ಮುಂಬೈನ ನೇವಿ ಹಾಸ್ಟೆಲ್‌ನಲ್ಲಿ ಟ್ರೇನಿ ಅಗ್ನಿವೀರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಹಾಸ್ಟೆಲ್‌ನ ಬೆಡ್‌ಶೀಟ್‌ನಿಂದಲೇ ನೇಣುಬಿಗಿದುಕೊಂಡಿದ್ದಾರೆ. ರಿಲೇಷನ್‌ಷಿಪ್ ಬ್ರೇಕಪ್ ಆಗಿದ್ದರಿಂದ ಆಕೆ ಖಿನ್ನತೆಗೆ ಒಳಗಾಗಿದ್ದರು ಎಂದು ಹೇಳಲಾಗಿದೆ.
ಮುಂಬೈ (ನ.28): ಭಾರತೀಯ ನೌಕಾಪಡೆಗೆ ಅಗ್ನಿವೀರ್ ತರಬೇತಿ ಪಡೆಯುತ್ತಿದ್ದ ಮಹಿಳೆಯೊಬ್ಬರು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ 20 ವರ್ಷದ ಟ್ರೈನಿ ಅಗ್ನಿವೀರ್ ಐಎನ್‌ಎಸ್ ಹಮ್ಲಾದಲ್ಲಿರುವ ನೌಕಾಪಡೆಯ ಹಾಸ್ಟೆಲ್‌ನಲ್ಲಿ ವಾಸಿಸುತ್ತಿದ್ದರು. ನವೆಂಬರ್ 27 ಸೋಮವಾರದಂದು ಮಹಿಳೆಯ ಶವ ಆಕೆಯ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮಂಗಳವಾರ (ನವೆಂಬರ್ 28) ಘಟನೆಯ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಟ್ರೈನಿ ಅಗ್ನಿವೀರ್ ಮಹಿಳೆ ಕೇರಳದ ನಿವಾಸಿ ಅಪರ್ಣಾ ನಾಯರ್ ಮತ್ತು ಕಳೆದ 15 ದಿನಗಳಿಂದ ತರಬೇತಿ ಪಡೆಯುತ್ತಿದ್ದರು. ಮಹಿಳೆಯ ಕೊಠಡಿಯಿಂದ ಪೊಲೀಸರಿಗೆ ಯಾವುದೇ ಆತ್ಮಹತ್ಯೆ ಪತ್ರ ಸಿಕ್ಕಿಲ್ಲ. ಅಗ್ನಿವೀರ್ ಎನ್ನುವುದು 2022 ರಲ್ಲಿ ಪ್ರಾರಂಭಿಸಲಾದ ಅಗ್ನಿಪಥ್ ಯೋಜನೆಯಡಿ ಸಶಸ್ತ್ರ ಪಡೆಗಳಿಂದ ನೇಮಕಗೊಂಡ ಸೈನಿಕರಾಗಿದ್ದಾರೆ.
ನೌಕಾಪಡೆ ಅಧಿಕೃತ ಹೇಳಿಕೆಯಲ್ಲಿ ಅಪರ್ಣಾ ಬೆಡ್‌ಶೀಟ್ ಅನ್ನು ನೇಣು ಬಿಗಿದುಕೊಳ್ಳಲು ಬಳಸಿದ್ದರು ಎಂದು ಹೇಳಿದ್ದಾರೆ. ಇದನ್ನು ಆಕೆಯ ರೂಮ್‌ಮೇಟ್ ಮೊದಲು ನೋಡಿ ಪೊಲೀಸರಿಗೆ ಮಾಹಿತಿ ನೀಡಿದರು. ಬೋರಿವಲಿಯಲ್ಲಿ ಮೃತಪಟ್ಟ ಟ್ರೇನಿ ಅಗ್ನಿವೀರ್ ಅಪರ್ಣಾ ಅವರ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಅಪರ್ಣಾ ಕೇರಳದ ಪತ್ತನಂತಿಟ್ಟದ ರೈತ ಕುಟುಂಬದವರಾಗಿದ್ದಾರೆ. ಇದಕ್ಕೂ ಮುನ್ನ ಒಡಿಶಾದಲ್ಲಿ 6 ತಿಂಗಳು ತರಬೇತಿ ಪಡೆಯುತ್ತಿದ್ದರು. ಕಳೆದ ತಿಂಗಳಷ್ಟೇ ಮುಂಬೈಗೆ ಬಂದಿದ್ದರು ಆಕೆಯ ವೈಯಕ್ತಿಕ ಸಂಬಂಧದಲ್ಲಿ ಬ್ರೇಕಪ್ ಆದ ಕಾರಣದಿಂದಾಗಿ ಅವರು ಖಿನ್ನತೆಗೆ ಒಳಗಾಗಿದ್ದಾರೆಯೇ ಎಂದು ಕಂಡುಹಿಡಿಯಲು ಪೊಲೀಸರು ಆಕೆಯ ಕರೆ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಮೃತ ಮಹಿಳೆಯ ಮೂಲಭೂತ ತರಬೇತಿ ಪೂರ್ಣಗೊಂಡಿದೆ. ಮತ್ತು ಅವರು ಮಲಾಡ್‌ನ ಮಾಲ್ವಾನಿ ಪ್ರದೇಶದ ಐಎನ್‌ಎಸ್ ಹಮ್ಲಾದಲ್ಲಿ 15 ದಿನಗಳ ಕಾಲ ಸುಧಾರಿತ ತರಬೇತಿ ಪಡೆಯುತ್ತಿದ್ದರು. ವೈಯಕ್ತಿಕ ಕಾರಣಕ್ಕಾಗಿ ಮಹಿಳೆ ನಿರ್ಧಾರ ಮಾಡಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಪೊಲೀಸರು ಆಕಸ್ಮಿಕ ಸಾವಿನ ವರದಿ (ಎಡಿಆರ್) ದಾಖಲಿಸಿಕೊಂಡಿದ್ದಾರೆ.
ಮುಂಬೈಗೂ ಮುನ್ನ ಪಂಜಾಬ್‌ನ ಮಾನಸಾ ಜಿಲ್ಲೆಯ ಅಗ್ನಿವೀರ್ ಅಮೃತಪಾಲ್ ಸಿಂಗ್ ಅವರು ಜಮ್ಮು ಮತ್ತು ಕಾಶ್ಮೀರದ ರಾಜೌರಿ ಸೆಕ್ಟರ್‌ನಲ್ಲಿ ಸೆಂಟ್ರಿ ಡ್ಯೂಟಿಯಲ್ಲಿದ್ದಾಗ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆದರೆ, ಅಮೃತಪಾಲ್ ನಿಧನಕ್ಕೆ ಸೇನಾ ಗೌರವದೊಂದಿಗೆ ಅಂತಿಮ ವಿದಾಯ ನೀಡದಿರುವುದು ವಿವಾದಕ್ಕೆ ಕಾರಣವಾಗಿತ್ತು. ಇದಾದ ಬಳಿಕ ಸೇನೆಯು ಸ್ವಯಂ ಪ್ರೇರಿತ ಗಾಯಗಳಿಂದ ಸಾವಿಗೀಡಾದವರಿಗೆ ಅಂತಹ ಗೌರವ ನೀಡುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಅಗ್ನಿಪಥ್ ಯೋಜನೆಗೆ ಮೊದಲು ಅಥವಾ ನಂತರ ಸೇನೆಗೆ ಸೇರಿದ್ದಾರೆಯೇ ಎಂಬ ಆಧಾರದ ಮೇಲೆ ಸೈನಿಕರಲ್ಲಿ ತಾರತಮ್ಯ ಮಾಡುವುದಿಲ್ಲ ಎಂದು ಸೇನೆ ಒತ್ತಿ ಹೇಳಿತ್ತು.
ನೀವು ವೀರ್ ಆಗಿರಬಹುದು, ಅಗ್ನಿವೀರ್ ಅಲ್ಲ, ವಿಚಾರಣೆ ವೇಳೆ ವಕೀಲರಿಗೆ ಹೇಳಿದ ಸುಪ್ರೀಂ ಕೋರ್ಟ್!
ಹೆಚ್ಚುವರಿಯಾಗಿ, ಮಹಾರಾಷ್ಟ್ರದ ಬುಲ್ಧಾನ ಜಿಲ್ಲೆಯ ನಿವಾಸಿ ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗವಟೆ ಅವರು ಕಳೆದ ತಿಂಗಳು ಸಿಯಾಚಿನ್‌ನಲ್ಲಿ ಕರ್ತವ್ಯದ ಸಾಲಿನಲ್ಲಿ ನಿಧನರಾದರು. ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಕುಟುಂಬಕ್ಕೆ 10 ಲಕ್ಷ ರೂಪಾಯಿ ನೆರವು ಘೋಷಿಸಿದ್ದರು.
ಜಾತಿ, ಧರ್ಮದ ಪ್ರಮಾಣಪತ್ರ ಹಿಂದೆಯೂ ಕೇಳಿದ್ದೆವು, ಅಗ್ನಿಪಥ್ ಬಗ್ಗೆ ಸೇನೆಯ ಸ್ಪಷ್ಟನೆ!