ಮಾಲಿನ್ಯಕಾರಕ ಹಳೆಯ ವಾಹನಗಳಿಗೆ ಹಸಿರು ತೆರಿಗೆ!

By Suvarna NewsFirst Published Jan 26, 2021, 8:25 AM IST
Highlights

ಮಾಲಿನ್ಯಕಾರಕ ಹಳೆಯ ವಾಹನಗಳಿಗೆ ಹಸಿರು ತೆರಿಗೆ| ಹಳೆಯ ವಾಹನ ನಿಷೇಧಿಸಲು ಕೇಂದ್ರದಿಂದ ಪರೋಕ್ಷ ಕ್ರಮ| 8-15 ವರ್ಷ ಹಳೆಯ ವಾಹನಗಳಿಗೆ ಹೊಸ ತೆರಿಗೆ ಜಾರಿ

ನವದೆಹಲಿ(ಜ.26): ಪರಿಸರಕ್ಕೆ ಮಾರಕವಾದ ಹಳೆಯ ಖಾಸಗಿ ವಾಹನ ನಿಷೇಧಿಸುವ ನಿಟ್ಟಿನಲ್ಲಿ ಮೊದಲ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಇಂಥ ವಾಹನಗಳ ಮೇಲೆ ಹಸಿರು ತೆರಿಗೆ ವಿಧಿಸಲು ನಿರ್ಧರಿಸಿದೆ. ಈ ಕುರಿತು ರಾಜ್ಯಗಳ ಅಭಿಪ್ರಾಯ ಸಂಗ್ರಹಿಸಿ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ, ಹೆದ್ದಾರಿ ಸಚಿವಾಲಯ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ಇಂಥ ಯೋಜನೆ ಜಾರಿಯಿಂದಾಗಿ ಜನರು ಪರಿಸರಕ್ಕೆ ಮಾರಕವಾದ ಹಳೆಯ ವಾಹನಗಳ ಬಳಕೆ ಕಡಿಮೆ ಮಾಡುತ್ತಾರೆ. ಜೊತೆಗೆ ಹೊಸ ವಾಹನ ಖರೀದಿಗೆ ಒಲವು ತೋರುತ್ತಾರೆ ಎಂದು ಸರ್ಕಾರ ಭರವಸೆ ವ್ಯಕ್ತಪಡಿಸಿದೆ.

ಯಾವ ವಾಹನಕ್ಕೆ ಎಷ್ಟು ತೆರಿಗೆ?:

- 8 ವರ್ಷದಷ್ಟುಹಳೆಯ ಸಾರಿಗೆ ವಾಹನಗಳಿಗೆ ಫಿಟ್‌ನೆಸ್‌ ವರದಿ ನವೀಕರಣದ ಸಂದರ್ಭದಲ್ಲಿ ರಸ್ತೆ ತೆರಿಗೆಯ ಶೇ.10-25ರವರೆಗೆ ತೆರಿಗೆ.

- ಖಾಸಗಿ ವಾಹನಗಳಿಗೆ, 15 ವರ್ಷಗಳ ಬಳಿಕ ನೋಂದಣಿ ಪ್ರಮಾಣಪತ್ರ ನವೀಕರಣದ ವೇಳೆ ಹಸಿರು ತೆರಿಗೆ ಜಾರಿ.

- ಬಸ್‌ ಸೇರಿ ಸಾರ್ವಜನಿಕ ಸಾರಿಗೆಯ ವಾಹನಗಳಿಗೆ ಕಡಿಮೆ ತೆರಿಗೆ. ಬಳಸುವ ಇಂಧನ (ಪೆಟ್ರೋಲ್‌/ ಡೀಸೆಲ್‌), ವಾಹನದ ಮಾದರಿ ಆಧರಿಸಿ ತೆರಿಗೆ ಪ್ರಮಾಣ ನಿರ್ಧಾರ.

- ಹೆಚ್ಚಿನ ಪರಿಸರ ಮಾಲಿನ್ಯ ಇರುವ ನಗರಗಳಲ್ಲಿ ನೋಂದಣಿಯಾಗುವ ವಾಹನಗಳಿಗೆ, ರಸ್ತೆ ತೆರಿಗೆಯ ಶೇ.50ರವರೆಗೂ ತೆರಿಗೆ.

- ಹೈಬ್ರಿಡ್‌ ವಾಹನಗಳು, ಎಲೆಕ್ಟ್ರಿಕ್‌ ವಾಹನ, ಸಿಎನ್‌ಜಿ, ಎಥೆನಾಲ್‌, ಎಲ್‌ಪಿಜಿ, ಕೃಷಿಗೆ ಬಳಸುವ ವಾಹನಗಳಾದ ಟ್ರ್ಯಾಕ್ಟರ್‌, ಹಾರ್ವೆಸ್ಟರ್‌, ಟಿಲ್ಲರ್‌ಗಳಿಗೆ ಇಂಥ ತೆರಿಗೆಯಿಂದ ವಿನಾಯಿತಿ.

- ಹಸಿರು ತೆರಿಗೆಯಿಂದ ಸಂಗ್ರಹವಾಗುವ ಹಣವನ್ನು ಪ್ರತ್ಯೇಕವಾಗಿ ಇರಿಸಿ, ಪರಿಸರ ಮಾಲಿನ್ಯ ತಡೆಯುವ ಕ್ರಮಗಳಿಗೆ ಬಳಸಲಾಗುವುದು.

click me!