ಎಲ್‌ಪಿಜಿ ಪೂರೈಕೆ ವ್ಯತ್ಯಯ ಆಗದಂತೆ ಕಠಿಣ ಕಾಯ್ದೆ

Kannadaprabha News   | Kannada Prabha
Published : Mar 11, 2026, 03:10 AM IST
LPG Cylinder

ಸಾರಾಂಶ

ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲಕ್ಕೆ ಹಾಹಾಕಾರ ಎದ್ದಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಂಗಳವಾರ ಇ.ಸಿ. ಕಾಯ್ದೆ (ಅಗತ್ಯ ವಸ್ತುಗಳ ಕಾಯ್ದೆ) ಜಾರಿ ಮಾಡಿದೆ.

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ನೈಸರ್ಗಿಕ ಅನಿಲಕ್ಕೆ ಹಾಹಾಕಾರ ಎದ್ದಿರುವ ಹಿನ್ನೆಲೆಯಲ್ಲಿ ದೇಶದಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಂಗಳವಾರ ಇ.ಸಿ. ಕಾಯ್ದೆ (ಅಗತ್ಯ ವಸ್ತುಗಳ ಕಾಯ್ದೆ) ಜಾರಿ ಮಾಡಿದೆ.

ಅದರಂತೆ, ‘ಎಲ್ಲಾ ರಿಫೈನರಿಗಳು ಹಾಗೂ ಪೆಟ್ರೋಕೆಮಿಕಲ್‌ ಘಟಕಗಳು ಎಲ್‌ಪಿಜಿ ಉತ್ಪಾದನೆ ಹೆಚ್ಚಿಸಬೇಕು ಹಾಗೂ ಹೈಡ್ರೋಕಾಬ್ರನ್‌ ಗ್ಯಾಸ್‌ ಅನ್ನು ಎಲ್‌ಪಿಜಿ ತಯಾರಿಸುವ ಉದ್ದೇಶಕ್ಕೆ ಬಳಸಬೇಕು’ ಎಂದು ಕೇಂದ್ರ ಸರ್ಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಈ ಮೂಲಕ ಎಲ್‌ಪಿಜಿ, ಪಿಎನ್‌ಜಿ, ಸಿಎನ್‌ಜಿ ಗ್ಯಾಸ್‌ಗಳ ಪೂರೈಕೆಯಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಲು ಮುಂದಾಗಿದೆ.

ಗೃಹ ಬಳಕೆಗೆ ಆದ್ಯತೆ:

ಕೇಂದ್ರ ಸರ್ಕಾರ ಹೊರಡಿಸಿರುವ ಆದೇಶ ಪ್ರಕಾರ, ನೈಸರ್ಗಿಕ ಅನಿಲವನ್ನು ಕೆಲ ಕ್ಷೇತ್ರಗಳಿಗೆ ಆದ್ಯತೆ ಮೇಲೆ ಹಂಚಬೇಕು. ಲಭ್ಯತೆ ಆಧಾರದ ಮೇಲೆ ಕಳೆದ 6 ತಿಂಗಳ ಬಳಕೆಯ ಸರಾಸರಿಯ ಶೇ.100ರಷ್ಟು ಪೂರೈಕೆ ಖಾತರಿಪಡಿಸಬೇಕು. ದೇಶೀಯವಾಗಿ ಪೈಪ್‌ ಮೂಲಕ ಪೂರೈಕೆಯಾಗುವ ನೈಸರ್ಗಿಕ ಅನಿಲ, ವಾಹನಗಳಿಗೆ ಬಳಸುವ ಕಂಪ್ರೆಸ್ಡ್‌ ನೈಸರ್ಗಿಕ ಅನಿಲಗಳು ಈ ಆದ್ಯತೆಯ ಕ್ಷೇತ್ರಗಳಾಗಿವೆ.

ಅದೇ ರೀತಿ, ಗೊಬ್ಬರ ಉತ್ಪಾದನಾ ಘಟಕಗಳಿಗೆ ಲಭ್ಯತೆ ಆಧಾರದ ಮೇರೆಗೆ ಕಳೆದ 6 ತಿಂಗಳ ಬಳಕೆಯ ಸರಾಸರಿಯ ಶೇ.70ರಷ್ಟು ಹಾಗೂ ಟೀ ಪ್ಲ್ಯಾಂಟ್‌ಗಳು, ಉತ್ಪಾದನೆ ಹಾಗೂ ಕೈಗಾರಿಕಾ ಬಳಕೆದಾರರಿಗೆ ರಾಷ್ಟ್ರೀಯ ಗ್ರಿಡ್‌ ಮೂಲಕ ಪೂರೈಕೆಯಾಗುವ ಇಂಧನದ ಶೇ.80ರಷ್ಟು ಪೂರೈಕೆ ಖಚಿತಪಡಿಸಬೇಕು ಎಂದು ಸೂಚಿಸಿದೆ.

ಇನ್ನು ಎಲ್ಲ ಸಿಟಿ ಗ್ಯಾಸ್‌ ವಿತರಣೆ ಕಂಪನಿಗಳು ತಮ್ಮ ನೆಟ್‌ವರ್ಕ್ ಮೂಲಕ ವಾಣಿಜ್ಯ ಮತ್ತು ಕೈಗಾರಿಕಾ ಬಳಕೆದಾರರಿಗೆ ಶೇ.80ರಷ್ಟು ಗ್ಯಾಸ್‌ ಪೂರೈಕೆಯನ್ನು ಲಭ್ಯತೆ ಆಧಾರದ ಮೇಲೆ ಖಚಿತಪಡಿಸಬೇಕು ಎಂದು ಹೇಳಿದೆ.

ಬಳಕೆಗೆ ಮಿತಿಹಾಕಿದ ಸರ್ಕಾರ:

ತೈಲ ಸಂಸ್ಕರಣಾ ಕಂಪನಿಗಳು ಒಂದಷ್ಟು ಎಲ್‌ಪಿಜಿಯನ್ನು ವಿದ್ಯುತ್‌ ಉತ್ಪಾದನೆ ಸೇರಿ ಬೇರೆ ಬೇರೆ ಉದ್ದೇಶಗಳಿಗೆ ಸ್ವಂತಕ್ಕಾಗಿ ಬಳಸುತ್ತವೆ. ಈ ರೀತಿ ಎಲ್‌ಪಿಜಿ ಬಳಕೆಯ ಪ್ರಮಾಣದ ಮೇಲೂ ಕೇಂದ್ರ ಇದೀಗ ಮಿತಿ ಹೇರಿದೆ. ಈ ಬಳಕೆಯನ್ನು 6 ತಿಂಗಳ ಬೇಡಿಕೆಯ ಸರಾಸರಿಯ ಶೇ.65ರಷ್ಟಕ್ಕಿಳಿಸಲು ಆದೇಶ ಹೊರಡಿಸಿದೆ.

ಸಂಗ್ರಹ, ಪೂರೈಕೆಯ ಮಾಹಿತಿ ಕೊಡಿ:

ಎಲ್‌ಎನ್‌ಜಿ ಮತ್ತು ಆರ್‌ಎಲ್‌ಎನ್‌ಜಿ ಸೇರಿ ನೈಸರ್ಗಿಕ ಅನಿಲದ ಎಲ್ಲ ಉತ್ಪಾದಕರು, ಆಮದುದಾರರು, ಪೂರೈಕೆದಾರರು ಮತ್ತು ಮಾರುಕಟ್ಟೆದಾರರು, ವಿತರಕರಿಗೂ ಉತ್ಪಾದನೆ, ಆಮದು, ಶೇಖರಣೆ, ಪೂರೈಕೆ, ಹಂಚಿಕೆ ಮತ್ತು ಬಳಕೆ ಕುರಿತು ಮಾಹಿತಿ ನೀಡುವಂತೆ ನಿರ್ದೇಶನ ನೀಡಲಾಗಿದೆ.

ಹೋಟೆಲ್‌ ಎಲ್‌ಪಿಜಿ ಸಮಸ್ಯೆ ಇತ್ಯರ್ಥಕ್ಕೆ 3 ಸದಸ್ಯರ ತಂಡ

ನವೆಹಹಲಿ: ಯುದ್ಧದ ಕಾರಣ ವಾಣಿಜ್ಯಿಕ ಎಲ್ಪಿಜಿ ಪೂರೈಕೆ ಬಿಕ್ಕಟ್ಟು ತಲೆದೋರಿರುವ ಕಾರಣ, ರೆಸ್ಟೋರೆಂಟ್ ಸಂಘಗಳ ಕುಂದುಕೊರತೆಗಳನ್ನು ಪರಿಹರಿಸಲು 3 ಸದಸ್ಯರ ಸಮಿತಿ ರಚನೆ ಮಾಡಲಾಗಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

‘ವಿವಿಧ ರೆಸ್ಟೋರೆಂಟ್ ಸಂಘಗಳ ಕುಂದುಕೊರತೆಗಳನ್ನು ಆಲಿಸಲು ಸರ್ಕಾರವು ಐಒಸಿ, ಎಚ್‌ಪಿಸಿಎಲ್ ಮತ್ತು ಬಿಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕರನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಿದೆ. ವಾಣಿಜ್ಯಿಕ ಎಲ್‌ಪಿಜಿ ಅವರ ನಿಜವಾದ ಅವಶ್ಯಕತೆಗಳನ್ನು ಪೂರೈಸಲಾಗುವುದು. ಈ ಸಮಿತಿಯು ಅವಶ್ಯಕತೆಗಳಿಗೆ ಅನುಗುಣವಾಗಿ ಪೂರೈಕೆಯನ್ನು ಆರಂಭಿಸಲು ಸಮಿತಿ ಕಾರ್ಯತಂತ್ರ ರೂಪಿಸಲಿದೆ’ ಎಂದು ಅವು ಹೇಳಿವೆ.‘ಮಾ.5ರಂದು ಕೇಂದ್ರ ಸರ್ಕಾರ, ಗೃಹ ಬಳಕೆ ಎಲ್‌ಪಿಜಿ ಪೂರೈಕೆಗೆ ಆದ್ಯತೆ ನೀಡಿ ಎಂದು ಗ್ಯಾಸ್ ಸಿಲಿಂಡರ್‌ ಒದಗಿಸುವ ಕಂಪನಿಗಳಿಗೆ ಸೂಚಿಸಿತ್ತು. ಹೀಗಾಗಿ ವಾಣಿಜ್ಯಿಕ ಎಲ್‌ಪಿಜಿ ಪೂರೈಕೆಗೆ ಹೊಡೆತ ಆಗಿದೆ. ಹೋಟೆಲ್‌ಗಳನ್ನು ನಡೆಸಲು ಆಗುತ್ತಿಲ್ಲ ಎಂದು ರೆಸ್ಟೋರೆಂಟ್‌ಗಳ ಸಂಘ ಆರೋಪಿಸಿತ್ತು.

ತೈಲ, ಎಲ್‌ಪಿಜಿ ಕೊರತೆ ತಗ್ಗಿಸಿ: ಸಚಿವರಿಗೆ ಮೋದಿ ಸೂಚನೆ

ನವದೆಹಲಿ: ಪೆಟ್ರೋಲ್‌-ಡೀಸೆಲ್‌ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ನೋಡಿಕೊಳ್ಳುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಪೆಟ್ರೋಲಿಯಂ ಸಚಿವ ಹರ್ದೀಪ್‌ ಸಿಂಗ್‌ ಪುರಿ ಮತ್ತು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅ‍ವರ ಜತೆಗೆ ಉನ್ನತ ಮಟ್ಟದ ಸಭೆ ನಡೆಸಿದರು.

ಈ ವೇಳೆ ತೈಲ ಹಾಗೂ ಎಲ್‌ಪಿಜಿ ಪೂರೈಕೆಯಲ್ಲಿನ ಕೊರತೆಯನ್ನು ಸಾಧ್ಯವಾದಷ್ಟು ತೀವ್ರಗತಿಯಲ್ಲಿ ತಗ್ಗಿಸಬೇಕು ಎಂದು ಸೂಚಿಸಿದರು ಎಂದು ಮೂಲಗಳು ಹೇಳಿವೆ.ಇರಾನ್‌ ಯುದ್ಧದ ಕಾರಣ ತೈಲ-ಅನಿಲಕ್ಕೆ ದೇಶದಲ್ಲಿ ಹಾಹಾಕಾರ ಉಂಟಾಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೃಷ್ಟಿಯಾಗಿರುವ ಬಿಕ್ಕಟ್ಟು ಭಾರತೀಯರ ಮೇಲೆ ಯಾವುದೇ ಪರಿಣಾಮ ಬೀರದಂತೆ ತಡೆಯುವ ಕುರಿತು ಚರ್ಚೆ ನಡೆಸಲಾಗಿದೆ ಎಂದು ಅವು ತಿಳಿಸಿವೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂದು ದಕ್ಷ KAS ಅಧಿಕಾರಿಯಾಗಿರೋ 'ಸಿಲ್ಲಿ ಲಲ್ಲಿ' ಧಾರಾವಾಹಿ ಗೋವಿಂದ ಪಾತ್ರಧಾರಿ! 25 ಸಲ ವರ್ಗಾವಣೆ ಆಯ್ತು!
'ಪ್ಲೀಸ್‌ ನಮಗೆ ಡೀಸೆಲ್‌ ಕೊಡಿ..' ಭಾರತದ ಮುಂದೆ ಮಂಡಿಯೂರಿ ಮನವಿ ಇಟ್ಟ ಬಾಂಗ್ಲಾದೇಶ!