
ನವದೆಹಲಿ(ನ.03): 13 ರಾಜ್ಯಗಳ 29 ವಿಧಾನಸಭೆ (Assembly Eletions) ಮತ್ತು 3 ಲೋಕಸಭೆ ಕ್ಷೇತ್ರಗಳಿಗೆ (Loksabha Seats) ನಡೆದ ಉಪ ಚುನಾವಣೆ /(By Election) ಫಲಿತಾಂಶ ಮಂಗಳವಾರ ಪ್ರಕಟವಾಗಿದೆ. 29 ವಿಧಾನಸಭಾ ಕ್ಷೇತ್ರಗಳ ಪೈಕಿ 13ರಲ್ಲಿ ಬಿಜೆಪಿ ಹಾಗೂ ಮಿತ್ರರು ಗೆದ್ದು ಮೇಲುಗೈ ಸಾಧಿಸಿದ್ದಾರೆ. 8ರಲ್ಲಿ ಕಾಂಗ್ರೆಸ್ (Congress) ಗೆಲುವು ಸಾಧಿಸಿದ್ದರೆ, 8 ಸ್ಥಾನ ಇತರೆ ಪಕ್ಷಗಳ ಪಾಲಾಗಿವೆ. ಈ ಪೈಕಿ ಬಂಗಾಳ ಹಾಗೂ ಹಿಮಾಚಲದಲ್ಲಿ (Himachal Pradesh) ಬಿಜೆಪಿಗೆ (BJP) ಹಿನ್ನಡೆ ಆಗಿದೆ. ಇನ್ನು 3 ಲೋಕಸಭಾ ಕ್ಷೇತ್ರಗಳ ಪೈಕಿ ಮಧ್ಯಪ್ರದೇಶದಲ್ಲಿ (Madhya Pradesh) ಬಿಜೆಪಿ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಿಯು ಮತ್ತು ದಮನ್‌ನಲ್ಲಿ ಮೊದಲ ಬಾರಿ ಶಿವಸೇನೆ, ಹಿಮಾಚಲ ಪ್ರದೇಶದ ಮಂಡಿ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯ ಸಾಧಿಸಿದೆ. ಇಲ್ಲಿ ಬಿಜೆಪಿಗೆ 1 ಸ್ಥಾನ ನಷ್ಟವಾಗಿದೆ.
ಬಂಗಾಳ: ದೀದಿ ಮೇಲುಗೈ, ಬಿಜೆಪಿಗೆ ಸೋಲು
ಪಶ್ಚಿಮ ಬಂಗಾಳದಲ್ಲಿ ಎಲ್ಲಾ 4 ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಭರ್ಜರಿ ಜಯ ಸಾಧಿಸಿದೆ. ಈ ಫಲಿತಾಂಶದಿಂದಾಗಿ ಬಿಜೆಪಿಗೆ 2 ಕ್ಷೇತ್ರ ನಷ್ಟವಾಗಿದ್ದು, ಟಿಎಂಸಿಗೆ 2 ಕ್ಷೇತ್ರ ಲಾಭವಾಗಿದೆ. ದಿನ್ಹಾಟ ಕ್ಷೇತ್ರದ ಟಿಎಂಸಿ ಅಭ್ಯರ್ಥಿ ಉದಯನ್ 1.63 ಲಕ್ಷ, ಗೋಸಬಾ ಕ್ಷೇತ್ರದಲ್ಲಿ 1.43 ಲಕ್ಷ ಮತಗಳ ಅಂತರದಿಂದ ಟಿಎಂಸಿ ಅಭ್ಯರ್ಥಿ ಜಯ ಸಾಧಿಸಿದ್ದಾರೆ. 4ರ ಪೈಕಿ 3ರಲ್ಲಿ ಬಿಜೆಪಿ ಠೇವಣಿ ಕಳೆದುಕೊಂಡಿದೆ.
ಹಿಮಾಚಲದ ಎಲ್ಲ 4 ಕ್ಷೇತ್ರ ಕಾಂಗ್ರೆಸ್‌ಗೆ
ಹಿಮಾಚಲ ಪ್ರದೇಶದ ಫತೇಪುರ, ಜುಬ್ಬಲ್-ಕೊಟ್ಟಾಯ್ ಮತ್ತು ಆರ್ಕಿ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆ. ಈ 3 ಕ್ಷೇತ್ರಗಳ ಪೈಕಿ 2 ಹಿಂದೆಯೂ ಕಾಂಗ್ರೆಸ್ ಬಳಿಯೇ ಇದ್ದವು. ಕಾಂಗ್ರೆಸ್‌ಗೆ 1 ಕ್ಷೇತ್ರ ಹೆಚ್ಚುವರಿಯಾಗಿ ಲಭಿಸಿದೆ. ಬಿಜೆಪಿಗೆ 1 ಕ್ಷೇತ್ರ ನಷ್ಟವಾಗಿದೆ. ಇನ್ನು ಹಿಮಾಚಲದ ಮಂಡಿ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಮಾಜಿ ಸಿಎಂ ವೀರಭದ್ರ ಸಿಂಗ್‌ರ ಪತ್ನಿ ಪ್ರತಿಭಾ ಸಿಂಗ್ ಅವರು ಬಿಜೆಪಿ ಅಭ್ಯರ್ಥಿಯಾಗಿರುವ ಕಾರ್ಗಿಲ್ ವೀರ ನಿವೃತ್ತ ಬ್ರಿಗೇಡಿಯರ್ ಕುಶಾಲ್ ಠಾಕೂರ್ ವಿರುದ್ಧ ಜಯಿಸಿದ್ದಾರೆ.
ರಾಜಸ್ಥಾನ: ಕಾಂಗ್ರೆಸ್‌ಗೆ 2 ಸ್ಥಾನ
ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಎರಡೂ ಕ್ಷೇತ್ರಗಳಲ್ಲಿ ಗೆಲುವು ದಾಖಲಿಸಿದ್ದು, ಬಿಜೆಪಿಯ ಒಂದು ಕ್ಷೇತ್ರವನ್ನು ಕಾಂಗ್ರೆಸ್ ತನ್ನ ಪಾಲಾಗಿಸಿಕೊಂಡಿದೆ.
ಅಸ್ಸಾಂ ಬಿಜೆಪಿಗೆ 4 ಸ್ಥಾನ ಲಾಭ
ಅಸ್ಸಾಂನಲ್ಲಿ ಕಣಕ್ಕಿಳಿದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಜಯಿಸಿದ್ದು, ಇನ್ನುಳಿದ 2 ವಿಧಾನಸಭೆ ಕ್ಷೇತ್ರಗಳಲ್ಲಿ ಬಿಜೆಪಿ ಮೈತ್ರಿ ಪಕ್ಷವಾಗಿರುವ ಯುಪಿಪಿಎಲ್ ಪಕ್ಷದ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. ಅಸ್ಸಾಂನ ಈ 5 ಕ್ಷೇತ್ರಗಳ ಪೈಕಿ ಒಂದು ಕ್ಷೇತ್ರ ಮಾತ್ರ ಎನ್‌ಡಿಎ ಮೈತ್ರಿ ಕೂಟದಲ್ಲಿತ್ತು. ಉಳಿದ ನಾಲ್ಕು ಕ್ಷೇತ್ರಗಳನ್ನು ಬಿಜೆಪಿ ನೇತೃತ್ವದ ಎನ್‌ಡಿಎ ಗೆದ್ದುಕೊಂಡಿದೆ.
ಹರಾರಯಣದಲ್ಲಿ ಚೌಟಾಲಾಗೆ ಗೆಲುವು:
ಹರ್ಯಾಣದ ಎಲ್ಲೆನಾಬಾದ್ ಕ್ಷೇತ್ರದಲ್ಲಿ ರಾಷ್ಟ್ರೀಯ ಲೋಕದಳದ ಅಭಯ್ ಸಿಂಗ್ ಚೌಟಾಲಾ, ಬಿಜೆಪಿಯ ಗೋವಿಂದ್ ಕಾಂಡಾ ಅವರ ವಿರುದ್ಧ ಜಯ ಸಾಧಿಸಿದ್ದಾರೆ. ಈ ಮೂಲಕ ಈ ಸೀಟು ಪುನಃ ಆರ್‌ಎಲ್‌ಡಿಗೆ ದಕ್ಕಿದೆ.
ಬಿಹಾರ, ತೆಲಂಗಾಣ, ಮ.ಪ್ರ.ದಲ್ಲಿ ಬಿಜೆಪಿಗೆ ಲಾಭ:
ಬಿಹಾರದಲ್ಲಿ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಮಿತ್ರ ಜೆಡಿಯು ಗೆಲುವು ಸಾಧಿಸಿದೆ. ಈ ಹಿಂದೆಯೂ ಈ ಎರಡೂ ಕ್ಷೇತ್ರಗಳು ಜೆಡಿಯು ಬಳಿಯೇ ಇದ್ದವು. ಅದೇ ರೀತಿ ಮಧ್ಯಪ್ರದೇಶದ 3 ಕ್ಷೇತ್ರಗಳ ಪೈಕಿ ಎರಡರಲ್ಲಿ ಬಿಜೆಪಿ, 1 ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದಿದೆ. ಇಲ್ಲಿ ಬಿಜೆಪಿಗೆ 1 ಸ್ಥಾನ ಲಾಭವಾಗಿದೆ. ಕಾಂಗ್ರೆಸ್‌ಗೆ 1 ನಷ್ಟವಾಗಿದೆ. ಇನ್ನು ತೆಲಂಗಾಣದ ಟಿಆರ್‌ಎಸ್ ವ್ಯಾಪ್ತಿಯಲ್ಲಿದ್ದ ಒಂದು ಕ್ಷೇತ್ರವು ಬಿಜೆಪಿ ಮಡಿಲಿಗೆ ಜಾರಿದೆ.
ಮೇಘಾಲಯ, ಮಿಜೋರಂ
ಮೇಘಾಲಯದ ರಾಜಬಲ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಜಿ ಫುಟ್ಬಾಲ್ ಆಟಗಾರ ಯುಗೆನೆಸಾನ್ ಲಿಂಗ್ಡಾಹ್ ಅವರು ಜಯಿಸಿದ್ದಾರೆ. ಮಿಜೋರಾಂನ 1 ಸ್ಥಾನದಲ್ಲಿ ಎನ್‌ಡಿಎ ಮೈತ್ರಿಕೂಟದ ಎಂಎನ್‌ಎಫ್ ಪಕ್ಷ ಜಯಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ