ತಿರುಪತಿಯ ಬಾಲಾಜಿ ದೇವಸ್ಥಾನ ಇತ್ತೀಚೆಗೆ ಲಡ್ಡು ವಿವಾದದ ಮೂಲಕ ಭಾರಿ ಆತಂಕ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಇದೀಗ ಟಿಟಿಡಿ ಮಹತ್ವದ ನಿರ್ಧಾರ ಕೈಗೊಂಡಿದೆ. ದೇವಸ್ಥಾನದಲ್ಲಿರುವ 300 ಹಿಂದೂಯೇತರ ನೌಕರರ ಗೇಟ್‌ಪಾಸ್ ನೀಡಲು ಆದೇಶಿಸಿದೆ.
ತಿರುಪತಿ(ನ.19) ತಿರುಪತಿ ದೇವಸ್ಥಾನ ಭಾರತದ ಪ್ರಸಿದ್ಧ ದೇವಸ್ಥಾನ. ಇಷ್ಟೇ ಅಲ್ಲ ಶ್ರೀಮಂತ ದೇವಸ್ಥಾನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಆದರೆ ಕೆಲ ತಿಂಗಳ ಹಿಂದೆ ತಿರುಪತಿಯ ಪ್ರಸಾದ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಲಾಗಿದೆ ಅನ್ನೋ ಆರೋಪ ಕೋಲಾಹಲ ಸೃಷ್ಟಿಸಿತ್ತು. ದೇವಸ್ಥಾನದ ಪಾವಿತ್ರ್ಯತೆ ನಷ್ಟವಾಗಿದೆ ಅನ್ನೋ ಕೂಗು ಜೋರಾಗಿ ಕೇಳಿಬಂದಿತ್ತು. ಇದಕ್ಕೆ ಹಿಂದೂಯೇತರ ಸರ್ಕಾರ, ಆಡಳಿತ ಮಂಡಳಿ ಸದಸ್ಯರು ಕಾರಣ ಅನ್ನೋ ಆರೋಪವೂ ಕೇಳಿಬಂದಿತ್ತು. ಈ ವಿವಾದದ ಬಳಿಕ ಹಿಂದೂ ದೇವಸ್ಥಾನದಲ್ಲಿ ಹಿಂದೂಯೇತರ ನೌಕರರು, ಸದಸ್ಯರಿಗೆ ಅವಕಾಶ ನೀಡಬಾರದು ಅನ್ನೋ ಕೂಗು ಜೋರಾಗಿತ್ತು. ಇದೀಗ ತಿರುಮಲ ತಿರುಪತಿ ದೇವಸ್ಥಾನಂ ಬೋರ್ಡ್ ಇದೀಗ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ದೇಗುಲದಲ್ಲಿನ ಹಿಂದೂಯೇತರ ನೌಕರರು, ಆಡಳಿತ ಮಂಡಳಿ ಸದಸ್ಯರಿಗೆ ಗೇಟ್ ಪಾಸ್ ನೀಡಲು ಆದೇಶಿಸಿದೆ. ಈ ಕುರಿತು ಸರ್ಕಾರಕ್ಕೆ ಸೂಚಿಸಿದೆ. ಶೀಘ್ರದಲ್ಲೇ ಈ ಕುರಿತು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸುವಂತೆ ಕೋರಿದೆ.
ತಿರುಮಲ ತಿರುಪತಿ ದೇವಸ್ಥಾನಂ(TTD)ಸ್ವತಂತ್ರ ಸಮತಿಯಾಗಿದೆ. ಈ ಸಮತಿ ಇದೀಗ ಈ ಆದೇಶ ನೀಡಿದೆ. ಟಿಟಿಡಿ ಚೇರ್ಮೆನ್ ಬಿಆರ್ ನಾಯ್ಡು ಈ ಕುರಿತು ಆದೇಶ ನೀಡಿದ್ದಾರೆ. ಹಿಂದೂ ದೇವಸ್ಥಾನದಲ್ಲಿ ಹಿಂದೂಯೇತರರಿಗೆ ಅವಕಾಶ ನೀಡುವುದು ಸರಿಯಲ್ಲ. ಹಿಂದೂ ದೇವರ ಮೇಲೆ ನಂಬಿಕೆ ಇಲ್ಲದವರು ದೇಗುಲದಲ್ಲಿ ಶ್ರದ್ಧಾ ಭಕ್ತಿಯಿಂದ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಟಿಟಿಡಿ ಹೇಳಿದೆ. ಟಿಟಿಡಿ ಈ ನಿರ್ಧಾರದಿಂದ ದೇವಸ್ಥಾನದ 7,000 ಖಾಯಂ ಉದ್ಯೋಗಿಗಳ ಪೈಕಿ 300 ಉದ್ಯೋಗಿಗಳಿಗೆ ಈ ನಿರ್ಧಾರ ಬಿಸಿ ತುಪ್ಪವಾಗಿದೆ.
ತಿರುಪತಿ ಭಕ್ತರಿಗೆ ಸಿಹಿ ಸುದ್ದಿ ಕೊಟ್ಟ ಟಿಟಿಡಿ: ಇನ್ಮುಂದೆ ಎರಡರಿಂದ ಮೂರು ಗಂಟೆಯಲ್ಲೇ ತಿಮ್ಮಪ್ಪನ ದರ್ಶನ!
ಹೌದು, ತಿರುಪತಿ ದೇಗುಲದಲ್ಲಿ ಹಿಂದೂಯೇತರ 300 ಖಾಯಂ ನೌಕರರಿದ್ದಾರೆ. ಇನ್ನು ದೇಗುಲದಲ್ಲಿ 14,000 ಕಾಂಟ್ರಾಕ್ಟ್ ನೌಕರರಿದ್ದಾರೆ. ಈ ಪೈಕಿ ಹಲವರಿಗೆ ಈ ನಿರ್ಧಾರದ ಬಿಸಿ ತಟ್ಟಲಿದೆ. ಖಾಯಂ ನೌಕಕರ ಪಕಿ 300 ಹಿಂದೂಯೇತರ ನೌಕರರು ಸ್ವಯಂ ನಿವೃತ್ತಿ ಘೋಷಿಸಬೇಕು, ಅಥವಾ ಆಂಧ್ರ ಪ್ರದೇಶ ಸರ್ಕಾರದ ಬೇರೆ ಇಲಾಖೆಗೆ ವರ್ಗಾವಣೆ ಮಾಡಲು ಆದೇಶಿಸಲಾಗಿದೆ.
ಹಿಂದೂಯೇತರ ಸದಸ್ಯರು ದೇಗುಲಕ್ಕೆ ಬರುವಾಗ ಪಾವಿತ್ರ್ಯತೆ ಕಾಪಾಡಿಕೊಳ್ಳುವ ಯಾವುದೇ ಹೊಣೆಗಾರಿಕೆ ಅವರ ಮೇಲ ಇರುವುದಿಲ್ಲ. ದೇವಸ್ಥಾನ ನಂಬಿಕೆ ಹಾಗೂ ಭಕ್ತಿ ಮೇಲೆ ನಡೆಯುತ್ತದೆ. ಹೀಗಾಗಿ ಹಿಂದೂ ದೇಗುಲದಲ್ಲಿನ ದೇವರ ಮೇಲೆ ಭಕ್ತಿ, ನಂಬಿಕೆ, ಗೌರವ ಇಲ್ಲದ ಹಿಂದೂಯೇತರರು ಅಷ್ಟೇ ಪಾವಿತ್ರ್ಯತೆಯಿಂದ,ಗೌರವದಿಂದ ನಡೆದುಕೊಳ್ಳಲು ಹೇಗೆ ಸಾಧ್ಯ ಎಂದು ಟಿಟಿಡಿ ಪ್ರಶ್ನಿಸಿದೆ.
ಹೊಸ ಚಂದ್ರಬಾಬು ನಾಯ್ಡು ಸರ್ಕಾರ ಅಧಿಕಾರಕ್ಕೆ ಬಂದ ಬೆನ್ನಲ್ಲೇ ಭಾರಿ ಬದಲಾವಣೆಗೆ ಮುಂದಾಗಿತ್ತು. ಹಿಂದೂಯೇತರರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯತ್ವ ಪಡೆಯಲು, ಉದ್ಯೋಗ ಪಡೆಯಲು ಸಾಧ್ಯವಿಲ್ಲ. ತಿರುಪತಿ ದೇವಸ್ಥಾನ ಪಾವಿತ್ರ್ಯತೆ ಉಳಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಇದಕ್ಕೆ ತಿರುಪತಿ ದೇವಸ್ಥಾನದ ಲಡ್ಡುವಿನಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಪತ್ತೆ ಆರೋಪ ಮತ್ತಷ್ಟು ಉತ್ತೇಜನ ನೀಡಿತ್ತು. ಈ ಘಟನೆ ಆಂಧ್ರ ಪ್ರದೇಶ ಮಾತ್ರವಲ್ಲ. ದೇಶಾದ್ಯಂತ ಭಾರಿ ಚರ್ಚೆಯಾಗಿತ್ತು. ಹಿಂದಿನ ವೈಎಸ್ಆರ್ ಜಗನ್‌ಮೋಹನ್ ರೆಡ್ಡಿ ನೇತೃತ್ವದ ಸರ್ಕಾರ ದನದ ಕೊಬ್ಬು ಹಾಗೂ ಮೀನಿನ ಎಣ್ಣೆಗಳನ್ನು ಲಡ್ಡುವಿಗೆ ಬಳಸಿತ್ತು ಅನ್ನೋ ಆರೋಪ ಕೋಲಾಹಲ ಸೃಷ್ಟಿಸಿತಿತ್ತು. ಕಡಿಮೆ ವೆಚ್ಚದಲ್ಲಿ ಲಡ್ಡು ತಯಾರಿಸಿದೆ. ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡಲಾಗಿದೆ ಎಂದು ಆರೋಪ ಕೇಳಿಬಂದಿತ್ತು. ದೇಶಾದ್ಯಂತ ಪ್ರತಿಭಟನೆಗಳು ನಡೆದಿತ್ತು. ಬಳಿಕ ಉಪ ಮುಖ್ಯಮಂತ್ರಿ ಪವನ್ ಕಲ್ಯಾಣ್ ನೇತೃತ್ವದಲ್ಲಿ ದೇವಸ್ಥಾನ ಶುಚಿಗೊಳಿಸುವ ಕಾರ್ಯ ನಡೆದಿತ್ತು.