ಮೋದಿ ವಿರುದ್ಧ ತೃತೀಯ ರಂಗ ಫಲವಿಲ್ಲ: ಪ್ರಶಾಂತ್ ಕಿಶೋರ್!

By Suvarna NewsFirst Published Jun 23, 2021, 11:13 AM IST
Highlights

* ಮೋದಿ ವಿರುದ್ಧ ತೃತೀಯ ರಂಗ ರಚನೆ ನಿಷ್ಪ್ರಯೋಜಕ

* ಇದಕ್ಕೆ ಫಲ ಸಿಗದು ಎಂಬುದಕ್ಕೆ ಇತಿಹಾಸವೇ ಸಾಕ್ಷಿ

* ಚುನಾವಣಾ ಚಾಣಕ್ಯ ಪ್ರಶಾಂತ್‌ ಕಿಶೋರ್‌ ಹೇಳಿಕೆ

ನವದೆಹಲಿ(ಜೂ.23): 2024ರ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಎದುರಿಸಲು ದೆಹಲಿಯಲ್ಲಿ ತೃತೀಯ ರಂಗ ರಚನೆಯ ಯತ್ನ ಆರಂಭವಾಗಿರುವಾಗಲೇ, ತೃತೀಯ ರಂಗ ಎಂಬುದು ಒಂದು ವಿಫಲ ಪ್ರಯತ್ನ. ಇತಿಹಾಸ ಗಮನಿಸಿದರೆ ಈ ಥರದ ಯತ್ನಗಳೆಲ್ಲ ಫಲ ನೀಡಿಲ್ಲ ಎಂಬುದು ವಿದಿತವಾಗುತ್ತದೆ ಎಂದು ಚುನಾವಣಾ ರಣನೀತಿ ತಜ್ಞ ಪ್ರಶಾಂತ್‌ ಕಿಶೋರ್‌ ಹೇಳಿದ್ದಾರೆ.

ತೃತೀಯ ರಂಗ ರಚನೆಯ ನೇತೃತ್ವ ವಹಿಸಿರುವ ಎನ್‌ಸಿಪಿಯ ಶರದ್‌ ಪವಾರ್‌ ಅವರ ಹಿಂದಿನ ಶಕ್ತಿ ಸ್ವತಃ ಪ್ರಶಾಂತ್‌ ಕಿಶೋರ್‌ ಎಂದು ಬಣ್ಣಿತವಾಗಿರುವಾಗಲೇ ಅವರೇ ನೀಡಿರುವ ಈ ಹೇಳಿಕೆ ಸಾಕಷ್ಟುಕುತೂಹಲ ಮೂಡಿಸಿದೆ.

ಟೀವಿ ಚಾನಲ್‌ ಒಂದರ ಜತೆ ಮಾತನಾಡಿದ ಪ್ರಶಾಂತ್‌, ‘ಮೋದಿ ನೇತೃತ್ವದ ಬಿಜೆಪಿಗೆ 3ನೇ ಅಥವಾ 4ನೇ ರಂಗವು ಸವಾಲು ಹಾಕಲಿದೆ ಎಂದು ನಾನು ನಂಬುವುದಿಲ್ಲ. ಇತಿಹಾಸ ಈಗಾಗಲೇ ಎಲ್ಲವನ್ನೂ ತೋರಿಸಿದೆ. ಜೊತೆಗೆ, ಮಂಗಳವಾರ ನಡೆದ ಪ್ರತಿಪಕ್ಷಗಳ ಸಭೆಗೂ ತೃತೀಯ ರಂಗ ರಚನೆ ಯತ್ನಕ್ಕೂ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ. ಮತ್ತೊಂದೆಡೆ ‘ಮಂಗಳವಾರ ವಿಪಕ್ಷಗಳ ಸಭೆ ನಡೆಸಿದ ಶರದ್‌ ಪವಾರ್‌ ಜತೆ ನಾನು ರಾಜಕೀಯ ವಿದ್ಯಮಾನ ಹಾಗೂ 2024ರ ಚುನಾವಣೆ ಬಗ್ಗೆ ಚರ್ಚಿಸಿದೆ’ ಎಂದು ಅವರು ಖಚಿತಪಡಿಸಿದ್ದಾರೆ.

click me!