* ದೆಹಲಿಯ ಏಮ್ಸ್ ಆಸ್ಪತ್ರೆಯ ಬಳಿ ಪೊಲೀಸರು- ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ
* ಏಮ್ಸ್ ಆಸ್ಪತ್ರೆಯ ಗೇಟ್ ನಂಬರ್ ಎರಡರ ಬಳಿ ಗುಂಡಿನ ಚಕಮಕಿ
* ದುಷ್ಕರ್ಮಿಗಳಿಂದ ಎರಡು ಪಿಸ್ತೂಲ್ ವಶಕ್ಕೆ ಪಡೆದ ಪೊಲೀಸರು
ದೆಹಲಿ(ನ.09): ದೆಹಲಿಯ ಏಮ್ಸ್ ಆಸ್ಪತ್ರೆ (AIIMS Hospital) ಬಳಿ ಪೊಲೀಸರು- ದುಷ್ಕರ್ಮಿಗಳ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ದಾಳಿಯಲ್ಲಿ ದುಷ್ಕರ್ಮಿಯ ಕಾಲಿಗೆ ಗುಂಡು ಹೊಡೆದ ಪೊಲೀಸರು ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಒಟ್ಟು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹೌದು ಮಂಗಳವಾರ ಬೆಳಗ್ಗೆ 5 ಗಂಟೆ ಸುಮಾರಿಗೆ ಏಮ್ಸ್ ಆಸ್ಪತ್ರೆಯ ಗೇಟ್ ನಂಬರ್ ಎರಡರ ದೆಹಲಿ ಪೊಲೀಸರ (Delhi police) ಗಸ್ತು ತಂಡದೊಂದಿಗೆ ಈ ಗುಂಡಿನ ಚಕಮಕಿ ನಡೆದ ನಂತರ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬೈಕ್ ನಲ್ಲಿ ಬಂದ ವ್ಯಕ್ತಿಗಳು ಪೊಲೀಸರ ಮೇಲೆ ಗುಂಡು ಹಾರಿಸಿ ಪರಾರಿಯಾಗಲು ಯತ್ನಿಸಿದ್ದಾರೆ ಎನ್ನಲಾಗಿದೆ. ಪ್ರತೀಕಾರವಾಗಿ ಪೊಲೀಸರು ಎರಡು ಸುತ್ತು ಗುಂಡು ಹಾರಿಸಿದ್ದು, ಸುಹೇಲ್ ಹೆಸರಿನ ಆರೋಪಿ ಗಾಯಗೊಂಡಿದ್ದಾನೆ. ಗಾಯಗೊಂಡ ದುಷ್ಕರ್ಮಿ ಹಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದನು ಯಾವುದೇ ಪೊಲೀಸರಿಗೆ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಆಗಿದ್ದೇನು?
ದೆಹಲಿಯ ಏಮ್ಸ್ ಬಳಿಯ ಕಿದ್ವಾಯಿ ನಗರದಲ್ಲಿ ಮುಂಜಾನೆ 3-4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಕೋಟ್ಲಾ ಮುಬಾರಕ್‌ಪುರದಲ್ಲಿ ನಿಯೋಜನೆಗೊಂಡಿದ್ದ ಪೊಲೀಸರ ಗಸ್ತು ತಂಡ ಬೈಕ್‌ನಲ್ಲಿ ಬಂದ ಮೂವರನ್ನು ಗುರುತಿಸಿ ನಿಲ್ಲಿಸುವಂತೆ ಸೂಚಿಸಿದೆ. ಹೀಗಿರುವಾಗ ಅವರು ಬೈಕ್ ನಿಲ್ಲಿಸದೆ ವೇಗವಾಗಿ ಮುಂದೆ ತೆರಳಿದ್ದಾರೆ. ಸಂಶಯಾಸ್ಪದವಾಗಿ ನಡೆದುಕೊಂಡ ದುಷ್ಕರ್ಮಿಗಳನ್ನು ಪೊಲೀಸರ ತಂಡ ಬೆನ್ನಟ್ಟಿದೆ. ಹೀಗಿರುವಾಗ ಒಬ್ಬ ವ್ಯಕ್ತಿ ಪಿಸ್ತೂಲನ್ನು ಹೊರತೆಗೆದು ಪೊಲೀಸರ ಮೇಲೆ ಗುಂಡು ಹಾರಿಸಲು ಪ್ರಾರಂಭಿಸಿದ್ದಾನೆ. ಪ್ರತೀಕಾರದ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇದು ಅಮಿತ್ ಎಂಬಾತನ ಕಾಲಿಗೆ ತಾಗಿದೆ. ಹೀಗೆ ಪೊಲೀಸರು ಮೂವರನ್ನೂ ಬಂಧಿಸಿದ್ದಾರೆ. ಬಂಧಿತರಲ್ಲಿ ಒಒಬ್ಬಾತ ಅಪ್ರಾಪ್ತ ಎಂದು ಗುರುತಿಸಲಾಗಿದೆ.
ಪೊಲೀಸರು ಅವರ ಬಳಿಯಿದ್ದ ಪಿಸ್ತೂಲ್ ವಶಪಡಿಸಿಕೊಂಡಿದ್ದಾರೆ. ಅವರನ್ನು ಚಿಕಿತ್ಸೆಗಾಗಿ ಏಮ್ಸ್ ಟ್ರಾಮಾ ಸೆಂಟರ್‌ಗೆ ಕರೆದೊಯ್ಯಲಾಗಿದ್ದು, ಪೊಲೀಸರು ಅವರ ಅಪರಾಧ ಇತಿಹಾಸವನ್ನು ಪರಿಶೀಲಿಸುತ್ತಿದ್ದಾರೆ. ಇತ್ತೀಚೆಗೆ ದ್ವಾರಕಾದಲ್ಲಿ ನಡೆದ ಗುಂಡಿನ ದಾಳಿ ಬಳಿಕ ಸುಹೇಲ್ ಖಾನ್ ಎಂಬ ವಂಚಕನ್ನು ಪೊಲೀಸರು ಹಿಡಿದಿದ್ದರು. ಕೊಲೆ ಪ್ರಕರಣದಲ್ಲಿ ಪೊಲೀಸರು ಸುಹೇಲ್‌ಗಾಗಿ ಹುಡುಕಾಟ ನಡೆಸಿದ್ದರು. ಈತನ ವಿರುದ್ಧ ಸುಮಾರು ಅರ್ಧ ಡಜನ್ ಪ್ರಕರಣಗಳು ದಾಖಲಾಗಿವೆ. ಈ ದಾಳಿಯಲ್ಲಿ ಸುಹೇಲ್ ಕಾಲಿಗೆ ಗುಂಡು ತಗುಲಿತ್ತು.