
ತೆಲಂಗಾಣದ ಅಧಿಕಾರಿಯೊಬ್ಬರ ಮನೆಯ ಮೇಲೆ ಭ್ರಷ್ಟಾಚಾರ ನಿಯಂತ್ರಣ ದಳ ದಾಳಿ ನಡೆಸಿದ್ದು, ಬರೀ ಮೊತ್ತದ ಆಸ್ತಿ ಪತ್ತೆಯಾಗಿದೆ ಎಂದು ವರದಿಯಾಗಿದೆ. ತೆಲಂಗಾಣದ ಮೆಹಾಬೂಬಾನಗರ ಜಿಲ್ಲೆಯ ಉಪ ಸಾರಿಗೆ ಕಮೀಷನರ್ ತಮ್ಮ ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಮಾಡಿದ್ದಾರೆ ಎಂಬ ದೂರುಗಳ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳಿಗೆ ಅಲ್ಲಿ 100 ಕೋಟಿಗೂ ಅಧಿಕ ಮೌಲ್ಯದ ಆಸ್ತಿ ದಾಖಲೆ ಪತ್ರಗಳು ಪತ್ತೆಯಾಗಿವೆ ಎಂದು ವರದಿಯಾಗಿದೆ. ಮೆಹಾಬೂಬಾನಗರ ಜಿಲ್ಲೆಯ ಉಪ ಸಾರಿಗೆ ಕಮೀಷನರ್ ಮೂದ್ ಕಿಶನ್ ಅವರಿಂದ ಪ್ರಸ್ತುತ ವಶಕ್ಕೆ ಪಡೆದ ಆಸ್ತಿ ದಾಖಲೆಗಳ ಮೌಲ್ಯ 12.72 ಕೋಟಿ ಎಂದು ಅಂದಾಜಿಸಲಾಗಿದ್ದರೂ, ಇವರು ಹೊಂದಿರುವ ವಿಶಾಲವಾದ ಭೂಮಿ ಜಾಗ, ಅದಕ್ಕಿರುವ ವಾಣಿಜ್ಯ ಮೌಲ್ಯಗಳನ್ನು ಲೆಕ್ಕ ಹಾಕಿದರೆ ಈ ಆಸ್ತಿಗಳ ಮಾರುಕಟ್ಟೆ ಮೌಲ್ಯ 100 ಕೋಟಿಗೂ ಅಧಿಕ ಇರಬಹುದು ಎಂದು ಅಂದಾಜಿಸಲಾಗಿದೆ.
ಮಾಧ್ಯಮಗಳಿಗೆ ದೊರೆತ ಕೆಲ ಮಾಹಿತಿ ಪ್ರಕಾರ ಇವರು ಹೊಂದಿರುವ 31 ಎಕರೆ ಕೃಷಿ ಭೂಮಿಯ ಮೌಲ್ಯವೇ ಸುಮಾರು 62 ಕೋಟಿ ಎಂದು ತಿಳಿದು ಬಂದಿದೆ. ಮೂದ್ ಕಿಶನ್ ಅವರ ಹುದ್ದೆ ಮತ್ತು ಅಧಿಕಾರಾವಧಿಯನ್ನು ಗಮನಿಸಿದರೆ ಇವರು ಹೊಂದಿರುವ ಈ ಆಸ್ತಿ ಪ್ರಮಾಣ ಶಾಕಿಂಗ್ ವಿಚಾರವಾಗಿದೆ. ಈ ಮೂದ್ ಕಿಶನ್ ಅವರು ಹೊಂದಿರುವ ಶ್ರೇಣಿಯ ಅಧಿಕಾರಿಯೊಬ್ಬರ ಮಾಸಿಕ ಒಟ್ಟು ವೇತನ 1 ಲಕ್ಷದಿಂದ 1.25 ಲಕ್ಷ ರೂ.ಗಳವರೆಗೆ ಇರುತ್ತದೆ. ಆದರೆ ಕಿಶನ್ ಅವರ ನಿವಾಸ ಮತ್ತು ಅವರ ಸಹಚರರಿಗೆ ಸೇರಿದ 11 ಇತರ ಸ್ಥಳಗಳಲ್ಲಿ ನಡೆಸಿದ ದಾಳಿಗಳು ಕಿಶನ್ ಅವರು ಐಷಾರಾಮಿ ಆಸ್ತಿ ಮತ್ತು ವಾಣಿಜ್ಯ ಹೂಡಿಕೆಗಳ ವೈವಿಧ್ಯಮಯ ಬಂಡವಾಳ ಹೊಂದಿರುವುದು ತಿಳಿದು ಬಂದಿದೆ.
ಇದನ್ನೂ ಓದಿ: ಜೀವ ನೀಡಿದವಳೇ ಉಸಿರು ತೆಗೆದಳು: ಅಡ್ಡದಾರಿ ಹಿಡಿದ ತಾಯಿ: ಬುದ್ದಿ ಹೇಳಿದ 16ರ ಹರೆಯದ ಮಗಳ ಕೊಲೆ
ಇದರಲ್ಲಿ ಇವರು ಲಹರಿ ಇಂಟರ್‌ನ್ಯಾಷನಲ್ ಹೊಟೇಲ್‌ನಲ್ಲಿ ಶೇಕಡಾ 50ರಷ್ಟು ಆಸ್ತಿ ಹೊಂದಿರುವುದು ಹಾಗೂ ನಿಜಾಮಾಬಾದ್‌ನಲ್ಲಿರುವ 3000 ಚದರ ಗಜಗಳ ವಿಸ್ತಾರದ ಪ್ರೀಮಿಯಂ ಪೀಠೋಪಕರಣಗಳ ಮಳಿಗೆಯನ್ನು ಹೊಂದಿದ್ದಾರೆ. ಸಂಗರೆಡ್ಡಿ ಜಿಲ್ಲೆಯೊಂದರಲ್ಲೇ 31 ಎಕರೆ ಕೃಷಿ ಭೂಮಿ ಮತ್ತು ನಿಜಾಮಾಬಾದ್ ಪುರಸಭೆಯ ವ್ಯಾಪ್ತಿಯಲ್ಲಿ ಹೆಚ್ಚುವರಿಯಾಗಿ 10 ಎಕರೆ ವಾಣಿಜ್ಯ ಭೂಮಿಯನ್ನು ಅವರು ಹೊಂದಿದ್ದಾರೆ. ಇದರ ಜೊತೆಗೆ ಸಾಕಷ್ಟು ಚರಾಸ್ತಿಗಳು ವಾಹನಗಳು ಪತ್ತೆಯಾಗಿವೆ. ಇದರಲ್ಲಿ ಒಂದು ಕೇಜಿ ಚಿನ್ನದ ಆಭರಣಗಳು, 1.37 ಕೋಟಿ ರೂಪಾಯಿ ಇರುವ ಬ್ಯಾಂಕ್ ಬ್ಯಾಲೆನ್ಸ್, ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಸೇರಿದಂತೆ ಐಷಾರಾಮಿ ವಾಹನಗಳ ಸಮೂಹ ಸೇರಿದೆ.
ವಸತಿಗೆ ಸಂಬಂಧಿಸಿದಂತೆ ಕಿಶನ್ ನಿಜಾಮಾಬಾದ್‌ನ ಅಶೋಕ ಟೌನ್‌ಶಿಪ್‌ನಲ್ಲಿ ಎರಡು ಫ್ಲಾಟ್‌ಗಳನ್ನು ಮತ್ತು ಸಂಗರೆಡ್ಡಿಯಲ್ಲಿ ವಿಶೇಷ ಪಾಲಿಹೌಸ್ ಸೌಲಭ್ಯವನ್ನು ಹೊಂದಿದ್ದಾರೆ. ಇಷ್ಟೊಂದು ಮೌಲ್ಯದ ಆಸ್ತಿಯೂ ಅವರು ತಮ್ಮ ಸೇವಾವಧಿಯಲ್ಲಿ ಮಾಡಿದ ಭಾರಿ ಅಕ್ರಮ ಆಸ್ತಿಗೆ ಸಾಕ್ಷಿಯಾಗಿದೆ. ಇದು ಭ್ರಷ್ಟಾಚಾರ ತಡೆ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.
ಇದನ್ನೂ ಓದಿ: ರೋಟಿ ಬಡಿಸಲು ತಡ ಮಾಡಿದಳು ಅಂತ ಬಿಸಿ ತವಾದಿಂದ ಹೆಂಡ್ತಿ, 4 ವರ್ಷದ ಮಗನ ಮೇಲೆ ಹಲ್ಲೆ
ಮೂದ್ ಕಿಶನ್ ವಿರುದ್ಧ ತಿದ್ದುಪಡಿ ಮಾಡಿದ ಭ್ರಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(1)(ಬಿ) ಮತ್ತು 13(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಸೆಕ್ಷನ್‌ಗಳು ಅಕ್ರಮವಾಗಿ ಶ್ರೀಮಂತರಾಗುವುದು ಮತ್ತು ಕ್ರಿಮಿನಲ್ ದುಷ್ಕೃತ್ಯಕ್ಕೆ ಸಂಬಂಧಿಸಿವೆ. ಇವರ ವಿರುದ್ಧ ದೂರು ನೀಡಿದ ವ್ಯಕ್ತಿಯ ಹೆಸರನ್ನು ಗೌಪ್ಯವಾಗಿಡಲಾಗಿದೆ. ಅಲ್ಲದೇ ಈ ರೀತಿ ಭ್ರಷ್ಟಾಚಾರದಲ್ಲಿ ತೊಡಗಿರುವ ಯಾವುದೇ ಸಾರ್ವಜನಿಕ ಅಧಿಕಾರಿ ವಿರುದ್ಧ ಸಾರ್ವಜನಿಕರು ಎಸಿಬಿಯ ಟೋಲ್-ಫ್ರೀ ಸಹಾಯವಾಣಿ: 1064 ಅಥವಾ ವಾಟ್ಸಾಪ್ ಸಂಖ್ಯೆ 9440446106 ನ್ನು ಸಂಪರ್ಕಿಸಬಹುದಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ