ಕಾಂಗ್ರೆಸ್, ಬಿಜೆಪಿ, AAP ಸರ್ಕಾರಗಳಿಗೆ ಭಾರವಾದ ಗ್ಯಾರಂಟಿ; ಬೊಕ್ಕಸಕ್ಕೆ ಹೊಡೆತ !

Published : Nov 18, 2026, 09:30 AM IST
Guarantee Shceme

ಸಾರಾಂಶ

ಗ್ಯಾರಂಟಿ ಯೋಜನೆಗಳು ಮತ್ತು ಸಬ್ಸಿಡಿಗಳಿಂದಾಗಿ ಕರ್ನಾಟಕ ಸೇರಿದಂತೆ ಐದು ರಾಜ್ಯಗಳ ಆರ್ಥಿಕ ಮಿಗತೆ ಕುಸಿದಿದ್ದು, ವಿತ್ತೀಯ ಕೊರತೆ ಹೆಚ್ಚಾಗುತ್ತಿದೆ. ಪಿಆರ್‌ಎಸ್‌ ಅಧ್ಯಯನದ ಪ್ರಕಾರ, 2026-27ರಲ್ಲಿ ಉಚಿತ ಯೋಜನೆಗಳಿಗೆ 4 ಲಕ್ಷ ಕೋಟಿ ರೂ. ವೆಚ್ಚವಾಗಲಿದ್ದು, ರಾಜ್ಯಗಳು ಆದಾಯ ಕೊರತೆ ಎದುರಿಸುತ್ತಿವೆ.

ನವದೆಹಲಿ: ಸಬ್ಸಿಡಿ ಮತ್ತು ನೇರ ಹಣ ವರ್ಗಾವಣೆಯಂಥ ಗ್ಯಾರಂಟಿ ಯೋಜನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ದೇಶಾದ್ಯಂತ ರಾಜ್ಯಗಳ ವಿತ್ತೀಯ ಕೊರತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಸಾಗುತ್ತಿದೆ. ಈ ಎರಡು ಅಂಶಗಳು ಬಜೆಟ್‌ನಲ್ಲಿ ಅತಿ ಹೆಚ್ಚು ಪಾಲು ಹೊಂದಿದ್ದು, ಕಳೆದ ಹಣಕಾಸು ವರ್ಷದವರೆಗೆ ಆರ್ಥಿಕ ಮಿಗತೆ ಸಾಧಿಸುತ್ತಿದ್ದ ಕರ್ನಾಟಕದಂಥ ಐದು ರಾಜ್ಯಗಳು ಇಂದು ಆದಾಯ ಕೊರತೆ ಎದುರಿಸುತ್ತಿವೆ ಎಂದು ಹೊಸ ಅಧ್ಯಯನ ವರದಿಯೊಂದರಲ್ಲಿ ತಿಳಿಸಲಾಗಿದೆ.

ಕೋವಿಡ್‌ ಬಳಿಕ ರಾಜ್ಯಗಳ ವಿತ್ತೀಯ ಕೊರತೆ ನಿಧಾನವಾಗಿ ಹೆಚ್ಚಾಗುತ್ತಿದೆ. 2022-23ರಲ್ಲಿ ಜಿಡಿಪಿಯ ಶೇ.0.23ರಷ್ಟಿದ್ದ ಆದಾಯ ಕೊರತೆ 2025-26ರಲ್ಲಿ ಶೇ.0.71ಕ್ಕೆ ಏರಿಕೆಯಾಗಿದೆ. ರಾಜ್ಯಗಳು ಗೃಹಲಕ್ಷ್ಮಿ ಸೇರಿದಂತೆ 128 ವಿವಿಧ ಮಾದರಿಯ ನೇರ ಹಣ ವರ್ಗಾವಣೆ ಯೋಜನೆಗೆ ಹೆಚ್ಚಿನ ವೆಚ್ಚ ಮಾಡುತ್ತಿರುವ ಹಿನ್ನೆಲೆಯಲ್ಲಿ ಈ ಸಮಸ್ಯೆ ಸೃಷ್ಟಿಯಾಗಿದೆ ಎಂದು ರಾಜ್ಯಗಳ ಹಣಕಾಸು ಸ್ಥಿತಿಗತಿ ಕುರಿತ 2026-27ನೇ ಸಾಲಿನ ಪಿಆರ್‌ಎಸ್‌ ಶಾಸಕಾಂಗ ಸಂಶೋಧನಾ ವಾರ್ಷಿಕ ವರದಿಯಲ್ಲಿ ಹೇಳಲಾಗಿದೆ.

ಜಿಎಸ್ಟಿ ಸಂಗ್ರಹ, ಕಲ್ಯಾಣ ಕಾರ್ಯಕ್ರಮಗಳ ಮೇಲಿನ ವೆಚ್ಚ, ಖನಿಜಗಳ ಮೇಲಿಂದ ಸಂಗ್ರಹಿಸುವ ಆದಾಯ ಮತ್ತು ಸಾರ್ವಜನಿಕ ಸಾಲದ ಕುರಿತ ಮಾಹಿತಿ ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ.

2026-27ರಲ್ಲಿ ಒಟ್ಟು 10 ರಾಜ್ಯಗಳ ಆದಾಯ ಕೊರತೆ ಮತ್ತಷ್ಟು ಬಿಗಡಾಯಿಸಿದೆ. ಇನ್ನು ಈ ಹಿಂದೆ ವಿತ್ತೀಯ ಮಿಗತೆ ಸಾಧಿಸುತ್ತಿದ್ದ ಕರ್ನಾಟಕ, ಛತ್ತೀಸ್‌ಗಢ, ತೆಲಂಗಾಣದಂಥ ಐದು ರಾಜ್ಯಗಳು ಈಗ ಆದಾಯದ ಕೊರತೆ ಎದುರಿಸುತ್ತಿವೆ.

ಸಬ್ಸಿಡಿ ಮತ್ತು ನೇರ ಹಣ ವರ್ಗಾವಣೆ ಯೋಜನೆಗಳಿಗೆ 2018-19ರಲ್ಲಿ ರಾಜ್ಯಗಳು ಒಟ್ಟು ಆದಾಯದ ಶೇ.16ರಷ್ಟು ವೆಚ್ಚ ಮಾಡುತ್ತಿದ್ದರೆ, 2023-24ರಲ್ಲಿ ಅದು ಶೇ.21ಕ್ಕೆ ಏರಿದೆ. ಈ ಅವಧಿಯಲ್ಲಿ ಸಬ್ಸಿಡಿ ಪ್ರಮಾಣ ಶೇ.12 ಮತ್ತು ನೇರ ನಗದು ವರ್ಗಾವಣೆಗೆ ಬಳಸುವ ಹಣದ ಪ್ರಮಾಣ ಶೇ.24ರಷ್ಟು ಏರಿಕೆ ಕಂಡಿದೆ. ಒಟ್ಟಾರೆ ಇಂಥ ಯೋಜನೆಗಳಿಗೆ ರಾಜ್ಯಗಳು ಮಾಡುತ್ತಿರುವ ವೆಚ್ಚ 2026-27ರಲ್ಲಿ 4 ಲಕ್ಷ ಕೋಟಿ ರು.ಗೆ ತಲುಪಿದೆ. ಇದು ಜಿಡಿಪಿಯ ಶೇ.1ರಷ್ಟಾಗಿದೆ. ಆದರೆ, 2022-23ರಲ್ಲಿ ಇದು ಜಿಡಿಪಿಯ ಶೇ.0.6ರಷ್ಟಿತ್ತು ಎಂದು ಹೇಳಲಾಗಿದೆ.

ಹಣ ಎಲ್ಲಿಗೆ?

2023-24ರಲ್ಲಿ ಆಂಧ್ರಪ್ರದೇಶ ತನ್ನ ಆದಾಯದ ಶೇ.20ರಷ್ಟನ್ನು, ಛತ್ತೀಸ್‌ಗಢ ಶೇ.22ರಷ್ಟು ಮತ್ತು ಪಶ್ಚಿಮ ಬಂಗಾಳ ಶೇ.18ರಷ್ಟು ಹಣವನ್ನು ನೇರ ನಗದು ವರ್ಗ ಯೋಜನೆಗೆ ಬಳಸಿವೆ. ಇನ್ನು ಆಂಧ್ರ ಮತ್ತು ಛತ್ತೀಸ್‌ಗಢ ಒಟ್ಟು ಆದಾಯದಲ್ಲಿ ಶೇ.40ರಷ್ಟು ಹಣವನ್ನು ಸಬ್ಸಿಡಿ ಮತ್ತು ನೇರ ನಗದು ಯೋಜನೆಗೆ ಬಳಸಿವೆ. ಇನ್ನು ಪಂಜಾಬ್ ಸರ್ಕಾರದ ಸಬ್ಸಿಡಿಯಲ್ಲಿ ಶೇ.70ರಷ್ಟು ವಿದ್ಯುತ್‌ಗೆ, ಉತ್ತರಪ್ರದೇಶದಲ್ಲಿ ಶೇ.56 ವಿದ್ಯುತ್‌ಗೆ ನೀಡಲಾಗಿದೆ ಎಂದು ವರದಿ ಹೇಳಿದೆ.

ನಿತ್ಯದ ವೆಚ್ಚಕ್ಕೆ ಆದಾಯ

ರಾಜ್ಯಗಳ ಶೇ.80ರಷ್ಟು ವೆಚ್ಚವು ಸಾಲದ ಮೇಲಿನ ಬಡ್ಡಿ ಮರುಪಾವತಿ, ವೇತನ, ಪಿಂಚಣಿಗೆ, ಸಬ್ಸಿಡಿಗಳಂಥ ನಿತ್ಯದ ವೆಚ್ಚಗಳ ಮೇಲೆಯೇ ಹೋಗುತ್ತದೆ ಎಂದು ಹೇಳಲಾಗಿದೆ. ಈ ಮೂಲಕ ಅಭಿವೃದ್ಧಿ ಕಾರ್ಯಗಳಿಗೆ ಕಡಿಮೆ ಹಣ ಸಿಗುತ್ತಿದೆ ಎಂದೂ ಎಚ್ಚರಿಸಲಾಗಿದೆ.

ವರದಿಯಲ್ಲೇನಿದೆ?

- ಕೊರೋನಾ ಸಾಂಕ್ರಾಮಿಕ ರೋಗದ ಹಾವಳಿ ಬಳಿಕ ರಾಜ್ಯಗಳ ವಿತ್ತೀಯ ಕೊರತೆ ನಿಧಾನವಾಗಿ ಹೆಚ್ಚಳ

- 2022-23ರಲ್ಲಿ ಜಿಡಿಪಿಯ ಶೇ.0.23ರಷ್ಟಿದ್ದ ರಾಜ್ಯಗಳ ಆದಾಯ ಕೊರತೆ 2025-26ರಲ್ಲಿ ಶೇ.0.71ಕ್ಕೇರಿಕೆ

- ಗೃಹಲಕ್ಷ್ಮಿ ಸೇರಿ 128 ವಿವಿಧ ಮಾದರಿಯ ನೇರ ಹಣ ವರ್ಗಾವಣೆಗೆ ಹೆಚ್ಚಿನ ವೆಚ್ಚದಿಂದಾಗಿ ಭಾರಿ ಸಮಸ್ಯೆ

- ರಾಜ್ಯಗಳ ಹಣಕಾಸು ಸ್ಥಿತಿಗತಿ ಕುರಿತ ಪಿಆರ್‌ಎಸ್‌ ಸಂಸ್ಥೆಯ ವಾರ್ಷಿಕ ವರದಿಯಲ್ಲಿ ಹಲವು ಮಾಹಿತಿ

ಗ್ಯಾರಂಟಿಗೆ ಒಂದೇ ವರ್ಷದಲ್ಲಿ 4 ಲಕ್ಷ ಕೋಟಿ ರು. ಖರ್ಚು!

ಉಚಿತ ಯೋಜನೆಗಳಿಗೆ ರಾಜ್ಯಗಳು ಮಾಡುತ್ತಿರುವ ವೆಚ್ಚ 2026-27ರಲ್ಲಿ 4 ಲಕ್ಷ ಕೋಟಿ ರು.ಗೆ ತಲುಪಿದೆ. ಇದು ಜಿಡಿಪಿಯ ಶೇ.1ರಷ್ಟಾಗಿದೆ. ಆದರೆ, 2022-23ರಲ್ಲಿ ಇದು ಜಿಡಿಪಿಯ ಶೇ.0.6ರಷ್ಟಿತ್ತು ಎಂದು ಹೇಳಲಾಗಿದೆ.

ಯಾವುದಕ್ಕೆ ಎಷ್ಟು ವೆಚ್ಚ?

- ನೇರ ನಗದು ವರ್ಗಾವಣೆಗೆ ಆಂಧ್ರ 20%, ಛತ್ತೀಸ್‌ಗಢ 22%, ಪಶ್ಚಿಮ ಬಂಗಾಳದಿಂದ 18% ವೆಚ್ಚ

- ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ ಸರ್ಕಾರದ ಸಬ್ಸಿಡಿ ಮೊತ್ತದಲ್ಲಿ ಶೇ.70ರಷ್ಟು ಪಾಲು ವಿದ್ಯುತ್‌ಗೇ ವೆಚ್ಚ

- ಉತ್ತರಪ್ರದೇಶದ ಬಿಜೆಪಿ ಸರ್ಕಾರದಲ್ಲಿ ಶೇ.56ರಷ್ಟು ಸಬ್ಸಿಡಿ ವಿದ್ಯುತ್‌ಗಾಗಿ ಖರ್ಚು ಎಂದ ಪಿಆರ್‌ಎಸ್‌

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಅಮೆಜಾನ್‌ನಲ್ಲಿ ಹೆಚ್ಚು ದಿನಸಿ ಆರ್ಡರ್ ಮಾಡಿದ್ದೇ ತಪ್ಪಾಯ್ತಾ? ಗ್ರಾಹಕನ ಮೇಲೆ ಕೂಗಾಡಿದ ಡೆಲಿವರಿ ಬಾಯ್!
India Latest News Live: ಕಾಂಗ್ರೆಸ್, ಬಿಜೆಪಿ, AAP ಸರ್ಕಾರಗಳಿಗೆ ಭಾರವಾದ ಗ್ಯಾರಂಟಿ; ಬೊಕ್ಕಸಕ್ಕೆ ಹೊಡೆತ !