
ನವದೆಹಲಿ: ರಿಮೋಟ್ ಕಂಟ್ರೋಲ್ಡ್ ಆಟಿಕೆ ಕಾರು ಬಳಸಿ ಸ್ಪೋಟಕ್ಕೆ ಸಂಚು ರೂಪಿಸುತ್ತಿದ್ದ ಮಹಾರಾಷ್ಟ್ರ, ಓಡಿಶಾ ಮತ್ತು ಬಿಹಾರ ಮೂಲದ 4 ಮೂಲಭೂತವಾದಿಗಳನ್ನು ದೆಹಲಿ ಪೊಲೀಸರು ಬಂಧಿಸಿದ್ದು, ಭಾರೀ ಉಗ್ರ ದಾಳಿಯೊಂದನ್ನು ತಪ್ಪಿಸಿದ್ದಾರೆ.
ಉತ್ತರಪ್ರದೇಶದ ಮೊಸೈಬ್ ಅಹ್ಮದ್, ಮಹಾರಾಷ್ಟ್ರದ ಮೊಹಮ್ಮದ್ ಹಮ್ಮಾದ್, ಬಿಹಾರದ ಮೊಹಮ್ಮದ್ ಸೊಹೈಲ್ ಮತ್ತು ಭುವನೇಶ್ವರದ ಶೇಖ್ ಇಮ್ರಾನ್ ಬಂಧಿತರು. ಆರೋಪಿಗಳು ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿದ್ದಲ್ಲದೆ, ಎನ್‌ಸ್ಕ್ರಿಪ್ಟೆಡ್ ಜಾಲತಾಣಗಳಲ್ಲಿ ಭಯೋತ್ಪಾದನಾ ಕಾರ್ಯಕ್ಕಾಗಿ ನೇಮಕಾತಿ ನಡೆಸಲೂ ಯತ್ನಿಸುತ್ತಿದ್ದರು. ಇಬ್ಬರು ಬಂಧಿತರು ಜನನಿಬಿಡ ಪ್ರದೇಶದಲ್ಲಿ ಸ್ಫೋಟಿಸಲು ಐಇಡಿ ಇರಿಸಿದ ರಿಮೋಟ್ ಕಂಟ್ರೋಲ್ ಆಟಿಕೆ ಕಾರು ಜೋಡಿಸುವ ಪ್ರಯತ್ನದಲ್ಲಿದಾಗಲೇ ಪೊಲೀಸರ ಅತಿಥಿಯಾಗಿದ್ದಾರೆ. ಐಇಡಿ, ಇತರೆ ಸ್ಫೋಟಕ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಗುಪ್ತಚರ ದಳದಿಂದ ಮಾಹಿತಿ: ಗುಪ್ತಚರ ದಳದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಮಹಾರಾಷ್ಟ್ರದಲ್ಲಿ ಇಬ್ಬರು ಮತ್ತು ಒಡಿಶಾ, ಬಿಹಾರದಲ್ಲಿ ತಲಾ ಒಬ್ಬರನ್ನು ಬಂಧಿಸಿದ್ದಾರೆ. ಇವರು ದೇಶದಲ್ಲಿ ಖಲೀಫತ್ ಹಾಗೂ ಘಾಝಾ-ಎ-ಹಿಂದ್ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಲಷ್ಕರ್ ಖುರಾಸಾನ್ ನಿಂದ ಪ್ರೇರೇಪಿತರಾಗಿ ಕಪ್ಪು ಧ್ವಜವನ್ನು ತಮ್ಮ ಜತೆಗೇ ಇಟ್ಟುಕೊಳ್ಳುತ್ತಿದ್ದರು.
ಬಂಧಿತರಲ್ಲಿ ಒಬ್ಬಾತ ಕಳೆದ ಡಿಸೆಂಬರ್ ನಲ್ಲಿ ದೆಹಲಿಗೆ ಭೇಟಿ ನೀಡಿದ್ದು ಕೆಂಪುಕೋಟೆ, ಇಂಡಿಯಾ ಗೇಟ್ ಸೇರಿ ಸೂಕ್ಷ್ಮ ಪ್ರದೇಶಗಳ ಪರಿಶೀಲನೆ ನಡೆಸಿದ್ದ. ರಾಮಮಂದಿರ, ಸಂಸತ್ ಹಾಗೂ ಪ್ರಮುಖ ಸೇನಾ ನೆಲೆಗಳ ಮೇಲೆ ದಾಳಿ ನಡೆಸುವ ಕುರಿತೂ ಚರ್ಚೆ ನಡೆಸಿದ್ದ. ಎಂದು ಪೊಲೀಸರು ಹೇಳಿಕೊಂಡಿದ್ದಾರೆ.
ಗಲ್ಫ್‌ನಲ್ಲಿದ್ದ ಮೊಸೈಬ್
ಬಂಧಿತರಲ್ಲೊಬ್ಬನಾದ ಮೊಸೈಬ್ ಅಹಮದ್ ಉತ್ತರ ಪ್ರದೇಶ ಮೂಲದವನಾಗಿದ್ದು, ಈ ಹಿಂದೆ ಗಲ್ಫ್ ರಾಷ್ಟ್ರಗಳಲ್ಲಿ ಆಟೋ ಎಲೆಕ್ಟ್ರಿಷಿಯನ್ ಆಗಿ ಕಾರ್ಯನಿರ್ವಹಿಸಿದ್ದ. ಈತ ಐಇಡಿ ಜೋಡಿಸಿದ ರಿಮೋಟ್ ಕಂಟ್ರೋಲ್ಡ್ ಕಾರುಗಳನ್ನು ವಿನ್ಯಾಸಗೊಳಿಸಲು ತನ್ನ ತಾಂತ್ರಿಕ ಕೌಶಲ್ಯ ಬಳಸಿದ್ದ. ಇನ್ನು ಶೇಖ್ ಇಮ್ರಾನ್ ಭುವನೇಶ್ವರ ಮೂಲದವನಾಗಿದ್ದು ಸೆಕ್ಯುರಿಟಿ ಗಾರ್ಡ್, ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಝಾಕಿರ್ ನಾಯ್ಕ ಮತ್ತಿತರರ ಭಾಷಣಗಳಿಂದ ಪ್ರಭಾವಿತನಾಗಿ ಮೂಲಭೂತವಾದದತ್ತ ಸೆಳೆಯಲ್ಪಟ್ಟಿದ್ದ. 2025ರಲ್ಲಿ ಕೆಂಪುಕೋಟೆಗೆ ಭೇಟಿ ನೀಡಿದ್ದ ಈತ ಇತರರಿಗೆ ಒಡಿಶಾದಲ್ಲಿ ಶಸ್ತ್ರಾಸ್ತ್ರ ತರಬೇತಿ ಮತ್ತು ದೈಹಿಕ ತರಬೇತಿಗೆ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಅಪ್ಪನ ಪರ ಭಾವನಾತ್ಮಕ ಬರಹ ಬರೆದುಕೊಂಡ ವಿನಯ್ ಕುಲಕರ್ಣಿ ಪುತ್ರಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ