
ನವದೆಹಲಿ(ಜು.26): ‘ನಮ್ಮನ್ನು ಜಿರಳೆಗಳು ಎಂದು ಕರೆದಿದ್ದಕ್ಕೆ ಸಿಜೆಐಗೆ ಧನ್ಯವಾದಗಳು. ಅವರಿಂದಾಗಿಯೇ ಇಂದು ನೀಟ್ ವಿರುದ್ಧದ ಹೋರಾಟ ಯಶಸ್ವಿಯಾಗಿದೆ’ ಎಂದು ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸ್ಥಾಪಕ ಅಭಿಜೀತ್ ದೀಪ್ಕೆ ಅವರು ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ನ್ಯಾ। ಸೂರ್ಯಕಾಂತ್ ಅವರನ್ನು ಉದ್ದೇಶಿಸಿ ಹೇಳಿದ್ದಾರೆ.
ಕೇಂದ್ರ ಶಿಕ್ಷಣ ಸಚಿವ ಸ್ಥಾನಕ್ಕೆ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ಬೆನ್ನಲ್ಲೇ ಜಂತರ್ ಮಂತರ್‌ನಲ್ಲಿ ತಮ್ಮ ಬೆಂಬಲಿಗರನ್ನು ಊದ್ದೇಶಿಸಿ ಮಾತನಾಡಿದ ದೀಪ್ಕೆ, ‘ಅವರು (ನ್ಯಾ.ಸೂರ್ಯಕಾಂತ್) ನಮ್ಮನ್ನು ಜಿರಳೆಗಳು ಎಂದು ಕರೆಯದೆ ಇದ್ದರೆ ನಾವು ಅಮೆರಿಕದಿಂದ ಭಾರತಕ್ಕೆ ಬರುತ್ತಿರಲಿಲ್ಲ ಹಾಗೂ ಈ ಹೋರಾಟ ನಡೆಯುತ್ತಿರಲಿಲ್ಲ’ ಎಂದರು.
ಜೊತೆಗೆ, ‘ನೀವು ಹೆದರದೇ ಇದ್ದರೆ ಮತ್ತು ಈ ಸರ್ಕಾರದ ಮುಂದೆ ತಲೆಬಾಗದೇ ಇದ್ದರೆ ನೀವು ರಾಜೀನಾಮೆ ಪಡೆಯಬಹುದು ಎಂಬುದಕ್ಕೆ ಇಂದಿನ ಘಟನೆಯೇ ಸಾಕ್ಷಿ. ನೀವು ಮಾತನಾಡಲು ಹೆದರುತ್ತೀರಿ ಎಂದಾದಲ್ಲಿ ಅಂದೆಂಥ ಪ್ರಜಾಪ್ರಭುತ್ವ? ನಾವು ಅವರನ್ನು ಆರಿಸಿಕಳುಹಿಸಿದ್ದಕ್ಕೆ ಅವರು ತಮ್ಮನ್ನು ತಾವು ರಾಜರು ಎಂದುಕೊಂಡಿದ್ದಾರೆ. ಇದು ಮೊದಲ ವಿಕೆಟ್. ಇದು ಆರಂಭವಷ್ಟೇ’ ಎಂದು ನುಡಿದರು.
ಮೇ 15ರಂದು ಅಕ್ರಮ ಪದವಿ ಪಡೆದ ಕೆಲವು ವರ್ಗದ ನಿರುದ್ಯೋಗಿ ಯುವಕರ ಬಗ್ಗೆ ಮಾತನಾಡುತ್ತಿದ್ದ ಸಿಜೆಐ, ಅವರನ್ನು ‘ಕಾಕ್ರೋಚ್’ ಎಂದು ಸಂಬೋಧಿಸಿದ್ದರು. ಇದರ ಬೆನ್ನಲ್ಲೇ, ಅಮೆರಿಕದಲ್ಲಿದ್ದ ದೀಪ್ಕೆ ದೇಶದ ಯುವಕರ ಪ್ರತಿನಿಧಿಸಲೆಂದು ‘ಕಾಕ್ರೋಚ್ ಜನತಾ ಪಾರ್ಟಿ’ ಎಂಬ ಹೆಸರಿನ ಸಾಮಾಜಿಕ ಮಾಧ್ಯಮ ಪೇಜ್ ಅರಂಭಿಸಿದ್ದರು. ಇದಕ್ಕೆ ಯುವಜನರಿಂದ ಭಾರೀ ಬೆಂಬಲ ವ್ಯಕ್ತವಾಗಿತ್ತು. ಇದಾದ ತಿಂಗಳಲ್ಲೇ ಸೋರಿಕೆಯಾದ ನೀಟ್ ಪ್ರಶ್ನೆಪತ್ರಿಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಜೂ.6ರಂದು ಅಮೆರಿಕದ ಬೋಸ್ಟನ್‌ನಿಂದ ದೆಹಲಿಗೆ ಬಂದಿಳಿದ ದೀಪ್ಕೆ, ಪ್ರಧಾನ್ ರಾಜೀನಾಮೆಗೆ ಪಟ್ಟು ಹಿಡಿದು ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದರು.
- ಸೂರ್ಯಕಾಂತ್ ಅವರು ಜಿರಳೆ ಪದ ಬಳಸಿದ್ದರಿಂದಲೇ ನಮ್ಮ ಹೋರಾಟ ಯಶಸ್ವಿ
- ಸೂರ್ಯಕಾಂತ್ ಹಾಗೆ ಹೇಳದಿದ್ರೆ ನಾನು ಅಮೆರಿಕದಿಂದ ಭಾರತಕ್ಕೆ ಬರುತ್ತಿರಲಿಲ್ಲ
- ನಾವು ಗೆಲ್ಲಿಸಿ ಕಳಿಸಿದ್ದಕ್ಕೆ ತಮ್ಮನ್ನು ತಾವು ಅವರು ರಾಜರು ಎಂದುಕೊಂಡಿದ್ದಾರೆ
- ಹೆದರದಿದ್ದರೆ ನೀವೂ ರಾಜೀನಾಮೆ ಪಡೀಬಹುದು ಎಂಬುದಕ್ಕೆ ಇಂದಿನ ಘಟನೆ ಸಾಕ್ಷಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ