ಇಟಲಿಯಿಂದ ನನ್ನ ಪುತ್ರಿ ಮರಳಿದ್ದೇ ವಿಸ್ಮಯ!

By Kannadaprabha NewsFirst Published Mar 19, 2020, 10:03 AM IST
Highlights

ಇಟಲಿಯಿಂದ ನನ್ನ ಪುತ್ರಿ ಮರಳಿದ್ದೇ ವಿಸ್ಮಯ| ನನ್ನ ಮನವಿಗೆ ಭಾರತ ಸರ್ಕಾರದ ತ್ವರಿತ ಸ್ಪಂದನೆ ಸಂತಸ ತಂದಿದೆ| ಸರ್ಕಾರವನ್ನು ಬೈಯುತ್ತಿದ್ದ ನನ್ನ ಮನಸ್ಸು ಈಗ ಬದಲಾಗಿದೆ| ಮೋದಿ, ರಾಯಭಾರ ಕಚೇರಿ ಸಿಬ್ಬಂದಿಗೆ ಥಾಣೆಯ ಕದಂ ಧನ್ಯವಾದ

ಥಾಣೆ[ಮಾ.19]: ಕೊರೋನಾ ವೈರಸ್‌ ತಾಂಡವವಾಡುತ್ತಿರುವ ಇಟಲಿಯಿಂದ ಬಚಾವಾಗಿ ಬಂದ ತಮ್ಮ ಪುತ್ರಿಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವರ ತಂದೆ ಬರೆದುಕೊಂಡಿದ್ದು, ಪಾರು ಮಾಡಿದ ಭಾರತ ಸರ್ಕಾರಕ್ಕೆ ತುಂಬು ಹೃದಯದ ಧನ್ಯವಾದ ಸಮರ್ಪಿಸಿದ್ದಾರೆ.

ಇಟಲಿಯಲ್ಲಿ ಕಾಲೇಜು ಅಧ್ಯಯನಕ್ಕೆ ಹೋದ ತಮ್ಮ ಪುತ್ರಿ ಪಟ್ಟಆತಂಕದ ಕ್ಷಣಗಳು ಹಾಗೂ ಭಾರತ ಸರ್ಕಾರ ಆಕೆಯನ್ನು ಸುರಕ್ಷಿತವಾಗಿ ಕರೆದುಕೊಂಡು ಬಂದ ಪ್ರಸಂಗಗಳನ್ನು ಥಾಣೆಯ ಸುಜಯ್‌ ಕದಂ ಅವರು ವಿವರಿಸಿದ್ದಾರೆ.

ಕದಂ ನೀಡಿದ ವಿವರ ಇಲ್ಲಿದೆ

- ನನ್ನ ಮಗಳು ಫೆಬ್ರವರಿ 4ರಂದು ಇಟಲಿಯ ಮಿಲಾನ್‌ಗೆ ಹೋದಳು. ಅಲ್ಲಿ ಅವಳ ಕಾಲೇಜು ಫೆಬ್ರವರಿ 20ರಂದು ಆರಂಭ ಆಗಬೇಕಿತ್ತು. ಆದರೆ ಕೊರೋನಾ ವ್ಯಾಪಿಸುತ್ತಿದ್ದ ಕಾರಣ ಕಾಲೇಜು ಆರಂಭದ ದಿನಾಂಕ ಮುಂದೂಡಿಕೆಯಾಯಿತು.

ಫೆಬ್ರವರಿ 28ರಂದು ಆಕೆ ನಮ್ಮ ಜತೆ ಮಾತನಾಡಿ ಇಲ್ಲಿ ಏನೂ ತೊಂದರೆ ಇಲ್ಲ ಎಂದಳು. ಹಾಗಾಗಿ ಆಕೆಯ ಬಾಡಿಗೆ ಮನೆ ಒಪ್ಪಂದವನ್ನು 4 ತಿಂಗಳ ಕಾಲ ಮುಂದುವರಿಸಿಕೊಂಡೆವು. ಆದರೆ ಮಾಚ್‌ರ್‍ 10ರಂದು ಅಲ್ಲಿ ಕೊರೋನಾ ತೀವ್ರಗೊಂಡು ಎಲ್ಲ ಸೂಪರ್‌ ಮಾರ್ಕೆಟ್‌ ಬಂದ್‌ ಆದವು. ಆಗ ಆಕೆ ‘ನನ್ನ ಬಳಿ ಕೇವಲ 15 ದಿನಕ್ಕೆ ಆಗುವಷ್ಟುಆಹಾರದ ದಾಸ್ತಾನು ಇದೆ’ ಎಂದು ಕಳವಳ ವ್ಯಕ್ತಪಡಿಸಿದಳು.

‘ಹಾಗಿದ್ದರೆ ಕೂಡಲೇ ಇಟಲಿಯಿಂದ ಮರಳಿ ಬಾ’ ಎಂದು ನಾವು ಆಕೆಗೆ ತಿಳಿಸಿದೆವು. ಆದರೆ ಆಕೆ ಭಾರತಕ್ಕೆ ವಾಪಸು ಬರಲು ‘ಮೆಡಿಕಲ್‌ ಸರ್ಟಿಫಿಕೇಟ್‌’ ಕಡ್ಡಾಯಗೊಳಿಸಲಾಗಿತ್ತು. ಇದರಿಂದ ತೊಂದರೆಗೀಡಾದೆವು.

ನಾನು ಮಾರ್ಚ್ 12ರಂದು ಇಟಲಿಯಲ್ಲಿನ ಭಾರತೀಯ ದೂತಾವಾಸದ ವೆಬ್‌ಸೈಟ್‌ಗೆ ಹೋಗಿ ಇದನ್ನೆಲ್ಲ ವಿವರಿಸಿದೆ. ಒಂದೇ ದಿನದಲ್ಲಿ ಮಾ.13ರಂದು ದೂತಾವಾಸವು ಆಕೆಗೆ ಮೆಡಿಕಲ್‌ ಸರ್ಟಿಫಿಕೇಟ್‌ ಕೊಡಿಸಿತು. ಅಂದು ರಾತ್ರಿ 10.30ಕ್ಕೆ ನನಗೆ ಕರೆ ಮಾಡಿದ ಪುತ್ರಿಯು, ‘ನಾನು ಭಾರತಕ್ಕೆ ವಾಪಸು ಬರುತ್ತಿದ್ದೇನೆ. ದೂತಾವಾಸ ನನಗೆ ಸಹಾಯ ಮಾಡಿದೆ’ ಎಂದಳು.

ಬಳಿಕ ಆಕೆ ಮಾ.15ರಂದು ದಿಲ್ಲಿಗೆ ಬಂದಳು. ಅಲ್ಲಿ ಕೂಡ ಆಕೆಗೆ ಉತ್ತಮ ವ್ಯವಸ್ಥೆ ಮಾಡಲಾಗಿತ್ತು.

ನಾನು ಭಾರತ ಸರ್ಕಾರವನ್ನು ಈ ಹಿಂದೆ ಬೈಯ್ಯುತ್ತಿದ್ದೆ. ಆದರೆ ಈಗ ನನ್ನ ಮನವಿಗೆ ಓಗೊಟ್ಟು ತ್ವರಿತಗತಿಯಲ್ಲಿ ಪುತ್ರಿಗೆ ಸಹಾಯ ಮಾಡಿದ ಸರ್ಕಾರದ ಕಾರ್ಯಚಟುವಟಿಕೆ ನನ್ನನ್ನು ವಿಸ್ಮಯಗೊಳಿಸಿದೆ. ಈ ಸಂತಸದ ಕ್ಷಣ ವಿವರಿಸಲು ನನ್ನ ಬಳಿ ಶಬ್ದಗಳೇ ಇಲ್ಲ. ಇಟಲಿಯಲ್ಲಿನ ಭಾರತೀಯ ರಾಯಭಾರ ಸಿಬ್ಬಂದಿಗೆ, ಏರ್‌ ಇಂಡಿಯಾ ಸಿಬ್ಬಂದಿಗೆ ನಾನು ಆಭಾರಿ. ಭಾರತ ಸರ್ಕಾರಕ್ಕೆ ಹ್ಯಾಟ್ಸಾಫ್‌. ವಿಶೇಷವಾಗಿ ನಮ್ಮ ಪ್ರಧಾನಿಗೆ.

click me!