ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಕಳೆದ 3 ದಿನಗಳಿಂದ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 31 ಮಂದಿ ಸಾವನ್ನಪ್ಪಿದ್ದಾರೆ.
ಹೈದರಾಬಾದ್/ವಿಜಯವಾಡ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಕಾರಣ ಕಳೆದ 3 ದಿನಗಳಿಂದ ತೆಲಂಗಾಣ ಹಾಗೂ ಆಂಧ್ರಪ್ರದೇಶದಲ್ಲಿ ಸುರಿಯುತ್ತಿರುವ ಭಾರಿ ಮಳೆಗೆ 31 ಮಂದಿ ಸಾವನ್ನಪ್ಪಿದ್ದಾರೆ. ತೆಲಂಗಾಣದಲ್ಲಿ 16 ಹಾಗೂ ಆಂಧ್ರದಲ್ಲಿ 15 ಮಂದಿ ಬಲಿಯಾಗಿದ್ದಾರೆ. ಉಭಯ ರಾಜ್ಯಗಳಲ್ಲಿ ಪ್ರವಾಹ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ 26 ಎನ್‌ಡಿಆರ್‌ಎಫ್ ತಂಡ ನಿಯೋಜಿಸಲಾಗಿದೆ. ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರೊಂದಿಗೆ ಮಾತನಾಡಿದ್ದು, ಕೇಂದ್ರ ಸರ್ಕಾರದಿಂದ ಸಾಧ್ಯವಿರುವ ಎಲ್ಲ ಸಹಾಯದ ಭರವಸೆ ನೀಡಿದ್ದಾರೆ. ಮಳೆಯ ಅಬ್ಬರದಿಂದ ಹಲವು ಕಡೆ ರೈಲು ಹಳಿಗಳು ನೀರಲ್ಲಿ ಮುಳುಗಿರುವ ಕಾರಣ 140ಕ್ಕೂ ಹೆಚ್ಚು ರೈಲುಗಳನ್ನು ರದ್ದುಗೊಳಿಸಲಾಗಿದೆ.
ಆಂಧ್ರ ತೀರಾ ಬಾಧಿತ:
ಮಳೆಯಿಂದ ಆಂಧ್ರಪ್ರದೇಶದ 4.5 ಲಕ್ಷ ಜನರು ಬಾಧಿತರಾಗಿದ್ದಾರೆ ಹಾಗೂ 31,238 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ಮಾಡಿ 166 ಪರಿಹಾರ ಕ್ಯಾಂಪ್‌ನಲ್ಲಿ ಇರಿಸಲಾಗಿದೆ. ಆಂಧ್ರದ ವಿಜಯವಾಡ ನಗರ ಮಳೆಗೆ ಅತೀ ಹೆಚ್ಚು ತತ್ತರಿಸಿದೆ.
ಭಾರೀ ಮಳೆ, 69 ರೈಲು ರದ್ದು ಮಾಡಿದ ಸೌತ್ ಸೆಂಟ್ರಲ್ ರೈಲ್ವೇಸ್!
ತೆಲಂಗಾಣದಲ್ಲಿ 117 ಹಳ್ಳಿ ಸಂಪರ್ಕ ಕಟ್:
ತೆಲಂಗಾಣದಾದ್ಯಂತ 117 ಕ್ಕೂ ಹೆಚ್ಚು ಹಳ್ಳಿಗಳಿಗೆ ಹೋಗುವ ರಸ್ತೆಗಳು ಮಳೆಯಿಂದ ಸಂಪೂರ್ಣ ಹಾಳಾಗಿವೆ. ತಿರುಮಲಯಪಾಲೆಂ ಮಂಡಲದಲ್ಲಿ ಕೇವಲ 24 ಗಂಟೆಗಳಲ್ಲಿ 52.2 ಸೆಂ.ಮೀ ಭಾರಿ ಮಳೆ ಸುರಿದಿದೆ. ಮಳೆಯಿಂದ ರಾಜ್ಯಕ್ಕೆ 5000 ಕೋಟಿ ರು. ಹಾನಿ ಆದ ಪ್ರಾಥಮಿಕ ಅಂದಾಜಿದೆ. 1.5 ಲಕ್ಷ ಹೆಕ್ಟೇರ್ ಬೆಳೆ ಹಾನಿ ಆಗಿದೆ.
ಹಿಮಾಚಲ, ಯುಕೆ ತತ್ತರ
ಶಿಮಾ/ ಗೋಪೇಶ್ವರ್ (ಉತ್ತರಾಖಂಡ): ಹಿಮಾಚಲ ಪ್ರದೇಶದಲ್ಲಿ ಮಳೆ ಮುಂದುವರೆದಿದ್ದು 109 ರಸ್ತೆಗಳ ಸಂಪರ್ಕ ಕಡಿತಗೊಂಡಿದೆ. ಮಳೆಗೆ ರಾಜ್ಯದಲ್ಲಿ ಈವರೆಗೆ 151 ಜನ ಬಲಿಯಾಗಿದ್ದಾರೆ. ಈ ನಡುವೆ ಉತ್ತರಾಖಂಡದಲ್ಲಿಯೂ ಮಳೆ ಆರ್ಭಟ ಮುಂದುವರೆದಿದ್ದು, ಬದರೀನಾಥ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿದೆ.
ಮಹಾರಾಷ್ಟ್ರ ಮಳೆಗೆ 4 ಸಾವು
ಛತ್ರಪತಿ ಸಂಭಾಜಿನಗರ: ಸತತ 24 ಗಂಟೆಯಿಂದ ಮಹಾರಾಷ್ಟ್ರದ ಮರಾಠವಾಡ ಪ್ರದೇಶದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತವಾಗಿದ್ದು, ನಾಲ್ವರು ಮೃತಪಟ್ಟಿದ್ದಾರೆ. ಪರ್ಭಾನಿ ಜಿಲ್ಲೆಯ ಪತ್ರಿ ಗ್ರಾಮದಲ್ಲಿ 314 ಮಿ.ಮೀ ದಾಖಲೆ ಮಳೆಯಾಗಿದೆ. ಮಳೆಗೆ ಬಹುತೇಕ ಅಣೆಕಟ್ಟುಗಳು ತುಂಬಿವೆ.
ಗುಜರಾತ್: ಭಾರೀ ಮಳೆ
ಅಹಮದಾಬಾದ್: ಗುಜರಾತಿನಲ್ಲಿ ಎರಡು ದಿನಗಳ ಕಾಲ ಬಿಡುವು ನೀಡಿದ್ದ ಮಳೆ ಸೋಮವಾರ ಮತ್ತೆ ಆರಂಭವಾಗಿದೆ. ಭರೂಚ್ ಜಿಲ್ಲೆಯಲ್ಲಿ ಸಂಜೆ 4 ರಿಂದ 6 ಗಂಟೆ ಅವಧಿಯಲ್ಲಿ ದಾಖಲೆಯ 120 ಮೀ. ಮೀ ಮಳೆಯಾಗಿದೆ. ಭರೂಚ್, ತಾಪಿ, ಡಾಂಗ್ಸ್, ನವಸಾರಿ ಸೇರಿದಂತೆ ಹಲವೆಡೆ ಮಳೆ ಆರ್ಭಟಿಸಿದ್ದು, ನದಿಗಳು ಅಪಾಯದ ಮಟ್ಟ ಮೀರಿವೆ.
ವಡೋದರಾ ಪ್ರವಾಹ: ಮೊಸಳೆಯೊಂದಿಗೆ ಸ್ಕೂಟರ್‌ನಲ್ಲಿ ಯುವಕರ ತ್ರಿಬಲ್ ರೈಡ್: ವೀಡಿಯೋ ವೈರಲ್
ಕಾಶ್ಮೀರ: ಮಳೆಗೆ 2 ಬಲಿ
ಕತ್ರಾ/ ಜಮ್ಮು: ಜಮ್ಮು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿರುವ ವೈಷ್ಟೋದೇವಿ ದೇಗುಲದ ಹೊಸ ಮಾರ್ಗದಲ್ಲಿ ಸೋಮವಾರ ಸಂಭವಿಸಿದ ಭೂಕುಸಿತದಲ್ಲಿ ಇಬ್ಬರು ಮಹಿಳೆಯರು ಸಾವನ್ನಪ್ಪಿ, ಓರ್ವ ಬಾಲಕಿ ಗಂಭೀರವಾಗಿ ಗಾಯಗೊಂಡಿದ್ದಾಳೆ. ಭಕ್ತರು, ಹಳಿಯಲ್ಲಿ ಭೂಕುಸಿತ ಸಂಭವಿಸಿದ ನಂತರ ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.