Final Salute to GC Varun Singh: ಗಗನಯಾನ ಕನಸು ಕಂಡಿದ್ದ ಕ್ಯಾಪ್ಟನ್‌: ಇಂದು ವೀರ ಸೇನಾನಿ ಅಂತ್ಯಕ್ರಿಯೆ!

By Kannadaprabha News  |  First Published Dec 17, 2021, 7:45 AM IST

*ಭಾರತದ ಗಗನ್‌ಯಾನ್‌ ಯೋಜನೆಯಲ್ಲಿ ಭಾಗಿಯಾಗಲು ಅರ್ಜಿ
*ಹಲವು ಸುತ್ತಲ್ಲಿ ತೇರ್ಗಡೆ: ಅಂತಿಮ ನಾಲ್ವರ ಪಟ್ಟಿಸೇರಲು ವಿಫಲ
*ಇಂದು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ


ನವದೆಹಲಿ (ಡಿ. 17): ತಮಿಳುನಾಡಿನ ಕಾಪ್ಟರ್‌ ಅಪಘಾತದಲ್ಲಿ ತೀವ್ರವಾಗಿ (IAF Chopper Crash) ಗಾಯಗೊಂಡು, ಬುಧವಾರ ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ ಗ್ರೂಪ್‌ ಕ್ಯಾಪ್ಟನ್‌ ವರುಣ್‌ಸಿಂಗ್‌ (Captian Varun Singh) , ಭಾರತದ ಬಾಹ್ಯಾಕಾಶ ಯಾನ ಯೋಜನೆಯಾದ ಗಗನ್‌ಯಾನ್‌ನಲ್ಲಿ (Gaganyan) ಭಾಗಿಯಾಗುವ ಅತೀವ ಆಸಕ್ತಿ ಹೊಂದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ. 2023ರಲ್ಲಿ ಭಾರತದ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO) ಗಗನಯಾನ ಕಾರ್ಯಕ್ರಮ ಆಯೋಜಿಸಿದ್ದು, ಇದರಲ್ಲಿ ಭಾಗಿಯಾಗಲು ಭಾರತೀಯ ವಾಯುಪಡೆಯ ನಾಲ್ವರನ್ನು ಆಯ್ಕೆ ಮಾಡಲು ನಿರ್ಧರಿಸಿತ್ತು. ಅದಕ್ಕಾಗಿ ಸಾಕಷ್ಟುಅನುಭವ ಹೊಂದಿರುವ ಪೈಲಟ್‌ಗಳನ್ನು ಆಹ್ವಾನಿಸಿ, ಅವರನ್ನು ವಿವಿಧ ಹಂತದ ಪರೀಕ್ಷೆಗೆ ಒಳಪಡಿಸಿತ್ತು. 

ಈ ಪೈಕಿ ವರುಣ್‌ಸಿಂಗ್‌ ಹಲವು ಹಂತಗಳನ್ನು ಯಶಸ್ವಿಯಾಗಿ ಮುಗಿಸಿದ್ದರು. ಆದರೆ ಅಂತಿಮ ನಾಲ್ವರ ಪಟ್ಟಿಸೇರಲು ಅವರು ಸ್ವಲ್ಪದರಲ್ಲೇ ವಿಫಲರಾಗಿದ್ದರರು ಎಂದು ಗಗನಯಾನಕ್ಕೆ ಗಗನಯಾತ್ರಿಗಳ ಆಯ್ಕೆಯಲ್ಲಿ ಪಾತ್ರ ನಿರ್ವಹಿಸಿದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದರು. ವಿಚಾರದ ಕುರಿತಾಗಿ ಕೆಲ ತಿಂಗಳುಗಳ ಮುಂಚಿತವಾಗಿ ತನ್ನ ಶಾಲೆಗೆ ಬರೆದ ಪತ್ರದಲ್ಲೂ ಸಿಂಗ್‌ ಅವರು ಈ ಬಗ್ಗೆ ಹೇಳಿಕೊಂಡಿದ್ದರು ಎಂದು ತಿಳಿದುಬಂದಿದೆ.

Tap to resize

Latest Videos

ಇತ್ತೀಚೆಗೆ ತಮಿಳುನಾಡಿನ ಕೂನೂರಿನಲ್ಲಿ ಸಂಭವಿಸಿದ ಸೇನಾ ಹೆಲಿಕಾಪ್ಟರ್‌ ದುರಂತದಲ್ಲಿ ಸಶಸ್ತ್ರಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಸೇರಿದಂತೆ 12 ಸೇನಾ ಸಿಬ್ಬಂದಿ ಬಲಿಯಾಗಿದ್ದರು. ಸಿಂಗ್‌ ಅವರು ಈ ದುರ್ಘಟನೆಯಲ್ಲಿ ಬದುಕುಳಿದ ಏಕೈಕ ಸೇನಾಧಿಕಾರಿಯಾಗಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಬುಧವಾರ ಕೊನೆಯುಸಿರೆಳೆದಿದ್ದರು.

ಇಂದು ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅಂತ್ಯಕ್ರಿಯೆ

ಭೋಪಾಲ್‌: ಬೆಂಗಳೂರಿನ ಸೇನಾ ಆಸ್ಪತ್ರೆಯಲ್ಲಿ ಬುಧವಾರ ಕೊನೆಯುಸಿರೆಳೆದ ವಾಯುಪಡೆಯ ಗ್ರೂಪ್‌ ಕ್ಯಾಪ್ಟನ್‌ ವರುಣ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಗುರುವಾರ ಮಧ್ಯಪ್ರದೇಶದ ರಾಜಧಾನಿ ಭೋಪಾಲ್‌ಗೆ ತರಲಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಗೆ ವಿಶೇಷ ವಿಮಾನದಲ್ಲಿ ತರಲಾದ ಅವರ ಪಾರ್ಥಿವ ಶರೀರಕ್ಕೆ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌, ಸೇನಾ ಸಿಬ್ಬಂದಿ ಮತ್ತು ಇತರೆ ಅಧಿಕಾರಿಗಳು ಪುಷ್ಪ ನಮನ ಸಲ್ಲಿಸಿದರು. ಸಿಎಂ ಚೌಹಾಣ್‌ ಅವರು, ವರುಣ್‌ ಸಿಂಗ್‌ ಅವರ ಕುಟುಂಬಸ್ಥರನ್ನು ಭೇಟಿ ಮಾಡಿ, ಸಾಂತ್ವನ ಹೇಳಿದರು. ಅವರ ಅಂತ್ಯಸಂಸ್ಕಾರವನ್ನು ಬೈರಾಗಢದಲ್ಲಿ ಶುಕ್ರವಾರ ಬೆಳಗ್ಗೆ 11 ಗಂಟೆಗೆ ನೆರವೇರಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ವರುಣ್ ಸಿಂಗ್ ನಿಧನಕ್ಕೆ ಪರಿಷತ್ ನಲ್ಲಿ ಸಂತಾಪ

ಸೇನಾ ಹೆಲಿಕಾಪ್ಟರ್ ದುರಂತದಲ್ಲಿ ಎಂಟು ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಟ ಮಾಡಿ ಬುಧವಾರ ಕೊನೆಯುಸಿರೆಳೆದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರಿಗೆ ವಿಧಾನಪರಿಷತ್ ನಲ್ಲಿ ಸಂತಾಪ ಸೂಚಿಸಲಾಯಿತು. ದುರಂತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ವರುಣ್ ಸಿಂಗ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಅಸುನೀಗಿದ್ದರು. ಗುರುವಾರ ಅವರ ಪಾರ್ಥಿವ ಶರೀರವನ್ನು ಹುಟ್ಟೂರಾದ ಮಧ್ಯಪ್ರದೇಶದ ಭೋಪಾಲ್ ಗೆ ರವಾನೆ ಮಾಡಲಾಗಿದೆ.

"ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಹೆಮ್ಮೆ, ಶೌರ್ಯ ಮತ್ತು ಅತ್ಯಂತ ವೃತ್ತಿಪರತೆಯಿಂದ ದೇಶಕ್ಕೆ ಸೇವೆ ಸಲ್ಲಿಸಿದ್ದಾರೆ. ಅವರ ನಿಧನದಿಂದ ನಾನು ತುಂಬಾ ದುಃಖಿತನಾಗಿದ್ದೇನೆ. ದೇಶಕ್ಕೆ ಅವರ ಶ್ರೀಮಂತ ಸೇವೆಯನ್ನು ಎಂದಿಗೂ ಮರೆಯಲಾಗುವುದಿಲ್ಲ. ಅವರ ಕುಟುಂಬ ಮತ್ತು ಸ್ನೇಹಿತರಿಗೆ ಸಂತಾಪಗಳು. ಓಂ ಶಾಂತಿ," ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ, ವರುಣ್ ಸಿಂಗ್ ನಿಧನಕ್ಕೆ ಸಂತಾಪ ಸೂಚಿಸಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ:

1) IVHM Technology: ವಿಮಾನ ಹಾರಾಟದಲ್ಲಿರುವಾಗಲೇ ದುರಸ್ತಿ ಮಾಡಬಹುದು!

2) IAF Helicopter Crash: ದುರಂತದಲ್ಲಿ ಮಡಿದ ಯೋಧ ಪೃಥ್ವಿ ಸಿಂಗ್‌ ಪುತ್ರಿಗೆ ವಾಯುಸೇನೆ ಸೇರುವಾಸೆ

3) Salute to Bipin Rawat: ರಕ್ತಚಿತ್ರಕಲೆ ಮೂಲಕ ಬಿಪಿನ್ ರಾವತ್‌ರಿಗೆ ಶ್ರದ್ಧಾಂಜಲಿ

click me!