ತೃಣಮೂಲ ಕಾಂಗ್ರೆಸ್ ಸಂಸದೆ, ವಂದೇ ಭಾರತ್ ರೈಲನ್ನು ಬಿರಿಯಾನಿಗೆ ಹೋಲಿಸಿ ಲೇವಡಿ ಮಾಡಿದ್ದಾರೆ. 025-26ನೇ ಸಾಲಿಗೆ ರೈಲ್ವೆ ಸಚಿವಾಲಯದ ಅಡಿಯಲ್ಲಿ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆ ಮೇಲೆ ಸಂಸದೆ ಮಾತನಾಡಿದರು.
ನವದೆಹಲಿ: ಸೋಮವಾರ ಲೋಕಸಭೆಯಲ್ಲಿ ಮಾತನಾಡಿದ ತೃಣಮೂಲ ಕಾಂಗ್ರೆಸ್ ಸಂಸದೆ ಶತಾಬ್ದಿ ರಾಯ್, ಭಾರತೀಯ ರೈಲ್ವೆಯ ಕ್ಷಿಪ್ರ ಕ್ರಾಂತಿಯೆಂದು ಕರೆಸಿಕೊಳ್ಳುವ ವಂದೇ ಭಾರತ್ ಎಕ್ಸ್‌ಪ್ರೆಸ್‌ನ್ನು ಬಿರಿಯಾನಿಗೆ ಹೋಲಿಸುವ ಮೂಲಕ ಲೇವಡಿ ಮಾಡಿದ್ದಾರೆ. ಇಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಬಿರಿಯಾನಿ ರೀತಿಯಲ್ಲಿ ಆಗಿದೆ. ಪ್ರತಿದಿನ ರೋಟಿ-ದಾಲ್, ಅನ್ನ-ಸಾಂಬರ್‌ಗೂ ಕಷ್ಟಪಡುವ ಜನರಿಗೆ ಬಿರಿಯಾನಿ ಅನ್ನೋದು ದೊಡ್ಡ ವಿಷಯವಾಗುತ್ತದೆ. 2025-26ನೇ ಸಾಲಿಗೆ ರೈಲ್ವೆ ಸಚಿವಾಲಯದ ಅಡಿಯಲ್ಲಿ ಅನುದಾನದ ಬೇಡಿಕೆಗಳ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ ಸಂಸದೆ ಶತಾಬ್ದಿ ರಾಯ್, ರೈಲು ಅಪಘಾತಗಳನ್ನು ತಡೆಗಟ್ಟಲು ಸರ್ಕಾರ ಶಾಶ್ವತವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ಮುಂದುವರಿದು ಮಾತನಾಡಿದ ಸಂಸದೆ ಶತಾಬ್ದಿ ರಾಯ್, ಭಾರತದಲ್ಲಿ ವಂದೇ ಭಾರತ್ ರೈಲು ಬಿರಿಯಾನಿ ರೀತಿಯಾಗಿದೆ. ದೇಶದಲ್ಲಿ ಜನರು ಪ್ರತಿನಿತ್ಯ ರೋಟಿ-ದಾಲ್, ಅನ್ನ-ಸಾಂಬರ್‌ಗೂ ಕಷ್ಟಪಡುತ್ತಿರುವ ಸಂದರ್ಭ ಅಥವಾ ಸ್ಥಳದಲ್ಲಿ ಬಿರಿಯಾನಿ ಅಂತಹ ದೊಡ್ಡ ದೊಡ್ಡ ಮಾತುಗಳನ್ನು ಹೇಳಲಾಗುತ್ತದೆ. ವಂದೇ ಭಾರತ್ ರೈಲು ಕೇವಲ ಶ್ರೀಮಂತ ವರ್ಗದ ಜನರಿಗೆ ಮಾತ್ರ ಮೀಸಲಾಗಿದೆ. ವಂದೇ ಭಾರತ್ ಮತ್ತು ಬುಲೆಟ್ ರೈಲುಗಳಿಗಿಂದ ಸಾಮಾನ್ಯ ರೈಲುಗಳ ಬಗ್ಗೆ ಸರ್ಕಾರ ಹೆಚ್ಚು ಗಮನಹರಿಸಬೇಕಿದೆ ಎಂದು ಹೇಳಿದರು.
ಯಾಕೆ ಪದೇ ಪದೇ ರೈಲು ಅಪಘಾತಗಳು ಸಂಭವಿಸುತ್ತಿವೆ ಎಂಬುದರ ಬಗ್ಗೆ ಸಚಿವಾಲಯ ಗಮನ ನೀಡಬೇಕಿದೆ ಎಂದು ಆಗ್ರಹಿಸಿದ ಸಂಸದೆ ಶತಾಬ್ದಿ ರಾಯ್, ಈ ಅವಘಡಗಳನ್ನುತಪ್ಪಿಸಲು ಸರ್ಕಾರ ಮುಂಜಾಗ್ರತ ಮತ್ತು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಿದೆ ಎಂದು ಸರ್ಕಾರಕ್ಕೆ ಆಗ್ರಹಿಸಿದರು.
ಇದನ್ನೂ ಓದಿ: ರೈಲಿನಲ್ಲಿ ಕೇಂದ್ರ ಸಚಿವರನ್ನ ನೋಡ್ತಿದ್ದಂತೆ ಸಿಗ್ನೇಚರ್ ಸ್ಟೆಪ್ಸ್ ಹಾಕಿ ಗರ್ಲ್ಸ್ ಗ್ಯಾಂಗ್‌ನಿಂದ ರೀಲ್ಸ್
ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆ ಬೇಲಿ
ವಂದೇ ಭಾರತ್‌ನಂಥ ವೇಗದ ರೈಲು ಸಂಚರಿಸುವ ಮಾರ್ಗದಲ್ಲಿ ಜನ, ಜಾನುವಾರುಗಳ ಸುರಕ್ಷತೆಗಾಗಿ ನೈಋತ್ಯ ರೈಲ್ವೆಯು ಇದೀಗ ರಾಜ್ಯದಲ್ಲಿ 793 ಕಿ.ಮೀ. ಉದ್ದದ ಹಳಿಯ ಇಕ್ಕೆಲಗಳಲ್ಲಿ ಕಬ್ಬಿಣದ ತಡೆ ಬೇಲಿ (ಫೆನ್ಸಿಂಗ್) ನಿರ್ಮಿಸುತ್ತಿದ್ದು, ಮೊದಲ ಹಂತದಲ್ಲಿ ಬೆಂಗಳೂರು ವಿಭಾಗದಲ್ಲಿ ಕಾಮಗಾರಿ ಆರಂಭಗೊಂಡಿದೆ. ವೇಗದ ರೈಲುಗಳ ಸಂಚಾರ ವೇಳೆ ಹಳಿಗೆ ಸಿಲುಕಿ ಜಾನುವಾರುಗಳ ಸಾವು, ಆಕಸ್ಮಿಕ ಅಪಘಾತ, ಆತ್ಮಹತ್ಯೆಯಂಥ ಘಟನೆಗಳು ಹೆಚ್ಚುತ್ತಿರುವ ಪರಿಣಾಮ ರೈಲು ಸಂಚಾರದಲ್ಲಿ ವಿಳಂಬವಾಗುವ ಜೊತೆಗೆ ಅದೇ ಮಾರ್ಗದಲ್ಲಿ ಸಂಚರಿಸುವ ಇತರೆ ರೈಲುಗಳ ಓಡಾಟಕ್ಕೂ ತೊಂದರೆಯಾಗುವುದನ್ನು ತಪ್ಪಿಸಲು ತಡೆ ಬೇಲಿ ಹಾಕಲು ನಿರ್ಧರಿಸಲಾಗಿದೆ.
ಬೇಲಿಗೆ 420 ಕೋಟಿ ರು.: ಬೆಂಗಳೂರು, ಮೈಸೂರು ಹಾಗೂ ಹುಬ್ಬಳ್ಳಿ ವಿಭಾಗ ಸೇರಿ ರಾಜ್ಯದಲ್ಲಿ ಒಟ್ಟಾರೆ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯಲ್ಲಿ 793.52 ಕಿ.ಮೀ. ಉದ್ದದ ಮಾರ್ಗದಲ್ಲಿ ತಡೆ ಬೇಲಿ ಹಾಕಲಾಗುತ್ತಿದೆ. ಜೊತೆಗೆ ಅಗತ್ಯವಿರುವಲ್ಲಿ ಜನರ ಓಡಾಟಕ್ಕೆ ಸಬ್ ವೇ ಹಾಗೂ ಅಂಡರ್ ಪಾಸ್ ನಿರ್ಮಿಸಲಾಗುತ್ತಿದೆ. ಬೇಲಿಗೆ ₹420 ಕೋಟಿ, ಸಬ್ ವೇ ನಿರ್ಮಾಣಕ್ಕೆ ₹304 ಕೋಟಿ ಸೇರಿ ಒಟ್ಟಾರೆ ₹724 ಕೋಟಿ ಮಂಜೂರಾಗಿದೆ. ಈ ಯೋಜನೆಗೆ ಟೆಂಡರ್ ಕರೆಯಲಾಗಿದ್ದು, ಮೊದಲ ಹಂತದ ಕಾಮಗಾರಿ ನಡೆಯುತ್ತಿದ್ದು, ಸದ್ಯ ಬೆಂಗಳೂರು ವಿಭಾಗದಲ್ಲಿ 3 ಕಿ.ಮೀ. ಕಾಮಗಾರಿ ಮುಗಿದಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: 160 ಕಿಮೀ ಸಾಮರ್ಥ್ಯದ ವಂದೇ ಭಾರತ್ ರೈಲು ಕಡಿಮೆ ವೇಗದಲ್ಲಿ ಚಲಿಸೋದ್ಯಾಕೆ?