ಸೇನೆಯ ಕನಸು ಕಂಡಿದ್ದ 21ರ ಹುಡುಗ ಇಂಡಿಯನ್‌ ಮಿಲಿಟರಿ ಅಕಾಡೆಮಿಯ ತರಬೇತಿ ವೇಳೆಯಲ್ಲೇ ಕುಸಿದು ಬಿದ್ದು ಸಾವು!

Published : Aug 18, 2026, 07:18 PM IST
IMA Cadet Nishant Dhankhar

ಸಾರಾಂಶ

ಡೆಹ್ರಾಡೂನ್‌ನ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಯಲ್ಲಿ ತರಬೇತಿ ಪಡೆಯುತ್ತಿದ್ದ 21 ವರ್ಷದ ಕೆಡೆಟ್‌ ನಿಶಾಂತ್‌ ಧನ್‌ಕರ್‌, ಜಂಗಲ್ ಕ್ಯಾಂಪ್ ತರಬೇತಿ ವೇಳೆ ಕುಸಿದುಬಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.

ನವದೆಹಲಿ (ಆ.18): ಡೆಹ್ರಾಡೂನ್‌ನ ಪ್ರಸಿದ್ಧ 'ಇಂಡಿಯನ್ ಮಿಲಿಟರಿ ಅಕಾಡೆಮಿ'ಯಲ್ಲಿ (IMA) ದೈಹಿಕ ತರಬೇತಿ ಪಡೆಯುತ್ತಿದ್ದ ವೇಳೆ ಕುಸಿದು ಬಿದ್ದಿದ್ದ 21 ವರ್ಷದ ಕೆಡೆಟ್‌ ನಿಶಾಂತ್‌ ಧನ್‌ಕರ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಗಸ್ಟ್ 15 ರಂದು ಕೊನೆಯುಸಿರೆಳೆದಿದ್ದಾರೆ. ತರಬೇತಿ ವೇಳೆ ಇದ್ದಕ್ಕಿದ್ದಂತೆ ಕುಸಿದುಬಿದ್ದಿದ್ದ ನಿಶಾಂತ್ ಅವರ ಅಗಲಿಕೆ, ಹರ್ಯಾಣದ ಝಜ್ಜರ್ ಜಿಲ್ಲೆಯ ಕಸ್ನಿ ಗ್ರಾಮದ ಅವರ ಕುಟುಂಬ ಹಾಗೂ ಇಡೀ ಗ್ರಾಮವನ್ನೇ ತೀವ್ರ ಶೋಕಸಾಗರದಲ್ಲಿ ಮುಳುಗಿಸಿದೆ. ಭಾರತೀಯ ಸಶಸ್ತ್ರ ಪಡೆಗಳಲ್ಲಿ ಸೇವೆ ಸಲ್ಲಿಸಿದ ಸುದೀರ್ಘ ಪಾರಂಪರಿಕ ಕುಟುಂಬದಿಂದ ಬಂದಿದ್ದ ನಿಶಾಂತ್, ಸೇನಾ ಅಧಿಕಾರಿಯಾಗಬೇಕೆಂಬ ಮಹತ್ವಾಕಾಂಕ್ಷೆಯೊಂದಿಗೆ ಘಟನೆಗೂ ಕೇವಲ ಒಂದು ತಿಂಗಳಷ್ಟೇ ಮುಂಚಿತವಾಗಿ ಅಂದರೆ ಜುಲೈ 10, 2026 ರಂದು ಐಎಂಎಗೆ ರೆಗ್ಯುಲರ್ ಎಂಟ್ರಿ ಕೆಡೆಟ್ ಆಗಿ ಸೇರ್ಪಡೆಯಾಗಿದ್ದರು.

ಜಂಗಲ್‌ ಕ್ಯಾಂಪ್‌ ತರಬೇತಿ ವೇಳೆ ಘಟಿಸಿದ ದುರಂತ

ಆಗಸ್ಟ್ 9 ರಂದು ಜಂಗಲ್ ಕ್ಯಾಂಪ್ ತರಬೇತಿಯ ಭಾಗವಾಗಿ ದಿನನಿತ್ಯದ ಓಟದ ಅಭ್ಯಾಸದಲ್ಲಿ ನಿಶಾಂತ್ ಭಾಗವಹಿಸಿದ್ದರು. ಈ ವೇಳೆ ಅವರು ದಿಢೀರನೆ ಕುಸಿದುಬಿದ್ದು ಪ್ರಜ್ಞೆ ತಪ್ಪಿದ್ದರು. ತಕ್ಷಣವೇ ಅವರನ್ನು ಡೆಹ್ರಾಡೂನ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆರೋಗ್ಯ ಸ್ಥಿತಿ ಮತ್ತಷ್ಟು ಕ್ಷೀಣಿಸಿದ ಹಿನ್ನೆಲೆಯಲ್ಲಿ, ಹೆಚ್ಚಿನ ಚಿಕಿತ್ಸೆಗಾಗಿ ನವದೆಹಲಿಯ 'ಆರ್ಮಿ ಹಾಸ್ಪಿಟಲ್ ರಿಸರ್ಚ್ ಆಂಡ್ ರೆಫರಲ್'ಗೆ ಸ್ಥಳಾಂತರಿಸಲಾಯಿತು. ಚಿಕಿತ್ಸೆಯ ಮಧ್ಯೆ ಚಂಡೀಗಢಕ್ಕೂ ಕರೆದೊಯ್ಯಲಾಗಿತ್ತು ಎಂದು ಮೂಲಗಳು ತಿಳಿಸಿವೆ.

ತೀವ್ರ ವೈದ್ಯಕೀಯ ಪ್ರಯತ್ನಗಳ ಹೊರತಾಗಿಯೂ, ನಿಶಾಂತ್ ಚಿಕಿತ್ಸೆಗೆ ಸ್ಪಂದಿಸದೆ ಆಗಸ್ಟ್ 15ರ ಶನಿವಾರದಂದು ಅಂಗಾಂಗ ವೈಫಲ್ಯದಿಂದಾಗಿ ಮೃತಪಟ್ಟಿದ್ದಾರೆ. ಯಾವುದೇ ಬಾಹ್ಯ ಗಾಯ ಅಥವಾ ಬಿದ್ದಿದ್ದರಿಂದ ಉಂಟಾದ ಆಘಾತದ ಕುರಿತು ವರದಿಯಾಗಿಲ್ಲ.

ಮೂರು ತಲೆಮಾರಿನ ಮಿಲಿಟರಿ ಪರಂಪರೆ

ಮೃತ ನಿಶಾಂತ್ ಕುಟುಂಬದ ಏಕೈಕ ಪುತ್ರನಾಗಿದ್ದರು. ಇವರ ತಂದೆ ಬಿರೇಂದರ್ ಧನ್ಕರ್ ಅಂಚೆ ಇಲಾಖೆಯಲ್ಲಿ ಪೋಸ್ಟ್‌ಮನ್ ಆಗಿ ಕೆಲಸ ಮಾಡುತ್ತಿದ್ದಾರೆ. ನಿಶಾಂತ್ ಅವರ ಹಿರಿಯ ಸಹೋದರಿ ಭಾರತೀಯ ವಾಯುಪಡೆಯಲ್ಲಿ (IAF) ಫ್ಲೈಯಿಂಗ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿದ್ದು, ಘಟನೆಯ ಸಮಯದಲ್ಲಿ ಶ್ರೀನಗರದಲ್ಲಿ ನಿಯೋಜನೆಗೊಂಡಿದ್ದರು. ಸುದ್ದಿ ತಿಳಿಯುತ್ತಿದ್ದಂತೆ ಅವರು ಕುಟುಂಬದ ಬಳಿಗೆ ಧಾವಿಸಿದ್ದರು.

ನಿಶಾಂತ್ ಕುಟುಂಬದಲ್ಲಿ ದೇಶಸೇವೆಯ ರಕ್ತ ಹರಿಯುತ್ತಿದೆ. ಇವರ ಅಜ್ಜ ರಾಮ್ ಸಿಂಗ್ ಭಾರತೀಯ ಭೂಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಚಿಕ್ಕಪ್ಪ ಸುನಿಲ್ ಧನ್ಕರ್ ಪ್ರಸ್ತುತ ಕರ್ನಲ್ ಆಗಿದ್ದರೆ, ಮತ್ತೊಬ್ಬ ಹಿರಿಯ ಸಂಬಂಧಿ ನರೇಂದ್ರ ಧನ್ಕರ್ ವಾಯುಪಡೆಯಿಂದ ಫ್ಲೈಯಿಂಗ್ ಆಫೀಸರ್ ಆಗಿ ನಿವೃತ್ತರಾಗಿದ್ದಾರೆ.

ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ನಮನ

ಅಕಾಡೆಮಿ ಸೇರುವ ಸುಮಾರು ನಾಲ್ಕು ತಿಂಗಳ ಮುಂಚಿತವಾಗಿಯೇ ಲೆಫ್ಟಿನೆಂಟ್ ಹುದ್ದೆಗೆ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಿದ್ದ ನಿಶಾಂತ್ ಅವರ ಪಾರ್ಥಿವ ಶರೀರವನ್ನು ತವರೂರಾದ ಕಸ್ನಿ ಗ್ರಾಮಕ್ಕೆ ತರಲಾಯಿತು. ಆಗಸ್ಟ್ 16 ರ ಭಾನುವಾರದಂದು ಸಕಲ ಸೇನಾ ಗೌರವಗಳೊಂದಿಗೆ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.

ಯುವ ಕೆಡೆಟ್‌ಗೆ 'ಗಾರ್ಡ್ ಆಫ್ ಆನರ್' (Guard of Honour) ಗೌರವ ಸಲ್ಲಿಸಲಾಯಿತು. ಅಂತಿಮ ನಮನ ಸಲ್ಲಿಸಲು ಬಾಡ್ಲಿ ಶಾಸಕ ಕುಲದೀಪ್ ವ್ಯಾಟ್ಸ್, ನೈಬ್ ತಹಸೀಲ್ದಾರ್ ಅಂಶುಲ್, ಜಿಲ್ಲಾ ಸೈನಿಕ ಮಂಡಳಿಯ ಸುಬೇದಾರ್ ರಾಜೇಶ್, ಹಿರಿಯ ಸೇನಾಧಿಕಾರಿಗಳು, ಆಡಳಿತಾಧಿಕಾರಿಗಳು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಭಾರೀ ಸಂಖ್ಯೆಯಲ್ಲಿ ಆಗಮಿಸಿದ್ದರು. ಮೂರು ತಲೆಮಾರಿನ ದೇಶಸೇವೆಯ ಪರಂಪರೆಯನ್ನು ಮುಂದುವರಿಸಲು ಹೊರಟಿದ್ದ ಭರವಸೆಯ ನಾಯಕನ ಅಕಾಲಿಕ ಅಗಲಿಕೆಗೆ ಇಡೀ ನಾಡು ಕಣ್ಣೀರಿಟ್ಟಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಮೀನು, ಚಿನ್ನಾಭರಣ, ನಗದು ಎಲ್ಲಾ ಸೇರಿ 100 ಕೋಟಿ ಆಸ್ತಿ ಸರ್ಕಾರಕ್ಕೆ ಬರೆದು ಕೊಟ್ಟ ಡಾಕ್ಟರ್​
ತಾಳಗುಪ್ಪ-ಬೆಂಗಳೂರು ಎಕ್ಸ್​ಪ್ರೆಸ್​ ಸೇರಿ ಕೆಲ ರೈಲು ಸಂಚಾರದಲ್ಲಿ ವ್ಯತ್ಯಯ- ಕೆಲವು ರದ್ದು; ಡಿಟೇಲ್ಸ್​ ಇಲ್ಲಿದೆ