
ನವದೆಹಲಿ: ಐಸಿಸ್ ಉಗ್ರ ಸಂಘಟನೆಯ ಸ್ಲೀಪರ್‌ಸೆಲ್‌ನ ಭಾಗವಾಗಿದ್ದ ಇಬ್ಬರು ವ್ಯಕ್ತಿಗಳನ್ನು ರಾಷ್ಟ್ರೀಯ ತನಿಖಾ ದಳ ಶನಿವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿಸಿದೆ. ಬಂಧಿತರನ್ನು ಅಬ್ದುಲ್ಲಾ ಫಯಾಜ್ ಶೇಖ್ ಅಲಿಯಾಸ್ ಡಯಪರ್‌ವಾಲಾ ಮತ್ತು ತಲ್ಹಾ ಖಾನ್ ಎಂದು ಗುರುತಿಸಲಾಗಿದೆ. ಕಳೆದ 2 ವರ್ಷದಿಂದ ಇಂಡೋನೇಷ್ಯಾದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳು ಭಾರತಕ್ಕೆ ಆಗಮಿಸುತ್ತಿರುವ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಬಲೆ ಬೀಸಿದ್ದ ಎನ್‌ಐಎ ತಂಡ, ಇಬ್ಬರು ಬಂದಿಳಿಯುತ್ತಲೇ ಬಂಧಿಸಿದೆ.
ಸ್ಫೋಟಕ ತಯಾರಿ
ಪುಣೆಯ ಖೋಂಡ್ವಾದಲ್ಲಿ ಅಬ್ದುಲ್ ಫಯಾಜ್ ಶೇಕ್ ಎಂಬಾತನ ಮನೆಯಲ್ಲಿ ವಾಸವಿದ್ದ ಆರೋಪಿಗಳು ಅಲ್ಲಿಯೇ ಐಇಡಿಗಳನ್ನು ತಯಾರಿಸಿದ್ದರು. ಬಳಿಕ ಅದನ್ನು ಸ್ಫೋಟಿಸಿ ಪರೀಕ್ಷೆಯನ್ನೂ ನಡೆಸಿದ್ದರು. ಇದರ ಜತೆಗೆ, 2022-23ರ ಅವಧಿಯಲ್ಲಿ ಅಲ್ಲಿ ಬಾಂಬ್ ತಯಾರಿಕೆ ಮತ್ತು ಉಗ್ರ ತರಬೇತಿ ನೀಡುವ ಕಾರ್ಯಾಗಾರವನ್ನೂ ಆಯೋಜಿಸಿದ್ದರು. ಜೊತೆಗೆ ಐಸಿಸ್ ಅಜೆಂಡಾದಂತೆ ಹಿಂಸಾಚಾರ ಮತ್ತು ಭಯೋತ್ಪಾದನೆ ಮೂಲಕ ಭಾರತದಲ್ಲಿ ಇಸ್ಲಾಮಿಕ್ ಆಡಳಿತವನ್ನು ಜಾರಿಗೆ ತರಲು ದೇಶದಲ್ಲಿ ಶಾಂತಿಭಂಗ ಮತ್ತು ಕೋಮು ಸೌಹಾರ್ದತೆ ಹಾಳುಗೆಡವಲು ಯತ್ನಿಸಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಐಸಿಸ್ ಪುಣೆ ಸ್ಲೀಪರ್ ಸೆಲ್‌ನ ಎಂಟು ಮಂದಿಯನ್ನು ಬಂಧಿಸಿದ್ದು, ಅವರೀಗ ನ್ಯಾಯಾಂಗ ಬಂಧನದಲ್ಲಿದ್ದಾರೆ. ಉಳಿದಿಬ್ಬರು ಇಂಡೋನೇಷ್ಯಾಕ್ಕೆ ಪರಾರಿಯಾಗಿ ತಲೆ ಮರೆಸಿಕೊಂಡಿದ್ದರು. ಇವರ ಪತ್ತೆಗೆ ಎನ್‌ಐಎ ತಲಾ 3 ಲಕ್ಷ ರು. ಬಹುಮಾನ ಘೋಷಿಸಿತ್ತು. ಇದೀಗ ಅವರಿಬ್ಬರನ್ನು ಬಂಧಿಸುವುದರೊದಿಗೆ ಎಲ್ಲಾ 10 ಮಂದಿಯನ್ನು ಬಂಧಿಸಿದಂತಾಗಿದೆ.
ಹತ್ತು ಮಂದಿ ವಿರುದ್ಧವೂ ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ, ಸ್ಫೋಟಕ ವಸ್ತುಗಳ ಕಾಯ್ದೆ, ಶಸ್ತ್ರಾಸ್ತ್ರ ಕಾಯ್ದೆ ಮತ್ತು ಭಾರತೀಯ ದಂಡ ಸಹಿತೆಯಡಿ ಪ್ರಕರಣ ದಾಖಲಿಸಲಾಗಿದೆ.
ಮತ್ತೆ ಕ್ರೆಡಿಟ್ ತೆಗೆದುಕೊಂಡ ಡೊನಾಲ್ಡ್ ಟ್ರಂಪ್
ಭಾರತ ಮತ್ತು ಪಾಕಿಸ್ತಾನವನ್ನು ಮಾತುಕತೆಯ ಹಾದಿಗೆ ತಂದು ಯುದ್ಧವನ್ನು ತಪ್ಪಿಸಿದ್ದು, ಈ ವಿಷಯದಲ್ಲಿ ತಮಗೆ ಎಂದಾದರೂ ಸಿಗಬಹುದಾದ ಶ್ರೇಯಸ್ಸಿಗಿಂತ ದೊಡ್ಡದು ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಫಾಕ್ಸ್ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ಎರಡೂ ರಾಷ್ಟ್ರಗಳ ನಡುವೆ ದೊಡ್ಡ ದ್ವೇಷ ಇತ್ತು. ಸಂಘರ್ಷವು ಬಹುಶಃ ಪರಮಾಣು ಹಂತಕ್ಕೆ ತಲುಪುವ ಸಾಧ್ಯತೆಯಿತ್ತು. ಎರಡೂ ಪ್ರಮುಖ ಪರಮಾಣು ಶಕ್ತಿಗಳು ಕುಪಿತಗೊಂಡಿದ್ದವು. ಅವುಗಳ ಜತೆ ಮಾತುಕತೆ ನಡೆಸಿ ಸಂಕಷ್ಟದಿಂದ ಮರಳಿ ತಂದಿರುವುದು, ಈ ವಿಷಯದಲ್ಲಿ ನನಗೆ ಎಂದಾದರೂ ಸಿಗಬಹುದಾದ ಶ್ರೇಯಸ್ಸಿಗಿಂತ ದೊಡ್ಡದು ಎಂದಿದ್ದಾರೆ.
ಇದೇ ವೇಳೆ, ಭಾರತದ ಜತೆಗಿನ ವ್ಯಾಪಾರ ಒಪ್ಪಂದದ ಕುರಿತು ಮಾತನಾಡಿದ ಅವರು, ‘ಭಾರತ ವಿಶ್ವದ ಅತಿ ಹೆಚ್ಚು ಸುಂಕ ವಿಧಿಸುವ ರಾಷ್ಟ್ರಗಳಲ್ಲಿ ಒಂದು. ಅವರು ವ್ಯಾಪಾರ ಮಾಡುವುದನ್ನು ಅಸಾಧ್ಯವಾಗಿಸುತ್ತಾರೆ. ಆದರೆ ಅಮೆರಿಕದ ವಸ್ತುಗಳಿಗೆ ವಿಧಿಸುತ್ತಿದ್ದ ಸುಂಕವನ್ನು ಶೇ.100ರಷ್ಟು ಕಡಿತ ಮಾಡಲು ಭಾರತ ಸರ್ಕಾರ ಒ್ಪಪಿಕೊಂಡಿದೆ. ಶೀಘ್ರದಲ್ಲೇ ವ್ಯಾಪಾರ ಒಪ್ಪಂದ ನಡೆಯಲಿದೆ’ ಎಂದರು.
ರಾಷ್ಟ್ರಧ್ವಜ ಚಿತ್ರ ಹಾಕಿದ ಅಮೀರ್ ಸಂಸ್ಥೆ
ಬಾಯ್ಕಾಟ್ ಟರ್ಕಿ ಅಭಿಯಾನದ ಜೊತೆ ನಟ ಅಮೀರ್ ಖಾನ್ ಹೆಸರು ಥಳಕು ಹಾಕಿಕೊಂಡ ಬೆನ್ನಲ್ಲೇ, ಅಮೀರ್ ಅವರ ಚಿತ್ರ ನಿರ್ಮಾಣ ಸಂಸ್ಥೆ ತನ್ನ ಜಾಲತಾಣಗಳ ಮುಖಪುಟದಲ್ಲಿ ಇದ್ದಕ್ಕಿದ್ದಂತೆ ಭಾರತದ ರಾಷ್ಟ್ರಧ್ವಜದ ಚಿತ್ರ ಪ್ರದರ್ಶಿಸಿದೆ.
ಸಂಸ್ಥೆ ತನ್ನ ಅಧಿಕೃತ ಲಾಂಛನ ಚಿತ್ರ ತೆಗೆದು ಅಲ್ಲಿ ಭಾರತದ ರಾಷ್ಟ್ರಧ್ವಜದ ಚಿತ್ರ ಹಾಕಿದೆ. ಸಂಸ್ಥೆಯು ತನ್ನ ಫೇಸ್‌ಬುಕ್, ಎಕ್ಸ್, ಇನ್‌ಸ್ಟಾಗ್ರಾಮ್ ಖಾತೆಗಳ ಮುಖಪುಟ ಬದಲಿಸಿದೆ. ಆಪರೇಷನ್ ಸಿಂದೂರಕ್ಕೆ ತಡವಾಗಿ ಬೆಂಬಲ ಘೋಷಿಸಿದ್ದಕ್ಕೆ ಮತ್ತು ಟರ್ಕಿಯ ಅಧ್ಯಕ್ಷರ ಜೊತೆಗಿನ ಅಮಿರ್ ಹಳೆಯ ಫೋಟೊ ಜಾಲತಾಣದಲ್ಲಿ ಹರಿದಾಡಿ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಜೊತೆಗೆ ಅಮೀರ್‌ರ ಹೊಸ ಚಿತ್ರ ಬಹಿಷ್ಕರಿಸಬೇಕು ಎಂದು ಕರೆಕೊಟ್ಟಿದ್ದರು. ಅದರ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ