ಕುಂಭಮೇಳದ ನಕಲಿ ಕೋವಿಡ್ ಟೆಸ್ಟ್ ಹಗರಣ ಬಯಲಿಗೆಳೆದಿದ್ದು LIC ಏಜೆಂಟ್!

By Kannadaprabha NewsFirst Published Jun 17, 2021, 7:30 AM IST
Highlights

* ನಕಲಿ ಕೋವಿಡ್‌ ಪರೀಕ್ಷೆ ಬಯಲಿಗೆಳೆದಿದ್ದು ಎಲ್‌ಐಸಿ ಏಜೆಂಟ್‌!

* ಕೋವಿಡ್‌ ಪರೀಕ್ಷೆಗೆ ಒಳಗಾಗದಿದ್ದರೂ ಮೆಸೇಜ್‌ ಬಂದಿತ್ತು

* ಈ ‘ಸುಳ್ಳು ಸಂದೇಶ’ದಿಂದ ಮೂಡಿದ ಅನುಮಾನ

ಡೆಹ್ರಾಡೂನ್‌(ಜೂ.17): ಪಂಜಾಬಿನ ಫರೀದ್‌ಕೋಟ್‌ನ ಎಲ್‌ಐಸಿ ಏಜೆಂಟ್‌ವೊಬ್ಬ ತನ್ನ ಮೊಬೈಲ್‌ಗೆ ಬಂದ ಕೊರೋನಾ ಪರೀಕ್ಷೆಯ ವರದಿಯ ಮೂಲವನ್ನು ಶೋಧಿಸಲು ಮುಂದಾಗಿದ್ದರಿಂದ ಹರಿದ್ವಾರ ಕುಂಭ ಮೇಳದ ವೇಳೆ ನಡೆದ ನಕಲಿ ಕೋರೋನಾ ಪರೀಕ್ಷೆ ಹಗರಣ ಬಯಲಾಗಿದೆ ಎಂಬ ಅಚ್ಚರಿಯ ಸಂಗತಿ ಹೊರ ಬಿದ್ದಿದೆ.

ವಿಪನ್‌ ಮಿತ್ತಲ್‌ ಎಂಬಾತ ಕೊರೋನಾ ಪರೀಕ್ಷೆಗೆ ಗಂಟಲು ದ್ರವದ ಮಾದರಿಯನ್ನು ನೀಡದೇ ಇದ್ದರೂ, ಅವರ ಮೊಬೈಲ್‌ಗೆ ‘ಕೊರೋನಾ ನೆಗೆಟಿವ್‌’ ಇರುವ ಬಗ್ಗೆ ಸಂದೇಶ ರವಾನೆ ಆಗಿತ್ತು. ಇದರಿಂದಾಗಿ ತಮ್ಮ ವೈಯಕ್ತಿಕ ಮಾಹಿತಿಯನ್ನು ಕದ್ದು ದುರ್ಬಳಕೆ ಮಾಡಿಕೊಂಡಿರುವ ಬಗ್ಗೆ ಅವರಿಗೆ ಅನುಮಾನ ಮೂಡಿತ್ತು. ಈ ಬಗ್ಗೆ ಮಿತ್ತಲ್‌ ಮೊದಲು ಸ್ಥಳೀಯ ಜಿಲ್ಲಾ ಅಧಿಕಾರಿಗಳ ಬಳಿ ವಿಚಾರಿಸಿದ್ದರು. ಆದರೆ, ಅದನ್ನು ನಿರ್ಲಕ್ಷ್ಯ ಮಾಡಲಾಗಿತ್ತು. ಆರೋಗ್ಯ ಇಲಾಖೆ ಕೂಡ ಈ ಬಗ್ಗೆ ಆಸಕ್ತಿ ತೋರಿಸಲಿಲ್ಲ.

ಆ ಬಳಿಕ ಐಸಿಎಂಆರ್‌ಗೆ ಇ-ಮೇಲ್‌ ಮೂಲಕ ಮಿತ್ತಲ್‌ ದೂರು ನೀಡಿದ್ದರು. ಆದರೆ, ಐಸಿಎಂಆರ್‌ನಿಂದಲೂ ಹೆಚ್ಚಿನ ಮಾಹಿತಿಗಳು ಲಭ್ಯವಾಗದೇ ಇದ್ದಾಗ, ಮಿತ್ತಲ್‌ ಐಟಿಆರ್‌ ಅರ್ಜಿಯನ್ನು ದಾಖಲಿಸಿದ್ದರು. ಆರ್‌ಟಿಐ ತನಿಖೆಯ ವೇಳೆ ಹರಿದ್ವಾರದ ಲ್ಯಾಬ್‌ವೊಂದು ಮಿತ್ತಲ್‌ ಕೊರೋನಾ ಪರೀಕ್ಷೆಯ ವರದಿ ನೀಡಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ದೊಡ್ಡ ಮಟ್ಟದ ತನಿಖೆ ನಡೆಸಿದಾಗ 1 ಲಕ್ಷ ಜನರ ನಕಲಿ ಕೋವಿಡ್‌ ಪರೀಕ್ಷೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ.

click me!