ತಿಮ್ಮಪ್ಪನ ಹಣ ಮೇಲೆ ಆಂಧ್ರ ಸರ್ಕಾರ ಕಣ್ಣು?: ವಿವಾದದ ನಂತರ ಉಲ್ಟಾ ಹೊಡೆದ ಟಿಟಿಡಿ!

By Kannadaprabha NewsFirst Published Oct 21, 2020, 7:36 AM IST
Highlights

ತಿಮ್ಮಪ್ಪನ ಹಣ ಮೇಲೆ ಆಂಧ್ರ ಸರ್ಕಾರ ಕಣ್ಣು?| ಬ್ಯಾಂಕ್‌ಗಳ ಜೊತೆಗೆ ಸರ್ಕಾರಿ ಬಾಂಡ್‌ಗಳಲ್ಲೂ ಹೂಡಿಕೆ ಮಾಡಲು ಟಿಟಿಡಿ ಒಪ್ಪಿಗೆ| ತೀವ್ರ ವಿವಾದದ ನಂತರ ಉಲ್ಟಾಹೊಡೆದ ತಿರುಮಲ ಟ್ರಸ್ಟ್‌

ಹೈದರಾಬಾದ್(ಅ.21):  ಜಗತ್ತಿನ ಅತ್ಯಂತ ಶ್ರೀಮಂತ ದೇವರು ಎಂಬ ಖ್ಯಾತಿ ಪಡೆದ ತಿರುಪತಿ ತಿಮ್ಮಪ್ಪನ ಹಣದ ಮೇಲೆ ಆಂಧ್ರಪ್ರದೇಶ ಸರ್ಕಾರದ ಕಣ್ಣುಬಿದ್ದಿದೆ ಎಂಬ ಸಂಗತಿ ವ್ಯಾಪಕ ವಿವಾದಕ್ಕೆ ಗುರಿಯಾಗಿದೆ. ಇಷ್ಟುವರ್ಷಗಳ ಕಾಲ ತಿಮ್ಮಪ್ಪನ ಸಂಪತ್ತನ್ನು ಕೇವಲ ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮಾತ್ರ ಠೇವಣಿಯಿಡಲು ಅವಕಾಶವಿತ್ತು. ಈಗ ಅದನ್ನು ಸರ್ಕಾರಿ ಬಾಂಡ್‌ಗಳಲ್ಲೂ ಹೂಡಿಕೆ ಮಾಡಲು ಸಾಧ್ಯವಾಗುವಂತೆ ತಿರುಪತಿ ತಿರುಮಲ ದೇವಸ್ಥಾನಂ (ಟಿಟಿಡಿ) ಟ್ರಸ್ಟ್‌ ನಿರ್ಧಾರ ಕೈಗೊಂಡಿದೆ. ಇದು ತಿಮ್ಮಪ್ಪನ ಸಂಪತ್ತನ್ನು ಕಬಳಿಸಲು ಆಂಧ್ರ ಸರ್ಕಾರ ಮಾಡಿರುವ ಹುನ್ನಾರ ಎಂದು ಆಕ್ರೋಶಕ್ಕೆ ಕಾರಣವಾಗಿದೆ.

ವಿವಾದ ಭುಗಿಲೇಳುತ್ತಿದ್ದಂತೆ ಸ್ಪಷ್ಟನೆ ನೀಡಿರುವ ಟಿಟಿಡಿ, ಬ್ಯಾಂಕ್‌ ಠೇವಣಿಗಳ ಬಡ್ಡಿ ದರಗಳು ಶೇ.5.5ಕ್ಕೆ ಇಳಿಕೆಯಾದ ಹಿನ್ನೆಲೆಯಲ್ಲಿ ಶೇ.7ರಷ್ಟುಬಡ್ಡಿ ದೊರೆಯುವ ಸರ್ಕಾರಿ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು ಒಪ್ಪಿಗೆ ನೀಡಿದ್ದೆವು. ಆದರೆ, ಈಗ ಬ್ಯಾಂಕ್‌ಗಳಲ್ಲೇ ಬಡ್ಡಿ ದರಗಳು ಚೇತರಿಸಿಕೊಳ್ಳುತ್ತಿರುವುದರಿಂದ ಸರ್ಕಾರಿ ಬಾಂಡ್‌ನಲ್ಲಿ ಹೂಡಿಕೆ ಮಾಡುವ ಉದ್ದೇಶ ಇಲ್ಲ ಎಂದು ಉಲ್ಟಾಹೊಡೆದಿದೆ.

ತಿಮ್ಮಪ್ಪನ ಹೆಸರಿನಲ್ಲಿ ಸುಮಾರು 12,000 ಕೋಟಿ ರು. ಸಂಪತ್ತಿದ್ದು, ಅದನ್ನು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಠೇವಣಿಯಿಡಲಾಗಿದೆ. ಅವುಗಳ ಅವಧಿ ಡಿಸೆಂಬರ್‌ಗೆ ಕೊನೆಗೊಳ್ಳುತ್ತದೆ. ಆಗ 5000 ಕೋಟಿ ರು. ಬಡ್ಡಿ ಬರುತ್ತದೆ. ನಂತರ ಎಲ್ಲಾ ಹಣವನ್ನೂ ಆಂಧ್ರ ಸರ್ಕಾರದ ಬಾಂಡ್‌ಗಳಲ್ಲಿ ತೊಡಗಿಸುವಂತೆ ತಮ್ಮ ಮಾವ ವೈ.ವಿ.ಸುಬ್ಬಾರೆಡ್ಡಿ ಅಧ್ಯಕ್ಷರಾಗಿರುವ ಟಿಟಿಡಿ ಮೇಲೆ ಒತ್ತಡ ಹೇರಿ ಆಂಧ್ರ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಟಿಟಿಡಿಯ ನಿಯಮಗಳನ್ನು ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ಮತ್ತು ಟಿಡಿಪಿ ಆರೋಪಿಸಿವೆ.

ಬ್ಯಾಂಕ್‌ ಠೇವಣಿಯ ಜೊತೆಗೆ ಸರ್ಕಾರಿ ಬಾಂಡ್‌ಗಳಲ್ಲೂ ಹಣ ಹೂಡಿಕೆ ಮಾಡಲು ಒಪ್ಪಿಗೆ ನೀಡಿ ಆ.28ರಂದೇ ಟಿಟಿಡಿ ನಿರ್ಧಾರ ಕೈಗೊಂಡಿದೆ. ಆದರೆ, ಅದನ್ನು ರಹಸ್ಯವಾಗಿರಿಸಲಾಗಿದೆ. ಒಂದು ವೇಳೆ ಆಂಧ್ರ ಸರ್ಕಾರ ಟಿಟಿಡಿಯ ಹಣವನ್ನು ಠೇವಣಿ ಇರಿಸಿಕೊಂಡು, ನಂತರ ಬಡ್ಡಿಯನ್ನೂ ಅಸಲನ್ನೂ ಮರುಪಾವತಿ ಮಾಡುವುದಿಲ್ಲ ಎಂಬ ನಿರ್ಧಾರ ಕೈಗೊಂಡರೆ ಆಗ ಟಿಟಿಡಿ ಏನೂ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದು ಆಂಧ್ರ ಸರ್ಕಾರದ ಅಧೀನದಲ್ಲೇ ಇರುವ ಟ್ರಸ್ಟ್‌ ಆಗಿದೆ ಎಂದೂ ಬಿಜೆಪಿ, ಟಿಡಿಪಿ ಆತಂಕ ವ್ಯಕ್ತಪಡಿಸಿವೆ.

click me!