ರಾಪಿಡೋ ರೈಡ್‌ಗೆ ಪೊಲೀಸ್‌ ಬೈಕ್‌ ಬಳಸಿದ ಸಬ್‌ಇನ್ಸ್‌ಪೆಕ್ಟರ್‌ ಮಗ, ಅಪ್ಪನ ವಿರುದ್ಧ ಶಿಸ್ತುಕ್ರಮ!

Published : Aug 05, 2026, 10:47 AM IST
Telangana Rapido Bike Police

ಸಾರಾಂಶ

ವರಂಗಲ್‌ನಲ್ಲಿ ಸಬ್‌ಇನ್‌ಸ್ಪೆಕ್ಟರ್ ಒಬ್ಬರ ಪುತ್ರ, ತುರ್ತು ಸೇವೆಗೆ ಮೀಸಲಾದ 'ಬ್ಲೂ ಕಾಲ್ಟ್' ಪೊಲೀಸ್ ಬೈಕನ್ನು ಖಾಸಗಿ ರ‍್ಯಾಪಿಡೋ ರೈಡ್‌ಗೆ ಬಳಸುತ್ತಿದ್ದ ಘಟನೆ ಬೆಳಕಿಗೆ ಬಂದಿದೆ.

ವರಂಗಲ್‌ (ಆ.5): ತುರ್ತು ಸಂದರ್ಭಗಳಲ್ಲಿ ಪೋಲಿಸರು ಶೀಘ್ರವಾಗಿ ಘಟನಾ ಸ್ಥಳವನ್ನು ತಲುಪಲು ಸರ್ಕಾರ ನೀಡಿರುವ 'ಬ್ಲೂ ಕಾಲ್ಟ್' (Blue Colt) ಸರ್ಕಾರಿ ದ್ವಿಚಕ್ರ ವಾಹನವನ್ನು ಸಬ್‌ಇನ್‌ಸ್ಪೆಕ್ಟರ್ (SI) ಒಬ್ಬರ ಪುತ್ರ 'ರ‍್ಯಾಪಿಡೋ' (Rapido) ಖಾಸಗಿ ರೈಡ್‌ಗಾಗಿ ಬಳಸುತ್ತಿದ್ದ ಆಘಾತಕಾರಿ ಘಟನೆ ತೆಲಂಗಾಣದ ವರಂಗಲ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ. ನಗರ ಪ್ರದೇಶಗಳಲ್ಲಿ ತುರ್ತು ಕರೆ ಬಂದಾಗ ಪೊಲೀಸರು ವೇಗವಾಗಿ ಸ್ಥಳಕ್ಕೆ ಧಾವಿಸಲು ರಾಜ್ಯ ಸರ್ಕಾರವು ಪೊಲೀಸ್ ಇಲಾಖೆಗೆ ವಿಶೇಷ 'ಬ್ಲೂ ಕಾಲ್ಟ್' ದ್ವಿಚಕ್ರ ವಾಹನಗಳನ್ನು ಒದಗಿಸಿದೆ. ಅಂತೆಯೇ ವರಂಗಲ್, ಹನುಮಕೊಂಡ ಹಾಗೂ ಕಾಜಿಪೇಟೆ ಪೊಲೀಸ್ ಠಾಣೆಗಳ ಸಿಬ್ಬಂದಿಗೂ ಈ ಬೈಕ್‌ಗಳನ್ನು ನೀಡಲಾಗಿತ್ತು. ಆದರೆ, ಇಲಾಖೆಯ ಈ ವಾಹನ ಖಾಸಗಿ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗೆ ಬಳಕೆಯಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?

ಮಂಗಳವಾರ ಗ್ರಾಹಕರೊಬ್ಬರು ಅಂಬೇಡ್ಕರ್ ಜಂಕ್ಷನ್‌ನಿಂದ ಸುಬೇದಾರಿಗೆ 26 ರೂಪಾಯಿ ಬಾಡಿಗೆ ಪಾವತಿಸಿ ರ‍್ಯಾಪಿಡೋ ಬೈಕ್ ಬುಕ್ ಮಾಡಿದ್ದರು. ಅಂಬೇಡ್ಕರ್ ಜಂಕ್ಷನ್‌ನಲ್ಲಿ ಬೈಕ್‌ಗಾಗಿ ಕಾಯುತ್ತಿದ್ದ ಗ್ರಾಹಕನಿಗೆ, ರೈಡರ್ ಪೋಲಿಸ್ ಇಲಾಖೆಗೆ ಸೇರಿದ 'ಬ್ಲೂ ಕಾಲ್ಟ್' ಬೈಕ್‌ನಲ್ಲಿ ಬಂದಿಳಿದಿರುವುದು ಕಂಡು ಅಚ್ಚರಿಯಾಗಿದೆ. ತಕ್ಷಣವೇ ಜಾಗರೂಕರಾದ ಗ್ರಾಹಕರು, ಪೊಲೀಸ್ ವಾಹನದಲ್ಲಿ ಬಂದಿದ್ದೇಕೆ ಎಂದು ಚಾಲಕನನ್ನು ಪ್ರಶ್ನಿಸಿ ತಮ್ಮ ಮೊಬೈಲ್‌ನಲ್ಲಿ ವಿಡಿಯೋ ರೆಕಾರ್ಡ್ ಮಾಡಲು ಪ್ರಾರಂಭಿಸಿದ್ದಾರೆ. ಈ ವೇಳೆ ಉತ್ತರಿಸಿದ ಚಾಲಕ, "ಈ ವಾಹನ ನನ್ನ ಪೊಲೀಸ್ ಸ್ನೇಹಿತನದ್ದು, ನಾನು ಇದನ್ನು ರ‍್ಯಾಪಿಡೋ ರೈಡ್ ಮಾಡಲು ಬಳಸುತ್ತಿದ್ದೇನೆ," ಎಂದು ವಿಡಿಯೋದಲ್ಲಿ ಹೇಳಿಕೆ ನೀಡಿದ್ದಾನೆ.

ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್

ಖಾಸಗಿ ಸೇವೆಗೆ ಬಳಕೆಯಾದ ಈ ಬ್ಲೂ ಕಾಲ್ಟ್ ಬೈಕ್‌ನ ನೋಂದಣಿ ಸಂಖ್ಯೆ TS 09 PC 2795 ಎಂದಾಗಿದೆ. ಇದನ್ನು ವರಂಗಲ್ ಪೊಲೀಸ್ ಕಮಿಷನರೇಟ್ ಪ್ರಧಾನ ಕಚೇರಿಯಿಂದ 'ಎನುಮಾಮುಲ' (Enumamula) ಪೊಲೀಸ್ ಠಾಣೆಗೆ ಹಂಚಿಕೆ ಮಾಡಲಾಗಿತ್ತು. ಪ್ರಸ್ತುತ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತು ಮಾಧ್ಯಮಗಳು ಪ್ರಶ್ನಿಸಿದಾಗ ಪ್ರತಿಕ್ರಿಯಿಸಿದ ಎನುಮಾಮುಲ ಸರ್ಕಲ್ ಇನ್ಸ್‌ಪೆಕ್ಟರ್ (CI) ಜೆ. ಸುರೇಶ್, ಆ ದ್ವಿಚಕ್ರ ವಾಹನವು ಎನುಮಾಮುಲ ಪೊಲೀಸ್ ಠಾಣೆಗೆ ಸೇರಿದ್ದು ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಎಸ್‌ಐ ವಿರುದ್ಧ ಶಿಸ್ತುಕ್ರಮಕ್ಕೆ ಶಿಫಾರಸು

"ಈ ದ್ವಿಚಕ್ರ ವಾಹನವನ್ನು ಸಬ್‌ಇನ್‌ಸ್ಪೆಕ್ಟರ್ (SI) ಶಂಕರ್ ಬಳಸುತ್ತಿದ್ದರು. ದುರದೃಷ್ಟವಶಾತ್, ಅವರ ಪುತ್ರ ಗುವ್ವ ಸಿದ್ಧಾರ್ಥ್ ಇದನ್ನು ರ‍್ಯಾಪಿಡೋ ಸೇವೆಗೆ ಬಳಸುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ನಾವು ತಕ್ಷಣವೇ ಸಬ್‌ಇನ್‌ಸ್ಪೆಕ್ಟರ್ ಅವರಿಗೆ ಎಚ್ಚರಿಕೆ ನೀಡಿದ್ದೇವೆ. ಅಲ್ಲದೆ, ಎಸ್‌ಐ ಶಂಕರ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ವರದಿ ಸಿದ್ಧಪಡಿಸಿ ವರಂಗಲ್ ಪೊಲೀಸ್ ಕಮಿಷನರ್‌ಗೆ (CP) ರವಾನಿಸಲಾಗಿದೆ," ಎಂದು ಸಿಐ ಸುರೇಶ್ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದರಸದಲ್ಲಿ ವಂದೇ ಮಾತರಂ ಹಾಡಿದರೆ ಆಕಾಶ ಏನೂ ಕಳಚಿ ಬೀಳೋದಿಲ್ಲ: ಹೈಕೋರ್ಟ್‌
ಮೆಡಲ್‌ ಗೆಲ್ಲೋಕೆ ಹರ್ಯಾಣ, ಗೇಮ್ಸ್‌ ಆತಿಥ್ಯಕ್ಕೆ ಗುಜರಾತ್ಯಾಕೆ?: ಪಾರ್ಲಿಮೆಂಟ್‌ನಲ್ಲಿ ಹರ್‍ಯಾಣ ಸಂಸದ ಪ್ರತಿಭಟನೆ