
ನವದೆಹಲಿ(ಮಾ.07): ಮಹಾರಾಷ್ಟ್ರ, ಕೇರಳ, ಪಂಜಾಬ್, ಕರ್ನಾಟಕ, ತಮಿಳುನಾಡು ಸೇರಿದಂತೆ 10 ರಾಜ್ಯಗಳು ಮಾತ್ರವೇ ಅಲ್ಲದೆ ದೇಶದ ಇನ್ನೂ 8 ರಾಜ್ಯ/ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಈ 8 ರಾಜ್ಯಗಳ 65 ಜಿಲ್ಲೆಗಳಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಏರುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಪರೀಕ್ಷೆ ಹೆಚ್ಚಿಸಿ, ಸಂಪರ್ಕಿತರನ್ನು ಪತ್ತೆ ಮಾಡಿ, ಲಸಿಕೆ ವಿತರಣೆಗೆ ವೇಗ ನೀಡುವಂತೆ ಸೂಚನೆ ನೀಡಿದೆ. ಈ ಕ್ರಮ ಕೊರೋನಾ ನಿಯಂತ್ರಣ ವೇಳೆ ಉತ್ತಮ ಫಲಿತಾಂಶ ನೀಡಿದೆ ಎಂದೂ ತಿಳಿಸಿದೆ.
ಈ ಹಿನ್ನೆಲೆಯಲ್ಲಿ, ಕೊರೋನಾ ಹೆಚ್ಚುತ್ತಿರುವ ಇತ್ತೀಚಿನ 10 ರಾಜ್ಯಗಳ ಸಾಲಿಗೆ ಸಾಲಿಗೆ ಹೊಸದಾಗಿ 8 ಸೇರಿಕೊಂಡಿದ್ದು, 18ಕ್ಕೆ ಏರಿದಂತಾಗಿದೆ.
ಮತ್ತೊಂದೆಡೆ ಉಳಿದೆಲ್ಲ ರಾಜ್ಯಗಳಿಗಿಂತ ಮಹಾರಾಷ್ಟ್ರ ಹಾಗೂ ಪಂಜಾಬ್‌ನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇರುವ ಹಿನ್ನೆಲೆಯಲ್ಲಿ ಆ ರಾಜ್ಯಗಳಿಗೆ ಅತ್ಯುನ್ನತ ಸಾರ್ವಜನಿಕ ಆರೋಗ್ಯ ತಂಡಗಳನ್ನು ಕೇಂದ್ರ ಸರ್ಕಾರ ರವಾನಿಸಿದೆ. ಕೊರೋನಾ ಸರ್ವೇಕ್ಷಣೆ, ನಿಯಂತ್ರಣ ಹಾಗೂ ನಿಗ್ರಹ ಕ್ರಮಗಳಲ್ಲಿ ಈ ತಂಡಗಳು ರಾಜ್ಯಗಳಿಗೆ ನೆರವಾಗಲಿವೆ. ಮಹಾರಾಷ್ಟ್ರದಲ್ಲಿ ನಿತ್ಯದ ಪ್ರಕರಣಗಳ ಸಂಖ್ಯೆ 10 ಸಾವಿರ ಸಮೀಪಿಸಿದ್ದರೆ, ಪಂಜಾಬ್‌ನಲ್ಲಿ 1000 ದಾಟಿದೆ.
8 ರಾಜ್ಯಗಳಲ್ಲಿ ಸ್ಫೋಟ:
ಹರಾರಯಣ, ಆಂಧ್ರಪ್ರದೇಶ, ಒಡಿಶಾ, ಗೋವಾ, ಹಿಮಾಚಲಪ್ರದೇಶ, ಉತ್ತರಾಖಂಡ, ಕೇಂದ್ರಾಡಳಿತ ಪ್ರದೇಶಗಳಾದ ದೆಹಲಿ ಮತ್ತು ಚಂಡೀಗಢದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ರಾಜ್ಯಗಳ 65 ಜಿಲ್ಲೆಗಳಲ್ಲಿ ಕೊರೋನಾ ಪರೀಕ್ಷೆ, ಆರ್‌ಟಿ-ಪಿಸಿಆರ್ ಪ್ರಮಾಣ ಕಡಿಮೆಯಾಗಿದೆ. ಆದರೆ ವಾರದ ಪಾಸಿಟಿವಿಟಿ ದರ ಹೆಚ್ಚಳವಾಗಿದೆ. ಕೋವಿಡ್ ಸಂಪರ್ಕಿತರ ಪತ್ತೆ ಪ್ರಮಾಣವೂ ಕಡಿಮೆ ಇದೆ. ಇದರಿಂದ ನೆರೆರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೊರೋನಾ ಹಬ್ಬುವ ಭೀತಿ ಇದೆ. ಹೀಗಾಗಿ ಈ ರಾಜ್ಯಗಳಲ್ಲಿ ಪ್ರತಿ ಸೋಂಕಿತನ ಜತೆ ಸಂಪರ್ಕ ಹೊಂದಿದ್ದ ಸರಾಸರಿ 20 ಮಂದಿಯನ್ನು ಪತ್ತೆ ಹಚ್ಚಬೇಕು. ಪರೀಕ್ಷೆ ಪ್ರಮಾಣ ಹೆಚ್ಚಿಸಬೇಕು. ಕೊರೋನಾ ವೈರಸ್ ಹರಡುವ ಕಾರ್ಯಕ್ರಮಗಳ ಮೇಲೆ ನಿಗಾ ಇಡಬೇಕು. ಲಸಿಕೆ ವಿತರಣೆ ಹೆಚ್ಚಿಸಬೇಕು ಎಂದು ಕೇಂದ್ರ ಸರ್ಕಾರ ಸೂಚನೆ ನೀಡಿದೆ.
8 ರಾಜ್ಯಗಳ ಪೈಕಿ ಹೆಚ್ಚು ಸೋಂಕು ಕಂಡುಬರುತ್ತಿರುವ ಜಿಲ್ಲೆಗಳು ಹರಾರಯಣ (15), ಆಂಧ್ರಪ್ರದೇಶ (10), ಒಡಿಶಾ (10), ದೆಹಲಿ (9), ಹಿಮಾಚಲಪ್ರದೇಶ (9), ಉತ್ತರಾಖಂಡ (7), ಗೋವಾ (2), ಚಂಡೀಗಢ (1)ದಲ್ಲಿವೆ.
ಇತ್ತೀಚಿನ 10 ರಾಜ್ಯಗಳು ಯಾವುವು?:
ಮಹಾರಾಷ್ಟ್ರ, ಕೇರಳ, ಛತ್ತೀಸ್‌ಗಢ, ಮಧ್ಯಪ್ರದೇಶ, ಗುಜರಾತ್, ಕರ್ನಾಟಕ, ತಮಿಳುನಾಡು, ಜಮ್ಮು-ಕಾಶ್ಮೀರ, ಪಂಜಾಬ್, ಪ.ಬಂಗಾಳದಲ್ಲಿ ಕೊರೋನಾ ಏರಿಕೆ ಆಗುತ್ತಿದೆ ಎಂದು ಫೆಬ್ರವರಿ ಕೊನೆಯ ವಾರ ಹೇಳಿದ್ದ ಕೇಂದ್ರ ಇತ್ತೀಚೆಗೆ ಅಲ್ಲಿ ಕೇಂದ್ರ ತಂಡ ಕಳಿಸಲು ನಿರ್ಧರಿಸಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ