
- ಗಿರೀಶ್ ಲಿಂಗಣ್ಣ
(ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)
ಅಮೆರಿಕಾ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ತಾನು ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಅಕ್ರಮ ವಲಸೆ, ವ್ಯಾಪಾರ, ಮತ್ತು ಇಂಧನಕ್ಕೆ ಸಂಬಂಧಿಸಿದ ಹಲವು ವಿಚಾರಗಳ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವ ನಿರೀಕ್ಷೆಗಳಿವೆ. ಇಂತಹ ಕ್ರಮಗಳು, ಹಿಂದಿನ ಬೈಡನ್ ಆಡಳಿತ ಜಾರಿಗೆ ತಂದಿರುವ ಹಲವು ನೀತಿಗಳನ್ನು ರದ್ದುಗೊಳಿಸಿ, ಹೊಸ ನೀತಿಗಳನ್ನು ಜಾರಿಗೆ ತರುವ ಉದ್ದೇಶ ಹೊಂದಿವೆ. ಅವುಗಳಲ್ಲಿ, ಕಟ್ಟುನಿಟ್ಟಿನ ಗಡಿ ಭದ್ರತೆ, ಮತ್ತು ದೇಶದೊಳಗೆ ಹೆಚ್ಚಿನ ಇಂಧನ ಉತ್ಪಾದನೆಗಳು ಸೇರಿವೆ.
ಹೆಚ್ಚಿನ ಸುಂಕಗಳು ಈ ಬಾರಿ ಪರಿಚಯಿಸಲ್ಪಡುವ ನಿರೀಕ್ಷೆಗಳಿವೆ. ಅಧ್ಯಕ್ಷ ಟ್ರಂಪ್ ಅವರು ಇಂತಹ ಹೆಜ್ಜೆಗಳು ವ್ಯಾಪಾರ ಅಸಮತೋಲನವನ್ನು ಸರಿಪಡಿಸಿ, ವಲಸೆ ನಿಯಮಗಳನ್ನು ಬಲಪಡಿಸಲಿವೆ ಎಂದಿದ್ದಾರೆ. ಆದರೆ, ಈ ಕ್ರಮಗಳು ಕಾನೂನು ಮತ್ತು ರಾಜತಾಂತ್ರಿಕ ಸಮಸ್ಯೆಗಳಿಗೆ ಕಾರಣವಾಗುವ ಸಾಧ್ಯತೆಗಳಿವೆ.
ಟ್ರಂಪ್ ಆಡಳಿತ ಅಮೆರಿಕಾದ ಒಳಗೆ ಇಂಧನ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಗಳಿವೆ. ಇದಕ್ಕಾಗಿ ಅಮೆರಿಕಾ ಪ್ಯಾರಿಸ್ ಒಪ್ಪಂದದಿಂದ ಹೊರಬರುವ, ಮತ್ತು ಬೈಡನ್ ಅಧ್ಯಕ್ಷೀಯ ಅವಧಿಯಲ್ಲಿ ಕೈಗೊಂಡ ಪ್ರಮುಖ ಘೋಷಣೆಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ.
ಪ್ಯಾರಿಸ್ ಒಪ್ಪಂದ ಒಂದು ಜಾಗತಿಕ ಒಪ್ಪಂದವಾಗಿದ್ದು, ಹವಾಮಾನ ಬದಲಾವಣೆಯ ವಿರುದ್ಧ ಹೋರಾಡಲು ಎಲ್ಲ ದೇಶಗಳು ಕೈಗೊಂಡ ನಿರ್ಧಾರವಾಗಿದೆ. ಇದರ ಗುರಿ ಹಸಿರುಮನೆ ಅನಿಲಗಳ ಹೊರಸೂಸುವಿಕೆಯನ್ನು ಕಡಿಮೆಗೊಳಿಸಿ, ಸ್ವಚ್ಛ ಇಂಧನ ಬಳಕೆಗೆ ಉತ್ತೇಜಿಸಿ, ಜಾಗತಿಕ ತಾಪಮಾನ ಏರಿಕೆಯನ್ನು ಮಿತಿಗೊಳಿಸುವುದಾಗಿದೆ. ಪ್ರತಿಯೊಂದು ದೇಶವೂ ಮುಂದಿನ ತಲೆಮಾರುಗಳಿಗೆ ಭೂಮಿಯನ್ನು ರಕ್ಷಿಸಲು ತನ್ನದೇ ಆದ ಗುರಿಗಳನ್ನು ಹಾಕಿಕೊಂಡಿದೆ.
ಸೋಮವಾರ, ಜನವರಿ 20, 2025ರಂದು ಅಮೆರಿಕಾದ ನೂತನ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಅಧಿಕೃತವಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ, ಅಧ್ಯಕ್ಷೀಯ ಅವಧಿಯ ಮೊದಲ 100 ದಿನಗಳು ನೂತನ ಅಧ್ಯಕ್ಷರ ಆರಂಭಿಕ ಯಶಸ್ಸನ್ನು ಅಳೆಯಲು ಬಳಕೆಯಾಗುತ್ತವೆ. ಆದರೆ, ಟ್ರಂಪ್ ತಾನು ಕ್ಷಿಪ್ರವಾಗಿ ಕ್ರಮಗಳನ್ನು ಕೈಗೊಳ್ಳುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದು, ತನ್ನ ಎರಡನೇ ಅವಧಿಯ ಮೊದಲ ಗಂಟೆಗಳು ಮತ್ತು ದಿನಗಳಿಂದಲೇ ಕಾರ್ಯಕಾರಿ ಆದೇಶಗಳಿಗೆ ಸಹಿ ಹಾಕುವುದು, ಸಂಸ್ಥೆಗಳಿಗೆ ನಿರ್ದೇಶನ ನೀಡುವುದು, ನಾಮನಿರ್ದೇಶನ ನಡೆಸುವುದು, ಮತ್ತು ಕ್ಷಮಾದಾನ ಮಾಡುವಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳಿವೆ.
ಟ್ರಂಪ್ ತನ್ನ ಅಧಿಕಾರಾವಧಿಯ 'ಮೊದಲ ದಿನ'ವೇ ನಡೆಸುವ ಕೆಲವು ಕ್ರಮಗಳು ಉದ್ಯಮಗಳು ಮತ್ತು ವ್ಯವಹಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಗಳಿವೆ.
ಕಾರ್ಯಕಾರಿ ಆದೇಶಗಳು
ಕಾರ್ಯಕಾರಿ ಆದೇಶ ಅಥವಾ ಎಕ್ಸಿಕ್ಯುಟಿವ್ ಆರ್ಡರ್ ಎಂದರೆ, ದೇಶದ ಅಧ್ಯಕ್ಷರು ಫೆಡರಲ್ ಏಜೆನ್ಸಿಗಳಿಗೆ, ವಿಭಾಗಗಳಿಗೆ, ಅಥವಾ ಅಧಿಕಾರಿಗಳಿಗೆ ನೀಡುವ ಆದೇಶವಾಗಿದ್ದು, ಅವರು ಹೇಗೆ ತಮಗೆ ಸಂಬಂಧಿಸಿದ ಆಡಳಿತ ವಿಭಾಗದಲ್ಲಿ (ಕಾನೂನು ಜಾರಿ ನಡೆಸುವ ಮತ್ತು ಸಾರ್ವಜನಿಕ ನೀತಿಗಳನ್ನು ರೂಪಿಸುವ ಸರ್ಕಾರದ ಭಾಗ) ಗುರಿಗಳನ್ನು ನಿಭಾಯಿಸಬೇಕು ಎಂದು ಸೂಚಿಸುತ್ತವೆ.
ಇಂತಹ ಎಕ್ಸಿಕ್ಯುಟಿವ್ ಆದೇಶಗಳನ್ನು ಜಾರಿಗೊಳಿಸುವುದು ಅಥವಾ ಅವುಗಳನ್ನು ಹಿಂಪಡೆಯುವುದು ಅಧ್ಯಕ್ಷರಿಗಿರುವ ಪ್ರಭಾವಿ ಶಕ್ತಿಯಾಗಿದ್ದು, ಇದಕ್ಕಾಗಿ ಅವರು ಕಾಂಗ್ರೆಸ್ ಅನುಮತಿ ಪಡೆಯುವ ಅಗತ್ಯವಿರುವುದಿಲ್ಲ. ಎಲ್ಲಿಯವರೆಗೆ ಈ ಆದೇಶಗಳು ಅಧ್ಯಕ್ಷರ ಕಾನೂನು ಅಥವಾ ಸಾಂವಿಧಾನಿಕ ಅಧಿಕಾರದ ವ್ಯಾಪ್ತಿಯ ಒಳಗಿರುತ್ತದೆಯೋ, ಅಲ್ಲಿಯತನಕ ಇವುಗಳಿಗೆ ಕಾನೂನಿಗಿರುವ ಶಕ್ತಿ ಇರುತ್ತದೆ.
ತನ್ನ ಮೊದಲನೇ ಅಧ್ಯಕ್ಷೀಯ ಅವಧಿಯಲ್ಲಿ 220 ಎಕ್ಸಿಕ್ಯುಟಿವ್ ಆದೇಶಗಳನ್ನು ಹೊರಡಿಸಿದ್ದ ಡೊನಾಲ್ಡ್ ಟ್ರಂಪ್, ಈ ಅವಧಿಯಲ್ಲಿ ಇನ್ನಷ್ಟು ಆದೇಶಗಳನ್ನು ಅವಧಿಯ ಆರಂಭದಲ್ಲೇ ಹೊರಡಿಸುವ ನಿರೀಕ್ಷೆಗಳು ಹೆಚ್ಚಾಗಿವೆ. ಈ ಆದೇಶಗಳು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿರುವ ಭರವಸೆಗಳನ್ನು ಕೇಂದ್ರೀಕರಿಸಿದ್ದು, ಬೈಡನ್ ಆಡಳಿತದ ಒಂದಷ್ಟು ನೀತಿಗಳನ್ನು ಹಿಂಪಡೆಯುವ ಸಾಧ್ಯತೆಗಳಿವೆ. ಟ್ರಂಪ್ ನೀಡಬಹುದಾದ ಮುಖ್ಯ ಆದೇಶಗಳೆಂದರೆ:
ಸುಂಕಗಳು: ಹೊಸ ಸುಂಕಗಳಡಿ, ಜಗತ್ತಿನಾದ್ಯಂತ ವಿವಿಧ ದೇಶಗಳಿಂದ ಆಮದು ಮಾಡುವ ವಸ್ತುಗಳ ಮೇಲೆ 10% ತನಕ ಸುಂಕ, ಹಾಗೂ ಚೀನಾದಿಂದ ಆಮದು ಮಾಡುವ ವಸ್ತುಗಳ ಮೇಲೆ 60% ತನಕ ಸುಂಕ, ಹಾಗೂ ಕೆನಡಾ ಮತ್ತು ಮೆಕ್ಸಿಕೋಗಳಿಂದ ಮಾಡುವ ಆಮದಿನ ಮೇಲೆ 25% ತನಕ ಸುಂಕ ವಿಧಿಸುವ ಸಾಧ್ಯತೆಗಳಿವೆ.
ವಲಸೆ ಮತ್ತು ಗಡಿ ಭದ್ರತೆ: ಹೊಸ ವಲಸೆ ಮತ್ತು ಗಡಿ ಭದ್ರತಾ ನೀತಿಯಡಿ ಗಡಿ ಭದ್ರತಾ ಏಜೆಂಟರಿಗೆ ಅಮೆರಿಕಾದ ದಕ್ಷಿಣ ಗಡಿಯಲ್ಲಿ (ಅಮೆರಿಕಾ ಮತ್ತು ಮೆಕ್ಸಿಕೋಗಳ ಗಡಿ) ಹೆಚ್ಚಿನ ಜನರನ್ನು ಬಂಧಿಸುವಂತೆ ಆದೇಶ ನೀಡುವ ಸಾಧ್ಯತೆಗಳಿವೆ. ಇದಕ್ಕಾಗಿ ಮಿಲಿಟರಿ ಸಂಪನ್ಮೂಲಗಳನ್ನು ಬಳಸಿಕೊಂಡು, ಗಡಿ ಗೋಡೆಯ ನಿರ್ಮಾಣ ಕಾರ್ಯವನ್ನು ವೇಗಗೊಳಿಸಬಹುದು.
ಇಂಧನ ಮತ್ತು ಪರಿಸರ ನೀತಿ: ದೇಶೀಯವಾಗಿ ಹೆಚ್ಚಿನ ಇಂಧನ ಉತ್ಪಾದನೆ ನಡೆಸುವ ನಿಟ್ಟಿನಲ್ಲಿ, ಅಮೆರಿಕಾವನ್ನು ಪ್ಯಾರಿಸ್ ಒಪ್ಪಂದದಿಂದ ಹೊರತಂದು, ಆ ಮೂಲಕ ಇಂಧನಕ್ಕಾಗಿ ಭೂಮಿಯ ಕೊರೆಯುವಿಕೆಯ ಮೇಲಿನ ನಿರ್ಬಂಧಗಳನ್ನು ಹಿಂಪಡೆದು (ಆರ್ಕ್ಟಿಕ್ ಪ್ರದೇಶದಲ್ಲೂ ಸಹ), ದ್ರವೀಕೃತ ನೈಸರ್ಗಿಕ ಅನಿಲ ರಫ್ತಿನ ಮೇಲಿನ ನಿರ್ಬಂಧಗಳನ್ನು ಹಿಂಪಡೆಯಬಹುದು. ಅದರೊಡನೆ, ಬೈಡನ್ ಆಡಳಿತದ ವಿದ್ಯುತ್ ಚಾಲಿತ ವಾಹನಗಳಿಗೆ ಬೆಂಬಲ ನೀಡುವ ನೀತಿಯನ್ನೂ ಟ್ರಂಪ್ ಕೊನೆಗೊಳಿಸಬಹುದು.
ನಿಯಂತ್ರಕಗಳ ಹಿಂಪಡೆತ: ಇದರಡಿಯಲ್ಲಿ, ಫೆಡರಲ್ ಕಾರ್ಯಾಚರಣೆಗಳಲ್ಲಿ 2050ರ ವೇಳೆಗೆ ಶೂನ್ಯ ಇಂಗಾಲ ಹೊರಸೂಸುವಿಕೆ ಸಾಧಿಸಬೇಕೆಂಬ ಬೈಡನ್ ಆದೇಶವನ್ನು ಟ್ರಂಪ್ ಹಿಂಪಡೆಯಬಹುದು. ಬೈಡನ್ ಆಡಳಿತದಲ್ಲಿ ಜಾರಿಗೆ ತಂದಿದ್ದ ಕಾನೂನುಗಳು ವಿದ್ಯುತ್ ಘಟಕಗಳಿಂದ ಇಂಗಾಲದ ಹೊರಸೂಸುವಿಕೆಯನ್ನು ಮಿತಿಗೊಳಿಸುವುದು ಮತ್ತು ಇತರ ಪಾರಿಸರಿಕ ನೀತಿಗಳನ್ನು ಜಾರಿಗೆ ತರುವುದನ್ನು ಉದ್ದೇಶಿಸಿದ್ದವು. ಆ ಮೂಲಕ, ಸರ್ಕಾರಿ ಸಂಸ್ಥೆಗಳಾದ್ಯಂತ ಮಿತಿಗಳನ್ನು ವಿಧಿಸಲಾಗಿತ್ತು.
ಫೆಡರಲ್ ಉದ್ಯೋಗಿ ಪಡೆ: ಫೆಡರಲ್ ಉದ್ಯೋಗಿಗಳಿಗೆ ಮನೆಯಿಂದ ಅಥವಾ ಅವರ ಆಯ್ಕೆಯ ಸ್ಥಳದಿಂದ ಕಾರ್ಯಾಚರಿಸುವ ಅವಕಾಶವನ್ನು ಈ ಕ್ರಮ ಹಿಂಪಡೆಯಬಹುದು. ಇದರ ಪರಿಣಾಮವಾಗಿ, ಮನೆಯಿಂದಲೇ ಕೆಲಸ ಮಾಡುತ್ತಿರುವ ಬಹಳಷ್ಟು ಸರ್ಕಾರಿ ನೌಕರರು ಕಚೇರಿಗಳಿಗೆ ಮರಳಬೇಕಾದೀತು.
ಡೈವರ್ಸಿಟಿ, ಈಕ್ವಿಟಿ ಮತ್ತು ಇನ್‌ಕ್ಲೂಷನ್ (ಡಿಇಐ) ನೀತಿಗಳು: ಈ ನೀತಿಗಳಡಿ ಫೆಡರಲ್ ಸರ್ಕಾದಲ್ಲಿರುವ ಎಲ್ಲ ಡೈವರ್ಸಿಟಿ, ಈಕ್ವಿಟಿ ಮತ್ತು ಇನ್‌ಕ್ಲೂಷನ್ (ವೈವಿಧ್ಯತೆ, ಸಮಾನತೆ, ಮತ್ತು ಒಳಗೊಳ್ಳುವಿಕೆ - ಡಿಇಐ) ಯೋಜನೆಗಳು ಮತ್ತು ನೀತಿಗಳನ್ನು ಕೊನೆಗೊಳಿಸಬಹುದು. ಈ ಕ್ರಮಗಳನ್ನು ಎಲ್ಲ ರೀತಿಯ ಹಿನ್ನೆಲೆಗಳಿಂದ ಬಂದಿರುವ ಜನರಿಗೆ ಉದ್ಯೋಗದಲ್ಲಿ ನ್ಯಾಯಯುತ ಮತ್ತು ಸಮಾನ ಅವಕಾಶ ಕಲ್ಪಿಸುವ ಸಲುವಾಗಿ ಕೈಗೊಳ್ಳಲಾಗಿತ್ತು. ಈ ಕ್ರಮಗಳನ್ನು ವಿರೋಧಿಸುವವರು ಇದರ ಮೂಲಕ ನಡೆಸುವ ಉದ್ಯೋಗ ನೇಮಕಾತಿ ಮತ್ತು ಬಡ್ತಿಗಳು ಉದ್ಯೋಗಿಗಳ ಸಾಮರ್ಥ್ಯಕ್ಕಿಂತಲೂ ಹೆಚ್ಚಾಗಿ, ಅವರ ಗುರುತಿನ ಮೇಲೆ ಆಧಾರಿತವಾಗಿರುತ್ತವೆ. ಆ ಮೂಲಕ, ಔದ್ಯೋಗಿಕ ಕ್ಷೇತ್ರದಲ್ಲಿ ಅಸಮರ್ಥತೆ ಹೆಚ್ಚುತ್ತದೆ ಎಂದು ವಾದಿಸಿದ್ದಾರೆ.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೇರುವ ಮೊದಲ ದಿನವೇ ಕೈಗೊಳ್ಳುವ ಒಂದಷ್ಟು ಕಾರ್ಯಕಾರಿ ಆದೇಶಗಳು (ಇಒ) ಸರ್ಕಾರದ ನೀತಿಗಳ ಮೇಲೆ ತಕ್ಷಣದ ಪರಿಣಾಮ ಬೀರುವ ಸಾಧ್ಯತೆಗಳಿವೆ. ಇತರ ಕ್ರಮಗಳು ಕೇವಲ ಸಾಂಕೇತಿಕವಾಗಿದ್ದು, ಆಡಳಿತಗಾರರ ಆದ್ಯತೆಗಳನ್ನು ಪ್ರದರ್ಶಿಸಲಿವೆ. ಸುಂಕ ವಿಧಿಸುವುದು ಮತ್ತು ಫೆಡರಲ್ ಏಜೆನ್ಸಿಗಳಿಗೆ ನಿಯಂತ್ರಣಗಳನ್ನು ಕಡಿಮೆಗೊಳಿಸುವಂತೆ ಆದೇಶಿಸುವುದು ಸರ್ಕಾರ ಹೇಗೆ ಕಾರ್ಯಾಚರಿಸುತ್ತದೆ ಮತ್ತು ಆರ್ಥಿಕತೆಯ ಮೇಲೆ ಹೇಗೆ ನೇರ ಪರಿಣಾಮ ಬೀರುತ್ತದೆ ಎನ್ನುವುದರ ಮೇಲೆ ಪ್ರಭಾವ ಬೀರಬಹುದು. ಇನ್ನೊಂದೆಡೆ, ಒಂದಷ್ಟು ಕಾರ್ಯಕಾರಿ ಆದೇಶಗಳು ಚುನಾವಣಾ ಪ್ರಚಾರದ ವೇಳೆ ನೀಡಿರುವ ಭರವಸೆಗಳತ್ತ ಬೆಳಕು ಚೆಲ್ಲುವಂತೆ ಕಾಣಬಹುದು. ಉದಾಹರಣೆಗೆ, ಟ್ರಂಪ್ ಸರ್ಕಾರಿ ಸಂಸ್ಥೆಗಳಿಗೆ ತಮ್ಮ ನೀತಿಗಳನ್ನು ಮರು ಪರಿಶೀಲಿಸುವಂತೆ ಆದೇಶ ನೀಡಿದರೆ, ಆ ಆದೇಶ ಗಂಭೀರ ಬದಲಾವಣೆಗಳನ್ನು ತರುವ ಸಾಮರ್ಥ್ಯ ಹೊಂದಿರುವುದಿಲ್ಲ. ಇಂತಹ ಕ್ರಮಗಳು ತಕ್ಷಣದ ಬದಲಾವಣೆ ತರುವುದಕ್ಕಿಂತಲೂ, ಒಂದು ಸಂದೇಶ ನೀಡುವ ಗುರಿ ಹೊಂದಿರುತ್ತವೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜಾರಿಗೊಳಿಸುವ ಬಹಳಷ್ಟು ಕಾರ್ಯಕಾರಿ ಆದೇಶಗಳು ಫೆಡರಲ್ ನ್ಯಾಯಾಲಯಗಳಲ್ಲಿ ಕಾನೂನು ಸವಾಲು ಎದುರಿಸುವ ಸಾಧ್ಯತೆಗಳಿವೆ. ಅದರಲ್ಲೂ ವಲಸೆ, ಸುಂಕ, ಮತ್ತು ಪರಿಸರ ಸಂರಕ್ಷಣಾ ನೀತಿಗಳನ್ನು ಹಿಂಪಡೆಯುವ ಆದೇಶಗಳಂತೂ ಇಂತಹ ಸವಾಲುಗಳನ್ನು ಎದುರಿಸುವ ಸಾಧ್ಯತೆಗಳು ಬಹಳ ಹೆಚ್ಚಿವೆ. ಇಂತಹ ಆದೇಶಗಳನ್ನು ವಿರೋಧಿಸುವ ವಕಾಲತ್ತು ಗುಂಪುಗಳು, ರಾಜ್ಯ ಸರ್ಕಾರಗಳು ಅಥವಾ ವ್ಯಾಪಾರ ಸಹಯೋಗಿಗಳು ಇಂತಹ ಹಲವು ಕ್ರಮಗಳು ಅಧ್ಯಕ್ಷರ ಅಧಿಕಾರ ವ್ಯಾಪ್ತಿಯನ್ನು ಮೀರಿದವು ಎಂದು ವಾದಿಸುವ ಸಾಧ್ಯತೆಗಳಿವೆ. ಇಂತಹ ಆದೇಶಗಳು ಈಗಾಗಲೇ ಜಾರಿಯಲ್ಲಿರುವ ಕಾನೂನುಗಳು ಅಥವಾ ಅಮೆರಿಕಾದ ಸಂವಿಧಾನಕ್ಕೆ ವಿರುದ್ಧವಾಗಿವೆ ಎಂದೂ ಅವರು ವಾದಿಸಬಹುದು. ಇದೇ ರೀತಿ, ವಲಸೆ ತಡೆಯನ್ನು ಕೇಂದ್ರೀಕರಿಸಿ ಕೈಗೊಳ್ಳಲು ಉದ್ದೇಶಿಸಿರುವ ಕ್ರಮಗಳು ಜನರ ಕಾನೂನು ಹಕ್ಕುಗಳನ್ನು ಕಸಿದುಕೊಳ್ಳುತ್ತಿವೆ, ಅಥವಾ ಪ್ರಸ್ತುತ ಇರುವ ವಲಸೆ ಕಾನೂನುಗಳ ವಿರುದ್ಧ ಇವೆ ಎಂದು ಟೀಕೆಗೊಳಗಾಗಬಹುದು. ನ್ಯಾಯಾಲಯಗಳು ಸಾಮಾನ್ಯವಾಗಿ ಎಕ್ಸಿಕ್ಯುಟಿವ್ ಆದೇಶಗಳನ್ನು ನೀಡುವ ವಿಚಾರದಲ್ಲಿ ಅಧ್ಯಕ್ಷರಿಗೆ ಬಹಳಷ್ಟು ಸ್ವಾತಂತ್ರ್ಯ ನೀಡುತ್ತವೆ. ಆದರೆ, ಒಂದು ವೇಳೆ ನ್ಯಾಯಾಧೀಶರಿಗೆ ಬಲವಾದ ಕಾನೂನು ಅಥವಾ ಸಾಂವಿಧಾನಿಕ ಆಧಾರ ಲಭಿಸಿದರೆ, ಅವರು ಅಧ್ಯಕ್ಷರ ಆದೇಶಗಳಿಗೆ ತಡೆ ನೀಡಬಹುದು. ಅದರೊಡನೆ, ರಾಜಕೀಯ ವಿರೋಧಿಗಳು ಸರ್ಕಾರಿ ಸಂಸ್ಥೆಗಳು ಎಕ್ಸಿಕ್ಯುಟಿವ್ ಆದೇಶಗಳನ್ನು ಜಾರಿಗೊಳಿಸುವ ವಿಧಾನವನ್ನೂ ಪ್ರಶ್ನಿಸಬಹುದು. ಉದಾಹರಣೆಗೆ, ಸರ್ಕಾರಿ ಸಂಸ್ಥೆಗಳು ಅಡ್ಮಿನಿಸ್ಟ್ರೇಟಿವ್ ಪ್ರೊಸೀಜರ್ ಆ್ಯಕ್ಟ್ ಅಡಿಯಲ್ಲಿ ಪಾಲಿಸಬೇಕಾದ ಸೂಕ್ತ ಹೆಜ್ಜೆಗಳನ್ನು ಪಾಲಿಸಿಲ್ಲ ಎಂದು ವಾದಿಸಬಹುದು.
ಮೊದಲ ದಿನ ಟ್ರಂಪ್ ಕೈಗೊಳ್ಳಬಹುದಾದ ಇತರ ಸಂಭಾವ್ಯ ಕ್ರಮಗಳು
ಕ್ಷಮಾದಾನ ಮತ್ತು ಶಿಕ್ಷೆಯಲ್ಲಿ ಕಡಿತ: ನೂತನ ಅಧ್ಯಕ್ಷರು ಕೈಗೊಳ್ಳುವ ಬಹಳಷ್ಟು ನಿರ್ಧಾರಗಳು ಎಕ್ಸಿಕ್ಯುಟಿವ್ ಆದೇಶಗಳು ಅಥವಾ ನೀತಿ ನಿರ್ದೇಶನಗಳ ರೂಪದಲ್ಲಿರುತ್ತವೆ. ಆದರೆ, ಅವುಗಳನ್ನು ಹೊರತುಪಡಿಸಿಯೂ ಒಂದಷ್ಟು ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳೂ ಇವೆ. ಟ್ರಂಪ್ ಇಂತಹ ಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಗಳೂ ಹೆಚ್ಚಿವೆ. ಟ್ರಂಪ್ ತಾನು ಅಧಿಕಾರ ವಹಿಸಿಕೊಂಡ ಬಳಿಕ ಕ್ಷಮಾದಾನದ ಅಧಿಕಾರವನ್ನು ಬಳಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದರು. ಇದರಲ್ಲಿ, 2021 ಜನವರಿ 6ರ ಯುಎಸ್ ಕ್ಯಾಪಿಟಲ್ ಘಟನೆಯಲ್ಲಿ ಭಾಗಿಯಾಗಿದ್ದ ಜನರಿಗೆ ಕ್ಷಮಾದಾನ ನೀಡುವುದು ಮತ್ತು ಶಿಕ್ಷೆಯನ್ನು ಕಡಿತಗೊಳಿಸುವುದೂ ಸೇರಿದೆ.
ಜನವರಿ 6, 2021ರ ಅಮೆರಿಕಾದ ಕ್ಯಾಪಿಟಲ್ ಘಟನೆ ಒಂದು ಹಿಂಸಾತ್ಮಕ ದಾಳಿಯಾಗಿದ್ದು, ಅಪಾರ ಜನರ ಗುಂಪು ಕ್ಯಾಪಿಟಲ್‌ಗೆ ನುಗ್ಗಿ, 2020ರ ಚುನಾವಣಾ ಫಲಿತಾಂಶಕ್ಕೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯನ್ನು ವಿರೋಧಿಸುವ ಉದ್ದೇಶ ಹೊಂದಿತ್ತು. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹಿಂದಿನ ದಿನ ನಡೆದ ರ‌್ಯಾಲಿಯೊಂದರಲ್ಲಿ ಚುನಾವಣೆಯಲ್ಲಿ ಅಕ್ರಮ ನಡೆದಿದೆ ಎಂದು ಆಧಾರ ರಹಿತವಾಗಿ ಆರೋಪಿಸಿ, ಇಂತಹ ಹಿಂಸಾಚಾರಕ್ಕಿಳಿದ ಗುಂಪಿಗೆ ಬೆಂಬಲ ನೀಡಿರುವ ಆರೋಪಗಳಿದ್ದವು. ಆದರೆ ಟ್ರಂಪ್ ತಾನು ಯಾವುದೇ ಹಿಂಸಾಚಾರಕ್ಕೆ ಬೆಂಬಲ ನೀಡಿಲ್ಲ ಎಂದು ಹೇಳಿದ್ದರು.
ಈ ವಿಚಾರಗಳಿಗೆ ಸಂಬಂಧಿಸಿದಂತೆ, ಅಧ್ಯಕ್ಷರಿಗೆ ಬಹುತೇಕ ಸಂಪೂರ್ಣ ಅಧಿಕಾರವಿರುತ್ತದೆ. ಈ ಅಧಿಕಾರ ವ್ಯಾಪ್ತಿಯಲ್ಲಿ ಎಲ್ಲ ಫೆಡರಲ್ ಅಪರಾಧಗಳು ಬರುತ್ತವೆ. ಸಾಮಾನ್ಯವಾಗಿ ಇದಕ್ಕೆ ಕಾಂಗ್ರೆಸ್ ನಿರ್ಬಂಧ ಹೇರಲು ಅಥವಾ ನ್ಯಾಯಾಲಯಗಳಲ್ಲಿ ಪ್ರಶ್ನಿಸಲು ಸಾಧ್ಯವಿಲ್ಲ.
ಸಿಬ್ಬಂದಿಗಳ ನವೀಕರಣ ಮತ್ತು ಹೊಸ ನೇಮಕಾತಿ: ಅಧಿಕಾರ ವಹಿಸಿಕೊಂಡ ಬಳಿಕ, ಡೊನಾಲ್ಡ್ ಟ್ರಂಪ್ ಅವರು ಸಿಬ್ಬಂದಿ ನವೀಕರಣ ಮತ್ತು ಹೊಸ ನೇಮಕಾತಿಗಳನ್ನು ನಡೆಸುವ ಘೋಷಣೆಗಳನ್ನು ಮಾಡುವ ಸಾಧ್ಯತೆಗಳಿವೆ. ಆ ಮೂಲಕ, ಅವರು ತನ್ನ ಆಡಳಿತದಲ್ಲಿರುವ ಖಾಲಿ ಹುದ್ದೆಗಳನ್ನು ನೇಮಕಗೊಳಿಸಬಹುದು. ಈಗಾಗಲೇ ಹಲವಾರು ಪ್ರಮುಖ ಹುದ್ದೆಗಳನ್ನು ಘೋಷಿಸಲಾಗಿದ್ದರೂ, ಕೆಳ ಹಂತದ ಮುಖ್ಯ ಹುದ್ದೆಗಳು ಇನ್ನೂ ಖಾಲಿಯಾಗಿವೆ. ಇಂಧನ, ವ್ಯಾಪಾರ ಮತ್ತು ವಲಸೆಯಂತಹ ವಿಚಾರಗಳಲ್ಲಿ ಆಡಳಿತ ಯೋಜನೆಗಳನ್ನು ರೂಪಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರಲು ಈ ಹುದ್ದೆಗಳು ಅತ್ಯಂತ ಮುಖ್ಯವಾಗಿವೆ. ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉದ್ಯಮ ಅನುಭವ ಹೊಂದಿರುವವರೂ ಸೇರಿದಂತೆ, ತನ್ನಂತೆಯೇ ಸಮಾನ ಗುರಿಗಳನ್ನು ಹೊಂದಿರುವ ಅಥವಾ ಬೈಡನ್ ಅಧಿಕಾರಾವಧಿಯಲ್ಲಿ ಅವರ ನೀತಿಗಳ ಟೀಕಾಕಾರರಾಗಿದ್ದವರನ್ನು ನೇಮಕಗೊಳಿಸುವ ಸಾಧ್ಯತೆಗಳು ಹೆಚ್ಚಿವೆ. ಹೊಸ ಆಯ್ಕೆಗಳು ಸರ್ಕಾರದ ನೀತಿಗಳು ಎಷ್ಟರಮಟ್ಟಿಗೆ ಜಾರಿಯಾಗಬಹುದು ಎಂಬ ಚಿತ್ರಣ ನೀಡುವುದರಿಂದ, ಜನರೂ ಸಹ ಆಡಳಿತದ ಯೋಜನೆಗಳನ್ನು ತಿಳಿಯುವ ಸಲುವಾಗಿ ಈ ನೇಮಕಾತಿಗಳತ್ತ ಹೆಚ್ಚಿನ ಗಮನ ನೀಡಲಿದ್ದಾರೆ. ಈ ಹುದ್ದೆಗಳಿಗೆ ಆಯ್ಕೆಯಾಗುವವರು ನೀಡುವ ಆರಂಭಿಕ ಹೇಳಿಕೆಗಳು ವಿವಿಧ ಸರ್ಕಾರಿ ಸಂಸ್ಥೆಗಳ ನೀತಿಗಳು ಮತ್ತು ಕಾನೂನು ಜಾರಿಯ ಯೋಜನೆಗಳ ಕುರಿತು ಸುಳಿವು ನೀಡಲಿವೆ.
ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶಿಯೆನ್ಸಿ (DOGE) ಮಾಹಿತಿ: ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ತನ್ನ ಡಿಪಾರ್ಟ್ಮೆಂಟ್ ಆಫ್ ಗವರ್ನಮೆಂಟ್ ಎಫಿಶಿಯೆನ್ಸಿ (ಸರ್ಕಾರದ ದಕ್ಷತೆ ಇಲಾಖೆ) ನೀಡುವ ಸಲಹೆಗಳನ್ನು ಪರಿಗಣಿಸುವ ಸಾಧ್ಯತೆಗಳಿವೆ. ಇದೊಂದು ಸಲಹಾ ಸಮಿತಿಯಾಗಿದ್ದು, ಸರ್ಕಾರದ ಹೊರಗಿನಿಂದ ಕಾರ್ಯಾಚರಿಸುತ್ತದೆ. ಎಲಾನ್ ಮಸ್ಕ್ ಮತ್ತು ವಿವೇಕ್ ರಾಮಸ್ವಾಮಿ ಅವರು ಇದರ ನೇತೃತ್ವ ವಹಿಸಿದ್ದಾರೆ. ಡಿಪಾರ್ಟ್‌ಮೆಂಟ್ ಆಫ್ ಗವರ್ನಮೆಂಟ್ ಎಫಿಶಿಯೆನ್ಸಿ (DOGE) ಟ್ರಂಪ್ ಆಡಳಿತದ ಆರಂಭದ ದಿನಗಳಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಸಾಧ್ಯತೆಗಳಿದ್ದು, ಸರ್ಕಾರದ ವೆಚ್ಚವನ್ನು ಕಡಿಮೆಗೊಳಿಸುವ, ನಿಯಂತ್ರಣಗಳನ್ನು ತಗ್ಗಿಸುವ, ಮತ್ತು ಫೆಡರಲ್ ಉದ್ಯೋಗಿ ಪಡೆಗಳನ್ನು ಉತ್ತಮಗೊಳಿಸುವ ಮತ್ತು ಅಸಮರ್ಥತೆಯನ್ನು ಸರಿಪಡಿಸುವ ಗುರಿ ಹೊಂದಿದೆ. ಇದರ ನಾಯಕರು ಫೆಡರಲ್ ಉದ್ಯೋಗಿಗಳ ಕಚೇರಿಯ ಹೊರಗಿದ್ದು ಕಾರ್ಯಾಚರಿಸುವುದನ್ನು ಮಿತಿಗೊಳಿಸುವ ನಿರ್ಧಾರಕ್ಕೆ ಬೆಂಬಲ ನೀಡುವ ಅಥವಾ ಒಂದಷ್ಟು ಫೆಡರಲ್ ಏಜೆನ್ಸಿಗಳ ಕಚೇರಿಗಳನ್ನು ಮರು ರೂಪಿಸುವ ಅಥವಾ ಮುಚ್ಚುವ ಸಾಧ್ಯತೆಗಳಿವೆ.
ಮುಂದಿನ ನಡೆ ಏನು?
ಡೊನಾಲ್ಡ್ ಟ್ರಂಪ್ ಅವರು ಎರಡನೇ ಅವಧಿಗೆ ಅಧಿಕಾರ ವಹಿಸಿಕೊಳ್ಳುತ್ತಿದ್ದು, ಅವರ ಉದ್ಯೋಗಿಗಳ ಆಯ್ಕೆ ಮತ್ತು ನೀತಿಗಳಲ್ಲಿನ ಬದಲಾವಣೆಗಳು ಅವರ ಆಡಳಿತದ ದಿಕ್ಕಿನ ಮೇಲೆ ಕ್ಷಿಪ್ರವಾಗಿ ಪ್ರಭಾವ ಬೀರುವ ಸಾಧ್ಯತೆಗಳಿವೆ. ಗಂಭೀರ ಆದೇಶಗಳಿಂದ ಸಂಭಾವ್ಯ ಕಾನೂನು ಸಮರಗಳ ತನಕ, ಉದ್ಯಮಗಳು ಮತ್ತು ಇತರರು ಬದಲಾಗುತ್ತಿರುವ ನಿಯಮಗಳು ಮತ್ತು ಆರ್ಥಿಕ ಪರಿಣಾಮಗಳ ಕುರಿತು ಜಾಗರೂಕತೆ ವಹಿಸುವ ಅಗತ್ಯವಿದೆ.
(ಈ ಲೇಖನದ ಬರಹಗಾರರು ಪ್ರಶಸ್ತಿ ಪುರಸ್ಕೃತ ವಿಜ್ಞಾನ ಬರಹಗಾರರು, ಮತ್ತು ರಕ್ಷಣೆ, ಏರೋಸ್ಪೇಸ್, ಮತ್ತು ರಾಜಕೀಯ ವಿಶ್ಲೇಷಕರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಅವರು ಜರ್ಮನಿಯ ಎಡಿಡಿ ಇಂಜಿನಿಯರಿಂಗ್ ಜಿಎಂಬಿಎಚ್ ಸಂಸ್ಥೆಯ ಅಂಗಸಂಸ್ಥೆಯಾದ ಎಡಿಡಿ ಇಂಜಿನಿಯರಿಂಗ್ ಕಾಂಪೊನೆಂಟ್ಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರಾಗಿದ್ದಾರೆ. ನೀವು ಗಿರೀಶ್ ಲಿಂಗಣ್ಣ ಅವರನ್ನು ಸಂಪರ್ಕಿಸಲು ಇಮೇಲ್ ವಿಳಾಸ: girishlinganna@gmail.com)
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ