ಒಬ್ಬೊಬ್ಬರದ್ದು ಒಂದೊಂದು ಕತೆ: ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ಸುತ್ತ ರಾಶಿ ಬಿದ್ದಿರುವ ಚಪ್ಪಲಿಗಳೇ ಹೇಳುತ್ತಿವೆ ಸಾಕ್ಷಿ

Published : Jun 05, 2025, 02:11 PM IST
Chinnaswamy Stadium Stampede

ಸಾರಾಂಶ

ನಿನ್ನೆಯ ಆರ್‌ಸಿಬಿ ವಿಜಯೋತ್ಸವಕ್ಕೆ ಬಂದು ಜೀವತೆತ್ತ ಒಬ್ಬೊಬ್ಬರದ್ದು ಒಂದೊಂದು ಕತೆ, ನಿನ್ನೆಯ ದುರಂತದಲ್ಲಿ ಪಾರಾಗಿ ಬಂದ ಕೆಲವು ಆರ್‌ಸಿಬಿ ಅಭಿಮಾನಿಗಳು ಕರಾಳ ಅನುಭವನ್ನು ಹಂಚಿಕೊಂಡಿದ್ದಾರೆ.

ನಿನ್ನೆಯ ಆರ್‌ಸಿಬಿ ವಿಜಯೋತ್ಸವಕ್ಕೆ ಬಂದು ಜೀವತೆತ್ತವರದ್ದು ಒಂದು ಕತೆಯಾದರೆ ಆ ನೂಕುನುಗ್ಗಲಿನಲ್ಲಿ ಸಿಲುಕಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರದ್ದು ಇನ್ನೊಂದು ಕತೆ. ನಿನ್ನೆಯ ದುರಂತದಲ್ಲಿ ಪಾರಾಗಿ ಬಂದ ಕೆಲವು ಆರ್‌ಸಿಬಿ ಅಭಿಮಾನಿಗಳು ಕರಾಳ ಅನುಭವನ್ನು ಹಂಚಿಕೊಂಡಿದ್ದಾರೆ.

ಚಿನ್ನಸ್ವಾಮಿ ಸ್ಟೇಡಿಯಂನ ಗೇಟ್ ಸುತ್ತ ರಾಶಿ ಬಿದ್ದಿರುವ ಚಪ್ಪಲಿಗಳೇ ದೊಡ್ಡ ದುರಂತದ ಕತೆ ಹೇಳುತ್ತಿವೆ. ಒಬ್ಬಾಕೆಯನ್ನು ಸ್ನೇಹಿತರು ಹೆಗಲ ಮೇಲೆ ಹೊತ್ತು ಸಾಗಬೇಕಾಯ್ತು. ಮತ್ತೊಬ್ಬ  ನೂಕುನುಗ್ಗಲಿನಲ್ಲಿ ಸಿಲುಕಿ ಜೀವೇ ಹೋಯ್ತು. ಆತನ ತಾಯಿ ಆಸ್ಪತ್ರೆಯ ಬಾಗಿಲ ಮುಂದೆ ಅಳುತ್ತಾ ನಿಂತಿದ್ದರು. ಇವೆಲ್ಲವೂ ನಿನ್ನೆ ಆರ್‌ಸಿಬಿ ವಿಜಯೋತ್ಸವಕ್ಕೆಂದು ಬಂದು ದುರಂತದಲ್ಲಿ ನಲುಗಿ ಹೋದವರ ಕತೆಗಳು.

ಡಿಂಪಲ್ ಅಲಿಯಾಸ್ 14 ವರ್ಷದ ದಿವ್ಯಾಂಶಿಕಾ ಮಂಗಳವಾರ ತಡರಾತ್ರಿಯವರೆಗೂ ಮ್ಯಾಚ್ ನೋಡುತ್ತಾ ಆರ್‌ಸಿಬಿಗೆ ಚೀಯರ್ ಮಾಡಿದ್ದರು. ಮಾರನೇ ದಿನ ಆರ್‌ಸಿಬಿ ಆಟಗಾರರ ಸೆಲೆಬ್ರೇಷನ್‌ ನೋಡುವುದಕ್ಕೆ ಆಕೆ ಚಿನ್ನಸ್ವಾಮಿ ಸ್ಟೇಡಿಯಂಗೆ ತನ್ನ ತಾಯಿ ಚಿಕ್ಕಮ್ಮ ಅಜ್ಜಿಯ ಜೊತೆ ಹೋಗಿದ್ದಳು. ಆದರೆ ಸಂಜೆ 4.50ರ ಸುಮಾರಿಗೆ ಹೊರಗಿದ್ದ ಜನ ಎಲ್ಲಾಕಡೆಯಿಂದಲೂ ತಳ್ಳಾಡಲು ಶುರು ಮಾಡಿದರು. ಇದೇ ನಂತರ ಕಾಲ್ತುಳಿತಕ್ಕೆ ಕಾರಣವಾಯ್ತು, ನೂಕಾಟದ ವೇಳೆ ಕೆಳಗೆ ಬಿದ್ದ ಡಿಂಪಲ್‌ ಜನರ ತುಳಿತದಿಂದ ಸಾವನ್ನಪ್ಪಿದ್ದಾರೆ.

ನನ್ನ ಮಗಳು ನನಗೆ ಕರೆ ಮಾಡಿ ಅಳಲು ಶುರು ಮಾಡಿದಳು, ಕೂಡಲೇ ಬೌರಿಂಗ್ ಆಸ್ಪತ್ರೆಗೆ ಬರುವಂತೆ ಆಕೆ ಹೇಳಿದಳು, ಅದರಾಚೆಗೆ ಆಕೆ ಏನು ಹೇಳಿರಲಿಲ್ಲ, ಆದರೆ ನನ್ನ ಮೊಮ್ಮಗಳು ಕಾಲ್ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವುದು ತಿಳಿಯಿತು. ಅವಳು ಕೆಲದಿನಗಳ ಹಿಂದಷ್ಟೇ 9ನೇ ತರಗತಿಗೆ ಸೇರಿದ್ದಳು, ಅವಳು ಅಲ್ಲಿಗೆ ಸಂಭ್ರಮಾಚರಣೆ ಮಾಡಲು ಹೋಗಿದ್ದಳು, ಸಾಯುವುದಕ್ಕೆ ಅಲ್ಲ ಎಂದು ಡಿಂಪಲ್ ಅವರ ಅಜ್ಜ ಲಕ್ಷ್ಮಿನಾರಾಯಣ್ ಹೇಳಿದ್ದಾರೆ.

ಹಾಗೆಯೇ 21 ವರ್ಷದ ಭೂಮಿಕ್ ತನ್ನ ಸ್ನೇಹಿತರ ಜೊತೆ ಚಿನ್ನಸ್ವಾಮಿ ಸ್ಟೇಡಿಯಂಗೆ ಹೋಗಿದ್ದ, ಈ ಜನಜಂಗುಳಿಯ ಮಧ್ಯೆ ಆತ ತನ್ನ ಸ್ನೇಹಿತರಿಂದ ಬೇರಾಗಿದ್ದ. ನಂತರ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ. ಆತನ ಬಟ್ಟೆಗಳು ಹರಿದು ಹೋಗಿದ್ದವು. ನಾವು ಪೊಲೀಸ್ ಜೀಪ್‌ನಲ್ಲಿ ಆತನನನ್ನು ಬದುಕುಳಿಸುವ ಪ್ರಯತ್ನ ಮಾಡಿದೆವು. ಆದರೆ ಆತ ಹೊರಟು ಹೋದ ಎಂದು ಆತನ ಸ್ನೇಹಿತ ಹೇಳಿಕೊಂಡಿದ್ದಾನೆ. ಇತ್ತ ಆತನ ತಾಯಿ ಚಿನ್ನು ಎದ್ದೇಳು, ನಿನ್ನ ಅಮ್ಮ ಬಂದಿದ್ದಾಳೆ ಎಂದು ಗೋಳಾಡುತ್ತಿರುವುದು ಮನ ಕಲಕುವಂತಿತ್ತು. ವೈದ್ಯಕೀಯ ಕಾಳಜಿ ತೋರುವಲ್ಲಿ ವಿಳಂಬವಾಗಿದೆ ಎಂದು ಆತನ ಪೋಷಕರು ದೂರಿದ್ದಾರೆ. ಆತ ಅಲ್ಲಿಗೆ ಹೋಗುತ್ತಾನೆ ಎಂದು ನಮಗೆ ಹೇಳಿದ್ದರೆ ನಾವು ಕಳಿಸುತ್ತಲೇ ಇರಲಿಲ್ಲ, ಆತ ನಮ್ಮ ಒಬ್ಬನೇ ಮಗ ಎಂದು ಅವರ ತಂದೆ ಗೋಳಾಡಿದ್ದಾರೆ.

ಹಾಗೆಯೇ ಈ ದುರಂತದಲ್ಲಿ ಮೃತಪಟ್ಟ ಇನ್ನೊಬ್ಬ ಯುವತಿ ತಮಿಳುನಾಡಿನ ದೇವಿ, ಈ ಆರ್‌ಸಿಬಿ ವಿಜಯೋತ್ಸವ ನೋಡುವುದಕ್ಕೆ ಈಕೆ ಕೆಲಸದಿಂದ ಅರ್ಧಕ್ಕೆ ಬಂದಿದ್ದಳು, ತನ್ನ ಸ್ನೇಹಿತೆಗೆ ಮೆಟ್ರೋದಲ್ಲಿ ಬರುತ್ತಿರುವುದಾಗಿ ತಿಳಿಸಿದ್ದಳು. ನಂತರ ಆನ್‌ಲೈನ್‌ನಲ್ಲಿ ಟಿಕೆಟ್ ಸಿಗದ ನಂತರ ಆಕೆ ಸ್ಟೇಡಿಯಂನತ್ತ ಬಂದಿದ್ದಳು. ಆಕೆಯ ಬ್ಯಾಗ್, ಲ್ಯಾಪ್‌ಟಾಪ್ ಎಲ್ಲವೂ ಆಫೀಸ್ ಡೆಸ್ಕ್‌ನಲ್ಲೇ ಇತ್ತು. ಆದರೆ ಆಕೆ ಮಾತ್ರ ಇಲ್ಲ ಎಂದು ಆಸ್ಪತ್ರೆ ಮುಂದೆ ಕಾಯುತ್ತಿದ್ದ ಆಕೆಯ ಸಹೋದ್ಯೋಗಿಯೊಬ್ಬರು ಹೇಳಿದ್ದಾರೆ.

ಹಾಗೆಯೇ ಕೋಲಾರದ 24 ವರ್ಷದ ಸಹನಾ ಈ ದುರಂತದಲ್ಲಿ ಮಡಿದ ಇನ್ನೊಬ್ಬ ಯುವತಿ. ತನ್ನ 12 ಸಹೋದ್ಯೋಗಿಗಳ ಜೊತೆ ಈ ಆರ್‌ಸಿಬಿ ಸಂಭ್ರಮಾಚರಣೆಗೆ ಬಂದಿದ್ದಳು. ನಾವು ಗೇಟ್ ನಂಬರ್ 7 ರ ಬಳಿ ಕಾಯುತ್ತಿದ್ದೆವು. ಪೊಲೀಸರು ಕ್ಯೂನಲ್ಲಿ ಬರುವಂತೆ ಹೇಳಿದರೆ, ಇತ್ತ ಜನ ಹಿಂದಿನಿಂದ ತಳ್ಳುತ್ತಿದ್ದರು. ನಾವು ಕೆಳಗೆ ಬಿದ್ದೆವು, ಜನ ನಮ್ಮ ಮೇಲೆಯೇ ಓಡಿ ಹೋದರು ಎಂದು ಈ ಸಹನಾ ಸ್ನೇಹಿತೆ ಹೇಳಿದ್ದಾರೆ. ಅಲ್ಲಿ ಯಾವುದೇ ಆಂಬುಲೆನ್ಸ್ ಇರಲಿಲ್ಲ, ನಾವು ಸಹನಾಳನ್ನು ಟಾನಿಕ್ ಶಾಪ್‌ವರೆಗೆ ಎತ್ತಿಕೊಂಡು ಬಂದು ಕಾರಿಗಾಗಿ ಬೇಡಿದೆವು. ಆದರೆ ಆಕೆ ಬದುಕುಳಿಯಲಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..