
ವಾಷಿಂಗ್ಟನ್/ನವದೆಹಲಿ: ಭಾರತ ಮತ್ತು ಅಮೆರಿಕ ನಡುವಿನ ಬಹುನಿರೀಕ್ಷಿತ ಮಧ್ಯಂತರ ವ್ಯಾಪಾರ ಒಪ್ಪಂದದ ಅಂತಿಮ ಸ್ವರೂಪ (ಫ್ರೇಮ್ ವರ್ಕ್) ವನ್ನು ಶನಿವಾರ ಬಿಡುಗಡೆ ಮಾಡಲಾಗಿದೆ. ಅದರಂತೆ ಭಾರತದಿಂದ ಆಮದಾಗುವ ವಸ್ತುಗಳ ಮೇಲೆ ಸದ್ಯ ವಿಧಿಸಲಾಗುತ್ತಿರುವ ಶೇ.50ರಷ್ಟು ತೆರಿಗೆಯನ್ನು ಅಮೆರಿಕವು ಶೇ.18ಕ್ಕಿಳಿಸಿದರೆ, ಅಮೆರಿಕದ ಆಹಾರ, ಯಂತ್ರೋಪಕರಣಗಳು, ಕೃಷಿ ಉತ್ಪನ್ನಗಳು ಸೇರಿ ಹಲವು ಉತ್ಪನ್ನಗಳ ಆಮದಿನ ಮೇಲಿನ ತೆರಿಗೆಯನ್ನು ಭಾರತವು ಸಂಪೂರ್ಣ ಕಡಿತ ಅಥವಾ ಕಡಿಮೆ ಮಾಡಲಿದೆ. ಜೊತೆಗೆ ಕೆಲವೊಂದು ಡೈರಿ ಮತ್ತು ಕೃಷಿ ವಲಯದ ಉತ್ಪನ್ನ ಹೊರತುಪಡಿಸಿದರೆ, ದೇಶದ ಕೃಷಿ ಮತ್ತು ಡೈರಿ ವಲಯವನ್ನು ಅಮೆರಿಕ ವಸ್ತುಗಳ ಪ್ರವೇಶದಿಂದ ದೂರವೇ ಇಡಲಾಗಿದೆ. ಈ ಮೂಲಕ ದೇಶದ ರೈತರ ಹಿತ ಕಾಯಲಾಗಿದೆ,
ಈ ಒಪ್ಪಂದದ ಪರಿಣಾಮ ಭಾರತಕ್ಕೆ 30 ಲಕ್ಷ ಕೋಟಿ ಡಾಲರ್ ಮೌಲ್ಯದ (2700 ಲಕ್ಷ ಕೋಟಿ ರು.) ಅಮೆರಿಕ ಮಾರುಕಟ್ಟೆ ತೆರೆದುಕೊಂಡರೆ, ಅಮೆರಿಕದಿಂದ ಭಾರತವು 45 ಲಕ್ಷ ಕೋಟಿ ರು.ಮೌಲ್ಯದ ವಸ್ತುಗಳನ್ನು ಖರೀದಿಸುವ ಭರವಸೆ ನೀಡಿದೆ. ಭಾರತದ ಕೃಷಿ ಕ್ಷೇತ್ರವನ್ನು ಈ ಒಪ್ಪಂದದಿಂದ ಹೊರಗಿಟ್ಟು ಈ ಒಪ್ಪಂದ ಮಾಡಿಕೊಳ್ಳಲಾಗಿದೆ. ಭಾರತದ ವಸ್ತುಗಳ ಮೇಲಿನ ತೆರಿಗೆ ಕಡಿತ ಫೆ.7ರಿಂದಲೇ ಅನುಷ್ಠಾನಕ್ಕೆ ಬರುವಂತೆ ಅಮೆರಿಕದ ಅಧ್ಯಕ್ಷರ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.
ಈ ಒಪ್ಪಂದದ ಭಾಗವಾಗಿ ಭಾರತವು ಮುಂದಿನ ಐದು ವರ್ಷಗಳಲ್ಲಿ 45 ಲಕ್ಷ ಕೋಟಿ ರು. ಮೌಲ್ಯದ ಇಂಧನ ಉತ್ಪನ್ನಗಳು, ವಿಮಾನ, ಬೆಲೆಬಾಳುವ ಲೋಹಗಳು, ತಂತ್ರಜ್ಞಾನ ಉತ್ಪನ್ನಗಳು ಮತ್ತು ಕಲ್ಲಿದ್ದಲನ್ನು ಅಮೆರಿಕದಿಂದ ಖರೀದಿ ಮಾಡುವ ಭರವಸೆ ನೀಡಿದೆ. ಒಪ್ಪಂದದಿಂದಾಗಿ ಭಾರತದ ಬಹುತೇಕ ವಸ್ತುಗಳ ಆಮದಿನ ಮೇಲಿನ ತೆರಿಗೆಯು ಶೇ.18ಕ್ಕಿಳಿದರೆ, ತೆಂಗಿನೆಣ್ಣೆ, ಕಾಫಿ, ಟೀ, ಮಾವು, ಅಡಕೆ, ಕೆಲ ವಜ್ರ, ಹವಳಗಳು ಸೇರಿದಂತೆ ಕೆಲ ವಸ್ತುಗಳ ಮೇಲಿನ ತೆರಿಗೆಯನ್ನು ಅಮೆರಿಕವು ಶೂನ್ಯಕ್ಕಿಳಿಸಲಿದೆ.ಒಪ್ಪಂದ ಕುರಿತು ಸಂತಸ ವ್ಯಕ್ತಪಡಿಸಿರುವ ಪ್ರಧಾನಿ ಮೋದಿ, ಮಧ್ಯಂತರ ತೆರಿಗೆ ಒಪ್ಪಂದ ಮೇಕ್ ಇನ್ ಇಂಡಿಯಾವನ್ನು ಬಲಪಡಿಸಲಿದೆ. ರೈತರು ಮತ್ತು ಉದ್ದಿಮೆದಾರರಿಗೆ ಹೊಸ ಅವಕಾಶಗಳ ಬಾಗಿಲು ತೆರೆದರೆ, ಮಹಿಳೆಯರು ಮತ್ತು ಯುವಜನರಿಗೆ ಹೆಚ್ಚಿನ ಉದ್ಯೋಗ ಸೃಷ್ಟಿಸಲಿದೆ ಎಂದಿದ್ದಾರೆ.ಇದೇ ವೇಳೆ ಇದೊಂದು ನ್ಯಾಯಸಮ್ಮತ, ಸಮಾನ ಮತ್ತು ಸಮತೋಲಿತ ವ್ಯಾಪಾರ ಒಪ್ಪಂದವಾಗಿದೆ ಎಂದು ಹೇಳಿಕೊಂಡಿರುವ ವಾಣಿಜ್ಯ ಸಚಿವ ಪಿಯೂಷ್ ಗೊಯಲ್, ಇದರಿಂದಾಗಿ ಭಾರತಕ್ಕೆ 30 ಲಕ್ಷ ಕೋಟಿ ಡಾಲರ್ ಮೌಲ್ಯದ ಮಾರುಕಟ್ಟೆ ತೆರೆದುಕೊಳ್ಳಲಿದೆ. ಅದರಲ್ಲೂ ವಿಶೇಷವಾಗಿ ಎಂಎಸ್‌ಎಇಗಳು, ರೈತರು, ಮೀನುಗಾರರಿಗೆ ಭಾರತದ ವಸ್ತುಗಳ ಮೇಲಿನ ತೆರಿಗೆ ಇಳಿಕೆಯಿಂದ ಅನುಕೂಲವಾಗಲಿದೆ ಎಂದು ತಿಳಿಸಿದರು.
ಈ ಮೊದಲ ಹಂತದ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಸಂಬಂಧ ಭಾರತ-ಅಮೆರಿಕ ನಡುವೆ ಕಳೆದ ವರ್ಷದ ಫೆಬ್ರವರಿಯಿಂದ ಅಧಿಕೃತವಾಗಿ ಮಾತುಕತೆ ಆರಂಭವಾಗಿತ್ತು. ಇದೀಗ ಸಿದ್ಧಗೊಂಡಿರುವ ಈ ಒಪ್ಪಂದದ ಸ್ವರೂಪವನ್ನು ಕಾನೂನು ರೂಪ ನೀಡುವ ಕೆಲಸ ನಡೆಯುತ್ತಿದೆ. ಮಾರ್ಚ್ ಮಧ್ಯಂತರದ ವೇಳೆಗೆ ಈ ಒಪ್ಪಂದಕ್ಕೆ ಸಹಿಬೀಳುವ ನಿರೀಕ್ಷೆ ಇದೆ. ಒಪ್ಪಂದಕ್ಕೆ ಸಹಿ ಬಿದ್ದ ಬೆನ್ನಲ್ಲೇ ಅಮೆರಿಕದ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಭಾರತ ಕಡಿತಗೊಳಿಸಲಿದೆ.
ಕೃಷಿ, ಡೇರಿಯಂಥ ಸೂಕ್ಷ್ಮ ವಲಯ ಹೊರಕ್ಕೆ:ಭಾರತೀಯ ರೈತರನ್ನು ಈ ಒಪ್ಪಂದದಿಂದ ರಕ್ಷಿಸಲು ಕೃಷಿ ಮತ್ತು ಡೈರಿ ಉತ್ಪನ್ನಗಳ ಕ್ಷೇತ್ರವನ್ನು ಈ ಒಪ್ಪಂದದಿಂದ ಹೊರಗಿಡಲಾಗಿದೆ. ಗೋಧಿ, ಅಕ್ಕಿ, ಸೋಯಾ, ಫೌಲ್ಟ್ರಿ, ಹಾಲು, ಬೆಣ್ಣೆ, ಎಥೆನಾಲ್, ತಂಬಾಕು, ಕೆಲ ತರಕಾರಿಗಳು, ಮೆಕ್ಕೆಜೋಳ, ಮಾಂಸ ಮತ್ತಿತರ ಉತ್ಪನ್ನಗಳಿಗೆ ಒಪ್ಪಂದದಿಂದ ರಕ್ಷಣೆ ನೀಡಲಾಗಿದೆ ಎಂದು ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ