ರಸ್ತೆ ಬದಿ ಪಾನಿಪುರಿ ವ್ಯಾಪಾರಿಯೊಬ್ಬರ ವಸ್ತುಗಳು ರಸ್ತೆಗೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯ ಕುರಿತು ನೆಟ್ಟಿಗರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರು: ಬದುಕಲು ಎಲ್ಲರೂ ದುಡಿಯಲೇಬೇಕು. ಕೆಲವರಿಗೆ ಕೆಲಸ ಮಾಡಿದ್ರೆ ಮಾತ್ರ ಅಂದಿನ ಊಟ ಸಿಗುತ್ತದೆ. ಒಂದು ದಿನವೂ ವಿಶ್ರಾಂತಿ ಪಡೆಯದೇ ಶ್ರಮಿಕ ವರ್ಗದವರನ್ನು ನೋಡಿರುತ್ತವೆ. ಕೆಲವರು ಹಗಲು-ರಾತ್ರಿ ಎನ್ನದೇ ತನ್ನ ಮೇಲೆ ಅವಲಂಬಿತರಾಗಿರುವ ಜನರ ಹೊಟ್ಟ ತುಂಬಿಸಲು ಕೆಲಸ ಮಾಡುತ್ತಿರುತ್ತಾರೆ. ಒಂದು ದಿನ ಕೆಲಸ ಮಾಡದೇ ಕುಳಿತರೆ ಅವರ ಆರ್ಥಿಕ ಪರಿಸ್ಥಿತಿಯೇ ಬದಲಾಗುತ್ತದೆ. ಹೊಟ್ಟೆ ತುಂಬಿಸಿಕೊಳ್ಳಲು ರಸ್ತೆ ಬದಿ ಸಣ್ಣಪುಟ್ಟ ವ್ಯವಹಾರ ಮಾಡಿಕೊಂಡಿರುತ್ತಾರೆ. ಈ ರೀತಿ ಕೆಲಸ ಮಾಡುತ್ತಿರುವ ಶ್ರಮ ಜೀವಿಗಳನ್ನು ಎಲ್ಲರೂ ಗಮನಿಸಿರುತ್ತಾರೆ. ಸಣ್ಣ ಕೆಲಸವಾದ್ರೂ ಪ್ರತಿದಿನ ದೊಡ್ಡ ನಿರೀಕ್ಷೆಯೊಂದಿಗೆ ವ್ಯವಹಾರ ಆರಂಭಿಸುತ್ತಾರೆ.
ರಸ್ತೆ ಬದಿ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಸೂಕ್ತ ಸ್ಥಳ ಇರಲ್ಲ. ಮಳೆ, ಪೊಲೀಸರು ಬಂದ್ರೆ ಅಲ್ಲಿಂದ ಗಂಟುಮೂಟೆ ಕಟ್ಕೊಂಡು ಹೋಗಬೇಕು. ಕೆಲವೊಮ್ಮೆ ವ್ಯಾಪಾರಕ್ಕೆ ತಂದಿರೋ ವಸ್ತುಗಳು ರಸ್ತೆಪಾಲಾದ್ರೆ ಅವರ ಕಷ್ಟ ಹೇಳತೀರದು. ಅಂದಿನ ವ್ಯಾಪಾರಕ್ಕೆ ಹಾಕಿದ ಬಂಡವಾಳವೆಲ್ಲಾ ನೀರುಪಾಲಾಗಿರುತ್ತದೆ. ಇದೀಗ ಇಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಪಾನಿಪುರಿ ಮಾರಾಟಗಾರನ ಎಲ್ಲಾ ವಸ್ತುಗಳು ರಸ್ತೆ ಮೇಲೆ ಬಿದ್ದಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ. ಪಾನಿಪುರಿಗಳು, ಪಾತ್ರೆಗಳು, ಚಟ್ನಿ ಮತ್ತು ಎಲ್ಲಾ ಮಸಾಲೆಗಳು ರಸ್ತೆ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರೋದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಮಾರಾಟಗಾರನ ಮಡಿಕೆ ಒಡೆದು ಅದರಲ್ಲಿರೋ ಮಸಾಲೆ ನೀರು ರಸ್ತೆಯಲ್ಲಿ ಹರಿದಿದೆ. ವ್ಯಾಪಾರಿ ದುಃಖದಿಂದಲೇ ಎಲ್ಲಾ ವಸ್ತುಗಳನ್ನು ಎತ್ತಿಕೊಳ್ಳುತ್ತಿದ್ದಾರೆ. ಆದ್ರೆ ಯಾರೊಬ್ಬರು ಆತನಿಗೆ ಸಹಾಯ ಮಾಡುತ್ತಿಲ್ಲ. ಸುತ್ತಲೂ ಜನರು ನೆರೆದಿದ್ರೂ ಸುಮ್ಮನೇ ನೋಡುತ್ತಾ ನಿಂತಿದ್ರೆ, ಕೆಲವರು ವಿಡಿಯೋ ಮಾಡಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಆದ್ರೆ ಈ ಘಟನೆ ನಡೆದಿದ್ದು ಎಲ್ಲಿ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಯಾರಿಗೂ ಈ ರೀತಿ ಕಷ್ಟ ಬರಬಾರದು ಎಂದು ನೆಟ್ಟಿಗರು ಮರುಕ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕನಸಿನ ಬಲಿಷ್ಠ ಟಿ20 ತಂಡವನ್ನು ಆಯ್ಕೆ ಮಾಡಿದ ಎಬಿ ಡಿವಿಲಿಯರ್ಸ್! 4 ಭಾರತೀಯರಲ್ಲಿ ರೋಹಿತ್‌ಗಿಲ್ಲ ಸ್ಥಾನ
ಈ ವಿಡಿಯೋವನ್ನು viral_brijesh_vlogs ಹೆಸರಿನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅಭಿಪ್ರಾಯವನ್ನು ಕಮೆಂಟ್ ಮೂಲಕ ಹಂಚಿಕೊಂಡಿದ್ದಾರೆ. ಈ ಪಾನಿಪುರಿ ಅಂಗಡಿ ನಾಶಕ್ಕೆ ಕಾರಣರಾದವರಿಗೆ ದೇವರು ಒಳ್ಳೆಯದು ಮಾಡಲ್ಲ. ಅಸಲಿ ಮಾರಾಟಗಾರನ ಈ ಸ್ಥಿತಿಗೆ ಕಾರಣ ಏನು ಎಂದು ಹಲವು ನೆಟ್ಟಿಗರು ಹೇಳಿದರು. ಸುಮ್ಮನೆ ನಿಂತು ನೋಡುವದಲ್ಲ, ಅಲ್ಲಿದ್ದ ಜನರು ಸಹಾಯ ಮಾಡುವ ಮೂಲಕ ಮಾನವೀಯತೆ ತೋರಿಸಬೇಕಿತ್ತು ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಈ ಕಮೆಂಟ್‌ಗೆ ಪ್ರತಿಕ್ರಿಯಿಸಿರುವ ಮತ್ತೋರ್ವ, ಇದು ಕಲಿಯುಗ, ಸಹಾಯ ಮಾಡಲು ಯಾರ ಬಳಿಯಲ್ಲಿಯೂ ಸಮಯ ಇರಲ್ಲ. ಆದರೆ ನಿಂತುಕೊಂಡು ನೋಡುತ್ತಾರೆ ಎಂದಿದ್ದಾರೆ.
ಇದನ್ನೂ ಓದಿ: ಪಿಜ್ಜಾ ತಿಂದು ಇಟ್ಟ ಕಸ ಸ್ವಚ್ಛಗೊಳಿಸಿ ಅಭಿಮಾನಿಗಳ ಹೃದಯ ಗೆದ್ದ ಅರ್ಜಿತ್ ಸಿಂಗ್!