ಕೋವಿಡ್ ನಿಗ್ರಹ ರಾಷ್ಟ್ರೀಯ ನೀತಿ ವಿಚಾರಣೆಯಿಂದ ಸಾಳ್ವೆ ಹಿಂದಕ್ಕೆ| ಗೊಂದಲ ಸೃಷ್ಟಿಸಿದ ವಕೀಲರಿಗೂ ತರಾಟೆ| ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆ
ನವದೆಹಲಿ(ಏ.24): ದೇಶದಲ್ಲಿ ಕೋವಿಡ್ ಸ್ಥಿತಿ ಕೈಮೀರಿ ಹೋಗುತ್ತಿರುವುದರಿಂದ ಇದರ ನಿಗ್ರಹಕ್ಕೆ ರಾಷ್ಟ್ರೀಯ ನೀತಿ ರೂಪಿಸುವ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯಿಂದ ಹಿರಿಯ ನ್ಯಾಯವಾದಿ ಹರೀಶ್ ಸಾಳ್ವೆ ಹಿಂದೆ ಸರಿದಿದ್ದಾರೆ.
ಈ ವಿಷಯದಲ್ಲಿ ಕೋರ್ಟ್‌ಗೆ ಸಲಹೆ ನೀಡಲು ಗುರುವಾರವಷ್ಟೇ ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆ ಅವರ ನ್ಯಾಯಪೀಠ ಸಾಳ್ವೆ ಅವರನ್ನು ಅಮಿಕಸ್ ಕ್ಯೂರಿ (ನ್ಯಾಯಾಲಯದ ಮಿತ್ರ)ಯಾಗಿ ನೇಮಿಸಿತ್ತು.
ಆದರೆ, ‘ನ್ಯಾ| ಬೋಬ್ಡೆ ಹಾಗೂ ಸಾಳ್ವೆ ಬಾಲ್ಯದ ಮಿತ್ರರು’ ಎಂದು ವಕೀಲರ ವಲಯದಲ್ಲಿ ಹಾಗೂ ಸೋಷಿಯಲ್ ಮೀಡಿಯಾಗಳಲ್ಲಿ ಆಕ್ಷೇಪ ವ್ಯಕ್ತವಾದ್ದರಿಂದ ಸ್ವತಃ ಸಾಳ್ವೆ ಈ ವಿಚಾರಣೆಯಿಂದ ಹಿಂದಕ್ಕೆ ಸರಿದರು. ಅದಕ್ಕೆ ಒಪ್ಪಿಕೊಂಡ ಕೋರ್ಟ್, ಮುಂದಿನ ವಿಚಾರಣೆಯನ್ನು ಏ.27ಕ್ಕೆ ನಿಗದಿಪಡಿಸಿತು.
ಇದೇ ವೇಳೆ, ‘ಹೈಕೋರ್ಟ್‌ಗಳಲ್ಲಿ ಕೋವಿಡ್ ಪರಿಸ್ಥಿತಿ ಕುರಿತು ಪ್ರತ್ಯೇಕ ವಿಚಾರಣೆ ನಡೆಯುತ್ತಿದ್ದರೂ ಅವುಗಳಿಗೆ ನಾವು ತಡೆ ನೀಡಿಲ್ಲ. ಆದರೂ ಹೈಕೋರ್ಟ್‌ನಲ್ಲಿನ ಪ್ರಕರಣಗಳನ್ನು ರದ್ದುಗೊಳಿಸಿ ಸುಪ್ರೀಂ ಕೋರ್ಟ್ ಮಾತ್ರ ವಿಚಾರಣೆ ನಡೆಸಲಿದೆ ಎಂದು ಇಂಥ ಸೂಕ್ಷ್ಮ ವಿಚಾರಗಳಲ್ಲಿ ಕೆಲ ವಕೀಲರು ಗೊಂದಲ ಸೃಷ್ಟಿಸುತ್ತಿದ್ದಾರೆ’ ಎಂದು ಹಿರಿಯ ವಕೀಲರನ್ನು ಕೋರ್ಟ್ ತರಾಟೆ ತೆಗೆದುಕೊಂಡಿತು.