Udaipur Murder Case; ಟೈಲರ್ ಕನ್ಹಯ್ಯಾ ಹತ್ಯೆಗೆ ಪಾಕ್- ಸೌದಿಯ ನಂಟು ಶಂಕೆ
ಉದಯಪುರ ಕನ್ಹಯ್ಯಾ ಹತ್ಯೆಗೆ ಪಾಕ್ ಸೌದಿಯ ನಂಟು ಶಂಕೆ, ಹತ್ಯೆಗೂ ಮುನ್ನ ಪ್ರಾಕ್ಸಿ ಸರ್ವರ್ ಬಳಸಿ ಕರೆ ಮಾಡಿದ್ದು, ಇಬ್ಬರು ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ವಿಪಿಎನ್ ಬಳಸಿ ಇಂಟರ್‌ನೆಟ್ ಪ್ರೋಟೊಕಾಲ್ ವಿಳಾಸ (ಐಪಿ ಅಡ್ರೆಸ್) ಮರೆ ಮಾಚುತ್ತಿದ್ದರೆಂದು ಬಹಿರಂಗ
ನವದೆಹಲಿ (ಜು.17): ಉದಯಪುರದಲ್ಲಿ ದರ್ಜಿ ಕನ್ಹಯ್ಯಾಲಾಲ್ ಹಂತಕರಿಗೆ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾದ ನಂಟಿದೆ ಎಂಬುದು ತನಿಖೆಯ ವೇಳೆಗೆ ಬೆಳಕಿಗೆ ಬಂದಿದೆ. ಹಂತಕ ರಿಯಾಜ್ ಅಟ್ಟಾರಿ ಗುಂಪಿನ ಸದಸ್ಯರು ಹತ್ಯೆಗೂ ಮುನ್ನ ಪ್ರಾಕ್ಸಿ ಸರ್ವರ್ ಬಳಸಿ ಪಾಕಿಸ್ತಾನ ಹಾಗೂ ಸೌದಿ ಅರೇಬಿಯಾಗೆ ಕರೆ ಮಾಡಿದ್ದರು ಎಂದು ತಿಳಿದು ಬಂದಿದೆ. ಇಬ್ಬರು ಆರೋಪಿಗಳು ತಮ್ಮ ಮೊಬೈಲ್‌ನಲ್ಲಿ ವಿಪಿಎನ್ ಬಳಸಿ ಇಂಟರ್‌ನೆಟ್ ಪ್ರೋಟೊಕಾಲ್ ವಿಳಾಸ (ಐಪಿ ಅಡ್ರೆಸ್) ಮರೆ ಮಾಚುತ್ತಿದ್ದರು. ಈ ಭೀಕರ ಕೃತ್ಯದ ಮೊದಲು ಅವರು ಸೌದಿ ಅರೇಬಿಯಾ ಹಾಗೂ ಪಾಕಿಸ್ತಾನಕ್ಕೆ ಹಲವಾರು ಕರೆಗಳನ್ನು ಮಾಡಿದ್ದರು. ಪ್ರವಾದಿ ಅವಹೇಳನ ಮಾಡಿದ ನೂಪುರ್ ಶರ್ಮಾ ಅವರ ವಿರುದ್ಧ ಜೂ. 20ರಂದು ನಡೆಸಲಾದ ಸ್ಥಳೀಯ ಅಂಜುಮನ್ ರಾರಯಲಿಯಲ್ಲೇ ಕನ್ಹಯ್ಯಾಲಾಲ್ ಹತ್ಯೆಗೆ ಸಂಚು ಹೂಡಲಾಗಿತ್ತು. ನೂಪುರ್‌ಳನ್ನು ಸಮರ್ಥಿಸಿದ್ದಕ್ಕಾಗಿ ಜೂ. 26ರಂದು ಅಂತಿಮವಾಗಿ ಹತ್ಯೆ ನಡೆಲಾಯಿತು ಎಂದು ಭದ್ರತಾ ಏಜೆನ್ಸಿಗಳು ಪತ್ತೆ ಹಚ್ಚಿವೆ. ಹಂತಕ ಅಟ್ಟಾರಿ 2019ರಲ್ಲಿ ಸೌದಿಗೆ ಭೇಟಿ ನೀಡಿದಾಗ ಪಾಕಿಸ್ತಾನದ ನಾಗರಿಕ ಉಮರ್‌ನನ್ನು ಭೇಟಿಯಾಗಿದ್ದ. ಬಳಿಕ ಅವನ ಮೂಲಕ ಹಲವಾರು ಪಾಕಿಸ್ತಾನಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದನು. ಗೌಸ್ ಕೂಡಾ 2013 ಹಾಗೂ 2019ರಲ್ಲಿ ಸೌದಿಗೆ ಹಾಗೂ 2014 ರಂದು ಧಾರ್ಮಿಕ ಸಮಾರಂಭ ದಾವತ್-ಎ-ಇಸ್ಲಾಮಿಯಲ್ಲಿ ಭಾಗಿಯಾಗಲು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದನು.
ಇಬ್ಬರೂ ಹಂತಕರು ದಾವತ್-ಎ-ಇಸ್ಲಾಮಿ ಹಿಂಬಾಲಕರಾಗಿದ್ದಾರೆ. ಅಲ್ಲದೇ ಕನ್ಹಯ್ಯಾಲಾಲ್ ಹಂತಕ ಅಟ್ಟಾರಿ, ಅಮರಾವತಿ ವರ್ತಕ ಉಮೇಶ್ ಕೋಲ್ಹೆ ಹತ್ಯೆ ಹಿಂದೆ ಪಿಎಫ್‌ಐ-ಎಸ್‌ಡಿಎಫ್‌ಐ ನಂಟಿರುವುದು ತನಿಖೆ ವೇಳೆ ತಿಳಿದು ಬಂದಿದೆ.
ಕನ್ಹಯ್ಯಾ ರೀತಿ ಕತ್ತು ಸೀಳಿ ಹತ್ಯೆಗೆ 40 ಜನಕ್ಕೆ ತರಬೇತಿ!: ರಾಜಸ್ಥಾನದಲ್ಲಿ ಟೈಲರ್ ಕನ್ಹಯ್ಯಾ ಕುಮಾರ್ ಅವರನ್ನು ಕತ್ತು ಸೀಳಿ ಹತ್ಯೆ ಮಾಡಿದ ರೀತಿಯಲ್ಲೇ ಹತ್ಯೆ ಮಾಡುವುದಕ್ಕೆ ಸುಮಾರು 40 ಜನರಿಗೆ ಪಾಕಿಸ್ತಾನದ ಉಗ್ರ ಸಂಘಟನೆ ತರಬೇತಿ ನೀಡಿದೆ ಎಂಬ ವಿಷಯ ಬೆಳಕಿಗೆ ಬಂದಿದೆ.
ರಾಜಸ್ಥಾನದ 6 ಜಿಲ್ಲೆಗಳಲ್ಲಿ 40ಕ್ಕೂ ಹೆಚ್ಚು ಜನರಿಗೆ ಆನ್ಲೈನ್ ಮೂಲಕ ತರಬೇತಿ ನೀಡಲಾಗಿತ್ತು ಎಂದು ರಾಷ್ಟ್ರೀಯ ತನಿಖಾ ತಂಡ ಮತ್ತು ರಾಜಸ್ಥಾನ ಭಯೋತ್ಪಾದನಾ ನಿಗ್ರಹಾ ದಳದ ಮೂಲಗಳು ತಿಳಿಸಿವೆ. ಇವರೆಲ್ಲರೂ ದಾವತ್ ಇ ಇಸ್ಲಾಮಿ ಸಂಘಟನೆಗೆ ಸೇರಿದ್ದು, ಮೇ ತಿಂಗಳಿನಿಂದಲೇ ತರಬೇತಿ ಆರಂಭಿಸಲಾಗಿತ್ತು. ವಾಟ್ಸಾಪ್ ಕಾಲ್‌ಗಳ ಮೂಲಕ ಪಾಕಿಸ್ತಾನದಲ್ಲಿದ್ದುಕೊಂಡೇ ಉಗ್ರರು ಇವರಿಗೆ ತರಬೇತಿ ನೀಡುತ್ತಿದ್ದರು ಎಂದು ಮೂಲಗಳು ತಿಳಿಸಿವೆ.
ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿದ ಕಾರಣಕ್ಕೆ ಕನ್ಹಯ್ಯಾ ಅವರನ್ನು ಮೊಹಮ್ಮದ್ ರಿಯಾಜ್ ಮತ್ತು ಗೌಸೆ ಮೊಹಮ್ಮದ್ ಎಂಬಿಬ್ಬರು ದುಷ್ಕರ್ಮಿಗಳು ಕತ್ತು ಕೊಯ್ದು ಭೀಕರವಾಗಿ ಹತ್ಯೆ ಮಾಡಿದ್ದರು.