ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಕೋಟಿಗೆ!

By Kannadaprabha NewsFirst Published Dec 20, 2020, 7:43 AM IST
Highlights

ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಕೋಟಿಗೆ| ಅಮೆರಿಕದ ನಂತರ 1 ಕೋಟಿ ಸೋಂಕಿತರ 2ನೇ ದೇಶ ಭಾರತ| 95.5 ಲಕ್ಷ ಜನ ಗುಣಮುಖ: ಕಳೆದ 1 ತಿಂಗಳಲ್ಲಿ 10 ಲಕ್ಷ ಕೇಸು| ಮೊದಲಿನ ವೇಗದಲ್ಲಿ ಇನ್ಮುಂದೆ ಸೋಂಕು ಹರಡದು: ತಜ್ಞರು

 

ನವದೆಹಲಿ(ಡಿ.20): ದೇಶದಲ್ಲಿ ಕೊರೋನಾವೈರಸ್‌ ಸೋಂಕಿತರ ಒಟ್ಟು ಸಂಖ್ಯೆ ಶನಿವಾರ 1 ಕೋಟಿಯ ಮೈಲುಗಲ್ಲು ದಾಟಿದೆ. ಅದರೊಂದಿಗೆ, ಜಗತ್ತಿನಲ್ಲಿ 1 ಕೋಟಿ ಕೊರೋನಾ ಸೋಂಕು ಕಂಡ 2ನೇ ದೇಶವಾಗಿ ಭಾರತ ಹೊರಹೊಮ್ಮಿದ್ದು, ಇಷ್ಟುಸೋಂಕು ದಾಖಲಿಸಿದ ಮೊದಲ ದೇಶ ಅಮೆರಿಕವಾಗಿದೆ. ಮೂರನೇ ಅತಿಹೆಚ್ಚು ಕೊರೋನಾ ಸೋಂಕಿತರ ದೇಶ ಬ್ರೆಜಿಲ್‌ ಆಗಿದೆ.

ಸಮಾಧಾನಕರ ಸಂಗತಿಯೆಂದರೆ ಭಾರತದಲ್ಲಿ ಇಲ್ಲಿಯವರೆಗಿನ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿಗೆ ಏರಿಕೆಯಾಗಿದ್ದರೂ ಅದರಲ್ಲಿ 95.5 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯ ಈ ಕುರಿತ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ್ದು, ಕೊರೋನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಆ.7ರಂದು 20 ಲಕ್ಷ, ಆ.23ರಂದು 30 ಲಕ್ಷ, ಸೆ.5ರಂದು 40 ಲಕ್ಷ, ಸೆ.16ರಂದು 50 ಲಕ್ಷ, ಸೆ.28ರಂದು 60 ಲಕ್ಷ, ಅ.11ರಂದು 70 ಲಕ್ಷ, ಅ.29ರಂದು 80 ಲಕ್ಷ, ನ.20ರಂದು 90 ಲಕ್ಷ ದಾಟಿತ್ತು. ಕಳೆದ 1 ತಿಂಗಳಲ್ಲೇ ಸುಮಾರು 10 ಲಕ್ಷ ಜನರು ಕೊರೋನಾ ಸೋಂಕಿತರಾಗಿದ್ದಾರೆ. ಶನಿವಾರ ಒಟ್ಟು ಸೋಂಕಿತರ ಸಂಖ್ಯೆ 1,00,04,599ಕ್ಕೆ ತಲುಪಿದೆ. ಸಾವಿನ ಒಟ್ಟು ಸಂಖ್ಯೆ 1,45,136ಕ್ಕೆ ಏರಿದೆ. ಕಳೆದ 24 ಗಂಟೆಯಲ್ಲಿ ದೇಶದಲ್ಲಿ 347 ಜನರು ಸೋಂಕಿನಿಂದ ಮೃತಪಟ್ಟಿದ್ದು, 25,152 ಹೊಸ ಪ್ರಕರಣಗಳು ದಾಖಲಾಗಿವೆ ಎಂದು ತಿಳಿಸಿದೆ.

‘ದೇಶದಲ್ಲಿ ಕೊರೋನಾದಿಂದ ಸಾವಿಗೀಡಾಗುವವರ ಪ್ರಮಾಣ ಶೇ.1.45ಕ್ಕೆ ಇಳಿಕೆಯಾಗಿದೆ. ಕೆಲ ರಾಜ್ಯಗಳಲ್ಲಿ ಕೊರೋನಾ ಹರಡುವ ಪ್ರಮಾಣ ಇಳಿಮುಖವಾಗುತ್ತಿದ್ದರೆ, ಇನ್ನು ಕೆಲ ರಾಜ್ಯಗಳಲ್ಲಿ ಈಗಲೂ ಏರಿಳಿತವಿದೆ. ಬಹುತೇಕ ರಾಜ್ಯಗಳಲ್ಲಿ ಸೋಂಕು ನಿಯಂತ್ರಣ ಉತ್ತಮವಾಗಿದೆ’ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌)ಯ ಮುಖ್ಯಸ್ಥ ಡಾ

ಸಮೀರಣ ಪಾಂಡಾ ಹೇಳಿದ್ದಾರೆ.

ಈಗಲೂ ದೇಶದಲ್ಲಿ ಕೊರೋನಾ ವಿರುದ್ಧ ಹರ್ಡ್‌ ಇಮ್ಯುನಿಟಿ (ಸಾಮೂಹಿಕ ರೋಗನಿರೋಧಕ ಶಕ್ತಿ) ಅಭಿವೃದ್ಧಿಯಾಗಿದೆ ಎಂದು ಹೇಳಲಾಗದು. ಅಷ್ಟುಪ್ರಮಾಣದ ಜನರಿಗೆ ಇನ್ನೂ ಸೋಂಕು ತಗಲಿಲ್ಲ. ಆದರೂ ಜನರು ಸಾಕಷ್ಟುಮುನ್ನೆಚ್ಚರಿಕೆ ವಹಿಸುತ್ತಿರುವುದರಿಂದ ಮೊದಲಿನ ವೇಗದಲ್ಲಿ ಇನ್ನು ಸೋಂಕು ಹರಡುವುದಿಲ್ಲ ಎಂದು ಕೆಲ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಕೇರಳ, ಕರ್ನಾಟಕ ನಂ.1:

ದೇಶದಲ್ಲಿ 2020ರ ಜ.30ರಂದು ಕೇರಳದಲ್ಲಿ ಮೊದಲ ಕೊರೋನಾ ಕೇಸು ದೃಢಪಟ್ಟಿದ್ದರೆ, ಮಾ.13ರಂದು ಕರ್ನಾಟಕದಲ್ಲಿ ಕೊರೋನಾಕ್ಕೆ ಮೊದಲ ಸಾವು ದಾಖಲಾಗಿತ್ತು.

ಸೋಂಕಿತರು: ಟಾಪ್‌ 3 ದೇಶ

ಅಮೆರಿಕ 1.78 ಕೋಟಿ

ಭಾರತ 1.00 ಕೋಟಿ

ಬ್ರೆಜಿಲ್‌ 71 ಲಕ್ಷ

click me!