'ಯಾರಪ್ಪನ ಮನೆಯ ಹಣ ಕೇಳ್ತಿಲ್ಲ' ಎಂದ ಉದಯನಿಧಿ, ನಾಲಿಗೆಯ ಮೇಲೆ ಹಿಡಿತವಿರಲಿ, ಎಚ್ಚರಿಸಿದ ವಿತ್ತ ಸಚಿವೆ!

By Santosh NaikFirst Published Dec 23, 2023, 4:18 PM IST
Highlights

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ತಮಿಳುನಾಡು ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ನಡುವೆ ಇತ್ತೀಚೆಗೆ ರಾಜ್ಯಕ್ಕೆ ಕೇಂದ್ರ ಪರಿಹಾರ ನಿಧಿ ಹಂಚಿಕೆ ಕುರಿತು ಸಾರ್ವಜನಿಕ ವಾಗ್ವಾದ ಶುಕ್ರವಾರ ಮತ್ತಷ್ಟು ಉಲ್ಬಣಗೊಂಡಿದೆ.
 

ನವದೆಹಲಿ (ಡಿ.23): ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶುಕ್ರವಾರ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಅವರ ಮಾತಿಗೆ ಎಚ್ಚರಿಕೆ ನೀಡಿದ್ದಾರೆ. ಕೇಂದ್ರದ ಪರಿಹಾರ ನಿಧಿ ಹಂಚಿಕೆಯ ವಿಚಾರವಾಗಿ ಮಾತನಾಡುವ ವೇಳೆ ಉದಯನಿಧಿ ಸ್ಟ್ಯಾಲಿನ್‌, ಯಾರಪ್ಪನ ಮನೆಯ ಹಣ ಕೇಳ್ತಿಲ್ಲ ಎಂದು ಹೇಳಿದ್ದರು. ಇದಕ್ಕೆ ಅವರದೇ ಭಾಷೆಯಲ್ಲಿ ಉತ್ತರ ನೀಡಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌, ನೀವೊಬ್ಬರು ಸಚಿವರು. ನಿಮ್ಮ ನಾಲಿಗೆಯ ಮೇಲೆ ಹಿಡಿತವಿರಲಿ ಎಂದು ಸುದ್ದಿಗೋಷ್ಠಿಯಲ್ಲಿಯೇ ಎಚ್ಚರಿಸಿದ್ದಾರೆ. ತಮಿಳುನಾಡಿನಲ್ಲಿ ಭಾರೀ ಪ್ರವಾಹವಾಗಿದೆ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಿ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು ಎಂದು ತಮಿಳುನಾಡಿನ ಬೇಡಿಕೆಯ ಬಗ್ಗೆ ವಿವರವಾಗಿ ಮಾತನಾಡಿದ್ದ ನಿರ್ಮಲಾ ಸೀತಾರಾಮನ್‌, ದೇಶದಲ್ಲಿ ಯಾವುದೇ ರಾಜ್ಯದಲ್ಲಿ ನಡೆದ ಪಾಕೃತಿಕ ವಿಕೋಪವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವ ಪರಿಪಾಠವಿಲ್ಲ. ಸುನಾಮಿಯನ್ನೂ ಕೂಡ ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಿರಲಿಲ್ಲ. ಅದಲ್ಲದೆ, ಪ್ರವಾಸದ ಕುರಿತಾಗಿ ಭಾರತೀಯ ಹವಾಮಾನ ಇಲಾಖೆ 5 ದಿನದ ಮುಂಚೆಯೇ ಎಚ್ಚರಿಕೆ ನೀಡಿತ್ತು. ಅದಲ್ಲದೆ, 2015ರಲ್ಲಿ ಚೆನ್ನೈನಲ್ಲಿ ಆದ ಪ್ರವಾಹದ ಬಗ್ಗೆಯೂ ಗೊತ್ತಿತ್ತು. ಇದರಿಂದ ಯಾವುದೇ ಪಾಠ ಕಲಿತಿರಲಿಲ್ಲ. ರಾಜ್ಯದಲ್ಲಿ ಪ್ರವಾಸ ಇರುವಾಗ ಮುಖ್ಯಮಂತ್ರಿ ಸ್ಟ್ಯಾಲಿನ್‌ ಇಂಡಿ ಒಕ್ಕೂಟದ ಸಭೆಯಲ್ಲಿ ಭಾಗಿಯಾಗಿದ್ದರು ಎಂದು ದೂಷಣೆ ಮಾಡಿದ್ದರು. ಅದಲ್ಲದೆ, ಕೇಂದ್ರ ಸರ್ಕಾರ ಒಂದು ರಾಜ್ಯಕ್ಕೆ ಎಟಿಎಂ ಆಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದರು.

திரு உதயநிதி ஸ்டாலின் அமைச்சராக இருக்கும்போது பொறுப்புடன் பேச வேண்டும். "அப்பன் வீட்டு பணமா" போன்ற பேச்சுகளை அவர் தவிர்க்கவேண்டும் - மாண்புமிகு மத்திய நிதி அமைச்சர் திருமதி அவர்கள். pic.twitter.com/seVM56YtQM

— K.Annamalai (@annamalai_k)


ಆದರೆ, ನಿರ್ಮಲಾ ಸೀತಾರಾಮನ್‌ ಹೇಳಿಕೆ ತಮಿಳುನಾಡು ಸರ್ಕಾರದ ನಾಯಕರಿಗೆ ಇಷ್ಟವಾಗಿರಲಿಲ್ಲ. ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್‌ ಅವರ ಪುತ್ರ ಉದಯನಿಧಿ ಸ್ಟ್ಯಾಲಿನ್‌ ಇದಕ್ಕೆ ಪ್ರತಿಕ್ರಿಯೆ ನೀಡುವ ವೇಳೆ, 'ನಾವು ಅವರ ಅಪ್ಪನ ಆಸ್ತಿ' ಇಂದ ಹಣ ಕೇಳುತ್ತಿಲ್ಲ. ತಮಿಳುನಾಡು ಜನರು ನೀಡಿರುವ ಟ್ಯಾಕ್ಸ್‌ ಹಣದ ಅರ್ಹ ಪಾಲನ್ನು ಕೇಳುತ್ತಿದ್ದೇವೆ ಎಂದು ಹೇಳಿದ್ದರು.
ಉದಯನಿಧಿ ಸ್ಟ್ಯಾಲಿನ್‌ ಮಾತಿಗೆ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದ ನಿರ್ಮಲಾ ಸೀತಾರಾಮನ್‌, 'ಇದು ಎಂದಿಗೂ ಅವರ ಭಾಷೆಯಾಗಿತ್ತು. ಅವರು ಹೇಗೆ ಮಾತನಾಡುತ್ತಾರೆ ಅನ್ನೋದಕ್ಕೆ ಇದು ಸಾಕ್ಷಿ. ಈ ರೀತಿ ಮಾತನಾಡುವ ಇಂಥ ವ್ಯಕ್ತಿಗಳು ಅವರ ಅಪ್ಪನ ಆಸ್ತಿಯಿಂದ ಸಚಿವ ಸ್ಥಾನದಲ್ಲಿದ್ದಾರೆಯೇ? ಎಂದು ನಾನು ಕೇಳಬಲ್ಲೆ' ಎಂದು ಹೇಳಿದ್ದರು. ಅಲ್ಲಿಗೆ ನಿಲ್ಲಿಸದ ನಿರ್ಮಲಾ ಸೀತಾರಾಮನ್‌, ಡಿಎಂಕೆ ವಂಶಾಡಳಿತದ ಕುರಿತಾಗಿ ಟೀಕಾಪ್ರಹಾರ ನಡೆಸಿದರು.

ಚುನಾಯಿತ ಜನಪ್ರತಿನಿಧಿಗಳು ಗೌರವದಿಂದ ಮಾತನಾಡಬೇಕು. ಅವರು ಒಬ್ಬ ವ್ಯಕ್ತಿಯ ಮೊಮ್ಮಗ (ಡಿಎಂಕೆ ಅಧಿನಾಯಕ ದಿವಂಗತ ಎಂ ಕರುಣಾನಿಧಿ ಉಲ್ಲೇಖಿಸಿ). ಅವರು ತಮ್ಮ ಸಾಹಿತ್ಯಿಕ ವಿಚಾರದಲ್ಲಿ ಪರಿಣಿತರಾದವರು. ತಮ್ಮ ಬಾಯಿಂದ ಬರುವ ಮಾತುಗಳನ್ನು ಕೆಲವರು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಯಾಕೆಂದರೆ, ಅವರು ಸರ್ಕಾರದ ಪ್ರಮುಖ ಸ್ಥಾನದಲ್ಲಿದ್ದಾರೆ. ನನಗೆ ಅವರ ವಿರುದ್ಧ ಯಾವುದೇ ದ್ವೇಷವಿಲ್ಲ. ಆದರೆ, ರಾಜಕಾರಣದಲ್ಲಿ ಯಾರಪ್ಪನ ಆಸ್ತಿ ಎಂದು ಹೇಳುವ ಮಾತುಗಳೆಲ್ಲವೂ ಇರಬಾರದು ಎಂದು ಹೇಳಿದ್ದಾರೆ.

ಉದಯನಿಧಿ ಸ್ಟಾಲಿನ್ ವಿರುದ್ಧ ಯಾಕೆ ಪೊಲೀಸರು ಕೇಸ್ ದಾಖಲಿಸಿಲ್ಲ; ಕಿವಿ ಹಿಂಡಿದ ಹೈಕೋರ್ಟ್

ಇನ್ನು ನಿರ್ಮಲಾ ಸೀತಾರಾಮನ್‌ ಅವರು ಸುದ್ದಿಗೋಷ್ಠಿಯಲ್ಲಿ ಹೇಳಿದ ಮಾತಿಗೆ ಪ್ರತಿಕ್ರಿಯೆ ನೀಡಿರುವ ಉದಯನಿಧಿ, 'ಎಲ್ಲಾ ವ್ಯಕ್ತಿಗಳ ಜೊತೆ ಒಂದೇ ರೀತಿಯಲ್ಲಿ ಮಾತನಾಡಲು ಸಾಧ್ಯವಿಲ್ಲ. ಕೆಲವೊಂದು ವ್ಯಕ್ತಿಗಳ ಜೊತೆ ಕೆಲವೊಂದು ರೀತಿಯಲ್ಲೇ ಮಾತನಾಡಬೇಕಾಗುತ್ತದೆ' ಎಂದಿದ್ದಾರೆ.

ಸನಾತನ ಧರ್ಮವನ್ನು ಕೊನೆಯ ಉಸಿರಿನವರೆಗೂ ವಿರೋಧಿಸುತ್ತೇನೆ, ಮತ್ತೆ ವಿವಾದ ಸೃಷ್ಟಿಸಿದ ಸ್ಟಾಲಿನ್!

'ಪೆರಿಯಾರ್‌, ಅಣ್ಣಾ, ಕರುಣಾನಿಧಿ ಹಾಗೂ ನಮ್ಮ ಪಕ್ಷದ ನಾಯಕ (ಸ್ಟ್ಯಾಲಿನ್‌). ಎಲ್ಲರೂ ನನಗೆ ಯಾರೊಂದಿಗೆ ಹೇಗೆ ಮಾತನಾಡಬೇಕು ಎಂದು ಕಲಿಸಿಕೊಟ್ಟಿದ್ದಾರೆ. ಪಕ್ಷದ ಪ್ರತಿಯೊಬ್ಬ ವ್ಯಕ್ತಿಯೊಂದಿಗೆ ಅವರದೇ ರೀತಿಯಲ್ಲಿ ಮಾತನಾಡುತ್ತೇವೆ. ಆದರೆ, ಎಲ್ಲರೊಂದಿಗೆ ಪೆರಿಯಾರ್‌ ಅವರ ರೀತಿಯಲ್ಲೇ ಮಾತನಾಡಬೇಕಾದ ಅಗತ್ಯವಿರೋದಿಲ್ಲ' ಎಂದು ಹೇಳುವ ಮೂಲಕ ತಾವು ಹೇಳಿದ್ದೇ ಸರಿ ಎಂದು ವಾದಿಸಿದ್ದಾರೆ. ಪ್ರವಾಹ ಪರಿಹಾರ ನಿಧಿಗಾಗಿ ರಾಜ್ಯದ ಕೋರಿಕೆಯನ್ನು ಎಟಿಎಂಗೆ ಹೋಲಿಸಿದ ಅವರ ಕಾಮೆಂಟ್ ಬಗ್ಗೆ ಕೇಳಿದಾಗ, 'ನಾನು ಅವರ ತಂದೆಯ ಆಸ್ತಿಯನ್ನು ಕೇಳುತ್ತಿಲ್ಲ, ನಾವು ತಮಿಳುನಾಡಿನ ಜನರು ನೀಡಿದ ತೆರಿಗೆ ಹಣವನ್ನು ಕೇಳುತ್ತಿದ್ದೇವೆ” ಎಂದು ಉತ್ತರಿಸಿದರು.
 

click me!