
ನವದೆಹಲಿ [ಡಿ.24]: ಅಕ್ರಮ ವಲಸಿಗರನ್ನು ಪತ್ತೆ ಹಚ್ಚಿ, ಗಡೀಪಾರು ಮಾಡಲು ಅಸ್ಸಾಂನಲ್ಲಿ ಜಾರಿಗೊಳಿಸಲಾಗಿರುವ ರಾಷ್ಟ್ರೀಯ ನಾಗರಿಕ ನೋಂದಣಿ (ಎನ್‌ಆರ್‌ಸಿ)ಯನ್ನು ದೇಶ ವ್ಯಾಪಿ ವಿಸ್ತರಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ಹಿಂದೆ ಸರಿಯುವ ಸಾಧ್ಯತೆ ಇದೆ.
ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸುವ ಕುರಿತು ಸರ್ಕಾರದಲ್ಲಿ ಚರ್ಚೆಯೇ ನಡೆದಿಲ್ಲ ಎಂದು ಭಾನುವಾರ ಪ್ರಧಾನಿ ನರೇಂದ್ರ ಮೋದಿ ಅವರು ದೆಹಲಿಯಲ್ಲಿ ನಡೆದ ಬಿಜೆಪಿ ರ‍್ಯಾಲಿಯಲ್ಲಿ ಹೇಳಿದ್ದರು. ದೇಶಾದ್ಯಂತ ವ್ಯಾಪಕ ಹೋರಾಟ ನಡೆಯುತ್ತಿರುವ ಹಿನ್ನೆಲೆಯಲ್ಲಿ ಎನ್‌ಆರ್‌ಸಿ ವಿಸ್ತರಣೆಯಿಂದ ಹಿಂದೆ ಸರಿಯುವ ತಂತ್ರಗಾರಿಕೆಯ ಸುಳಿವು ಅವರ ಮಾತಿನಲ್ಲಿ ಅಡಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಅಕ್ರಮ ವಲಸೆ ತಡೆಗಟ್ಟಲು ಹಂತಹಂತವಾಗಿ ದೇಶದಲ್ಲಿ ಎನ್‌ಆರ್‌ಸಿಯನ್ನು ಜಾರಿಗೆ ತರಲಾಗುವುದು ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿತ್ತು. ಆದರೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ದೇಶದಲ್ಲಿ ವ್ಯಕ್ತವಾದ ಪ್ರತಿಭಟನೆಯ ತೀವ್ರತೆ ತಮ್ಮನ್ನು ಅಚ್ಚರಿಗೆ ದೂಡಿದೆ ಎಂದು ಹಲವು ಬಿಜೆಪಿ ನಾಯಕರೇ ಒಪ್ಪಿಕೊಳ್ಳುತ್ತಿದ್ದಾರೆ. ಎನ್‌ಆರ್‌ಸಿ ಕುರಿತಂತೆ ಸಮಾಜದ ಒಂದು ವರ್ಗ ಅದರಲ್ಲೂ ವಿಶೇಷವಾಗಿ ಮುಸ್ಲಿಮರಲ್ಲಿ ಇದ್ದ ಕಳವಳ ಪ್ರತಿಭಟನೆಗೆ ಶಕ್ತಿ ತುಂಬಿದೆ ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.
'ಪೌರತ್ವ ಕಾಯ್ದೆ ಕಟ್ಟುಕತೆಗೆ ಕಿವಿಗೊಡಬೇಡಿ; ಮುಸ್ಲಿಮರಿಗೆ ತೊಂದರೆಯಾಗಲ್ಲ'...
ಈ ಹಿನ್ನೆಲೆಯಲ್ಲೇ ದೆಹಲಿ ಕಾರ್ಯಕ್ರಮದ ಮೂಲಕ ಮೋದಿ ಅವರು ಎನ್‌ಆರ್‌ಸಿ ಹಾಗೂ ಪೌರತ್ವ ತಿದ್ದುಪಡಿ ಕಾಯ್ದೆ ಬೇರೆಬೇರೆ ಎಂಬ ಸಂದೇಶ ರವಾನಿಸಿದ್ದಾರೆ. ಇಂತಹ ಕ್ರಮವನ್ನು ಇಲ್ಲಿವರೆಗೂ ಸರ್ಕಾರ ತೆಗೆದುಕೊಂಡಿರಲಿಲ್ಲ ಎಂದು ಮೂಲಗಳು ತಿಳಿಸಿವೆ.
ಸದ್ಯದ ಪರಿಸ್ಥಿತಿಯಲ್ಲಿ ಎನ್‌ಆರ್‌ಸಿ ಕತೆಯೇನು ಎಂಬ ಪ್ರಶ್ನೆಗೆ ಉತ್ತರಿಸಿರುವ ಬಿಜೆಪಿ ನಾಯಕರೊಬ್ಬರು, ಮೋದಿ ಅವರ ಸಂದೇಶ ಸ್ಪಷ್ಟವಾಗಿದೆ. ಹೀಗಾಗಿ ಬಿಜೆಪಿ ನಾಯಕರು ಎನ್‌ಆರ್‌ಸಿ ಬಗ್ಗೆ ಪ್ರಸ್ತಾಪಿಸುವ ಸಾಧ್ಯತೆ ಸದ್ಯದ ಸ್ಥಿತಿಯಲ್ಲಿ ಇಲ್ಲ ಎಂದು ಸುಳಿವು ನೀಡಿದ್ದಾರೆ.
2021ಕ್ಕೆ ಪಶ್ಚಿಮ ಬಂಗಾಳ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಅಲ್ಲಿ ಎನ್‌ಆರ್‌ಸಿಯೇ ಪ್ರಮುಖ ವಿಷಯವಾಗಲಿದೆ. ಬೇಕಿದ್ದರೆ ಪಶ್ಚಿಮ ಬಂಗಾಳದಲ್ಲಿ ಮಾತ್ರ ಆ ವಿಷಯ ಪ್ರಸ್ತಾಪಿಸಿ, ಇತರೆಡೆ ಅದರ ಬಗ್ಗೆ ಚಕಾರವೆತ್ತದಿರುವ ಅವಕಾಶವೂ ಪಕ್ಷದ ಮುಂದಿದೆ ಎಂದು ಮತ್ತೊಬ್ಬ ನಾಯಕರು ತಿಳಿಸಿದ್ದಾರೆ.
ಅಸ್ಸಾಂನಲ್ಲಿ ಜಾರಿಗೆ ತರಲಾಗಿರುವ ಎನ್‌ಆರ್‌ಸಿಯನ್ನು ದೇಶಾದ್ಯಂತ ವಿಸ್ತರಿಸಲಾಗುತ್ತದೆ ಎಂದು ಡಿ.9ರಂದಷ್ಟೇ ಲೋಕಸಭೆಯಲ್ಲಿ ಗೃಹ ಸಚಿವರೂ ಆಗಿರುವ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಘೋಷಣೆ ಮಾಡಿದ್ದರು. ಬಿಜೆಪಿ ಕಾರ್ಯಾಧ್ಯಕ್ಷ ಜೆ.ಪಿ. ನಡ್ಡಾ ಕೂಡ ಎನ್‌ಆರ್‌ಸಿ ವಿಸ್ತರಣೆಯಾಗಲಿದೆ ಎಂದು ಹೇಳುತ್ತಲೇ ಬಂದಿದ್ದರು. ಆದರೆ ಭಾನುವಾರದ ರಾರಯಲಿಯಲ್ಲಿ ಎನ್‌ಆರ್‌ಸಿ ಬಗ್ಗೆ ಸಂಸತ್ತು, ಸಚಿವ ಸಂಪುಟದಲ್ಲಿ ಚರ್ಚೆಯೇ ಆಗಿಲ್ಲ ಎನ್ನುವ ಮೂಲಕ ಮೋದಿ ಅಚ್ಚರಿ ಮೂಡಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ