Turning Point ಎಮರ್ಜೆನ್ಸಿ ಪ್ರಮಾದಕ್ಕೆ ಅಮ್ಮ-ಮಗನಿಗೆ ದೇಶ ಕೊಟ್ಟ ಶಿಕ್ಷೆ ಎಂಥದ್ದು..?

By Santosh Naik  |  First Published Apr 5, 2024, 7:39 PM IST

ದೇಶದ ರಾಜಕಾರಣಕ್ಕೆ ಮಹಾ ತಿರುವು ಕೊಟ್ಟಿದ್ದು 1975ರ ತುರ್ತು ಪರಿಸ್ಥಿತಿ. ಆದರೆ, ಎಮರ್ಜೆನ್ಸಿ ಅನ್ನೋದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ಮಾಡಿದ ಮಹಾ ಪ್ರಮಾದ ಎಂದು ಅರಿಯಲು ಅವರಿಗೆ ಹೆಚ್ಚಿನ ದಿನ ಬೇಕಾಗಿರಲಿಲ್ಲ.


ಬೆಂಗಳೂರು (ಏ.5): ರಾಷ್ಟ್ರ ರಾಜಕಾರಣಕ್ಕೆ ತಿರುವು ಕೊಟ್ಟ ಸಂಗತಿ ಒಂದಿದ್ದರೆ ಅದು.. 1975ರ ತುರ್ತು ಪರಿಸ್ಥಿತಿ. "ಭಾಯೀ ಔರ್ ಬೆಹನೋ" ಎನ್ನುತ್ತಲೇ ಇಂದಿರಾ ಗಾಂಧಿ ದೇಶದ ಜನತೆಗೆ ಶಾಕ್‌ ಕೊಟ್ಟಿದ್ದರು. 47 ವರ್ಷಗಳ ಹಿಂದೆ.. ಅಧಿಕಾರ ಉಳಿಸಿಕೊಳ್ಳಲು ಎಮರ್ಜೆನ್ಸಿ ಜಾಲವನ್ನು ಈಕೆ ಹಣೆದಿದ್ದರು. ಆದರೆ, ಅಮ್ಮ-ಮಗ ಹೆಣೆದ ಬಲೆಯಲ್ಲಿ ಭಾರತ ವಿಲ ವಿಲ ಒದ್ದಾಡಿತ್ತು. ರಾಜಕೀಯ ಆತ್ಮಹತ್ಯೆ ಎನಿಸಿಕೊಳ್ಳುವಂಥ ನಿರ್ಧಾರ ತೆಗೆದುಕೊಂಡಿದ್ದರು ಇಂದಿರಾ ಗಾಂಧಿ. ಎಮರ್ಜೆನ್ಸಿ ಘೋಷಣೆ ಬೆನ್ನಲ್ಲೇ ಅಮ್ಮ-ಮಗನ ಅಸಲಿ ಆಟ ಕೂಡ ಶುರುವಾಗಿತ್ತು. ರಾತ್ರೋ ರಾತ್ರಿ ವಿರೋಧ ಪಕ್ಷಗಳ ನಾಯಕರನ್ನು ಜೈಲು ಸೇರಿಸಲಾಗಿತ್ತು. ಇದರ ಬೆನ್ನಲ್ಲಿಯೇ  ಗಂಡು ಸಂತಾನಗಳ ಗುಂಡಿಗೆಯನ್ನೇ "ನಸ್‌ಬಂಧಿ" ಆಪರೇಷನ್' ನಡುಗಿಸಿತ್ತು. ಸಂಜಯ್ ಗಾಂಧಿಯ ಫ್ಯಾಮಿಲಿ ಪ್ಲ್ಯಾನಿಂಗ್‌ಗೆ ಇಡೀ ಭಾರತ ಬೆಚ್ಚಿ ಬಿದ್ದಿತ್ತು.ಆದರೆ,  ಎಮರ್ಜೆನ್ಸಿ ಪ್ರಮಾದಕ್ಕೆ ಅಮ್ಮ-ಮಗನಿಗೆ ದೇಶ ಕೊಟ್ಟ ಶಿಕ್ಷೆ ಎಂಥದ್ದು ಗೊತ್ತಾ? ಹೌದು ಅದು ಅಮ್ಮ-ಮಗನ ಮಹಾಪ್ರಮಾದ. ಅದು ಇಡೀ ದೇಶದ ಬೆನ್ನುಮೂಳೆಗೆ ಪೆಟ್ಟು ಕೊಟ್ಟಿದ್ದ ಘಟನೆ. ದೇಶದ ರಾಜಕಾರಣದಲ್ಲಿ ಹೊಸ ಬಿರುಗಾಳಿಯೊಂದು ಬೀಸಿದ್ದೇ ಆ ಒಂದು ಘಟನೆಯ ಕಾರಣದಿಂದ. ಅಷ್ಟಕ್ಕೂ ಏನದು ಘಟನೆ..? ಏನದು ಬಿರುಗಾಳಿ..? 

1975ರ ಜೂನ್ 26. ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ಮಧು ದಂಡವತೆ.. ವಿರೋಧ ಪಕ್ಷಗಳ ಅಗ್ರಗಣ್ಯ ನಾಯಕರ ಜೊತೆ ಒಂದಷ್ಟು ಮುಖಂಡರು. ಎಲ್ಲರೂ ಸಂಸದೀಯ ಸಮಿತಿಯ ಸಭೆಯೊಂದರ ವಿಚಾರವಾಗಿ ಬೆಂಗಳೂರಲ್ಲಿ ಸೇರಿರ್ತಾರೆ. ಆಗಷ್ಟೇ ಸಭೆ ಶುರುವಾಗಿತ್ತಷ್ಟೇ. ' ಸಡನ್ ಆಗಿ ಹತ್ತಾರು ಪೊಲೀಸ್ರು ಮೀಟಿಂಗ್ ನಡೀತಾ ಇದ್ದ ಜಾಗಕ್ಕೆ ನುಗ್ಗಿ ಬಿಡುತ್ತಾರೆ. ಅಲ್ಲಿದ್ದವರು ಕಕ್ಕಾಬಿಕ್ಕಿ. ಏನ್ ನಡೀತಾ ಇದೆ ಅನ್ನೋದು ಗೊತ್ತಾಗುವಷ್ಟರಲ್ಲಿ “ನಿಮ್ಮನ್ನು ಅರೆಸ್ಟ್ ಮಾಡ್ತಾ ಇದ್ದೇವೆ” ಅಂತ ಪೊಲೀಸರು ಹೇಳ್ತಾರೆ. ಅಷ್ಟೊತ್ತಿಗೆ ಆಲ್ ಇಂಡಿಯಾ ರೇಡಿಯೊದಲ್ಲಿ, ಪ್ರಧಾನಿ ಇಂದಿರಾ ಗಾಂಧಿ ದೇಶದ ನಿದ್ದೆಗೆಡಿಸುವ, ನೆಮ್ಮದಿಗೆ ಬೆಂಕಿ ಹಚ್ಚುವ ಘೋಷಣೆ ಮಾಡುತ್ತಿದ್ದರು.

Tap to resize

Latest Videos

ಆ ದಿನದಿಂದ ಸರ್ಕಾರದ ವಿರುದ್ಧ ಮಾತಾಡುವುದೇ ಅಪರಾಧವಾಯಿತು. ಆ ದಿನದಿಂದ ಅಚಾನಕ್ ಆಗಿ ಕೋರ್ಟು ಕಾರ್ಯಕಲಾಪಗಳು ಬಂದ್ ಆದ್ವು. ಆ ದಿನದಿಂದ ಅಚಾನಕ್ ಆಗಿ ಜನರ ಓಡಾಟಗಳ ಮೇಲೆ ನಿರ್ಬಂಧ ಹೇರಲಾಯ್ತು. ಸಂವಿಧಾನ ನೀಡಿದ್ದ ಎಲ್ಲಾ ಹಕ್ಕುಗಳನ್ನು ಆ ದಿನ ಕಸಿದುಕೊಳ್ಳಲಾಯಿತು. ಜನ ಯಾವುದೇ ಸಂದರ್ಭದಲ್ಲಿ, ಎಲ್ಲಿ ಬೇಕಾದ್ರೂ ಅರೆಸ್ಟ್ ಆಗುತ್ತಿದ್ದರು. ಜನರ ಜೊತೆ ಕೋರ್ಟೂ ಇರ್ಲಿಲ್ಲ, ಕಾನೂನೂ ಇರ್ಲಿಲ್ಲ. ಯಾಕಂದ್ರೆ ಆ ರಾತ್ರಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಲಾಗಿತ್ತು. ದೇಶದ ಜನರೇ, ನೀವು ಆತಂಕಕ್ಕೊಳಗಾಗಬೇಕಿಲ್ಲ ಎಂದು ಹೇಳುತ್ತಲೇ ಪ್ರಧಾನಿ ಇಂದಿರಾ ಗಾಂಧಿ, ಆ  ಅನಾಹುತಕಾರಿ ಘೋಷಣೆಯನ್ನು ಮಾಡಿ ಬಿಟ್ಟಿದ್ದರು.

47 ವರ್ಷಗಳ ಹಿಂದೆ.. 1977, ಜೂನ್ 25. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶಕ್ಕೆ ಎಮರ್ಜೆನ್ಸಿ ಅನ್ನೋ  ಕಳಂಕ ತಗುಲಿದ ದಿನ. ಅಮ್ಮ ಮತ್ತು ಮಗ, ಇಬ್ಬರೂ ಸೇರಿ ಹೆಣೆದ ಎಮರ್ಜೆನ್ಸಿ ಬಲೆಯಲ್ಲಿ ಭಾರತ ವಿಲವಿಲ ಅಂತ ಒದ್ದಾಡಿತ್ತು. ಅಂತಹ ಒಂದು ಘಟನೆ ದೇಶದ ಇತಿಹಾಸದಲ್ಲಿ ಹಿಂದೆ ನಡೆದಿರ್ಲಿಲ್ಲ, ಮುಂದೆ ನಡೆಯೋದೂ ಇಲ್ಲ. ಇದು ಅಮ್ಮ-ಮಗನ ಪ್ರಮಾದದ ಹಿನ್ನೆಲೆಯಲ್ಲಿ ಎದ್ದು ನಿಂತ 21 ತಿಂಗಳ ಎಮರ್ಜೆನ್ಸಿಯ ಕರಾಳ ಕಥೆ ಇದು..

ಪ್ರಧಾನಮಂತ್ರಿ ಇಂದಿರಾ ಗಾಂಧಿ ವಾಸಿಸುತ್ತಿದ್ದ ದೆಹಲಿಯ ನಂ.1 ಸಫ್ದರ್‌ ಜಂಗ್‌ ರಸ್ತೆಯ ಆ ಮನೆಯಲ್ಲಿ ಅವತ್ತು ಸೂತಕದ ಛಾಯೆ ಆವರಿಸಿತ್ತು. ಮನೆಯ ಲಿವಿಂಗ್ ರೂಮ್’ನಲ್ಲಿ ಕೂತಿದ್ದ ಪ್ರಧಾನಿ ಇಂದಿರಾ ಆ ದಿನ ನಡುಗಿ ಹೋಗಿದ್ದರು. ಇಂದಿರಾ ಅಂದ್ರೆ ಇಂಡಿಯಾ ಅಂತ ಜನ  ಮಾತಾಡಿಕೊಳ್ತಿದ್ದ ಸಮಯ. ದೇಶದ ರಾಜಕೀಯದಲ್ಲಿ ಆ ಮಟ್ಟಿಗಿನ ಪ್ರಭಾವಳಿ ಬೆಳೆಸಿಕೊಂಡಿದ್ದ ಇಂದಿರಾ ಗಾಂಧಿ, ಅವತ್ತು ಮಾತ್ರ ದಿಕ್ಕೇ ತೋಚದೆ ಕೈಚೆಲ್ಲಿ ಬಿಟ್ಟಿದ್ದರು. ಕಾರಣ, ಅಲಹಾಬಾದ್ ಹೈಕೋರ್ಟ್ ಕೊಟ್ಟ ಅದೊಂದು ಐತಿಹಾಸಿಕ ತೀರ್ಪು.

ಅಲಹಾಬಾದ್ ಹೈಕೋರ್ಟ್ ಇಂದಿರಾ ಗಾಂಧಿಯವರನ್ನು ಆರು ವರ್ಷಗಳ ಕಾಲ ಎಲ್ಲಾ ಚುನಾವಣೆಗಳಿಂದ, ಚುನಾಯಿತ ಸ್ಥಾನಗಳಿಂದ ಉಚ್ಛಾಟಿಸಿ ತೀರ್ಪು ಕೊಟ್ಟಿತ್ತು. ಅದಕ್ಕೆ ಕಾರಣ, 1971ರ ಲೋಕಸಭಾ ಚುನಾವಣೆ. ಕರ್ಮಭೂಮಿ ರಾಯ್’ಭರೇಲಿಯಿಂದ ಧಾಮ್ ಧೂಮ್ ಅಂತ ಗೆದ್ದು 2ನೇ ಬಾರಿ ಪ್ರಧಾನಿ ಪಟ್ಟವೇರಿದ್ದರು ಇಂದಿರಾ ಗಾಂಧಿ. ಆದರೆ,  ಆ ಚುನಾವಣೆಯಲ್ಲಿ ಗೆಲ್ಲೋದಕ್ಕೆ ಸರ್ಕಾರಿ ಯಂತ್ರಗಳನ್ನು ಇಂದಿರಾ ಗಾಂಧಿ ದುರ್ಬಳಕೆ ಮಾಡಿಕೊಂಡಿದ್ದಾರೆ ಅಂತ ಎದುರಾಳಿ ರಾಜ್ ನಾರಾಯಣ್, ಅಲಹಾಬಾದ್ ಹೈಕೋರ್ಟ್’ನಲ್ಲಿ ಕೇಸ್ ಹಾಕಿದ್ರು. ನಾಲ್ಕು ವರ್ಷಗಳ ಸುದೀರ್ಘ ವಿಚಾರಣೆಯ ನಂತ್ರ ಕೋರ್ಟ್ ತೀರ್ಪು ಕೊಟ್ಟಿತ್ತು.

ಅಲ್ಲಿವರೆಗೆ ಪರಾಜಯದ ಅರ್ಥವೇ ಗೊತ್ತಿಲ್ಲದ ಇಂದಿರಾ ಗಾಂಧಿ ಮೊದಲ ಬಾರಿ ಕೈ ಚೆಲ್ಲಿ ಕೂತು ಬಿಟ್ಟಿದ್ದರು. ದೇಶದ ಅತ್ಯಂತ ಜನಪ್ರಿಯ ಪ್ರಧಾನಮಂತ್ರಿ.. ಇಂದಿರಾ ಅಂದ್ರೆ ಇಂಡಿಯಾ ಅನ್ನುವಷ್ಟರ ಮಟ್ಟಿಗೆ ಹೆಸರು ಮಾಡಿದ್ದ ಮಹಿಳೆ. ಅಲಹಾಬಾದ್ ಹೈಕೋರ್ಟ್ ಕೊಟ್ಟ ತೀರ್ಪನ್ನು ಕೇಳಿ ಒಂದು ಕ್ಷಣ ನಡುಗಿ ಬಿಡುತ್ಥಾರೆ ಇಂದಿರಾ. ನಂತರ ಅಲಹಾಬಾದ್ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್”ಗೆ ಮೇಲ್ಮನವಿ ಸಲ್ಲಿಸಲಾಗುತ್ತದೆ. ಅಲ್ಲೂ ಇಂದಿರಾ ಗಾಂಧಿಯವ್ರಿಗೆ ಹಿನ್ನಡೆಯಾಗತ್ತೆ. 

ರಾಜೀನಾಮೆಗೆ ಮುಂದಾಗಿದ್ದರು ಪ್ರಧಾನಿ ಇಂದಿರಾ ಗಾಂಧಿ: ಸುಪ್ರೀಂ ಕೋರ್ಟ್ ತೀರ್ಪು ಪಾಲಿಸಲೇಬೇಕು. ಬೇರೆ ದಾರಿಯಿಲ್ಲ.. ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಲು ಇಂದಿರಾ ಗಾಂಧಿ ಮುಂದಾಗುತ್ತಾರೆ. ರಾಜೀನಾಮೆ ನೀಡಿ, ತಮ್ಮ ಅತ್ಯಾಪ್ತರೊಬ್ಬರನ್ನು ಪ್ರಧಾನಿ ಕುರ್ಚಿಯಲ್ಲಿ ಕೂರಿಸಿ, ಸುಪ್ರೀಂ ಕೋರ್ಟ್'ನಲ್ಲಿ ಕೇಸ್ ಗೆದ್ದು, ಆರು ತಿಂಗಳೊಳಗೆ ಮತ್ತೆ ಪ್ರಧಾನಿ ಗದ್ದುಗೆಯೇರೋದು ಇಂದಿರಾ ಪ್ಲಾನ್ ಆಗಿತ್ತು. ಆಗ ಇಂದಿರಾ ಗಾಂಧಿ ಮುಂದೆ ಬಂತು ನಿಂತವರು ಕಿರಿಮಗ ಸಂಜಯ್ ಗಾಂಧಿ. 

ಆ ಕಾಲಕ್ಕೆ ಸಂಜಯ್ ಗಾಂಧಿ ಶಾಡೋ ಪ್ರೈಮ್‌ ಮಿನಿಸ್ಟರ್‌ ಅಂತಾನೇ ಫೇಮಸ್. ಪ್ರಧಾನಿ ಕುರ್ಚಿಯಲ್ಲಿ ಕೂತದ್ದು ತಾಯಿಯಾಗಿದ್ದರೂ ಅಧಿಕಾರ ಚಲಾಯಿಸ್ತಾ ಇದ್ದದ್ದು ಮಗ. ರಾಜೀನಾಮೆಗೆ ಮುಂದಾದ ತಾಯಿಯನ್ನು ತಡೆದು ನಿಲ್ಲಿಸಿದ ಸಂಜಯ್ ಗಾಂಧಿ,  "ಅಲ್ಲಾ, ನಿಂಗೇನು ತಲೆ ಕೆಟ್ಟಿದ್ಯಾ..? ಆರೇ ತಿಂಗಳೊಳಗೆ ಸುಪ್ರೀಂ ಕೋರ್ಟ್’ನಲ್ಲಿ ಕೇಸ್ ಗೆಲ್ತೀನಿ ಅಂತ ಅದ್ಯಾವ ಧೈರ್ಯದ ಮೇಲೆ ಹೇಳ್ತೀಯಾ..? ಪ್ರಧಾನಿ ಪಟ್ಟದಲ್ಲಿ ಎಷ್ಟೇ ಆಪ್ತನನ್ನು ಕೂರಿಸಿದ್ದರೂ, ಅಧಿಕಾರದ ರುಚಿ ನೋಡಿದವನು ಕುರ್ಚಿ ಬಿಟ್ಟು ಕೊಡುತ್ತಾನೆ ಅನ್ನೋದಕ್ಕೆ ಏನು ಗ್ಯಾರಂಟಿ..? ಆಕಸ್ಮಾತ್ ಸುಪ್ರೀಂ ಕೋರ್ಟ್'ನಲ್ಲೂ ತೀರ್ಪು ನಿನ್ನ ವಿರುದ್ಧ ಬಂದ್ರೆ.., ಎಲ್ಲವೂ ಮುಗಿದೇ ಹೋಯ್ತಲ್ಲಾ.. ನೀನು ಸುಮ್ಮನಿರು, ನಾನು ಸಂಭಾಳಿಸ್ತೇನೆ" ಅಂತ ಒಂದೇ ಉಸಿರಲ್ಲಿ ಹೇಳಿ ಮುಗಿಸಿದ್ದರು.

ಅಷ್ಟಕ್ಕೂ ನಾನು ಸಂಭಾಳಿಸ್ತೇನೆ ಅಂತ ಸಂಜಯ್ ಗಾಂಧಿ ಹೇಳಿದ್ದು ಯಾವ ಅರ್ಥದಲ್ಲಿ..? ಇಂದಿರೆಯ ಮಗನ ತಲೆಯಲ್ಲಿದ್ದ ಯೋಜನೆಯೇ ಬೇರೆ. ಅದು ದೇಶದ ಇತಿಹಾಸವೇ ಕಂಡು ಕೇಳರಿಯದಂಥಾ ಅನುಹುತಕಾರಿ ಯೋಜನೆ. ಮಗನನ್ನು ಮುಂದೆ ಕೂರಿಸಿಕೊಂಡ ತಾಯಿ ಇಂದಿರಾ, ಏನದು ನಿನ್ನ ಯೋಜನೆ ಅಂತ ಕೇಳ್ತಾರೆ. ಆ ಸಂದರ್ಭದಲ್ಲಿ ಸಂಜಯ್ ಗಾಂಧಿ ಜೊತೆ ಮತ್ತೊಬ್ಬ ವ್ಯಕ್ತಿ ಪ್ರಧಾನಿ ಇಂದಿರಾ ಮುಂದೆ ಕೂತಿರ್ತಾರೆ. ಅವ್ರೇ ಆಗಿನ ವೆರಿ ಫೇಮಸ್ ಸುಪ್ರೀಂ ಕೋರ್ಟ್ ಲಾಯರ್ ಸಿದ್ಧಾರ್ಥ್ ಶಂಕರ್ ರಾಯ್. ಅರ್ಥಾತ್, ದೇಶಕ್ಕೆ ತುರ್ತು ಪರಿಸ್ಥಿತಿ ಹೇರುವ ಅತ್ಯಂತ ಅಪಾಯಕಾರಿ ಐಡಿಯಾ. ಅವತ್ತೇನಾದರೂ ಕಾನೂನನ್ನು ಗೌರವಿಸಿ ರಾಜೀನಾಮೆ ಕೊಟ್ಟಿದ್ದಿದ್ದರೆ,  ಎಮರ್ಜೆನ್ಸಿ, ಅದರ ಅತಿರೇಕಗಳು, ಜನತಾ ಪಕ್ಷದ ಉದಯ, ಕಾಂಗ್ರೆಸ್'ಗೆ ಭಯಾನಕ ಸೋಲುಗಳನ್ನೆಲ್ಲಾ ತಪ್ಪಿಸಬಹುದಿತ್ತು. ಆದ್ರೆ ಪುತ್ರನ ಮಾತು ಕೇಳಿ ಇಂದಿರಾ ರಾಜಕೀಯ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡುಬಿಟ್ಟಿದ್ದರು.

ಇಂದಿರಾ ಗಾಂಧಿಯವ್ರಿಗೆ ಆಗ ಸೋಲಿನ ಭಯ ಇರ್ಲಿಲ್ಲ.. ಯಾಕೆಂದರೆ,  ಅವರ ಹಿಂದೆ ಜನ ಇದ್ದರು. ವಿರೋಧಿ ಪಡೆಯಲ್ಲಿ ಮೊರಾರ್ಜಿ ದೇಸಾಯಿ, ಚೌಧರಿ ಚರಣ್ ಸಿಂಗ್, ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ ಆಡ್ವಾಣಿಯವರಂಥಾ ಘಟಾನುಘಟಿಗಳೇ ಇದ್ದರೂ, ಒಬ್ಬ ಇಂದಿರಾಗೆ ಇವರು  ಯಾರೂ ಸರಿಸಾಟಿಯಾಗಿರ್ಲಿಲ್ಲ. ಇಷ್ಟೆಲ್ಲಾ ತಾಕತ್ತಿನ ಮಹಿಳೆ, ಮಗನ ಮಾತು ಕೇಳಿ ರಾಜಕೀಯ ಆತ್ಮಹತ್ಯೆಯ ನಿರ್ಧಾರ ಮಾಡಿದ್ದರು.

ಮಗನ ಮಾತು ಕೇಳಿ ಎಮರ್ಜೆನ್ಸಿ ಘೋಷಣೆ ಮಾಡಿದ ಇಂದಿರಾ ಗಾಂಧಿ ಅವತ್ತು ಮಾಡಿದ್ದು ಸಾಮಾನ್ಯ ಪ್ರಮಾದವಲ್ಲ, ಮಹಾಪ್ರಮಾದ.. ಸಂಪುಟ ಸಭೆಯ ಅಂಗೀಕಾರವನ್ನೇ ಪಡೆಯದೆ, ಪ್ರಧಾನ ಮಂತ್ರಿಗಳ ಕಚೇರಿಯಿಂದ ಕಳುಹಿಸಲಾಗಿದ್ದ ಒಂದು ನೋಟ್'ಗೆ ರಾಷ್ಟ್ರಪತಿಗಳು ಅಂಕಿತ ಹಾಕಿ ಬಿಡ್ತಾರೆ. ದೇಶಕ್ಕೆ ಏಕಾಏಕಿ ತುರ್ತು ಪರಿಸ್ಥಿತಿಯನ್ನು ಹೇರಲಾಗತ್ತೆ. ಅದು ಅಕ್ಷರಶಃ ಸರ್ವಾಧಿಕಾರದ ನಿರ್ಧಾರ. ಎಮರ್ಜೆನ್ಸಿ ಘೋಷಣೆಯಾಗಿದ್ದೇ ತಡ. ಶುರುವಾಗತ್ತೆ ಅಮ್ಮ-ಮಗನ ಅಸಲಿ ಆಟ. ಇಂದಿರಾ ಗಾಂಧಿಯವರ ವಿರೋಧಿಗಳು, ಮಗ ಸಂಜಯ್ ಗಾಂಧಿ ಜೊತೆ ಹಗೆತನ ಕಟ್ಟಿಕೊಂಡವರು, ವಿರೋಧ ಪಕ್ಷಗಳ ನಾಯಕರು, ಹೋರಾಟಗಾರರು, ಪತ್ರಕರ್ತರು.. ಹೀಗೆ ತಮಗೆ ಆಗದವರು ಯಾರೆಲ್ಲಾ ಇದ್ದರೂ ಅಂಥವರನ್ನೆಲ್ಲಾ ಹುಡುಕಿ ಹುಡುಕಿ ಎಳ್ಕೊಂಡ್ ಬಂದು ಜೈಲಿಗೆ ಅಟ್ಟಲಾಯ್ತು. 

ರಾಷ್ಟ್ರ ರಾಜಕಾರಣಕ್ಕೆ ತಿರುವು ಕೊಟ್ಟ 1975ರ ತುರ್ತು ಪರಿಸ್ಥಿತಿ..! ಅಮ್ಮ-ಮಗ ಹೆಣೆದ ಬಲೆಯಲ್ಲಿ ವಿಲ ವಿಲ ಒದ್ದಾಡಿತ್ತು ಭಾರತ..!

ಇನ್ನು, ಎಮರ್ಜೆನ್ಸಿಯೇ ಭಯಂಕರ ಅಂದ್ರೆ, ಅದಕ್ಕಿಂತಲೂ ಭಯಂಕರ ಸಂಜಯ್ ಗಾಂಧಿಯ ಫ್ಯಾಮಿಲಿ ಪ್ಲ್ಯಾನಿಂಗ್ ಆಪರೇಷನ್. ಅದು ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಇಡೀ ದೇಶದ ಗಂಡು ಸಂತಾನಗಳ ಗುಂಡಿಗೆಯನ್ನೇ ನಡುಗಿಸಿದ್ದ ಆಪರೇಷನ್.  ಜನಸಂಖ್ಯೆ ನಿಯಂತ್ರಣದ ಹೆಸರಲ್ಲಿ ಜಾರಿಗೆ ಬಂದ ಫ್ಯಾಮಿಲಿ ಪ್ಲ್ಯಾನಿಂಗ್ ಯೋಜನೆ, ಇಡೀ ದೇಶದ ಜನರ ನಿದ್ದೆಯನ್ನೇ ಕೆಡಿಸಿಬಿಡ್ತು. ಜನ ಎಮರ್ಜೆನ್ಸಿಯ ಕರಾಳತೆಗೆ ಭಯ ಬಿದ್ದಿದ್ದರೂ ಇಲ್ವೋ ಗೊತ್ತಿಲ್ಲ, ಆದರೆ,  ಇದಕ್ಕಂತೂ ಬೆದರಿ ಬೆಂಡಾಗಿ ಹೋಗಿದ್ದರು. ಸಿಕ್ಕ ಸಿಕ್ಕ ಗಂಡಸರನ್ನು ಎಳೆ ತಂದು ‘ನಸ್’ಬಂಧಿ ಮಾಡಲಾಯ್ತು.  ನಸ್ ಬಂಧಿ ಅಂದ್ರೆ ಇಂಗ್ಲೀಷ್’ನಲ್ಲಿ ವ್ಯಾಸೆಕ್ಟಮಿ ಅಂತ. ಹೀಗೆ ಹೇಳಿದರೆ,  ತುಂಬಾ ಜನಕ್ಕೆ ಸುಲಭವಾಗಿ ಅರ್ಥ ಆಗಲ್ಲ. ಅರ್ಥವಾಗೋ ಭಾಷೆಯಲ್ಲೇ ಹೇಳೋದಾದ್ರೆ, ಪುರುಷತ್ವದ ನರ ಕಟ್ ಮಾಡುವ ಅತ್ಯಂತ ಅಮಾನವೀಯ ಆಪರೇಷನ್.

Turning Point: ಸ್ಮಶಾನದಲ್ಲಿದ್ದಾಗ ಬಂದ ಫೋನ್ ಕಾಲ್ ಮೋದಿ ಬದುಕನ್ನೇ ಬದಲಿಸಿತು..!

ಇಂಥಾ ಒಂದು ಭಯಂಕರ ಆಪರೇಷನ್ ಮೂಲಕ ಇಡೀ ದೇಶದ ಜನರ ಕಣ್ಣಲ್ಲಿ ಖಳನಾಯಕನಾಗಿ ಬಿಟ್ರು ಸಂಜಯ್ ಗಾಂಧಿ. ಮಗನ ಹಿಂದೆ ನಿಂತು ತಪ್ಪು ಸರಿಗಳನ್ನು ನೋಡದೆ, ಎಲ್ಲದಕ್ಕೂ ಅಸ್ತು ಅಂದು ಬಿಟ್ಟಳು ಮಹಾತಾಯಿ ಇಂದಿರಾ. 1975ರ ಜೂನ್ 25ರಿಂದ 1977 ಮಾರ್ಚ್ 21ವರೆಗೆ ಎಮರ್ಜೆನ್ಸಿ ನೆಪದಲ್ಲಿ ಇಡೀ ದೇಶವನ್ನ ಆಳಿದ್ದು ಇಂದಿರೆಯ ಮಗ ಸಂಜಯ.  ದೇಶಕ್ಕೆ 21 ತಿಂಗಳು ತುರ್ತು ಪರಿಸ್ಥಿತಿ ಹೇರಿದ್ದು ಅಧಿಕಾರ ಉಳಿಸಿಕೊಳ್ಳೋದಕ್ಕೆ. ಆದ್ರೆ ಎಮರ್ಜೆನ್ಸಿಯ ನಂತರ ನೀಡಿದ್ದ ಸಂದರ್ಶನವೊಂದರಲ್ಲಿ ಇಂದಿರಾ ಗಾಂಧಿ ನೀಡಿದ್ದ ಕಾರಣವೇ ಬೇರೆ. 
'ಆ ಜನರು ಪ್ರಜಾಪ್ರಭುತ್ವವನ್ನು ನಾಶ ಮಾಡಲು ಮುಂದಾಗಿದ್ದರು. ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎಂದು ಅವರಿಗೆ ಅರಿವಾಗುತ್ತಿದ್ದಂತೆ, ಅವರು ಯುದ್ಧವನ್ನು ಬೀದಿಗೆ ತರಲು ಮುಂದಾದರು. ಮೊರಾರ್ಜಿ ದೇಸಾಯಿ ಸಂದರ್ಶನವೊಂದರಲ್ಲಿ ಹೇಳುತ್ತಾರೆ, ನಾವು ಪ್ರಧಾನಮಂತ್ರಿಗಳ ನಿವಾಸಕ್ಕೆ ಮುತ್ತಿಗೆ ಹಾಕುತ್ತೇವೆ, ಸಂಸತ್’ಗೆ ಮುತ್ತಿಗೆ ಹಾಕುತ್ತೇವೆ. ಪ್ರಧಾನಮಂತ್ರಿಗಳು ಹೊರ ಬರುವಂತಿಲ್ಲ, ಯಾರೂ ಒಳಗೆ ಹೋಗುವಂತಿಲ್ಲ” ಎನ್ನುತ್ತಾರೆ. “ನಾವು ಬ್ಯಾಲಟ್’ನಿಂದ ಗೆಲ್ಲಲು ಸಾಧ್ಯವಾಗದಿದ್ದರೆ, ಬುಲೆಟ್’ನಿಂದ ಗೆಲ್ಲಬೇಕು” ಎಂದು ವಿರೋಧ ಪಕ್ಷದ ಮತ್ತೊಬ್ಬ ಸದಸ್ಯ ಹೇಳುತ್ತಾರೆ.' ಎಂದಿದ್ದರು. 

'ದೇಶದಲ್ಲಿ ಹಿಂಸಾಚಾರದ ವಾತಾವರಣವಿತ್ತು. ವಿರೋಧ ಪಕ್ಷಗಳು ದೇಶಾದ್ಯಂತ ಬಂದ್, ಘೇರಾವ್, ಆಂದೋಲನಗಳನ್ನು ನಡೆಸಿ, ಪೋಲಿಸರು ಮತ್ತು ಸೈನಿಕನನ್ನು ಪ್ರಚೋದಿಸಿ ಸರ್ಕಾರದ ಕೆಲಸಗಳನ್ನು ಸ್ಥಗಿತಗೊಳಿಸುವ ಪ್ರಯತ್ನ ಮಾಡುತ್ತಿದ್ದವು. ಈ ಕಾರಣಕ್ಕೆ ಎಮರ್ಜೆನ್ಸಿಯ ನಿರ್ಧಾರ ತೆಗೆದುಕೊಳ್ಬೇಕಾಯ್ತು ಅಂತ ಇಂದಿರಾ ಹೇಳಿದ್ದರು. ದೇಶದ ಇತಿಹಾಸದಲ್ಲಿ ಕಪ್ಪುಚುಕ್ಕೆಯಾಗಿ ಈಗಲೂ ಉಳಿದುಕೊಂಡಿರುವ ಎಮರ್ಜೆನ್ಸಿಯ ಹಿಂದಿನ ಕರಾಳ ಕಥೆ ಇದು.

click me!