UP Elections: '20ರವರೆಗೆ ಪ್ರತಿದಿನ ಒಬ್ಬ ಸಚಿವ, 3-4 ಶಾಸಕರಿಂದ ಬಿಜೆಪಿಗೆ ರಾಜೀನಾಮೆ'

By Suvarna NewsFirst Published Jan 14, 2022, 9:02 AM IST
Highlights

* ಉತ್ತರ ಪ್ರದೇಶ ಚುನಾವಣೆಗೆ ದಿನಗಣನೆ

* ಮಂಗಳವಾರ ಸಂಪುಟಕ್ಕೆ ರಾಜೀನಾಮೆ ಕೊಟ್ಟ ಸ್ವಾಮಿ ಪ್ರಸಾದ್ ಮೌರ್ಯ

* ಮೂವರು ಸಚಿವರು ಮತ್ತು ಏಳು ಶಾಸಕರು ಬಿಜೆಪಿಗೆ

ಲಕ್ನೋ(ಜ.14): ಯುಪಿ ಚುನಾವಣೆಗೆ ಸುಮಾರು ಒಂದು ತಿಂಗಳ ಮೊದಲು, ಆಡಳಿತ ಪಕ್ಷ ಬಿಜೆಪಿ ನಾಯಕರು ರಾಜೀನಾಮೆ ನೀಡುವುದು ನಿಲ್ಲುತ್ತಿಲ್ಲ. ಮಂಗಳವಾರ ಸ್ವಾಮಿ ಪ್ರಸಾದ್ ಮೌರ್ಯ ಅವರು ಸಂಪುಟಕ್ಕೆ ರಾಜೀನಾಮೆ ನೀಡಿದ ನಂತರ ಈ ಪ್ರಕ್ರಿಯೆ ಪ್ರಾರಂಭವಾಗಿದೆ. ಈಗಾಗಲೇ ಮೌರ್ಯ ಸೇರಿದಂತೆ ಮೂವರು ಸಚಿವರು ಮತ್ತು ಏಳು ಶಾಸಕರು ಬಿಜೆಪಿ ತೊರೆದಿದ್ದಾರೆ. ಉತ್ತರ ಪ್ರದೇಶ ಸರ್ಕಾರಕ್ಕೆ ರಾಜೀನಾಮೆ ನೀಡಿರುವ ಧರಂ ಸಿಂಗ್ ಸೈನಿ ಅವರು ಜನವರಿ 20 ರವರೆಗೆ ಪ್ರತಿದಿನ ಒಬ್ಬ ಸಚಿವರು ಮತ್ತು 3 ರಿಂದ 4 ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಗುರುವಾರ ಹೇಳಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಅವರ ಮಾರ್ಗವನ್ನು ಅನುಸರಿಸುವುದಾಗಿ ಸೈನಿ ಹೇಳಿದ್ದಾರೆ.

ದಲಿತರು ಮತ್ತು ಹಿಂದುಳಿದವರು ಮತ್ತು ಅವರ ಧ್ವನಿಯನ್ನು ಐದು ವರ್ಷಗಳ ಕಾಲ ಹತ್ತಿಕ್ಕಿದ್ದರಿಂದ ಯೋಗಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸೈನಿ ಹೇಳಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯ ಏನು ಹೇಳುತ್ತಾರೋ ಅದನ್ನು ಮಾಡುತ್ತೇವೆ ಎಂದ ಅವರು, ಜನವರಿ 20ರವರೆಗೆ ಪ್ರತಿದಿನ ಒಬ್ಬ ಸಚಿವರು ಹಾಗೂ 3-4 ಶಾಸಕರು ರಾಜೀನಾಮೆ ನೀಡಲಿದ್ದಾರೆ.

ಫೆಬ್ರವರಿಯಲ್ಲಿ ಆರಂಭವಾಗಲಿರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುನ್ನ ಪಕ್ಷಕ್ಕೆ 6 ಶಾಸಕರು ಮತ್ತು ಯೋಗಿ ಸರ್ಕಾರದಿಂದ ಮೂವರು ಸಚಿವರು ರಾಜೀನಾಮೆ ನೀಡಿರುವುದು ಬಿಜೆಪಿಗೆ ದೊಡ್ಡ ಹಿನ್ನಡೆ ಎಂದು ಪರಿಗಣಿಸಲಾಗಿದೆ. ಈ ಎಲ್ಲಾ ನಾಯಕರು ಬಿಜೆಪಿಯ ಪ್ರಮುಖ ಪ್ರತಿಸ್ಪರ್ಧಿ ಸಮಾಜವಾದಿ ಪಕ್ಷವನ್ನು ಸೇರುವ ಸಾಧ್ಯತೆಗಳಿವೆ.

ಧರಂ ಸಿಂಗ್ ಸೈನಿ ಗುರುವಾರ ಯೋಗಿ ಆದಿತ್ಯನಾಥ್ ಸಂಪುಟಕ್ಕೆ ರಾಜೀನಾಮೆ ನೀಡಿದ ಮೂರನೇ ಸಚಿವರಾಗಿದ್ದಾರೆ. ಸ್ವಾಮಿ ಪ್ರಸಾದ್ ಮೌರ್ಯರಂತೆ ತಾನು ಕೂಡಾ ದಲಿತರು, ಹಿಂದುಳಿದವರು, ರೈತರನ್ನು ಕಡೆಗಣಿಸಿದಕ್ಕಾಗಿ ರಾಜೀನಾಮೆ ನೀಡಿರುವುದಾಗಿ ಸೈನಿ ಹೇಳಿದ್ದಾರೆ. ಇದಕ್ಕೂ ಮುನ್ನ, ಬುಧವಾರ ದಾರಾ ಸಿಂಗ್ ಚೌಹಾಣ್ ಮತ್ತು ಮಂಗಳವಾರ ಸ್ವಾಮಿ ಪ್ರಸಾದ್ ಮೌರ್ಯ ರಾಜೀನಾಮೆ ಸಲ್ಲಿಸಿದ್ದರು. ಮೌರ್ಯ ಅವರನ್ನು ಒಬಿಸಿ ಸಮುದಾಯದ ಪ್ರಭಾವಿ ನಾಯಕ ಎಂದು ಪರಿಗಣಿಸಲಾಗಿದೆ ಮತ್ತು ಕಳೆದ ವಿಧಾನಸಭಾ ಚುನಾವಣೆಗೆ ಮುನ್ನ ಅವರು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ತೊರೆದು ಬಿಜೆಪಿ ಸೇರಿದ್ದಾರೆ.

ಸರ್ಕಾರಕ್ಕೆ ರಾಜೀನಾಮೆ ನೀಡಿದ ನಂತರ ಮೂವರು ಸಚಿವರು ಸಮಾಜವಾದಿ ಪಕ್ಷದ ಮುಖ್ಯಸ್ಥ ಮತ್ತು ಯುಪಿ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರನ್ನು ಭೇಟಿಯಾದರು ಎಂಬುವುದು ಉಲ್ಲೇಖನೀಯ. ಮುಂಬರುವ ವಿಧಾನಸಭಾ ಚುನಾವಣೆಗೆ ಸಮಾಜವಾದಿ ಪಕ್ಷ ಸಣ್ಣ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡು ಕಣಕ್ಕೆ ಇಳಿಯಲಿದೆ.

3 ದಿನದಲ್ಲಿ 3 ಸಚಿವರು, 7 ಶಾಸಕರ ವಿಕೆಟ್ ಪತನ!

ಕಳೆದ ಮೂರು ದಿನಗಳಲ್ಲಿ ಮೂವರು ಸಚಿವರು ಹಾಗೂ 7 ಶಾಸಕರು ಬಿಜೆಪಿ ತೊರೆದಿದ್ದಾರೆ. ಜನವರಿ 11 ರಂದು ಸಚಿವ ಸ್ವಾಮಿ ಪ್ರಸಾದ್ ಮೌರ್ಯ, ಶಾಸಕ ಭಗವತಿ ಸಾಗರ್, ಶಾಸಕ ರೋಷನ್ ಲಾಲ್ ವರ್ಮಾ ಮತ್ತು ಶಾಸಕ ಬ್ರಿಜೇಶ್ ಪ್ರಜಾಪತಿ, ಜನವರಿ 12 ರಂದು ಸಚಿವ ದಾರಾ ಸಿಂಗ್ ಚೌಹಾಣ್ ಮತ್ತು ಶಾಸಕ ಅವತಾರ್ ಸಿಂಗ್ ಭದಾನ, ಜ.13 ರಂದು ಸಚಿವ ಧರಂ ಸಿಂಗ್ ಸೈನಿ, ಶಾಸಕ ವಿನಯ್ ಶಾಕ್ಯಾ, ಶಾಸಕ ಮುಖೇಶ್ ವರ್ಮಾ ಮತ್ತು ಶಾಸಕ ಬಾಲಾ ಅವಸ್ತಿ ಕಮಲಪಾಳಯಕ್ಕೆ ಗುಡ್‌ಬೈ ಎಂದಿದ್ದಾರೆ.

click me!