
ನವದೆಹಲಿ[ಫೆ.28]: ಈಶಾನ್ಯ ದಿಲ್ಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಪರ ಹಾಗೂ ವಿರುದ್ಧ ನಡೆದ ಹಿಂಸಾಚಾರದ ನಂತರ ಪರಿಸ್ಥಿತಿ ತಣ್ಣಗಾಗಿದೆ. ಆದರೂ ಗಲಭೆಯಲ್ಲಿ ಗಾಯಗೊಂಡಿದ್ದ ಮತ್ತೆ 11 ಜನ ಶನ ಗುರುವಾರ ಅಸುನೀಗಿದ್ದು, ಮೃತರ ಸಂಖ್ಯೆ 38ಕ್ಕೇರಿದೆ.
ಈ ನಡುವೆ, ಹಿಂಸೆಯಲ್ಲಿ ಧ್ವಂಸಗೊಂಡ ಹಾಗೂ ಸುಟ್ಟುಹೋದ ತಮ್ಮ ಮನೆಗಳು ಹಾಗೂ ಆಸ್ತಿಪಾಸ್ತಿಗಳನ್ನು ಪರಿಶೀಲಿಸಲು ಅಲ್ಲಿನ ಸಾವಿರಾರು ವಾಸಿಗಳು ವಾಸಸ್ಥಳಕ್ಕೆ ಮರಳುತ್ತಿದ್ದು, ಅಳಿದುಳಿದ ವಸ್ತುಗಳನ್ನು ಆರಿಸಿ ಬೇರೆಡೆ ಸಾಗಿಸುತ್ತಿದ್ದಾರೆ. ತಮ್ಮ ಬದುಕು ಹೀಗಾಗಿ ಹೋಯಿತಲ್ಲ ಎಂದು ದುಃಖಿಸುತ್ತಿರುವುದು ಕಂಡುಬಂತು.
"
ಹಿಂಸಾ ಘಟನೆ ತನಿಖೆಯನ್ನು ಸರ್ಕಾರ ಕ್ರೈಮ್ ಬ್ರ್ಯಾಂಚ್‌ಗೆ ಒಪ್ಪಿಸಿದ್ದು, 2 ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆಯ ಘೋಷಣೆ ಮಾಡಿದೆ. ದಾಖಲಾದ ಎಫ್‌ಐಆರ್‌ಗಳ ಸಂಖ್ಯೆ 48ಕ್ಕೇರಿದೆ.
ಕಂಡು ಕೇಳರಿಯದ ಕೋಮುದಳ್ಳುರಿಯಲ್ಲಿ ಅಸುನೀಗಿದವರ ಕುಟುಂಬಕ್ಕೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ತಲಾ 10 ಲಕ್ಷ ರು. ಪರಿಹಾರ ಪ್ರಕಟಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರಿಗೆ ತಲಾ 2 ಲಕ್ಷ ರು. ನೀಡಲಾಗುತ್ತದೆ. ಆಸ್ತಿಪಾಸ್ತಿ ಹಾನಿಯಾಗಿದ್ದರಿಂದ ಜನರು ತಮ್ಮ ಅಮೂಲ್ಯ ದಾಖಲೆಪತ್ರ ಕಳೆದುಕೊಂಡಿದ್ದರೆ, ಅಂಥ ದಾಖಲೆಗಳನ್ನು ಮರಳಿ ಸೃಷ್ಟಿಸಿಕೊಡಲು ವಿಶೇಷ ಶಿಬಿರ ಆಯೋಜಿಸಲಾಗುತ್ತದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.
ಹೆದರುತ್ತಿರುವ ಜನ:
ಹಿಂಸಾಪೀಡಿತ ಈಶಾನ್ಯ ದಿಲ್ಲಿಯಲ್ಲಿ ಪರಿಸ್ಥಿತಿ ಶಾಂತವಾಗಿದ್ದರೂ, ನಿಷೇಧಾಜ್ಞೆ ಜಾರಿಯಲ್ಲಿರುವ ಕಾರಣ ಹಾಗೂ ಹಿಂಸೆ ಮರುಕಳಿಸುವ ಭಯದಿಂದ ಅಂಗಡಿ-ಮುಂಗಟ್ಟುಗಳು ಗುರುವಾರವೂ ಬಂದ್ ಆಗಿದ್ದವು. ಜನರು ತಮ್ಮ ಮನೆಯಿಂದ ಹೊರಬರಲು ಭಯಪಟ್ಟು, ಒಳಗೇ ಉಳಿದರು.
"
ಇನ್ನೂ ಕೆಲವರು ಧ್ವಂಸಗೊಂಡ ತಮ್ಮ ಮನೆಯಲ್ಲಿನ ಅಳಿದುಳಿದ ವಸ್ತುಗಳನ್ನು ತೆಗೆದುಕೊಂಡು ಬೇರೆ ಪ್ರದೇಶಕ್ಕೆ ವಾಸಿಸಲು ತೆರಳುತ್ತಿರುವ ದೃಶ್ಯವೂ ಕಂಡುಬಂತು.
ಧ್ವಂಸಗೊಂಡ ಮನೆಗಳು, ಬೆಂಕಿಯಿಂದ ಸುಟ್ಟುಹೋದ ಕಟ್ಟಡಗಳು, ವಾಹನಗಳು, ಇಟ್ಟಿಗೆಗಳು, ಒಡೆದ ಗಾಜಿನ ಚೂರುಗಳು ಪರಿಸ್ಥಿತಿಯ ಭೀಕರತೆ ಸಾರುತ್ತಿದ್ದವು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ