
ನವದೆಹಲಿ(ಜು.09): ದೇಶದ ಮೇಲೆ ಕೊರೋನಾ 3ನೇ ಅಲೆ ದಾಳಿ ಮಾಡಬಹುದು ಎಂಬ ಆತಂಕದ ಬೆನ್ನಲ್ಲೇ, ಸೋಂಕಿನ ನಿರ್ವಹಣೆಗಾಗಿ ಅದರಲ್ಲೂ ವಿಶೇಷವಾಗಿ ಮಕ್ಕಳ ಆರೈಕೆ ಹೆಚ್ಚಿನ ಒತ್ತು ನೀಡಲು ಕೇಂದ್ರ ಸರ್ಕಾರ 23123 ಕೋಟಿ ರು.ಗಳ ಭರ್ಜರಿ ಪ್ಯಾಕೇಜ್ ಪ್ರಕಟಿಸಿದೆ. ವಾರದ ಹಿಂದೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಿಸಿದ್ದ ಈ ಪ್ಯಾಕೇಜ್‌ಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ, ಪುನಾರಚಿತ ನೂತನ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.
ಸಭೆಯ ಬಳಿಕ ಈ ಕುರಿತು ಮಾಹಿತಿ ನೀಡಿದ ಕೇಂದ್ರ ಆರೋಗ್ಯ ಸಚಿವಾಲಯದ ನೂತನ ಸಚಿವ ಮನ್ಸುಖ್ ಮಾಂಡವೀಯ ‘ಕೋವಿಡ್ ನಿರ್ವಹಣೆಯಲ್ಲಿ ದೇಶದ ಆರೋಗ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲು 23123 ಕೋಟಿ ರು. ಪ್ಯಾಕೇಜ್‌ಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 15000 ಕೋಟಿ ರು.ಗಳನ್ನು ಕೇಂದ್ರ ಸರ್ಕಾರ ನೀಡಲಿದ್ದರೆ, ರಾಜ್ಯ ಸರ್ಕಾರಗಳು 8000 ಕೋಟಿ ರು. ಒದಗಿಸಲಿವೆ. ಯೋಜನೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ದೇಶಾದ್ಯಂತ ಇರುವ 736 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಗುವುದು. ಪ್ರಾಥಮಿಕ ಮತ್ತು ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿನ ವೈದ್ಯಕೀಯ ಮೂಲಸೌಕರ್ಯ ಅಭಿವೃದ್ಧಿಗೆ ಬಳಸಲಾಗುವುದು’ ಎಂದು ತಿಳಿಸಿದರು.
ಈ ಯೋಜನೆ ಮೂಲಕ 2.4 ಲಕ್ಷ ಸಾಮಾನ್ಯ ವೈದ್ಯಕೀಯ ಬೆಡ್‌ಗಳು, 20000 ಐಸಿಯು ಬೆಡ್‌ಗಳನ್ನು ಸೃಷ್ಟಿಸಲಾಗುವುದು. ಇದರಲ್ಲಿ ಶೇ.20ರಷ್ಟನ್ನು, ಮೂರನೇ ಅಲೆಯ ವೇಳೆ ಹೆಚ್ಚಿನ ದಾಳಿಗೆ ತುತ್ತಾಗಲಿದ್ದಾರೆ ಎಂಬ ಭೀತಿ ಇರುವ ಮಕ್ಕಳಿಗೆಂದೇ ಮೀಸಲಿಡಲಾಗುವುದು. ಜೊತೆಗೆ 2ನೇ ಅಲೆಯಲ್ಲಿ ಕಾಣಿಸಿಕೊಂಡ ಆಕ್ಸಿಜನ್ ಮತ್ತು ಔಷಧ ಕೊರತೆ ಮತ್ತೆ ಕಾಣಿಸಿದಂತೆ ಮಾಡಲು ಹೆಚ್ಚಿನ ಪ್ರಮಾಣದಲ್ಲಿ ಜಿಲ್ಲಾ ಮಟ್ಟದಲ್ಲೇ ಸಂಗ್ರಹ ಮಾಡಲೂ ಯೋಜನೆಯ ಹಣವನ್ನು ಬಳಸಿಕೊಳ್ಳಲಾಗುವುದು ಎಂದು ಮಾಂಡವೀಯ ತಿಳಿಸಿದರು.
ಜೊತೆಗೆ, ವೈದ್ಯಕೀಯ ಕ್ಷೇತ್ರದ ಮೂಲಸೌಕರ್ಯ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಪ್ರಕಟಿಸುತ್ತಿರುವ ಎರಡನೇ ಪ್ಯಾಕೇಜ್ ಇದು. ಈ ಹಿಂದೆ ಕೂಡಾ ಸರ್ಕಾರ 15,000 ಕೋಟಿ ರು. ಪ್ಯಾಕೇಜ್ ಘೋಷಿಸಿತ್ತು ಎಂದು ತಿಳಿಸಿದರು.
15,000 ಕೋಟಿ: ಕೇಂದ್ರ ಸರ್ಕಾರದಿಂದ ನೇರವಾಗಿ ವೆಚ್ಚವಾಗುವ ಹಣ
8,123 ಕೋಟಿ: ವಿವಿಧ ರಾಜ್ಯಗಳಿಗೆ ಕೇಂದ್ರ ನೀಡಲಿರುವ ಅನುದಾನ
736 ಜಿಲ್ಲೆ: ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಮೂಲಸೌಕರ‍್ಯ ಅಭಿವೃದ್ಧಿ
2.4 ಲಕ್ಷ: ಶುಶ್ರೂಷೆಗಾಗಿ ಆಸ್ಪತ್ರೆಗಳಲ್ಲಿ ಸಿದ್ಧಪಡಿಸಲಾಗುವ ಹಾಸಿಗೆಗಳು
20 ಸಾವಿರ: ಒಟ್ಟಾರೆ ಸಿದ್ಧಗೊಳ್ಳಲಿರುವ ಐಸಿಯು ಹಾಸಿಗೆಗಳ ಸಂಖ್ಯೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ