ಐಫೋನ್ 16 ಬಿಡುಗಡೆಗೆ ಕೆಲವು ದಿನಗಳು ಮಾತ್ರ.ಇದರ ನಡುವೆ ಆ್ಯಪಲ್ ಕಂಪನಿಯೇ ಬೆಚ್ಚಿ ಬಿದ್ದಿದೆ. ಐಫೋನ್ ಸಾಗಿಸುತ್ತಿದ್ದ ಟ್ರಕ್ ಮೇಲೆ ದಾಳಿ ನಡೆಸಿ 1,600 ಐಫೋನ್ ಕಳವು ಮಾಡಲಾಗಿದೆ. ಇದರ ಒಟ್ಟು ಮೌಲ್ಯ ಬರೋಬ್ಬರಿ 12 ಕೋಟಿ ರೂಪಾಯಿ.
ಸಾಗರ್(ಸೆ.02) ಭಾರತದಲ್ಲಿ ಐಫೋನ್‌ಗೆ ಭಾರಿ ಬೇಡಿಕೆ ಇದೆ. ಇದೀಗ ಇಡೀ ದೇಶವೇ ಐಫೋನ್ 16 ಬಿಡುಗಡೆಗೆ ಕಾಯುತ್ತಿದೆ. ದೇಶಾದ್ಯಂತ ಐಫೋನ್ ಮಳಿಗೆಗಳಿಗೆ ಐಫೋನ್ ವಿತರಣೆ ನಡೆಯುತ್ತಿದೆ. ಇದರ ನಡುವೆ ಹರ್ಯಾಣ ಐಫೋನ್ ಫ್ಯಾಕ್ಟರಿಯಿಂದ ಚೆನ್ನೈಗೆ ಫೋನ್ ಸಾಗಿಸುತ್ತಿದ್ದ ಟ್ರಕ್ ಮೇಲೆ ಕಳ್ಳರು ದಾಳಿ ನಡೆಸಿ 1,600 ಫೋನ್ ಕದ್ದಿದ್ದಾರೆ. ಇದರ ಒಟ್ಟು ಮೌಲ್ಯ 12 ಕೋಟಿ ರೂಪಾಯಿ. ಘಟನೆ ನಡೆದು 15 ದಿನಗಳ ವರೆಗೆ ಪ್ರಕರಣ ದಾಖಲಾಗಿರಲಿಲ್ಲ. ಘಟನೆ ಹಿಂದೆ ಭದ್ರತೆ ಒದಗಿಸಿದ್ದ ಭದ್ರತಾ ಸಿಬ್ಬಂದಿಗಳೂ ಶಾಮೀಲಾಗಿರುವುದು ಮೇಲ್ನೋಟಕ್ಕೆ ಎದ್ದು ಕಾಣುತ್ತಿದೆ.
ಹರ್ಯಾಣದ ಗುರುಗ್ರಾಂನಿಂದ ಚೆನ್ನೈಗೆ ಐಫೋನ್ ಸಾಗಿಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಗಳು ಫೋನ್ ಮಾಡಿ ಇತರ ಕೆಲವರನ್ನು ಕರೆಯಿಸಿದ್ದಾರೆ. ಬಳಿಕ ಡ್ರೈವರ್ ಬೆದರಿಸಿ ಐಫೋನ್ ದೋಚಿದ್ದಾರೆ. ಐಫೋನ್ ಸಾಗಾಟ ವೇಳೆ ಸೆಕ್ಯೂರಿಟಿ ಗಾರ್ಡ್ ಜೊತೆ ಪೊಲೀಸರಿಗೆ ಭದ್ರತೆ ಜವಾಬ್ದಾರಿ ನೀಡಲಾಗಿತ್ತು. ಆದರೆ ಇಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಹೀಗಾಗಿ ಕಿರಿಯ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಕೊಳ್ಳದೇ ನಾಟಕವಾಡಿದ್ದಾರೆ ಅನ್ನೋ ಆರೋಪಗಳು ಕೇಳಿಬಂದಿದೆ.
ಗೃಹ ಜ್ಯೋತಿ ಯೋಜನೆಯ ವಿದ್ಯುತ್ ಕದ್ದ ಕಾಂಗ್ರೆಸ್ ನಾಯಕಿ; 1 ಲಕ್ಷ ರೂ. ದಂಡ ವಿಧಿಸಿದ ಮೆಸ್ಕಾಂ!
ಆಗಸ್ಟ್ 15ರಂದು ಘಟನೆ ನಡೆದಿದೆ. ಆದರೆಹಿರಿಯ ಅಧಿಕಾರಿಗಳು ಮಧ್ಯಪ್ರವೇಶದ ಬಳಿಕ ಪ್ರಕರಣ ಇದೀಗ ದಾಖಲಾಗಿದೆ. ಐಫೋನ್ ಸಾಗಾಟದ ಹೊಣೆ ಹೊತ್ತ ಗಾರ್ಡ್ಸ್ ಈ ಕೃತ್ಯ ಎಸಗಿದ್ದಾರೆ. ಮಧ್ಯಪ್ರದೇಶ ಸಾಗರ್ ಜಿಲ್ಲೆ ತಲುಪುತ್ತಿದ್ದಂತೆ ಗಾರ್ಡ್ಸ್ ಆಪ್ತರು ಎಂದು ಕೆಲವರು ಆಗಮಿಸಿದ್ದಾರೆ. ವಾಹನದಲ್ಲಿದ್ದ ಗಾರ್ಡ್ಸ್ ಇವರನ್ನು ಬರಮಾಡಿಕೊಂಡಿದ್ದಾರೆ. ಚಹಾ ಕುಡಿಯಲು ವಾಹನ ನಿಲ್ಲಿಸಲಾಗಿದೆ. ಈ ವೇಳೆ ಗಾರ್ಡ್ಸ್ ಹೊಸದಾಗಿ ಆಗಮಿಸಿದ ಕೆಲವರನ್ನು ಚಾಲಕನಿಗೆ ಪರಿಚಯಿಸಿದ್ದಾರೆ.
ಬಳಿಕ ಟ್ರಕ್ ಸಂಚಾರ ಆರಂಭಿಸಿದೆ. ಕೆಲ ಹೊತ್ತಿನಲ್ಲೇ ಮಧ್ಯಪ್ರದೇಶದಲ್ಲಿ ಸೇರಿಕೊಂಡ ಸೆಕ್ಯೂರಿಟಿ ಗಾರ್ಡ್ಸ್ ಆಪ್ತರು ಚಾಲಕನ ಮೇಲೆ ದಾಳಿ ನಡೆಸಿದ್ದಾರೆ. ಡ್ರೈವರ್‌ಗೆ ಥಳಿಸಿದ್ದಾರೆ. ಬಳಿಕ ಕೈ ಕಾಲು ಕಟ್ಟಿ ಹಾಕಿ ಐಫೋನ್ ದೋಚಿದ್ದಾರೆ. ಸುರಕ್ಷತೆ ಒದಗಿಸಬೇಕಿದ್ದ ಗಾರ್ಡ್ಸ್ ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಅನ್ನೋ ಆರೋಪ ಎದುರಾದರೆ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿಬಂದಿದೆ. ಇದೀಗ ಪ್ರಕರಣ ದಾಖಲಾಗಿದ್ದು, ಹಲವು ಪೊಲೀಸರ ಮೇಲೆ ತೂಗುಗತ್ತಿ ನೇತಾಡುತ್ತಿದೆ.
ಅಯೋಧ್ಯೆಯಲ್ಲಿ ಕಳ್ಳರ ಹಾವಳಿ; ರಾಮಪಥದ ₹50 ಲಕ್ಷ ಮೌಲ್ಯದ 3800 ಬಿದಿರಿನ ಬೀದಿ ದೀಪ, 36 ಪ್ರಾಜೆಕ್ಟರ್ ಕಳವು!