
ಐಜ್ವಾಲ್(ಜೂ.23): ದೇಶದಲ್ಲಿ ಜನಸಂಖ್ಯಾ ನಿಯಂತ್ರಣದ ಬಗ್ಗೆ ಚರ್ಚೆ ನಡೆಯುತ್ತಿದ್ದರೆ ಈಶಾನ್ಯ ರಾಜ್ಯ ಮಿಜೋರಂ ಕತೆಯೇ ಬೇರೆ. ಇಲ್ಲಿ ಜನಸಂಖ್ಯೆ ವೃದ್ಧಿ ದರ ಇಳಿಕೆ ಕಾಣುತ್ತಿದ್ದು, ಇಲ್ಲಿನ ಸಚಿವರೊಬ್ಬರು ಅತಿ ಹೆಚ್ಚು ಮಕ್ಕಳ ಹೊಂದಿದವರಿಗೆ 1 ಲಕ್ಷ ರು. ಇನಾಮು ಪ್ರಕಟಿಸಿ ಸುದ್ದಿಯಾಗಿದ್ದಾರೆ.
ವಿಶ್ವ ಅಪ್ಪಂದಿರ ದಿನಾಚರಣೆಯಲ್ಲಿ ಸೋಮವಾರ ಮಾತನಾಡಿದ ಕ್ರೀಡಾ ಸಚಿವ ರಾಬರ್ಟ್ ರಾಯ್ಟೆ, ತಮ್ಮ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಮಕ್ಕಳ ಹೊಂದಿರುವ ಪಾಲಕರಿಗೆ 1 ಲಕ್ಷ ರು. ಬಹುಮಾನ ನೀಡಲಾಗುವುದು ಎಂದು ಘೋಷಿಸಿದರು. ಈ ಹಣವನ್ನು ರಾಬರ್ಟ್ ಅವರ ಪುತ್ರನ ಕಂಪನಿಯು ‘ವಿಜೇತ’ರಿಗೆ ನೀಡಲಿದೆ. ಜತೆಗೆ ಒಂದು ಟ್ರೋಫಿ ಹಾಗೂ ಒಂದು ಪ್ರಮಾಣಪತ್ರವನ್ನು ಕೂಡ ನೀಡಲಾಗುವುದು ಎಂದು ಸಚಿವರು ತಿಳಿಸಿದರು.
ಮಿಜೋರಂನಲ್ಲಿ ಜನಸಂಖ್ಯಾ ವೃದ್ಧಿದರ ಇಳಿಕೆಯಾಗುತ್ತಿದೆ. ಇದು ಕಳವಳಕಾರಿ. ಕೆಲವು ಚರ್ಚುಗಳು ಕೂಡ ಜನಸಂಖ್ಯೆ ವೃದ್ಧಿಗೆ ಪ್ರತಿಪಾದಿಸುತ್ತಿವೆ ಎಂದು ಅವರು ಸಮಜಾಯಿಷಿ ನೀಡಿದರು.
ಮಿಜೋ ಬುಡಕಟ್ಟು ಜನರೇ ಹೆಚ್ಚಿರುವ ಮಿಜೋರಂನಲ್ಲಿ 2011ರ ಗಣತಿ ಪ್ರಕಾರ 10.9 ಲಕ್ಷ ಜನಸಂಖ್ಯೆ ಇತ್ತು. ಪ್ರತಿ ಚದರ ಕಿ.ಮೀ.ಗೆ 52 ಜನರು ರಾಜ್ಯದಲ್ಲಿದ್ದಾರೆ. ದೇಶದ ಅತಿ ಕಡಿಮೆ ಜನಸಾಂದ್ರತೆ ಹೊಂದಿರುವ 2ನೇ ರಾಜ್ಯ ಎನ್ನಿಸಿಕೊಂಡಿದೆ. ಅರುಣಾಚಲ ಪ್ರದೇಶ ಮೊದಲ ಸ್ಥಾನದಲ್ಲಿದ್ದು, ಅಲ್ಲಿ ಪ್ರತಿ ಚದರ ಕಿ.ಮೀ.ಗೆ 17 ಜನರು ವಾಸಿಸುತ್ತಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ