಡ್ಕರಿ
ಈ ಪೊಲೀಸ್ ಠಾಣೆ ನಿತಿನ್ ಗಡ್ಕರಿ ಅವರ ಮನೆಯಿಂದ ಬರೀ ಒಂದು ಕಿಲೋಮೀಟರ್ ದೂರದಲ್ಲಿದೆ. ನಂತರ, ನಾಗ್ಪುರ ಪೊಲೀಸರು ಮತ್ತು ನಿತಿನ್ ಗಡ್ಕರಿ ಅವರ ಕಚೇರಿ ಈ ಬೆಳವಣಿಗೆಯನ್ನು ಖಚಿತಪಡಿಸಿದೆ.
ಬೆಂಗಳೂರು-ಮೈಸೂರು ದಶಪಥ ರಸ್ತೆಗೆ ದೇವೇಗೌಡರ ಹೆಸರು: ಕೇಂದ್ರ ಸಚಿವ ಗಡ್ಕರಿ ಭೇಟಿಯಾಗಿ ಮನವಿ ಸಲ್ಲಿಸಿದ ಶರವಣ
ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದು, ಸದ್ಯ ಸಚಿವರ ಕಚೇರಿಯ ನೌಕರರೊಂದಿಗೆ ಮಾತನಾಡುತ್ತಿದ್ದಾರೆ. ಇದಾದ ಬಳಿಕ ಗಡ್ಕರಿ ಅವರ ನಿವಾಸದ ಭದ್ರತೆಯನ್ನು ಹೆಚ್ಚಿಸಲಾಗಿದೆ.