
ಉದಯ್‌ಪುರ (ನ.13): ಕೇವಲ 13 ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಅನಾವರಣಗೊಂಡಿದ್ದ ಉದಯ್‌ಪುರ-ಅಹಮದಾಬಾದ್ ರೈಲೈ ಟ್ರ್ಯಾಕ್‌ಅನ್ನು ದುಷ್ಕರ್ಮಿಗಳು ಸ್ಫೋಟಿಸಿದ ಘಟನೆ ನಡೆದಿದೆ. ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಸೇತುವೆಯನ್ನು ಸ್ಫೋಟಿಸಿ ರೈಲು ಹಳಿಯನ್ನು ಧ್ವಂಸ ಮಾಡುವುದು ದುಷ್ಕರ್ಮಿಗಳ ಸಂಚಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 31 ರಂದು ಈ ಮಾರ್ಗವನ್ನು ಉದ್ಘಾಟಿಸಿದ್ದರು. ಸ್ಥಳೀಯ ಜನರು, ರಾತ್ರಿಯ ವೇಳೆ ದೊಡ್ಡ ಶಬ್ದವನ್ನು ಕೇಳಿದ್ದರು. ರೈಲು ಹಳಿ ಸ್ಫೋಟಗೊಂಡ ಪ್ರದೇಶದಲ್ಲಿ ಗನ್‌ಪೌಡರ್ ಕೂಡ ಪತ್ತೆಯಾಗಿದೆ. ಸ್ಪೋಟಗೊಂಡ ರಭಸಕ್ಕೆ ರೈಲ್ವೆ ಹಳಿಗಳು ಬಿರುಕುಬಿಟ್ಟಿವೆ. ಈ ಘಟನೆ ನಡೆಯುವ ನಾಲ್ಕು ಗಂಟೆಗೂ ಮೊದಲು ಇದೇ ಮಾರ್ಗದಲ್ಲಿ ರೈಲಯ ಸಾಗಿತ್ತು. ಅದಾದ ಬಳಿಕ ಅಹಮದಾಬಾದ್‌ನಿಂದ ಉದಯ್‌ಪುರಕ್ಕೆ ಬರುತ್ತಿದ್ದ ರೈಲನ್ನು ಡುಂಗರ್‌ಪುರದಲ್ಲಿಯೇ ನಿಲ್ಲಿಸಲಾಗಿತ್ತು. ಜಿಲ್ಲಾಧಿಕಾರಿ ತಾರಾಚಂದ್ ಮೀನಾ ಈ ಕುರಿತಾಗಿ ಮಾತನಾಡಿದ್ದು, ಸೇತುವೆಯನ್ನು ಡಿಟೋನೇಟರ್ ಮೂಲಕ ಸ್ಫೋಟಿಸುವ ಸಂಚು ಬಯಲಿಗೆ ಬಂದಿದೆ. ಶೀಘ್ರದಲ್ಲೇ ಆರೋಪಿಗಳನ್ನು ಹಿಡಿಯಲಾಗುವುದು. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರು ವಿಸ್ತೃತ ತನಿಖೆಗಾಗಿ ಪೊಲೀಸ್ ಮಹಾನಿರ್ದೇಶಕ ಉಮೇಶ್ ಮಿಶ್ರಾ ಅವರಿಗೆ ಸೂಚನೆ ನೀಡಿದ್ದಾರೆ ಎಂದು ತಿಳಿಸಿದರು.
ಘಟನೆ ನಡೆದ ಬೆನ್ನಲ್ಲಿಯೇ ರಾಜಸ್ಥಾನ ಪೊಲೀಸ್‌ನ ಭಯೋತ್ಪಾದಕ ನಿಗ್ರಹ ಘಟಕ ಸ್ಥಳಕ್ಕೆ ಆಗಮಿಸಿದೆ. ಭಯೋತ್ಪಾದಕ ಸಂಚಿನ ಕೋನದಿಂದ ಎಟಿಎಸ್ ಇದರ ತನಿಖೆ ಮಾಡಲಿದೆ. ಆರಂಭದಲ್ಲಿ ಸಂಪೂರ್ಣ ಯೋಜನೆ ರೂಪಿಸಿ ಸ್ಫೋಟ ನಡೆಸಲಾಗಿದೆ ಎಂದು ತೋರುತ್ತದೆ ಎಂದು ಉದಯಪುರ ಎಸ್ಪಿ ವಿಕಾಸ್ ಶರ್ಮಾ ಹೇಳಿದ್ದಾರೆ. ಡಿಟೋನೇಟರ್ ಸೂಪರ್ 90 ವರ್ಗಕ್ಕೆ ಸೇರಿದೆ. ಬಾಂಬ್ ಸ್ಕ್ವಾಡ್ ಮತ್ತು ಫೊರೆನ್ಸಿಕ್ ತಂಡ ಸ್ಥಳಕ್ಕೆ ಧಾವಿಸಿ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
ಸ್ಥಳೀಯರ ಮುನ್ನೆಚ್ಚರಿಕೆಯಿಂದ ತಪ್ಪಿದ ಅನಾಹುತ: ಸ್ಥಳೀಯ ಗ್ರಾಮಸ್ಥರು ಅಲರ್ಟ್ ನೀಡಿದ್ದರಿಂದಾಗಿ ಹೊಸ ರೈಲ್ವೇ ಮಾರ್ಗದಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ಸಂಚು ತಪ್ಪಿ ಹೋಗಿದೆ. ಘಟನೆಯು ಉದಯಪುರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕೇವ್ಡೇ ಕಿ ನಾಲ್‌ನ ಮೇಲಿರುವ ಸೇತುವೆಯ ಮೇಲೆ ಸಂಭವಿಸಿದೆ. ಶನಿವಾರ ರಾತ್ರಿ 10 ಗಂಟೆಯ ವೇಳೆಗೆ ಸ್ಥಳೀಯ ಗ್ರಾಮಸ್ಥರು ಸ್ಪೋಟದ ಸದ್ದು ಕೇಳಿದ್ದರು. ಅದಾದ ಬಳಿಕ ಊರಿನ ಕೆಲ ಗ್ರಾಮಸ್ಥರು ಸ್ಫೋಟಗೊಂಡ ಸ್ಥಳಕ್ಕೆ ಆಗಮಿಸಿದ್ದರು.
Udaipur Murder Case; ಟೈಲರ್ ಕನ್ಹಯ್ಯಾ ಹತ್ಯೆಗೆ ಪಾಕ್- ಸೌದಿಯ ನಂಟು ಶಂಕೆ
ಅಲ್ಲಿ ಅವರು ಗನ್‌ಪೌಡರ್, ಡಿಟೋನೇಟರ್ ನೋಡಿದ ಬೆನ್ನಲ್ಲಿಯೇ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ರೈಲು ಹಳಿ ಮೇಲೆ ಗನ್ ಪೌಡರ್ ಬಿದ್ದಿರುವುದನ್ನು ಊರಿನವರು ನೋಡಿದ್ದಾರೆ. ಹಲವೆಡೆ ಕಬ್ಬಿಣದ ಹಳಿಗಳು ಮುರಿದು ಹೋಗಿದ್ದವು. ಸೇತುವೆಯ ಮೇಲಿನ ಸಾಲಿನಲ್ಲಿ ನಟ್-ಬೋಲ್ಟ್‌ಗಳು ಕೂಡ ಕಾಣೆಯಾಗಿವೆ. ಟ್ರ್ಯಾಕ್‌ನಲ್ಲಿ ಕಬ್ಬಿಣದ ತೆಳುವಾದ ಹಾಳೆ ಕೂಡ ಸುಕ್ಕುಗಟ್ಟಿದ ಸ್ಥಿತಿಯಲ್ಲಿ ಕಂಡುಬಂದಿದೆ. ಗ್ರಾಮಸ್ಥರ ಮಾಹಿತಿ ಮೇರೆಗೆ ಹಳಿಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿದ್ದು, ಇಲ್ಲದಿದ್ದರೆ ಹಲವರ ಪ್ರಾಣಕ್ಕೆ ಅಪಾಯವಾಗುವ ಸಾಧ್ಯತೆ ಇದ್ದವು.
ಕನ್ಹಯ್ಯಾ ಹಂತಕನನ್ನು ಬಿಜೆಪಿ ನಾಯಕರೇ ಶಿಫಾರಸು ಮಾಡಿದ್ದರು: ಹಳೇ ವಿಚಾರ ಕೆದಕಿದ ಗೆಹ್ಲೋಟ್
ಈ ಮಾರ್ಗದ ಎರಡೂ ರೈಲುಗಳ ಸಂಚಾರವನ್ನು ರೈಲ್ವೆ ಸ್ಥಗಿತಗೊಳಿಸಲಾಗಿದೆ: ಸದ್ಯಕ್ಕೆ ಈ ಮಾರ್ಗದಲ್ಲಿ ಸಂಚರಿಸುವ ಎರಡೂ ರೈಲುಗಳನ್ನು ರೈಲ್ವೆ ಆಡಳಿತ ಮಂಡಳಿ ನಿಲ್ಲಿಸಿದೆ. ರೈಲು ಮಾರ್ಗ ದುರಸ್ತಿ ಕಾರ್ಯ ನಡೆಯುತ್ತಿದೆ. ಸದ್ಯ, ರೈಲುಗಳು ಯಾವಾಗ ಮತ್ತೆ ಪ್ರಾರಂಭವಾಗುತ್ತವೆ ಎಂಬ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿಲ್ಲ. ಉದಯಪುರ-ಅಹಮದಾಬಾದ್ ಮಾರ್ಗದಲ್ಲಿ ಎರಡೂ ರೈಲುಗಳ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ ಎಂದು ಉದಯಪುರ ರೈಲ್ವೆ ಏರಿಯಾ ಮ್ಯಾನೇಜರ್ ಬದ್ರಿ ಪ್ರಸಾದ್ ತಿಳಿಸಿದ್ದಾರೆ. ಆದಷ್ಟು ಬೇಗ ಮಾರ್ಗದ ದುರಸ್ತಿ ಕಾರ್ಯ ನಡೆಯುತ್ತಿದೆ. ಷಡ್ಯಂತ್ರದ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಮಾಡಲಾಗುತ್ತಿದೆ ಎಂದಿದ್ದಾರೆ. ಗಣಿಗಾರಿಕೆ ಸ್ಫೋಟಕ್ಕೆ ಬಳಸಲಾಗುವ ವಸ್ತುಗಳನ್ನು ಬಳಸಲಾಗಿದೆ ಎಂದು ಜವರ್ ಗಣಿ ಪೊಲೀಸ್ ಅಧಿಕಾರಿ ಅನಿಲ್ ವಿಷ್ಣೈ ಹೇಳಿದ್ದಾರೆ. ಸ್ವದೇಶಿ ಸ್ಫೋಟಕ ವಸ್ತು ಪತ್ತೆಯಾಗಿದೆ. ಪ್ರಸ್ತುತ ಪ್ರತಿಯೊಂದು ಕೋನವನ್ನು ಪರಿಶೀಲಿಸಲಾಗುತ್ತಿದೆ ಎಂದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ