20 ಲಕ್ಷ ಲಂಚ ಪಡೆದ ಆರೋಪ, ಟಾಪ್‌ ಇಡಿ ಅಧಿಕಾರಿಯನ್ನು ಬಂಧಿಸಿದ ಸಿಬಿಐ!

By Santosh Naik  |  First Published Aug 8, 2024, 10:42 PM IST

ಮನಿ ಲಾಂಡರಿಂಗ್ ಪ್ರಕರಣದಲ್ಲಿ ಅನೂಕೂಲ ಮಾಡಿಕೊಡುವಂತೆ ಮುಂಬೈ ಆಭರಣ ವ್ಯಾಪಾರಿಯಿಂದ 20 ಲಕ್ಷ ರೂಪಾಯಿ ಲಂಚ ಪಡೆದ ಆರೋಪದಲ್ಲಿ  ಜಾರಿ ನಿರ್ದೇಶನಾಲಯದ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಯಾದವ್‌ರನ್ನು ಸಿಬಿಐ ಬಂಧಿಸಿದೆ.


ನವದೆಹಲಿ (ಆ.8): ಮುಂಬೈ ಮೂಲದ ಆಭರಣ ವ್ಯಾಪಾರಿಯಿಂದ 20 ಲಕ್ಷ ರೂಪಾಯಿ ಲಂಚ ಸ್ವೀಕರಿಸುತ್ತಿದ್ದಾಗ ಜಾರಿ ನಿರ್ದೇಶನಾಲಯದ ಉನ್ನತ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಮನಿ ಲಾಂಡರಿಂಗ್ ಪ್ರಕರಣಗಳ ತನಿಖೆಯ ಹೊಣೆಗಾರಿಕೆ ಹೊತ್ತಿರುವ ಕೇಂದ್ರೀಯ ಸಂಸ್ಥೆಯ ಸಹಾಯಕ ನಿರ್ದೇಶಕ ಸಂದೀಪ್ ಸಿಂಗ್ ಯಾದವ್, ಅಕ್ರಮ ಹಣ ವರ್ಗಾವಣೆ ಪ್ರಕರಣ ಹೊಂದಿರುವ ಮುಂಬೈ ಮೂಲದ ಆಭರಣ ವ್ಯಾಪಾರಿಗೆ ಅನುಕೂಲ ಮಾಡಿಕೊಡುವ ಸಲುವಾಗಿ ಆತನಿಂದ ಹಣ ಪಡೆದುಕೊಳ್ಳುತ್ತಿದ್ದರು ಎಂದು ಹೇಳಲಾಗಿದೆ. ಲಂಚ ಪಡೆದುಕೊಂಡು ಕೇಸ್‌ಅನ್ನು ದುರ್ಬಲ ಮಾಡುವ ಯತ್ನ ಮಾಡಿದ್ದರು ಎಂದು ಆರೋಪಿಸಲಾಗಿದೆ. ಬುಧವಾರ ರಾತ್ರಿ ನವದೆಹಲಿಯಲ್ಲಿ ಸಿಬಿಐನ ಮುಂಬೈ ವಿಂಗ್‌ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಿಬಿಐ ಚಾರ್ಜ್‌ಶೀಟ್ ಪ್ರಕಾರ, ಜಾರಿ ನಿರ್ದೇಶನಾಲಯವು ಆಗಸ್ಟ್ 3 ಮತ್ತು 4 ರಂದು ಆಭರಣದ ಆವರಣದಲ್ಲಿ ಶೋಧ ನಡೆಸಿತ್ತು. ನಂತರ ಅಧಿಕಾರಿ ಸಂದೀಪ್‌ ಸಿಂಗ್‌ ಯಾದವ್ ಅವರು ಆಭರಣ ವ್ಯಾಪಾರಿಯ ಮಗನಿಗೆ 25 ಲಕ್ಷ ರೂಪಾಯಿ ನೀಡದಿದ್ದರೆ ಬಂಧಿಸುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮಾತುಕತೆಯ ಸಮಯದಲ್ಲಿ, ಸಿಬಿಐ ತನಿಖೆಯಿಂದ ಕಂಡುಬಂದಂತೆ ಮೊತ್ತವನ್ನು 20 ಲಕ್ಷಕ್ಕೆ ಇಳಿಸಲಾಗಿತ್ತು. "ಈ ಘಟನೆಯ ಅರಿವಿಗೆ ಬಂದ ಬೆನ್ನಲ್ಲಿಯೇ ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಅನುಸರಿಸಿ, ಇಡಿ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಸಂದೀಪ್ ಸಿಂಗ್ ಯಾದವ್ ವಿರುದ್ಧ ಕ್ರಿಮಿನಲ್ ಕ್ರಮವನ್ನು ಪ್ರಾರಂಭಿಸಿದೆ" ಎಂದು ಸಿಬಿಐ ಹೇಳಿದೆ.

ಚಕ್ರವ್ಯೂಹ ಭಾಷಣದ ಬಳಿಕ ನನ್ನ ಮೇಲೆ ಇಡಿ ದಾಳಿಗೆ ಸಂಚು, ಬನ್ನಿ ನನ್ನಲ್ಲಿ ಟೀ-ಬಿಸ್ಕತ್‌ ಇದೆ: ರಾಹುಲ್ ಗಾಂಧಿ

Tap to resize

Latest Videos

ಗುರುವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಜಂಟಿ ತಂಡ ಯಾದವ್ ಅವರ ಕಚೇರಿ ಮೇಲೆ ದಾಳಿ ನಡೆಸಿ ಸಾಕ್ಷ್ಯ ಸಂಗ್ರಹಿಸಿತ್ತು. ಸಿಬಿಐ ಪ್ರಕಾರ, ತನಿಖೆಯು ಅಪರಿಚಿತ ಇತರರೊಂದಿಗೆ ಯಾದವ್ ರೂಪಿಸಿದ ಕ್ರಿಮಿನಲ್ ಸಂಚು ಕೂಡ ಬಹಿರಂಗವಾಯಿತು.ಪಿಎಂಎಲ್‌ಎ ಪ್ರಕರಣದ ಜೊತೆಗೆ, ಅವರನ್ನು ತಕ್ಷಣದ ಅಮಾನತಿನಲ್ಲಿ ಇರಿಸಲು ಮತ್ತು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (ಸಿಬಿಡಿಟಿ) ಯಿಂದ ಅವರ ಮಾತೃ ಇಲಾಖೆಗೆ ವಾಪಸಾತಿಗೆ ಅನುಕೂಲವಾಗುವಂತೆ ಕ್ರಮವನ್ನು ಪ್ರಾರಂಭಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ ನಡೆಯುತ್ತಿದೆ.

ವಾಲ್ಮೀಕಿ ನಿಗಮದ ಹಣ ಅಕ್ರಮ: ಇ.ಡಿ. ಅಧಿಕಾರಿಗಳ ವಿರುದ್ಧ ಎಫ್​ಐಆರ್​ಗೆ ಹೈಕೋರ್ಟ್‌ ತಡೆ

click me!