
ತಿರುಪತಿ(ಸೆ.21): ತಿರುಮಲದ ವೆಂಕಟೇಶ್ವರ ದೇವಸ್ಥಾನಕ್ಕೆ ಆಗಮಿಸುವ ಹಿಂದುಯೇತರ ಭಕ್ತರು ಪ್ರವೇಶದ ವೇಳೆ, ‘ನಮ್ಮ ಧರ್ಮ ಇಂಥದ್ದು ಹಾಗೂ ತಿಮ್ಮಪ್ಪನಲ್ಲಿ ನಮಗೆ ನಂಬಿಕೆ ಇದೆ’ ಎಂಬ ಘೋಷಣೆ ಮಾಡಿಕೊಳ್ಳಬೇಕು ಎಂಬ ನಿಯಮವನ್ನು ಸಡಿಲಿಸುವ ನಿರ್ಧಾರವನ್ನು ದೇವಸ್ಥಾನದ ಆಡಳಿತ ಮಂಡಳಿಯಾದ ಟಿಟಿಡಿ ಪ್ರಕಟಿಸಿರುವುದು ವಿವಾದಕ್ಕೀಡಾಗಿದೆ.
ಈ ಬಗ್ಗೆ ಹೇಳಿಕೆ ನೀಡಿರುವ ಟಿಟಿಡಿ ಅಧ್ಯಕ್ಷ ವೈ.ವಿ. ಸುಬ್ಬಾರೆಡ್ಡಿ, ‘ದೇವಸ್ಥಾನಕ್ಕೆ ಆಗಮಿಸುವವರು ತಮ್ಮ ಧರ್ಮ ಹಾಗೂ ದೇವರಲ್ಲಿನ ನಂಬಿಕೆಯನ್ನು ಘೋಷಿಸಿಕೊಳ್ಳುವ ಅಗತ್ಯವಿಲ್ಲ’ ಎಂದಿದ್ದಾರೆ. ಇವರ ಹೇಳಿಕೆಗೆ ತೆಲುಗುದೇಶಂ ಅಧ್ಯಕ್ಷ ಚಂದ್ರಬಾಬು ನಾಯ್ಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನ್ಯಧರ್ಮೀಯರಾದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಶೀಘ್ರದಲ್ಲೇ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮ ಇದ್ದು, ಅದಕ್ಕಿಂತ ಮೊದಲಿಗೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದು ಗಮನಾರ್ಹ.
ಆದರೆ ತಮ್ಮ ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆಯೇ ಸುಬ್ಬಾರೆಡ್ಡಿ ಸ್ಪಷ್ಟನೆ ನೀಡಿದ್ದಾರೆ. ‘ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ಶ್ರೀವಾರಿ ದರ್ಶನಕ್ಕೆಂದು ದೇಗುಲಕ್ಕೆ ದಿನಕ್ಕೆ 80 ಸಾವಿರದಿಂದ 1 ಲಕ್ಷ ಭಕ್ತರು ಭೇಟಿ ನೀಡುತ್ತಾರೆ. ಅಂಥ ಸಂದರ್ಭದಲ್ಲಿ ದೇವಸ್ಥಾನದ ಸಿಬ್ಬಂದಿಗೆ ಧರ್ಮ ಘೋಷಣೆಯ ಅರ್ಜಿ ವಿಲೇವಾರಿ ಮಾಡುವುದು ಕಷ್ಟವಾಗುತ್ತದೆ. ಹೀಗಾಗಿ ನಾನು ಅಂಥ ಸಂದರ್ಭದಲ್ಲಿ ಧರ್ಮ ಹಾಗೂ ನಂಬಿಕೆ ಘೋಷಣೆಯ ಅಗತ್ಯವಿಲ್ಲ ಎಂದು ಹೇಳಿದ್ದೇನಷ್ಟೇ’ ಎಂದು ಸ್ಪಷ್ಟಪಡಿಸಿದ್ದಾರೆ.
ನಿಯಮ ಏನು?
ಟಿಟಿಡಿ ನಿಯಮ-136ರ ಪ್ರಕಾರ, ತಿಮ್ಮಪ್ಪನ ದರ್ಶನ ಮಾಡಲು ಕೇವಲ ಹಿಂದೂಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಒಂದು ವೇಳೆ ಹಿಂದೂಯೇತರರು ದರ್ಶನ ಮಾಡಬೇಕು ಎಂದು ಇಚ್ಛಿಸಿದಲ್ಲಿ ಅವರು, ನಿಯಮ 137ರ ಪ್ರಕಾರ ಟಿಟಿಡಿಗೆ ಅರ್ಜಿಯಲ್ಲಿ ‘ನನ್ನ ಧರ್ಮ ಇಂಥದ್ದು. ಮನಃಸಾಕ್ಷಿಗೆ ಅನುಗುಣವಾಗಿ ನಾನು ತಿಮ್ಮಪ್ಪನ ದರ್ಶನಕ್ಕೆ ಬಂದಿದ್ದೇನೆ’ ಎಂದು ಬರೆದು ಸಲ್ಲಿಸಬೇಕು. ಈ ಅರ್ಜಿಯನ್ನು ಪರಿಶೀಲಿಸಿ ಅವರ ಪ್ರವೇಶಕ್ಕೆ ಟಿಟಿಡಿ ಅನುಮತಿ ನೀಡುತ್ತದೆ. ವಿದೇಶೀಯರೂ ಇದೇ ರೀತಿ ಅನುಮತಿ ಪಡೆಯಬೇಕು.
ಕಲಾಂ ಕೂಡ ಪಾಲಿಸಿದ್ದರು
ಈ ಹಿಂದೆ ಅಂದಿನ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರು ದೇಗುಲಕ್ಕೆ ಬಂದಾಗ ತಮ್ಮ ಧರ್ಮ ಹಾಗೂ ನಂಬಿಕೆ ಘೋಷಣೆ ಮಾಡಿಕೊಂಡಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಂದಾಗಲೂ ವಿವಾದವಾಗಿತ್ತು. ಆದರೆ, ‘ಸೋನಿಯಾ ಹಾಗೂ ಅಂದಿನ ಮುಖ್ಯಮಂತ್ರಿ ವೈ.ಎಸ್. ರಾಜಶೇಖರರೆಡ್ಡಿ ಇಂಥ ಘೋಷಣೆಗೆ ಸಹಿ ಹಾಕಿರಲಿಲ್ಲ. ಜಗನ್ ಕೂಡ ದೇಗುಲಕ್ಕೆ ಭೇಟಿ ನೀಡಿದ ಬಳಿಕವೇ ಪ್ರಮಾಣವಚನ ಸ್ವೀಕರಿಸಿದ್ದರು’ ಎಂದು ಸುಬ್ಬಾರೆಡ್ಡಿ ಸ್ಪಷ್ಟಪಡಿಸಿದ್ದಾರೆ.
‘ಅನ್ಯ ಧರ್ಮೀಯರಿಗೆಂದು ದೇವಸ್ಥಾನದ ಸಂಪ್ರದಾಯ ಮುರಿಯುವುದು ಸರಿಯಲ್ಲ. ಸಂಪ್ರದಾಯ ಮರಿದರೆ ಈ ಭೂಮಿಗೆ ಕೇಡು ಬಗೆದಂತೆ’ ಎಂದು ಚಂದ್ರಬಾಬು ನಾಯ್ಡು ಕಿಡಿಕಾರಿದ್ದಾರೆ. ಈ ಮೂಲಕ ಅನ್ಯಧರ್ಮೀಯರಾದ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ ರೆಡ್ಡಿ ಅವರ ವಿರುದ್ಧ ಪರೋಕ್ಷ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ