ದೇಶಕ್ಕಿಲ್ಲ 2ನೇ ತೀವ್ರ ಕೊರೋನಾ ಅಲೆ ಭೀತಿ, ತಜ್ಞರಿಂದ ಶುಭ ಸುದ್ದಿ!

By Suvarna NewsFirst Published Dec 20, 2020, 7:55 AM IST
Highlights

ದೇಶಕ್ಕಿಲ್ಲ 2ನೇ ತೀವ್ರ ಕೊರೋನಾ ಅಲೆ ಭೀತಿ!| 2ನೇ ಅಲೆ ಬಂದರೂ ಈ ಹಿಂದಿನಂತೆ ಮಾರಕವಲ್ಲ/ಸಾಂಕ್ರಾಮಿಕ ರೋಗಗಳ ತಜ್ಞರಿಂದ ಶುಭ ಸುದ್ದಿ

ನವದೆಹಲಿ(ಡಿ.20): ಒಂದು ವರ್ಷದಿಂದ ಕೊರೋನಾ ಹಾವಳಿಯಿಂದ ಕಂಗೆಟ್ಟಿರುವ ಭಾರತಕ್ಕೆ ವರ್ಷಾಂತ್ಯದಲ್ಲಿ ಕೊನೆಗೂ ಶುಭಸುದ್ದಿ ದೊರೆತಿದೆ. ದೇಶದಲ್ಲಿ ಕೊರೋನಾ 2ನೇ ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆಯಿದ್ದು, ಒಂದು ವೇಳೆ 2ನೇ ಅಲೆ ಕಾಣಿಸಿಕೊಂಡರೂ ಅದು ತೀವ್ರವಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಹೇಳಿದ್ದಾರೆ.

ಹಬ್ಬದ ಸಮಯದ ಅಪಾಯದಿಂದ ಪಾರು

ಖ್ಯಾತ ವೈರಾಲಜಿಸ್ಟ್‌ ಡಾ| ಶಾಹಿದ್‌ ಜಮೀಲ್‌ ಅವರ ಪ್ರಕಾರ, ‘ಸೆಪ್ಟೆಂಬರ್‌ ಮಧ್ಯಭಾಗದಿಂದ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಸತತವಾಗಿ ಇಳಿಕೆಯಾಗುತ್ತಿದೆ. ಸೆಪ್ಟೆಂಬರ್‌ನಲ್ಲಿ ನಿತ್ಯ 93,000 ಕೇಸು ವರದಿಯಾಗುತ್ತಿದ್ದರೆ ಈಗ ಸುಮಾರು 25,000 ಕೇಸು ವರದಿಯಾಗುತ್ತಿದೆ. ನನ್ನ ಪ್ರಕಾರ ಕೆಟ್ಟದಿನಗಳು ಹೋದವು. ಆದರೆ, ನವೆಂಬರ್‌ನಲ್ಲಿ ನೋಡಿದಂತಹ ಸಣ್ಣ ಸಣ್ಣ ಏರಿಕೆಗಳು ಭವಿಷ್ಯದಲ್ಲೂ ಕಾಣಿಸಬಹುದು. ಆದರೆ, 2ನೇ ಅಲೆ ಎಂಬುದು ಇರುವುದಿಲ್ಲ. 2ನೇ ಅಲೆ ಕಾಣಿಸಿಕೊಳ್ಳುವುದಿದ್ದರೆ ದಸರಾ, ದೀಪಾವಳಿ ಅಥವಾ ರಾಜ್ಯಗಳ ವಿಧಾನಸಭೆ ಚುನಾವಣೆ ನಂತರ ಕಾಣಿಸಿಕೊಳ್ಳಬೇಕಿತ್ತು. ಆ ಹಂತವನ್ನು ಸುರಕ್ಷಿತವಾಗಿ ದಾಟಿದ್ದೇವೆ’

ಇಷ್ಟೊತ್ತಿಗೆ 16 ಕೋಟಿ ಆಗಬೇಕಿತ್ತು

ದೇಶದಲ್ಲಿ ನಡೆದ 2ನೇ ಸೆರೋ ಸರ್ವೇ ಫಲಿತಾಂಶದ ಪ್ರಕಾರ ಈ ವೇಳೆಗೆ ಒಟ್ಟು ಸೋಂಕಿತರ ಸಂಖ್ಯೆ 16 ಕೋಟಿ ಆಗಬೇಕಿತ್ತು. ಆದರೆ, 1 ಕೋಟಿ ಮಾತ್ರ ಆಗಿದೆ. ದೇಶದಲ್ಲೀಗ ಅಂದಾಜು 30-40 ಕೋಟಿ ಕೊರೋನಾ ಸೋಂಕಿತರಿರಬಹುದು. ಆ ಅಂದಾಜಿನ ಮೇಲೆ ಹೇಳುವುದಾದರೆ ದೇಶದ ದೊಡ್ಡ ಜನಸಂಖ್ಯೆ ಈಗಲೂ ಸುರಕ್ಷಿತವಾಗಿದ್ದು, ಕೊರೋನಾ ಹರಡುವ ಸರಪಳಿಯನ್ನು ತುಂಡರಿಸುತ್ತಿದೆ. ಕೊರೋನಾಕ್ಕೆ ಇನ್ನೂ ತೆರೆದುಕೊಳ್ಳದ ಈ ಜನರು ಇನ್ನುಮುಂದೆಯೂ ಸೋಂಕಿಗೆ ತುತ್ತಾಗಬಹುದು. ಕೊರೋನಾದಿಂದ ಗುಣಮುಖರಾದವರಲ್ಲಿ ರೋಗನಿರೋಧಕ ಶಕ್ತಿ ಒಂದು ವರ್ಷವಾದರೂ ಇದ್ದರೆ ಮುಂದಿನ ಕೆಲ ವರ್ಷಗಳ ಕಾಲ ಸೋಂಕಿನ ಸಣ್ಣಪುಟ್ಟಏರಿಕೆ ಕಾಣಿಸಿಕೊಂಡು ಕಡಿಮೆಯಾಗಬಹುದು. ಒಳ್ಳೆಯ ಲಸಿಕೆ ಬಂದರೆ ಆ ಸಮಸ್ಯೆಯೂ ಇರವುದಿಲ್ಲ ಎಂದು ಡಾ| ಸಮೀರ್‌ ತಿಳಿಸಿದ್ದಾರೆ.

ಮೊದಲಿನಷ್ಟು ತೀವ್ರವಾಗಿರೋದಿಲ್ಲ

ಖ್ಯಾತ ಸಂಶೋಧಕ ಡಾ| ಗಗನದೀಪ್‌ ಕಾಂಗ್‌ ಅವರು, ‘ಈ ಹಿಂದಿನಷ್ಟುತೀವ್ರವಾಗಿ ಅಥವಾ ವೇಗವಾಗಿ ಕೊರೋನಾ ಇನ್ಮುಂದೆ ಹರಡುವುದಿಲ್ಲ. ಹೀಗಾಗಿ ಭಾರಿ ಸಂಖ್ಯೆಯ ಸೋಂಕು ಕಾಣಿಸಿಕೊಳ್ಳುವ ಸಾಧ್ಯತೆ ಕಡಿಮೆ. ಹಾಗಂತ ಈಗಲೂ ಸಾಮೂಹಿಕ ರೋಗನಿರೋಧಕ ಶಕ್ತಿ ನಮ್ಮ ದೇಶದಲ್ಲಿ ಅಭಿವೃದ್ಧಿಯಾಗಿರಬಹುದು ಎಂದು ಹೇಳಲಾಗದು. ಅದೇ ವೇಳೆ, ಸಾಮೂಹಿಕ ರೋಗನಿರೋಧಕ ಶಕ್ತಿ ಅಭಿವೃದ್ಧಿಯಾದ ಮೇಲೂ ಸೋಂಕು ಸಂಪೂರ್ಣ ನಾಶವಾಗುವುದಿಲ್ಲ. ಆದರೆ, ಪಶ್ಚಿಮದ ದೇಶಗಳಲ್ಲಿ ಕಾಣಿಸಿಕೊಳ್ಳುತ್ತಿರುವಂತೆ 2ನೇ ಅಲೆ ನಮ್ಮ ದೇಶದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಬಹಳ ಕಡಿಮೆ’ ಎಂದು ಹೇಳಿದ್ದಾರೆ.

ಮಾಚ್‌ರ್‍ ವೇಳೆಗೆ ಸೋಂಕು ನಿಯಂತ್ರಣ 

ಖ್ಯಾತ ಹೃದ್ರೋಗ ತಜ್ಞ ಡಾ| ಕೆ.ಕೆ.ಅಗರ್ವಾಲ್‌, ‘ಭಾರತದಲ್ಲಿ ಈಗಲೂ ಶೇ.30-40 ಮಂದಿ ಕೊರೋನಾ ಸೋಂಕಿತರಲ್ಲದವರಿದ್ದಾರೆ. ಅರ್ಜೆಂಟೀನಾ, ಪೋಲೆಂಡ್‌ನಂತಹ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಿದ್ದರೂ 2ನೇ ಅಲೆ ಕಂಡುಬಂದಿಲ್ಲ. ಹಾಗೆಯೇ ಭಾರತದಲ್ಲೂ 2ನೇ ಅಲೆ ಕಾಣಿಸಿಕೊಳ್ಳದಿರಬಹುದು. ಕಾಣಿಸಿಕೊಂಡರೂ ಅದು ವೈರಸ್‌ನ ಹೊಸ ರೂಪವಾಗಿರುತ್ತದೆ. ಅಂತಹ 2 ಹೊಸ ರೂಪದ ಕೊರೋನಾ ವೈರಸ್‌ಗಳಿವೆ. ಭಾರತದಲ್ಲಿ 2ನೇ ಅಲೆ ಕಾಣಿಸಿಕೊಂಡರೆ ಅದು ಈ ಹೊಸ ರೂಪದ ಕೊರೋನಾ ವೈರಸ್‌ನದ್ದಾಗಿರುತ್ತದೆ. ಆಗ ಸೋಂಕಿತರ ಸಂಖ್ಯೆ ಹೆಚ್ಚಾಗಬಹುದು, ಆದರೆ ಸಾವಿನ ಸಂಖ್ಯೆ ಕಡಿಮೆಯಿರುತ್ತದೆ. ಅದರಿಂದ ಸಾಮೂಹಿಕ ರೋಗನಿರೋಧಕ ಶಕ್ತಿ ಬೆಳೆಯುತ್ತದೆ. ಈ ತಿಂಗಳಾಂತ್ಯಕ್ಕೆ ಲಸಿಕೆ ವಿತರಣೆ ಆರಂಭಿಸಿ 30 ಕೋಟಿ ಜನರಿಗೆ ಲಸಿಕೆ ನೀಡಲು ಸಾಧ್ಯವಾದರೆ ಮಾಚ್‌ರ್‍ 25ರ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬರಬಹುದು’ ಎಂದು ಅಭಿಪ್ರಾಯಪಟ್ಟಿದ್ದಾರೆ.

click me!