ಸರ್ಕಾರಿ ಬಂಗಲೆ ಉಳಿಸಿಕೊಳ್ಳಲು ಪ್ರಿಯಾಂಕಾ ಗಾಂಧಿ ರಾಜ್ಯಸಭೆಗೆ?

By Suvarna NewsFirst Published Feb 19, 2020, 4:43 PM IST
Highlights

ಬಂಗಲೆಯಿಂದ ಪ್ರಿಯಾಂಕಾ ತೆರವಿಗೆ ಸರ್ಕಾರ ಚಿಂತನೆ| ಸರ್ಕಾರಿ ಬಂಗಲೆ ಉಳಿಸಿಕೊಳ್ಳಲು ಪ್ರಿಯಾಂಕಾ ಗಾಂಧಿ ರಾಜ್ಯಸಭೆಗೆ?

ನವದೆಹಲಿ[ಫೆ.19]: ಸಕ್ರಿಯ ರಾಜಕೀಯ ಪ್ರವೇಶಿಸಿ ಒಂದು ವರ್ಷ ಪೂರೈಸಿರುವ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ಇದೀಗ ರಾಜ್ಯಸಭೆಗೆ ಆಯ್ಕೆ ಮಾಡಿ ಕಳುಹಿಸುವ ಕುರಿತು ಕಾಂಗ್ರೆಸ್ಸಿನಲ್ಲಿ ಇಂಗಿತ ವ್ಯಕ್ತವಾಗುತ್ತಿರುವುದಕ್ಕೆ ಪ್ರಮುಖ ಕಾರಣ ‘ಸರ್ಕಾರಿ ಬಂಗಲೆ’ ಎಂಬ ಕುತೂಹಲಕಾರಿ ಸುದ್ದಿಯೊಂದು ದೆಹಲಿಯಲ್ಲಿ ಹಬ್ಬಿದೆ.

ಖಾಸಗಿ ವ್ಯಕ್ತಿಯಾಗಿದ್ದರೂ, ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ಭದ್ರತೆ ಹೊಂದಿದ್ದ ಕಾರಣಕ್ಕೆ 1997ರಿಂದಲೂ ದೆಹಲಿಯ ಲೋಧಿ ಎಸ್ಟೇಟ್‌ನ ಸರ್ಕಾರಿ ಬಂಗಲೆಯಲ್ಲಿ ಪ್ರಿಯಾಂಕಾ ಅವರು ನೆಲೆಸಿದ್ದಾರೆ. ಬಿಗಿಭದ್ರತೆ ಹೊಂದಿದ ವ್ಯಕ್ತಿಗಳು ಸರ್ಕಾರಿ ಬಂಗಲೆಯಲ್ಲಿ ನೆಲೆಸಬೇಕು ಎಂಬ ನಿಯಮದ ಹಿನ್ನೆಲೆಯಲ್ಲಿ ಅವರು ಈ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಅದಕ್ಕಾಗಿ ಅವರು ಬಾಡಿಗೆಯನ್ನೂ ಪಾವತಿಸುತ್ತಿದ್ದಾರೆ. ಆದರೆ ಇತ್ತೀಚೆಗೆ ಕೇಂದ್ರ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಹೊರತುಪಡಿಸಿ ಉಳಿದವರ ಎಸ್‌ಪಿಜಿ ಭದ್ರತೆ ಹಿಂಪಡೆದಿದೆ.

ಪ್ರಿಯಾಂಕಾ ವಾದ್ರಾ ರಾಜ್ಯಸಭೆ ಪ್ರವೇಶ?

ಇದರ ಬೆನ್ನಲ್ಲೇ ಪ್ರಿಯಾಂಕಾ ಅವರನ್ನು ಸರ್ಕಾರಿ ಬಂಗಲೆಯಿಂದ ತೆರವುಗೊಳಿಸಲು ಮುಂದಾಗಿದೆ ಎಂಬ ಸುದ್ದಿ ಕಾಂಗ್ರೆಸ್ಸಿಗೆ ತಲುಪಿದೆ. ಆದ ಕಾರಣ ಏಪ್ರಿಲ್‌ನಲ್ಲಿ ಅವರನ್ನು ರಾಜ್ಯಸಭೆಗೆ ಆರಿಸಿ ಕಳುಹಿಸುವ ಮೂಲಕ ಬಂಗಲೆ ಉಳಿಸಿಕೊಳ್ಳುವ ಆಲೋಚನೆ ಹೊಂದಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಅವರು ಸಂಸದರಾಗಿರುವ ಕಾರಣ ದೆಹಲಿಯಲ್ಲಿ ಸರ್ಕಾರಿ ಬಂಗಲೆ ಪಡೆದಿದ್ದಾರೆ.

ಇನ್ನೊಂದು ವಾದದ ಪ್ರಕಾರ, ಪ್ರಿಯಾಂಕಾ ಅವರ ಅಜ್ಜಿ ಇಂದಿರಾ ಗಾಂಧಿ ಅವರು ರಾಜಕಾರಣ ಪ್ರವೇಶಿಸಿದ ಬಳಿಕ ರಾಜ್ಯಸಭೆ ಸದಸ್ಯೆಯಾಗಿದ್ದರು. ಆನಂತರ ಪ್ರಧಾನಿಯೂ ಆಗಿದ್ದರು. ಅಜ್ಜಿಯನ್ನೇ ಹೋಲುವ ಪ್ರಿಯಾಂಕಾ ಅದೇ ಹೆಜ್ಜೆ ಇಡುತ್ತಿದ್ದಾರೆ ಎನ್ನಲಾಗಿದೆ.

click me!