ಸಿಎಎ ನಿಯಮ ರೂಪಿಸಲು ಇನ್ನಷ್ಟು ಕಾಲಾವಕಾಶ!

By Suvarna NewsFirst Published Mar 24, 2021, 2:53 PM IST
Highlights

ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶ| ಕೇಂದ್ರ ಸರ್ಕಾರಕ್ಕೆ ಜುಲೈ 9ರವರೆಗೆ ಹಾಗೂ ಲೋಕಸಭೆಯ ಶಾಸನ ಸಮಿತಿಯು ಏ.9ರವರೆಗೆ ಅವಧಿಯನ್ನು ವಿಸ್ತರಿಸಿದೆ

ನವದೆಹಲಿ(ಮಾ.24): ಬಹುಚರ್ಚಿತ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಗೆ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ಇನ್ನಷ್ಟುಕಾಲಾವಕಾಶ ದೊರೆತಿದೆ. ರಾಜ್ಯಸಭೆಯ ಶಾಸನ ಸಮಿತಿಯು ಈ ಕಾಯ್ದೆಗೆ ನಿಯಮ ರೂಪಿಸಲು ಕೇಂದ್ರ ಸರ್ಕಾರಕ್ಕೆ ಜುಲೈ 9ರವರೆಗೆ ಹಾಗೂ ಲೋಕಸಭೆಯ ಶಾಸನ ಸಮಿತಿಯು ಏ.9ರವರೆಗೆ ಅವಧಿಯನ್ನು ವಿಸ್ತರಿಸಿದೆ.

ಯಾವುದೇ ಕಾಯ್ದೆ ಜಾರಿಗೆ ಬರಬೇಕಾದರೆ ಕಾಯ್ದೆ ಪಾಸಾದ ನಂತರ ನಿಯಮಗಳನ್ನು ರೂಪಿಸುವುದು ಕಡ್ಡಾಯ. ನಿಯಮ ರೂಪಿಸಲು ಕಾಯ್ದೆ ಪಾಸಾದ ನಂತರ 6 ತಿಂಗಳ ಸಮಯವಿರುತ್ತದೆ. ಸಿಎಎ ಕಾಯ್ದೆ 2020ರ ಜ.10ಕ್ಕೆ ಜಾರಿಗೆ ಬಂದಿದೆ. ಆದರೆ, ನಿಯಮ ರೂಪಿಸಲು ಕೇಂದ್ರ ಗೃಹ ಸಚಿವಾಲಯ ಕಾಲಾವಕಾಶ ಪಡೆಯುತ್ತಾ ಬಂದಿದೆ. ‘ರಾಜ್ಯಸಭೆ ಹಾಗೂ ಲೋಕಸಭೆಯಿಂದ ಕ್ರಮವಾಗಿ ಜು.9 ಹಾಗೂ ಏ.9ರವರೆಗೆ ಕಾಲಾವಕಾಶ ದೊರೆತಿದೆ’ ಎಂದು ಗೃಹ ಖಾತೆ ರಾಜ್ಯ ಸಚಿವ ನಿತ್ಯಾನಂದ ರೈ ಲೋಕಸಭೆಗೆ ಬುಧವಾರ ತಿಳಿಸಿದ್ದಾರೆ.

ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ಅಷ್ಘಾನಿಸ್ತಾನದಲ್ಲಿ ಧಾರ್ಮಿಕ ಹಿಂಸಾಚಾರಕ್ಕೆ ಸಿಲುಕಿ ಭಾರತದ ಆಶ್ರಯ ಕೇಳಿಬಂದ ಹಿಂದು, ಸಿಖ್‌, ಜೈನ, ಬೌದ್ಧ, ಪಾರ್ಸಿ ಮತ್ತು ಕ್ರಿಶ್ಚಿಯನ್‌ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡುವ ಕಾಯ್ದೆ ಇದಾಗಿದೆ. ನಿಯಮ ರೂಪಿಸಿದ ನಂತರ ನಿರಾಶ್ರಿತರು ಪೌರತ್ವ ಕೋರಿ ಅರ್ಜಿ ಸಲ್ಲಿಸಬಹುದು.

click me!