ನರೇಂದ್ರ ಮೋದಿಯನ್ನು ಗೋಲ್‌ಮಾಲ್‌ ಪ್ರಧಾನಿ ಎಂದ ತೆಲಂಗಾಣ ಸಿಎಂ

By BK Ashwin  |  First Published Aug 30, 2022, 3:05 PM IST

‘ಗುಜರಾತ್ ಮಾದರಿ’ಯನ್ನು ಪ್ರದರ್ಶಿಸುವ ಮೂಲಕ ಮೋದಿ ಪ್ರಧಾನಿಯಾದರು, ಆದರೆ ವಾಸ್ತವದಲ್ಲಿ ಮದ್ಯ ನಿಷೇಧವಿರುವ ಪಶ್ಚಿಮ ರಾಜ್ಯದಲ್ಲಿ ನಕಲಿ ಮದ್ಯವು ಯಥೇಚ್ಛವಾಗಿ ಹರಿಯುತ್ತಿದೆ ಎಂದು ತೆಲಂಗಾಣ ಸಿಎಂ ಕೆಸಿಆರ್, ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 


ಪ್ರಧಾನಿ ನರೇಂದ್ರ ಮೋದಿ ಅವರನ್ನು "ಗೋಲ್ಮಾಲ್ ಪಿಎಂ" ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಕರೆದಿದ್ದಾರೆ ಮತ್ತು 2024 ರ ಸಾರ್ವತ್ರಿಕ ಚುನಾವಣೆಯಲ್ಲಿ ಜನರು ಒಟ್ಟಾಗಿ "ಬಿಜೆಪಿ-ಮುಕ್ತ ಭಾರತ"ವನ್ನು ಮಾಡುವಂತೆ ಮತದಾರರಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೆ, ನೀವು ನಿರಾಳವಾಗಿದ್ದರೆ, "ದೆಹಲಿಯಿಂದ ಕಳ್ಳರು" ಬಂದು ಧಾರ್ಮಿಕ ಆಧಾರದ ಮೇಲೆ ಹೋರಾಡಲು ಪ್ರಯತ್ನಿಸುತ್ತಾರೆ ಎಂದು ಕೆ. ಚಂದ್ರಶೇಖರ್ ರಾವ್ ಸಾರ್ವಜನಿಕರನ್ನು "ಎಚ್ಚರಿಸಿದರು".

ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಕೆಸಿಆರ್, ಪ್ರಧಾನಿ ನರೇಂದ್ರ ಮೋದಿ ಅವರನ್ನು ಗೋಲ್ಮಾಲ್ ಪಿಎಂ ಎಂದು ಬಣ್ಣಿಸಿದರು ಮತ್ತು ಮೋದಿ ಹಾಗೂ ಕೇಂದ್ರ ಸರ್ಕಾರ ಏನು ಹೇಳಿದರೂ ಅದು "ಕಟ್ಟಾ ಸುಳ್ಳು" ಎಂದು ತೆಲಂಗಾಣ ಸಿಎಂ ಆರೋಪಿಸಿದ್ದಾರೆ. ಹಾಗೂ, "ನಾವೆಲ್ಲರೂ ಪ್ರತಿಜ್ಞೆ ತೆಗೆದುಕೊಳ್ಳಬೇಕು ಮತ್ತು 2024 ರಲ್ಲಿ ಬಿಜೆಪಿ ಮುಕ್ತ ಭಾರತವನ್ನು ರಚಿಸಲು ಸಿದ್ಧರಾಗಿರಬೇಕು. ನಾವು ಆ ಘೋಷಣೆಯೊಂದಿಗೆ ಮುನ್ನಡೆಯಬೇಕು. ಆಗ ಮಾತ್ರ ನಾವು ಈ ದೇಶವನ್ನು ಉಳಿಸಬಹುದು, ಇಲ್ಲದಿದ್ದರೆ ಈ ದೇಶವನ್ನು ಉಳಿಸಲು ಯಾವುದೇ ಅವಕಾಶವಿಲ್ಲ" ಎಂದೂ ಕೆ. ಚಂದ್ರಶೇಖರ್‌ ರಾವ್‌ ಜನರಿಗೆ ಮನವಿ ಮಾಡಿದ್ದಾರೆ. 

Tap to resize

Latest Videos

ಕೆಸಿಆರ್ ಪತನ ಆರಂಭವಾಗಿದೆ: ತೆಲಂಗಾಣ ರ‍್ಯಾಲಿಯಲ್ಲಿ ಅಮಿತ್ ಶಾ ಗುಡುಗು

 ಇನ್ನೊಂದೆಡೆ, ತೆಲಂಗಾಣ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ವಿರುದ್ಧ ಟೀಕೆ ಮಾಡಿದ ತೆಲಂಗಾಣ ಸಿಎಂ, ಕೆಲವು "ಸನ್ಯಾಸಿಗಳು" ಇದ್ದಾರೆ. ಅವರು ತೆಲಂಗಾಣದ ಸ್ವಾಭಿಮಾನವನ್ನು ಪ್ರತಿಜ್ಞೆ ಮಾಡುವ ಮೂಲಕ ಪಾದರಕ್ಷೆಗಳನ್ನು ಸಾಗಿಸಲು ಉತ್ಸುಕರಾಗಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇವಸ್ಥಾನದಿಂದ ಹೊರಗೆ ಬಂದಾಗ ಅವರ ಪಾದರಕ್ಷೆಗಳನ್ನು ತೆಲಂಗಾಣ ಬಿಜೆಪಿ ಅಧ್ಯಕ್ಷ ಹೊತ್ತೊಯ್ದಿದ್ದ ವಿಡಿಯೋ ವಿವಾದಕ್ಕೆ ಸಿಲುಕಿತ್ತು. ಈ ಹಿನ್ನೆಲೆ ಬಂಡಿ ಸಂಜಯ್‌ ಅವರ ವಿರುದ್ಧ ತೆಲಂಗಾಣ ಮುಖ್ಯಮಂತ್ರಿ ಟೀಕೆ ಮಾಡಿದ್ದಾರೆ. ಅಲ್ಲದೆ, "ದಿಲ್ಲಿಯಿಂದ ಬರುವ ಕಳ್ಳರಿಗೆ ನಾವು ಗುಲಾಮರಾಗಬೇಕೇ?" ಎಂದೂ ಕೆಸಿಆರ್‌ ಪ್ರಶ್ನೆ ಮಾಡಿದ್ದಾರೆ. 

"ಗುಜರಾತ್ ಮಾದರಿ" ಯನ್ನು ಪ್ರದರ್ಶಿಸುವ ಮೂಲಕ ಮೋದಿ ಪ್ರಧಾನಿಯಾದರು. ಆದರೆ ವಾಸ್ತವದಲ್ಲಿ, ಮದ್ಯ ನಿಷೇಧವಿರುವ ಪಶ್ಚಿಮ ರಾಜ್ಯದಲ್ಲಿ ನಕಲಿ ಮದ್ಯವು ಮುಕ್ತವಾಗಿ ಹರಿಯುತ್ತಿದೆ ಎಂದೂ ಕೆ. ಚಂದ್ರಶೇಖರ್‌ ರಾವ್‌ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಹಾಗೆ, ತೆಲಂಗಾಣ ಪ್ರಗತಿಯಲ್ಲಿದೆ ಮತ್ತು ಈ ಹಿನ್ನೆಲೆ ಜನರು ನಿರಾಳವಾಗಿದ್ದರೆ ಸಾರ್ವಜನಿಕ ಹಣವನ್ನು ಲೂಟಿ ಮಾಡಿದ ಕಳ್ಳರು ಬಂದು ಧಾರ್ಮಿಕ ನೆಲೆಯಲ್ಲಿ ಹೋರಾಡಲು ಪ್ರಯತ್ನಿಸುತ್ತಾರೆ ಎಂದು ಪರೋಕ್ಷವಾಗಿ ಬಿಜೆಪಿ ವಿರುದ್ಧ ಮುಖ್ಯಮಂತ್ರಿ ಟೀಕೆ ಮಾಡಿದ್ದಾರೆ. ಅಲ್ಲದೆ, ದೂರದೃಷ್ಟಿಯ ಕೊರತೆಯಿಂದ ಗೋಧಿ ಮತ್ತು ಅಕ್ಕಿಯನ್ನು ಆಮದು ಮಾಡಿಕೊಳ್ಳುವ ಸ್ಥಿತಿಗೆ ದೇಶ ಕುಸಿದಿದೆ ಎಂದೂ ತೆಲಂಗಾಣದ ಪೆದ್ದಪಲ್ಲಿಯಲ್ಲಿ ನಡೆದ ರ‍್ಯಾಲಿಯಲ್ಲಿ ಮಾತನಾಡಿದ ಅಲ್ಲಿನ ಮುಖ್ಯಮಂತ್ರಿ ಕೆ. ಚಂದ್ರಶೇಖರ್‌ ರಾವ್‌ ವಾಗ್ದಾಳಿ ನಡೆಸಿದ್ದಾರೆ. 

ಜ್ಯೂ. ಎನ್‌ಟಿಆರ್ ಜೊತೆ ಅಮಿತ್ ಶಾ ಡಿನ್ನರ್: ಭೇಟಿ ಹಿಂದಿದ್ಯಾ ರಾಜಕೀಯ ಲೆಕ್ಕಾಚಾರ?‌

ತೆಲಂಗಾಣದ ಮುನುಗೋಡೆಯಲ್ಲಿ ಕಾಂಗ್ರೆಸ್‌ ಶಾಸಕರಾಗಿದ್ದ ಕೋಮತಿರೆಡ್ಡಿ ರಾಜಗೋಪಾಲ್‌ ರೆಡ್ಡಿ ರಾಜೀನಾಮೆಯಿಂದ ತೆರವಾಗಿರುವ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ಇತ್ತೀಚೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ರ‍್ಯಾಲಿ ನಡೆಸಿ ಟಿಆರ್‌ಎಸ್‌ ಪಕ್ಷ ಹಾಗೂ ತೆಲಂಗಾಣ ಸಿಎಂ ಕೆ. ಚಂದ್ರಶೇಖರ್‌ ರಾವ್‌ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈಗ ತೆಲಂಗಾಣ ಸಿಎಂ ಬಿಜೆಪಿ ವಿರುದ್ಧ, ಪ್ರಮುಖವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಟೀಕೆ ಮಾಡಿದ್ದು, ಇದರಿಂದ ಉಪ ಚುನಾವಣೆಯ ಕಾವು ಏರಿದಂತಾಗಿದೆ. 

click me!