'ಅಮೆರಿಕ ಹಿಂದಿಕ್ಕಿ ಭಾರತದ ಸಾಧನೆ: ಮೋದಿ ಮುತುವರ್ಜಿಯಿಂದ ಔಷಧ ಲಭ್ಯತೆ ಹೆಚ್ಚಳ'

By Kannadaprabha NewsFirst Published Jun 29, 2021, 9:12 AM IST
Highlights

* ದೇಶಾದ್ಯಂತ 32.66 ಕೋಟಿ ಜನರಿಗೆ ಕೋವಿಡ್‌ ಲಸಿಕೆ

* ಲಸಿಕೆಯಲ್ಲಿ ಅಮೆರಿಕ ಹಿಂದಿಕ್ಕಿ ಭಾರತ ದೊಡ್ಡ ಸಾಧನೆ: ಡೀವಿ

* ಮೋದಿ ಮುತುವರ್ಜಿಯಿಂದ ಔಷಧ ಲಭ್ಯತೆ ಹೆಚ್ಚಳ

ಬೆಂಗಳೂರು(ಜೂ.29): ದೇಶಾದ್ಯಂತ 32.66 ಕೋಟಿ ಜನರಿಗೆ ಕೋವಿಡ್‌ ಲಸಿಕೆಗಳನ್ನು ನೀಡಲಾಗಿದ್ದು, ಲಸಿಕೆ ಆಂದೋಲದಲ್ಲಿ ಅಮೆರಿಕಾವನ್ನು ಹಿಂದಿಕ್ಕುವ ಮೂಲಕ ಭಾರತ ದೊಡ್ಡ ಸಾಧನೆ ಮಾಡಿದೆ ಎಂದು ಕೇಂದ್ರ ಸಚಿವ ಡಿ.ವಿ.ಎಸ್‌.ಸದಾನಂದಗೌಡ ಹೊಗಳಿದರು.

ಮಲ್ಲೇಶ್ವರದ ರಾಜ್ಯ ಬಿಜೆಪಿ ಕಚೇರಿಯಲ್ಲಿ ನಡೆದ ರಾಜ್ಯ ಮಟ್ಟದ ‘ಇ ಚಿಂತನಾ’ ಸಭೆಯಲ್ಲಿ ’ಕೋವಿಡ್‌ ನಿರ್ವಹಣೆಯಲ್ಲಿ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳ’ ಬಗ್ಗೆ ಮಾತನಾಡಿದ ಸಚಿವರು, ಕೋವಿಡ್‌ ನಿಯಂತ್ರಣಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮರೋಪಾದಿಯಲ್ಲಿ ಕರ್ತವ್ಯ ನಿರ್ವಹಿಸಿದೆ ಎಂದರು.

ಈ ಹಿಂದೆ ದೇಶದಲ್ಲಿ ಏಳು ರೆಮ್‌ಮೆಡಿಸಿವಿರ್‌ ಉತ್ಪಾದನಾ ಘಟಕಗಳಿದ್ದವು, ಆದರೆ ಪ್ರಧಾನಿಗಳು ವಿಶೇಷ ಮುತುವರ್ಜಿ ವಹಿಸಿ ಔಷಧ ಕಂಪನಿಗಳ ಜತೆ ಮಾತುಕತೆ ನಡೆಸಿದ್ದರಿಂದ ರೆಮೆಡಿಸಿವಿರ್‌ ಉತ್ಪಾದನಾ ಘಟಕಗಳ ಸಂಖ್ಯೆ 17ಕ್ಕೇರಿದೆ. ಹಾಗೆಯೇ ಆಮ್ಲಜನಕ ಉತ್ಪಾದನಾ ಘಟಕಗಳ ಹೆಚ್ಚಳಕ್ಕೂ ಸಹ ಆದ್ಯತೆ ಕೊಡಲಾಗಿದೆ. ಈ ಮೊದಲು 100 ಆಮ್ಲಜನಕ ಉತ್ಪಾದನಾ ಘಟಕಗಳಿದ್ದವು. ಈಗ ಹೊಸದಾಗಿ 2,200 ಘಟಕಗಳು ಕಾರ್ಯಾರಂಭಿಸಿವೆ. ಆಮ್ಲಜನಕ ಪೂರೈಕೆಯಲ್ಲಿ ಸಮಸ್ಯೆ ಉಂಟಾಗದಂತೆ ಹಲವೆಡೆ ವೈಮಾನಿಕ ಸರಬರಾಜು ನಡೆದಿದೆ ಎಂದು ಸಚಿವರು ಶ್ಲಾಘಿಸಿದರು.

ಕೋವಿಡ್‌ ಎರಡನೇ ಅಲೆಯನ್ನು ನಿಭಾಯಿಸಲಾಗದೆ ಹಲವು ದೇಶಗಳು ಕೈ ಚೆಲ್ಲುವ ಪರಿಸ್ಥಿತಿ ಬಂದಿತ್ತು. ಆದರೆ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಸಮರ್ಥವಾಗಿ ನಿಭಾಯಿಸಲಾಗಿದೆ. ಔಷಧ, ಆಮ್ಲಜನಕ, ವೆಂಟಿಲೇಟರ್‌ಗಳನ್ನು ವ್ಯಾಪಕವಾಗಿ ಒದಗಿಸಲಾಗಿದೆ. ರಾಜ್ಯ ಸರ್ಕಾರಗಳ ಅಗತ್ಯಗಳಿಗೆ ಕೇಂದ್ರ ಸರ್ಕಾರ ತಕ್ಷಣವೇ ಸ್ಪಂದಿಸಿದೆ.ವಿರೋಧ ಪಕ್ಷಗಳು ಮಾಡುವ ಅಪಪ್ರಚಾರಕ್ಕೆ ತಮ್ಮ ಕಾರ್ಯದ ಮೂಲಕ ಕೇಂದ್ರ ಸರ್ಕಾರ ಸ್ಪಷ್ಟಉತ್ತರ ನೀಡಿದೆ ಎಂದು ಸದಾನಂದಗೌಡ ಹೇಳಿದರು.

ಲಸಿಕೆ ಅಭಿಯಾನ: ಅಮೆರಿಕಾ ಹಿಂದಿಕ್ಕಿದ ಭಾರತ, 32 ಕೋಟಿಗೂ ಅಧಿಕ ಮಂದಿಗೆ ಲಸಿಕೆ!

ರಾಜ್ಯದಲ್ಲಿ ಕೋವಿಡ್‌ನಿಂದ ಮೃತಪಟ್ಟಬಿಪಿಎಲ್‌ ಕುಟುಂಬದವರಿಗೆ 1 ಲಕ್ಷ ರು ನೀಡುವ ಯೋಜನೆಗೆ ಮುಖ್ಯಮಂತ್ರಿ ಬಿ.ಎಸ್‌,ಯಡಿಯೂರಪ್ಪ ಚಾಲನೆ ನೀಡಿದ್ದಾರೆ. ಇದಲ್ಲದೆ ಕೋವಿಡ್‌ನಿಂದ ಪೋಷಕರು ಮೃತಪಟ್ಟು ಅನಾಥರಾದ ಮಕ್ಕಳಿಗೆ ಕೇಂದ್ರ ಸರ್ಕಾರ 10 ಲಕ್ಷ ರುಪಾಯಿ ಬಾಂಡ್‌ ನೀಡುತ್ತಿದೆ. ರಾಜ್ಯದಲ್ಲಿ ಆರೋಗ್ಯ ಸಮಸ್ಯೆ ನಿವಾರಣೆಗೆ ನೆರವಾಗುವ ದೃಷ್ಟಿಯಿಂದ ಫ್ರಂಟ್‌ ಲೈನ್‌ ವಾರಿಯರ್‌ಗಳಾಗಿ 1.20 ಲಕ್ಷ ಬಿಜೆಪಿ ಕಾರ್ಯಕರ್ತರನ್ನು ಸಿದ್ದಗೊಳಿಸಲಾಗುತ್ತಿದೆ ಎಂದು ಹೇಳಿದರು.

ಮಂಗಳೂರಿನಿಂದ ವೆಬೆಕ್ಸ್‌ ಮೂಲದ ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಉಪಸ್ಥಿತರಿದ್ದರು.

click me!